-->

ಎಳನೀರು - Tender Coconut water - 18 benefits

ದಾಹ ತಣಿಸಲು, ನಿಶಕ್ತಿ ಹೋಗಿಸಲು, ಹೊಸ ಹುರುಪು ತರಿಸಲು ಈ ಎಳನೀರಿಗೆ ಸರಿಸಾಟಿ ಯಾವುದೂ ಇಲ್ಲ. ಅದಕ್ಕೆಂದೇ "ಕಲ್ಪವೃಕ್ಷ" ಅಂತ ನಮ್ಮ ಹಿರಿಯರು ತೆಂಗಿನ ಮರಕ್ಕೆ ಹೆಸರಿಟ್ಟಿದ್ದು.

ಬಾಟಲಿಯಲ್ಲಿ ಹಾಕಿದ ಕೂಲ್ ಡ್ರಿಂಕ್ಸ್, ಐಸ್ ಕ್ರೀಮ್ ಬದಲು ಏಳನೀರು ಕುಡಿದ್ರೆ ನಮ್ಮ ದೇಹಕ್ಕೆ ಆಗೋ ಲಾಭಗಳು ಒಂದಲ್ಲ ಎರಡಲ್ಲ...ಹದಿನೆಂಟು.
1. ನೀರಿನ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಸಾಕಷ್ಟು ಖನಿಜ, ಲವಣ ಮತ್ತು ಸಕ್ಕರೆಯ ಇದೆ. ದೈಹಿಕ ಚಟುವಟಿಕೆಯಿಂದ ಕಳ್ಕೊಂಡಿದ್ದ ನೀರಿನಂಶವನ್ನು (ಸೋಡಿಯಂ ಮತ್ತು ಪೊಟಾಸಿಯಂ) ಎಳನೀರು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಹಾಗಾಗಿ ನಮ್ಗೆ ಸುಸ್ತಾದಾಗ ಎಳನೀರು ಕುಡಿದ್ರೆ ಇನ್ನೂ ಜಾಸ್ತಿ ಕೆಲಸ ಮಾಡಬಹುದು. ವಾಂತಿ-ಭೇದಿ ಮತ್ತೆ ಅಜೀರ್ಣ ಅದಾಗ ಕೂಡ ಎಳನೀರು ಕುಡಿಬೇಕು. ಸುಸ್ತು ಹೋಗುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಎಳನೀರನ್ನೇ ಶಿಫಾರಸ್ಸು ಮಾಡೋದು ಇದೇ ಕಾರಣಕ್ಕೆ. 2. ವಯಸ್ಸಾದರೂ ಚರ್ಮ ಬೇಗ ಸುಕ್ಕು-ಸುಕ್ಕಾಗುವುದಿಲ್ಲ. ಎಳನೀರಲ್ಲಿರೋ ಪೌಷ್ಟಿಕಾಂಶ ಚರ್ಮದ ಸುಕ್ಕು ತಡೆಗಟ್ಟತ್ತದೆ. ಇಡೀ ಮೈಗೆ ಎಳನೀರು ಹಚ್ಚ್ಕೊಂಡ್ರೆ ಕೋಲ್ಡ್ ಕ್ರೀಮ್ ಮಾಡುವ ಕೆಲಸ ಮಾಡತ್ತದೆ. ಎಣ್ಣೆ ಚರ್ಮದವರಿಗೆ ಜಿಡ್ಡು ಕಡಿಮೆಯಾಗೋ ಹಾಗೆ ಮಾಡುತ್ತದೆ. ಜೀವಕೋಶಗಳ ಅನಿಯಂತ್ರಿತ ವಿಭಜನೆಯನ್ನು ತಡೆಹಿಡಿಯತ್ತದೆ. ಇದರಿಂದ ಕ್ಯಾನ್ಸರ್ ಸಂಭವ ಕಡಿಮೆಯಾಗತ್ತದೆ. 3. ರಕ್ತ ಸಂಚಾರ ಸಲೀಸಾಗುತ್ತದೆ. ಹೃದಯದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗಿ ಅದರ ನಾಳಗಳಲ್ಲಿ ಕೆಟ್ಟ ಕೊಬ್ಬು ಶೇಖರಣೆ ಆಗದೇ ಇರೋ ಹಾಗೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಒಳ್ಳೆ ಕೊಬ್ಬಿನ ಅಂಶವನ್ನು ಜಾಸ್ತಿ ಮಾಡುತ್ತದೆ. ಇದರಿಂದ ಹೆಚ್ಚು ಶಕ್ತಿ ಬರುತ್ತದೆ. ಸಕ್ಕರೆ ಖಾಯಿಲೆ ಇರುವವರಿಗೆ ಎಳನೀರು ಕುಡಿದರೆ ಉರಿಮೂತ್ರದ ಸಮಸ್ಯೆ ಇರುವುದಿಲ್ಲ. 4. ಚಯಾಪಚಯ ಕ್ರಿಯೆ ವೇಗವಾಗಿ ಆಗುತ್ತದೆ. ದೇಹದಲ್ಲಿನ ಗ್ಲೂಕೋಸ್ ಅಂಶ ಕರಗಿಸಲು ಸಹಾಯ ಮಾಡಿ ಉತ್ಪಾದನೆಯಾದ ಇನ್ಸುಲಿನ್ ಪೂರ್ತಿ ಕೆಲಸ ಮಾಡೊ ಹಾಗೆ ಮಾಡುತ್ತದೆ. ಹಾಗಾಗಿ ಕೊಬ್ಬು ಕರಗುತ್ತದೆ. ಮತ್ತೆ ದೇಹಕ್ಕೆ ಅಗತ್ಯವಾದ ಶಕ್ತಿ ಪೂರೈಕೆ ಆಗುತ್ತದೆ. 5. ಜೀರ್ಣಕ್ರಿಯೆ ಚುರುಕಾಗುತ್ತದೆ. ಎಳನೀರಲ್ಲಿ ನಮ್ಮ ದೇಹಕ್ಕೆ ಬೇಕಾಗಿರೋ ಸಾಕಷ್ಟು  ಕಿಣ್ವಗಳಿವೆ. ಫೋಲಿಕ್ ಆಮ್ಲ, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮುಂತಾದ ಕಿಣ್ವಗಳು ನಾವು ತಿನ್ನೋ ವರೈಟಿ ಆಹಾರವನ್ನು ಬಹಳ ಸುಲಭವಾಗಿ ಜೀರ್ಣ ಮಾಡಿಸುತ್ತದೆ. ಹಾಗಾಗಿ ಆಹಾರದ ಶಕ್ತಿ ಪೂರ್ತಿಯಾಗಿ ನಮ್ಮ ರಕ್ತಕ್ಕೆ ಸೇರಿಕೊಳ್ಳುತ್ತದೆ. ಆರೋಗ್ಯ ವೃದ್ಧಿಸುತ್ತದೆ. 6. ಸ್ನಾಯು ಸೆಳೆತ ಹೋಗಲಾಡಿಸುತ್ತದೆ. ನಾವು ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡ್ಬೇಕಾಗಿ ಬಂದಾಗ ಮೈ ಕೈ ಹಿಡ್ಕೊಳ್ಳೋದು ಸಾಧಾರಣ. ಕೂತರೆ ಎದ್ದೇಳಲು ಆಗವುದಿಲ್ಲ ಅಂತ ಅನ್ನಿಸಿದಾಗ ಸ್ನಾಯುಗಳಿಗೆ ಪೊಟಾಷಿಯಂ ಅಂಶದ ಕೊರತೆಯಾಗಿರತ್ತದೆ. ಇದನ್ನು ನೀಗಿಸಲು ಎಳನೀರು ಕುಡಿದ್ರೆ ಸೆಳೆತ ಕಡಿಮೆಯಾಗುತ್ತದೆ. 7. ಮೂಳೆ ಗಟ್ಟಿ ಆಗುತ್ತದೆ. ಎಳನೀರಲ್ಲಿ ಸಾಕಷ್ಟು ಕ್ಯಾಲ್ಶಿಯಂ ಮತ್ತು ಆ ಕ್ಯಾಲ್ಶಿಯಂ ನಮ್ಮ ರಕ್ತಗತವಾಗಲು ಬೇಕಾದ ವಿಟಮಿನ್ಸ್ ಮಿನೆರಲ್ಸ್ ಎಲ್ಲಾ ಇದೆ. ಅದ್ರಿಂದ ಮೂಳೆ ದೃಢವಾಗುತ್ತದೆ. 8. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಆಧುನಿಕ ಜೀವನಶೈಲಿಯಿಂದಾಗೋ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಎಳನೀರು ಉತ್ತಮ ಪೇಯ. ಯಾಕಂದ್ರೆ ಅದ್ರಲ್ಲಿ "ಬಿ-ಕಾಂಪ್ಲೆಕ್ಸ್" ವಿಟಮಿನ್ ಇದೆ. 9. ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಗಾಳಿ ತುಂಬ್ಕೊಂಡು ಉಸಿರಾಡುವುದಕ್ಕೂ ಕಷ್ಟ ಅಂತ ಅನ್ನಿಸಿದಾಗ ಎಳನೀರು ಕುಡಿದ್ರೆ ಕೆಟ್ಟ ವಾಯು, ತೇಗು, ಹಿಂದಿನಿಂದ ಅಥವಾ ಆಕಳಿಕೆಯ ಮೂಲಕ ದೇಹದಿಂದ ಆಚೆ ದಬ್ಬಲ್ಪಡುತ್ತದೆ. ಊಟದ ನಂತರ ಹೊಟ್ಟೆಯಲ್ಲಿ ಉರಿ ಉಂಟಾದ್ರೆ ಎಳನೀರು ಕುಡಿಯೋದ್ರಿಂದ ತಕ್ಷಣ ಆರಾಮ ಸಿಗುತ್ತದೆ. 10. ಮೈತೂಕ ಕಡಿಮೆ ಮಾಡುತ್ತದೆ. ಹದಿನೈದು ದಿನಗಳಿಗೆ ಒಂದು ದಿನ ಬರೀ ಎಳನೀರು ಕುಡಿದು ಉಪವಾಸ ಮಾಡಿದ್ರೆ ದೇಹದ ಅನಗತ್ಯ ತೂಕವೆಲ್ಲಾ ಮಾಸಿಹೋಗುತ್ತದೆ. ಇಡೀ ದೇಹ ಸ್ವಚ್ಛವಾಗುತ್ತದೆ. ಮೂತ್ರಪಿಂಡದ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. 11. ಹೊಟ್ಟೆಯಲ್ಲಿರೋ ಹುಳುವನ್ನು ನಿಯಂತ್ರಿಸುತ್ತದೆ. ಮಕ್ಕಳ ಸಾಮಾನ್ಯ ಸಮಸ್ಯೆ ಹೊಟ್ಟೇಲಿ ಜಂತು ಬರೋದು. ಎಳನೀರು ಕುಡಿಯೋದ್ರಿಂದ ಮಕ್ಕಳಿಗೆ ಅಲ್ಲದೆ ದೊಡ್ಡವರಿಗೂ ಜಂತುಹುಳು ನಿವಾರಣೆ ಆಗುತ್ತದೆ. 12. ಆಮವನ್ನು ತೆಗೆದು ಹಾಕುತ್ತದೆ. ದೇಹದಲ್ಲಿ ಜೀರ್ಣಶಕ್ತಿ ಕಡಿಮೆ ಆದಾಗ ಉಂಟಾದ ಆಮದೋಷದಿಂದ ಬರೋ ರೋಗ - ಭೇದಿ, ವಾಂತಿ, ಎದೆ ಉರಿ ಮುಂತಾದವಕ್ಕೆ ಉಪಶಮನ ಮಾಡುತ್ತದೆ. ಜ್ವರಕ್ಕಂತೂ ಎಳನೀರು ರಾಮಬಾಣ. 13. ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ಡಾಕ್ಟರ್ ಹೇಳ್ತಾರೆ ಬಿ.ಪಿ ಪೇಶೆಂಟ್ಗಳು ದಿನಾ ಬೆಳಗ್ಗೆ ಒಂದು ಎಳನೀರು ಕುಡಿದ್ರೆ ಅವರ ದೇಹದಲ್ಲಿ ಸೋಡಿಯಂ ಮತ್ತು ಪೊಟಾಶಿಯಂ ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ ಅಂತ. 14. ಆಂಟಿ-ಆಕ್ಸಿಡೆಂಟ್ಸ್ ಒದಗಿಸಿಕೊಡುತ್ತದೆ. ಎಳನೀರಲ್ಲಿರೋ ಆಂಟಿ-ಆಕ್ಸಿಡೆಂಟ್ಸ್ ದೇಹದಲ್ಲಿ ಉತ್ಪತ್ತಿ ಅಗೋ ಫ್ರೀ ರಾಡಿಕಲ್ ಜೊತೆ ಹೋರಾಡೋಕ್ಕೆ ಸಹಾಯ ಮಾಡುತ್ತದೆ. ಕೈ ಕಾಲು ಊತ ಕಡಿಮೆ ಮಾಡುತ್ತದೆ. ಆಂಟಿ-ಬಯಾಟಿಕ್ಸ್ ಅಥವಾ ಸಲ್ಫಾ ಔಷಧಿಗಳನ್ನು ತೊಗೊಳ್ಳೊದೇ ಆದ್ರೆ ಅದರ ಜೊತೆ ಎಳನೀರು ಸೇವನೆ ಮಾಡಿ. 15. ಕಿಡ್ನಿ ಸ್ಟೋನ್ ಕರಗಿಸುತ್ತದೆ. ಯೂರಿಕ್ ಆಮ್ಲ ಅಥವಾ ಸಿಸ್ಟೈನ್ ಅನ್ನೋ ಲವಣದಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿದ್ರೆ ಅದಕ್ಕೆ ಎಳನೀರಿಗಿಂತ ಉತ್ತಮವಾದ್ದು ಇನ್ನೊಂದಿಲ್ಲ. ಎಳನೀರಲ್ಲಿರೋ ಪೊಟ್ಯಾಶಿಯಂ ಈ ಲವಣವನ್ನು ಕರಗಿಸುತ್ತದೆ. 16. ಮುಖಕ್ಕೆ ಹಚ್ಚಿಕೊಂಡ್ರೆ ಮಾಯಿಶ್ಚರೈಸರ್ ತರಹ ಕೆಲಸ ಮಾಡುತ್ತದೆ. ದಿನಾ ಎಳನೀರಿನಿಂದ ಮುಖ ತೊಳೆದರೆ ಚರ್ಮ ನಯವಾಗಿ, ಹೊಳಪಾಗಿ ಆಗುತ್ತದೆ. ಅದಕ್ಕೆ ಸ್ವಲ್ಪ ಶ್ರೀಗಂಧ ಹಾಗೂ ಅರಿಶಿನ ಮಿಕ್ಸ್ ಮಾಡಿ ಹಚ್ಚಿಕೊಂಡರೆ ಮುಖ ಪೂರ್ತಿ ಒಂದೇ ಬಣ್ಣ ಬರುತ್ತದೆ. ಎಳನೀರಿನ ಜೊತೆ ಮುಲ್ತಾನಿ ಮಣ್ಣು ಸೇರ್ಸ್ಕೊಂಡು ದಿನಾ ಹಚ್ಚಿಕೊಂಡರೆ ಸೂರ್ಯನ ಪ್ರಖರತೆಯಿಂದ ಕಪ್ಪಾಗಿರೋ ಚರ್ಮ ಬಣ್ಣ ಕೂಡ ಸಹಜ ಬಣ್ಣಕ್ಕೆ ತಿರುಗುತ್ತದೆ. 17. ಚರ್ಮರೋಗಕ್ಕೆ ರಾಮಬಾಣ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಆಗೋ ಚರ್ಮದ ತುರಿಕೆ, ಬೆವರು ಗುಳ್ಳೆ ಹಾಗೂ ಕಜ್ಜಿ ಮುಂತಾದವಕ್ಕೆ ಎಳನೀರು ದಿವ್ಯ ಔಷಧಿ. ಸ್ನಾನದ ನೀರಿನಲ್ಲಿ ಎಳನೀರು ಸೇರಿಸಿ ಮಾಡಿದ್ರೆ ಯಾವ ಚರ್ಮ ರೋಗವೂ ಹತ್ತಿರ ಸುಳಿಯೋದಿಲ್ಲ. ಸೋರಿಯಾಸಿಸ್ ಅಂತ ದೊಡ್ಡ ರೋಗಕ್ಕೂ ಎಳನೀರಿನ ಸೇವನೆ ಅಗತ್ಯ. 18. ಕೂದಲ ಪೋಷಣೆಗೂ ಎಳನೀರು ಸಿದ್ಧೌಷಧ. ಒಣ ಅಥವಾ ಸಿಕ್ಕು ಸಿಕ್ಕು ಕೂದಲಿಗೆ ಎಳನೀರು ತೇವಾಂಶ ತುಂಬುತ್ತದೆ. ಒಳ್ಳೆ ಕಂಡೀಶನರ್ ತರ ಕೆಲಸ ಮಾಡುತ್ತದೆ.ತಲೆಹೊಟ್ಟು ಅಥವಾ ತುರಿಕೆ ಇದ್ದರೆ ಎಳನೀರು ತೊಗೊಂಡು ತಲೆ ಬುರುಡೆಗೆ ತಿಕ್ಕಿ ಸ್ವಲ್ಪ ಹೊತ್ತು ಬಿಟ್ಟು ನಂತರ ಸ್ನಾನ ಮಾಡಿದ್ರೆ ಕೂದಲು ಹೊಳಪಾಗುತ್ತದೆ ಹಾಗೆಯೇ ಉದುರೋದಿಲ್ಲ ಕೂಡ.
Terms | Privacy | 2024 🇮🇳
–>