ಸಂಸಾರ ಎಂದರೆ ಸಿಹಿ-ಕಹಿ, ಸುಖ-ದುಖಗಳ ಮಿಶ್ರಣವಿದ್ದಂತೆ. ಆದರೆ ನಾವು ಜೀವನದಲ್ಲಿ ಕೇವಲ ಸುಖವನ್ನೇ ಬಯಸುತ್ತೇವೆ. ಆದರೆ ಶಾಶ್ವತ ಕಷ್ಟ ಅನುಭವಿಸುವಂತೆ ನಡೆದುಕೊಳ್ಳುತ್ತೇವೆ. ಯಾವುದೂ ಶಾಶ್ವತ ಸುಖವೋ ಅದರ ಬಗ್ಗೆ ಚಿಂತಿಸುತ್ತಿಲ್ಲ. ಅಲ್ಪ ಸುಖ ಮೊದಲು ಸಿಹಿ ಅನಿಸಿದರೂ ಜೀವನ ಪರ್ಯಂತರ ಕಹಿ ಅನುಭವ ನೀಡುತ್ತದೆ. ಆದರೆ ಶಾಶ್ವತ ಸುಖ ಮೊದಲಿಗೆ ಕಹಿ ಅನುಭವ ನೀಡಿದರೂ ಜೀವನ ಪರ್ಯಂತರ ಸುಖ ನೀಡುತ್ತದೆ. ಶಾಶ್ವತ ಸುಖವನ್ನು ಬಯಸಬೇಕೆ ವಿನಃ ಅಲ್ಪ ಸುಖವಲ್ಲ. ಸಂಸಾರದಲ್ಲಿ ಪೂರ್ಣತೆ ಬಯಸಬಾರದು. ಯಾವುದಾದರೂ ಒಂದು ಕೊರತೆ ಇದ್ದೇ
ಇರುತ್ತದೆ. ಜೀವನದಲ್ಲಿ ಜಯ ಅಪಜಯ ಸಾಮಾನ್ಯ. ಎರಡನ್ನೂ ಸ್ವೀಕರಿಸಬೇಕು. ಸಂಸಾರ ಎಂಬುದು ಸಾಗರವಿದ್ದಂತೆ. ಸಾಗರದಲ್ಲಿ ಚಿಕ್ಕ ಮತ್ತು ದೊಡ್ಡ ತೆರೆಗಳು ಬರುವಂತೆ. ಸಂಸಾರದಲ್ಲಿ ಚಿಕ್ಕ ಪುಟ್ಟ ಮತ್ತು ದೊಡ್ಡ ಸಮಸ್ಯೆಗಳು ಬರುತ್ತವೆ. ಕಷ್ಟಗಳು ತೆರೆಯಂತೆ ಬರುತ್ತವೆ ಹೋಗುತ್ತವೆ. ಎಷ್ಟೋ ತೆರೆಗಳು ಬಂದು ಹೋದರೂ ಸಾಗರ ಚಿಂತಿಸುವುದಿಲ್ಲ. ಅದರಂತೆ ನಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ನೋವುಗಳು ಬಂದು ಹೋಗುತ್ತವೆ. ಅದರ ಬಗ್ಗೆ ಚಿಂತಿಸಿದರೆ ಫಲವಿಲ್ಲ. ಇನ್ನೊಬ್ಬರಲ್ಲಿ ದೋಷ ಹುಡುಕಬಾರದು. ಜಗತ್ತು ಮಾಯೆಯ ಕಲಾಕೃತಿ. ತಪ್ಪು ಹುಡುಕುತ್ತ ಹೋದರೆ ಸಂಸಾರ ಕೆಟ್ಟು ಹೋಗುತ್ತದೆ. ಹೊಂದಿಕೊಂಡು ಬದುಕುವುದು ಕಲಿಯಬೇಕು. ಸಂಸಾರ ಎಂಬುವುದು ಸುಖ, ಕಷ್ಟಗಳ ಸಂಗಮ. ಕಷ್ಟ ಬೇಡ ವೆಂದರೂ ಬಿಡುವುದಿಲ್ಲ . ಸುಖ ಬೇಕು ಎಂದರೂ ಸಿಗುವುದಿಲ್ಲ. ಪ್ರತಿಯೊಬ್ಬರು ಸುಖವಾಗಿ ಬದುಕು ಸಾಗಿಸಲು ಬಯಸುತ್ತಾರೆ. ಅದು ತಪ್ಪಲ್ಲ. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಸುಖ ಬಯಸಬಾರದು. ಹಿಂದಿನದ ದೋಷ ಮರೆತು ಮುಂದಿನ ಜೀವನದ ಬಗ್ಗೆ ಯೋಚಿಸಬೇಕು. ಒಮ್ಮೆ ಮಾಡಿದ ತಪ್ಪು ಮರುಕಳಿಸದಂತೆ ನೋಡಿಕೊಂಡು ಹೋದರೆ ಸುಂದರ ಜೀವನ ಕಟ್ಟಿಕೊಳ್ಳಬಹುದು. ನಾವೆಲ್ಲ ವರ್ಷವರ್ಷಗಳ ಕಾಲ ಸುಂದರ ಜೀವನ ನಡೆಸಲು ಬಂದವರು. ನೂರು ವರ್ಷ ಬಾಳಿದರೂ ಸಾಕಾಗದಷ್ಟು ಶ್ರೀಮಂತವಾಗಿದೆ ಜಗತ್ತು. ಬದುಕು ಬಹಳ ಮಹತ್ವವಾದದ್ದು. ಸುಂದರವಾದ ಬದುಕು ಸಾಗಿಸಬೇಕು.
ಪ್ರತಿಕಷ್ಟಗಳ ಹಿಂದೆಯೇ ಭಗವಂತ ಪರಿಹಸರವನ್ನೂ ಕೊಟ್ಟಿರುತ್ತಾನೆ. ಆದರೆ ನಾವು ಪರಿಹಾರ ಹುಡಕಲು ಪ್ರಯತ್ನಿಸುವುದೇ ಇಲ್ಲ. ಪರಿಹಾರ ಹುಡುಕದೇ ಕೇವಲ ಸಮಸ್ಯೆ ಬಗ್ಗೆ ಚಿಂತಿಸುತ್ತ ಕುಳಿತರೇ ಪ್ರಯೋಜನವಿಲ್ಲ. ಸಮಸ್ಯೆ ಯಾಕಾಯಿತು ಎಂದು ಯೋಚಿಸಿದಾಗ ಪರಿಹಾರ ಮಾರ್ಗ ಸಿಗುತ್ತದೆ.
- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)
Subscribe , Follow on
Facebook Instagram YouTube Twitter X WhatsApp