ಒಂದೇ ಅಳತೆಯ, ಒಂದೇ ಬಣ್ಣಗಳ, ಒಂದೇ ಬಗೆಯ ಬಳೆಗಳನನ್ನು, ಹೊಂದಿಸಿಡಲು ಹೆಂಡತಿಗೆ ಹೇಳಿ, ಸೂಕ್ಷ್ಮ ಮತ್ತು ಚಿಕ್ಕ ಬಳೆಗಳನ್ನು ವಿಂಗಡಿಸಿ ಬೇರೆ ಬೇರೆ ಮಾಡಿ, ಚಿಕ್ಕ ಹಗ್ಗದಂತಿರುವ ದಪ್ಪ ದಾರದಲ್ಲಿ , ಬಳೆಗಳನ್ನು ಪೋಣಿಸಲು ಮಕ್ಕಳಿಗೆ ಹೇಳಿ, ತಾನು ಎತ್ತಿನ ಮೈತೊಳೆಯಲು ಹೋಗುತ್ತಾನೆ. ಯಜಮಾನ.
ಎತ್ತಿನ ಮೈತೊಳೆದು ಸ್ವಚ್ಛವಾಗಿ ಒರೆಸಿ, ಎತ್ತಿನ ಡುಬ್ಬದಮೇಲೆ ದಪ್ಪವಾಗಿದ್ದ ಬಟ್ಟೆಯನ್ನು ಹಾಕಿ, ಪೋಣಿಸಿದ ಬಳೆ ಸರಗಳನ್ನು ಎರಡೂ ಬದಿಗೆ ಸಮನಾಗುವಂತೆ ಎತ್ತಿನ ಮೇಲೆ ಹೊರಿಸಿದನು.
ಬಳೆ ಮಾರುವುದೇ ಆತನ ಮನೆತನದ ಸಾಂಪ್ರದಾಯಿಕ ವೃತ್ತಿಯಾಗಿದೆ. ನಾಲ್ಕು ಜನ ಗಂಡು ಮಕ್ಕಳು, ತುಂಬು ಸಂಸಾರ, ಬಳೆಗಳನ್ನು ಮಾರಿ, ಬಂದ ಹಣದಲ್ಲಿಯೇ ಬದುಕು ಸಾಗಬೇಕು.
ಈ ಸಲ, ಬೇರೆ ಬೇರೆ ಪ್ರಾಂತ್ಯದಲ್ಲಿ ಬಳೆಗಳನ್ನು ಮಾರಿಬರಬೇಕೆಂದು ನಿಶ್ಚಯಿಸಿ, ನಾಲ್ಕೈದು ದಿನ ಕೆಡಲಾರದಂತಹ ಆಹಾರವನ್ನು ಕಟ್ಟಿಸಿಕೊಂಡು, ಹಿರಿಯ ಮಗನನ್ನು ಕರೆದುಕೊಂಡು ಹೊರಡಲು, ಒಂಭತ್ತು ವರ್ಷದ ಕಿರಿಯ ಮಗ, ತಾನೂ ಬರುವೆನೇಂದು ಹಟಹಿಡಿದನು, ಆಗ ಅವನನ್ನೂ ಜೊತೆಗೆ ಕರೆದುಕೊಂಡು ಬಳೆ ಮಾರಲು ಹೊರಟನು.
ಬಳೇ ಬೇಕಮ್ಮ ಬಳೇ ಎಂದು ಕೂಗುತ್ತಾ ಊರಿಂದ ಊರಿಗೆ ಹೋಗುತ್ತಾ, ರಾತ್ರಿವೇಳೆ ದೇವಾಲಯದಲ್ಲಿ ತಂಗಿ, ಮಾರನೆ ದಿವಸ ಮತ್ತೆ ಬಳೇ ಬೇಕಮ್ಮ ಬಳೇ ಎಂದು ಕೂಗುತ್ತಾ , ಕಲ್ಯಾಣ ಚಾಲುಕ್ಯರ ಪ್ರಾಂತ್ಯದ ಲಕ್ಕುಂಡಿಗೆ ಬಂದನು.
ಬಳೇ ಬೇಕಮ್ಮ ಬಳೇ , ಮಿಂಚು ಬಳೇ , ಸಾಣೆ ಬಳೇ, ರೇಷ್ಮೇ ಬಳೇ, ಮುತ್ತೈದೆ ಬಳೇ ಬಣ್ಣ ಬಣ್ಣದ ಬಳೇ ಎಂಬ ಕೂಗು ಕೇಳಿ, ಚಾಳುಕ್ಯ ಚಕ್ರವರ್ತಿ, ತೈಲಪನ ಮಹಾಮಂತ್ರಿಯ ಸೊಸೆಯಾದ, ಅತ್ತಿಮಬ್ಬೆಯು, ಸೇವಕಿಯನ್ನು ಕಳೆಸಿ, ಬಳೆಗಾರನನ್ನು ತನ್ನ ಮನೆಗೆ ಕರೆಸಿಕೊಂಡಳು.
ಬಳೆಗಾರನು ತನ್ನ ಹೆಗಲ ಮೇಲಿದ್ದ ಕಂಬಳಿಯನ್ನು ಹಾಸಿ, ಉಸ್ಸಪ್ಪ ಎಂದು ಕುಳಿತುಕೊಳ್ಳಲು, ಬಹಳ ದೂರದಿಂದ ಬಂದಹಾಗಿದೆ ಎಂದಳು ಅತ್ತಿಮಬ್ಬೆ. ಹೊಟ್ಟೆಪಾಡು ಬರಬೇಕಲ್ಲ ತಾಯಿ ಎಂದ ಬಳೆಗಾರ. ಪಕ್ಕದಲ್ಲಿ ಕುಳಿತ ಮಗು, ಅಪ್ಪಯ್ಯ ಎಂತಹ ವಿಶಾಲವಾದ ದೊಡ್ಡ ಮನೆ. ಎಷ್ಟು ದಪ್ಪ ದಪ್ಪವಾದ ಕಂಬಗಳು ಅಂತಾ, ಅರಮನೆಯಂತಹ ಮನೆಯನ್ನು ದಂಗಾಗಿ ನೋಡುತ್ತಲೇ ಇದ್ದ. ಅತ್ತಿಮಬ್ಬೆಯು ಆ ಬಾಲಕನ ಮಾತು, ನೋಟವನ್ನೆಲ್ಲ, ತದೇಕಚಿತ್ತದಿಂದ ನೋಡುತ್ತ, ಯಾವೂರಿಂದ ಬಂದಿರುವಿರಿ ಅಂದಳು.
ಬಹುದೂರ ತಾಯಿ,
" ಜಮಖಂಡಿ ಹತ್ತಿರ ಮುದುವೊಳಲು " ಎಂದ.
ಅಬ್ಬ ಎಷ್ಟು ದೂರದಿಂದ ಬಂದಿರುವಿರಿ.
"ನಿಮ್ಮ ಹೆಸರೇನು?"
"ಜಿನವಲ್ಲಭ ತಾಯಿ " ಎಂದ.
ಬಳೆಗಳು ಚೆನ್ನಾಗಿವೆ ತಾನೆ ?
ಅನುಮಾನ ಬೇಡ ತಾಯಿ. ನಮ್ಮ ಮನೆತನದ ಸಾಂಪ್ರದಾಯಿಕ ಕಸುಬೇ ಇದು, ಎಂದ.
ಮೊದಲು ಬಾಯಾರಿಕೆ ತೀರಿಸಿಕೊಳ್ಳಿ , ನೀರುಮಜ್ಜಿಗೆಯನ್ನು ಕುಡಿದು, ದಣಿವಾರಿಸಿಕೊಂಡಮೇಲೆ ನಮಗೆಲ್ಲ ಬಳೆ ತೊಡಿಸುವಿರಂತೆ, ನಂತರ ನಮ್ಮಲ್ಲಿಯೇ ಊಟಮಾಡಿಕೊಂಡು ಹೋಗಬೇಕು, ಎಂದಳು ಅತ್ತಿಮಬ್ಬೆ.
ಹಿರಿಯ ಮಗ ಎತ್ತಿನ ಮೇಲಿನ ಬಳೆಗಳನ್ನೆಲ್ಲ ತೆಗೆದು, ತಂದೆಯ ಮುಂದೆ ತಂದಿಟ್ಟ . ಅಕ್ಕ ತಂಗಿಯರು ಬಳೆಗಳನ್ನು ಆರಿಸುತ್ತಿರುವಾಗ, ಬಳೆಗಾರನ ಮಗು, ತಂದೆಗೆ ಏನೇನೋ ಪ್ರಶ್ನೆಗಳನ್ನು ಕೇಳುತ್ತಾ , ಅಮ್ಮಯ್ಯ ಈ ಬಳೆಗಳು ಚೆನ್ನಾಗಿವೆ, ಈ ಬಳೆಗಳು ಚಂದ ಇವೆ ಅಂತಾ ಸ್ಪುಟವಾಗಿ, ಮುದ್ದು ಮುದ್ದಾಗಿ ಕನ್ನಡವನ್ನು ಮಾತನಾಡುವುದು ಕಂಡು, ಅತ್ತಿಮಬ್ಬೆಗೆ ಇಂತಹ ಚುರುಕಾದ ಜಾಣ ಮಗುವಿಗೆ , ವಿದ್ಯಾಭ್ಯಾಸ ಕೊಡಿಸದೆ , ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ತಿರುಗುತ್ತಿದ್ದಾರಲ್ಲ ಏಕೆ? ಎಂಬ ಆಲೋಚನೆ ಆಯಿತು.
ಬಳೆ ತೊಡಿಸಿಯಾದಮೇಲೆ, ಮಗುವಿಗೆ ವಿದ್ಯಾಭ್ಯಾಸ ಕೊಡಿಸದೆ, ನಿಮ್ಮೊಂದಿಗೇಕೆ ಕರೆದುಕೊಂಡು ತಿರುಗುತ್ತಿದ್ದೀರಿ ಎಂದು ಬಳೆಗಾರನಿಗೆ, ಅತ್ತಿಮಬ್ಬೆ ಕೇಳಿದಳು. ತಾಯಿ ವಿದ್ಯಾಭ್ಯಾಸ ಕೊಡಿಸುವಷ್ಟು ಧನಿಕನಲ್ಲ ಎಂದ. ನಿಮ್ಮ ಒಪ್ಪಿಗೆ ಇದ್ದರೆ, ಈ ಮುದ್ದಾದ ಮಗುವನ್ನು ನನ್ನ ಹತ್ತಿರ ಬಿಟ್ಟುಹೋಗಿ, ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದಳು. ಹಾಗೆ ಆಗಲಿ ತಾಯಿ ಅಂತಾ ಬಳೆಗಾರನು, ಒಪ್ಪಿಗೆ ಸೂಚಿಸಿದನು.. ಈ ಎಲ್ಲ ಸಂಭಾಷಣೆ ಕೇಳಿ ಮಗು ಹರುಷಗೊಂಡಿತು.
ಮಗುವಿಗೆ ಗುರುಕುಲದ ಆಚಾರ್ಯರಿಂದ ಒಳ್ಳೆಯ ಶಿಕ್ಷಣವನ್ನು ಕೊಡಿಸಿದಳು, ಅತ್ತಿಮಬ್ಬೆ. ಚುರುಕಾಗಿದ್ದ ಮಗು, ಉತ್ಸಾಹದಿಂದ , ಎಲ್ಲ ವಿದ್ಯೆಯನ್ನು ಸಂಪೂರ್ಣವಾಗಿ, ಮನಸಾರೆ ಕಲಿತು, ಕನ್ನಡದಲ್ಲಿ ಮಹಾಕಾವ್ಯಗಳನ್ನು ರಚಿಸಿ
" ಕವಿಚಕ್ರವರ್ತಿ " ಎನಿಸಿಕೊಂಡ. ಆ ಕವಿಚಕ್ರವತಿ೯ಯೇ , ಬಳೆಗಾರನ ಮಗ ಮದುವೊಳಲಿನ " ರನ್ನ ".
( ಮುದುವೊಳಲು ಅಂದರೆ ಈಗಿನ ಮುಧೋಳ )
ಕವಿಚಕ್ರವತಿ೯ ರನ್ನನು," ಅಜಿತ ತೀಥ೯ಕರ ಪುರಾಣ ", " ಸಾಹಸ ಭೀಮ ವಿಜಯ" " ( ಗದಾಯುದ್ಧ) ಪರಶುರಾಮ ಚರಿತ, ಚಕ್ರೇಶ್ವರ ಚರಿತ , ಹೀಗೆ ಅನೇಕ ಮಹಾ ಕೃತಿಗಳನ್ನು ರಚಿಸಿ, ಕನ್ನಡದ ರತ್ನವೇ ಆಗಿದ್ದಾನೆ .
ರನ್ನನನ್ನು ಮಹಾಕವಿಯನ್ನಾಗಿ ಮಾಡಿದ ಅತ್ತಿಮಬ್ಬೆಯು, ಪಂಪ, ರನ್ನ, ಪೊನ್ನ, ರಾದಿಯಾಗಿ,ಎಲ್ಲರ ಗ್ರಂಥಗಳನ್ನು ಸಾವಿರ ಸಾವಿರ ಪ್ರತಿಗಳನ್ನು ಮಾಡಿಸಿ, ಮುತ್ತೈದೆಯರಿಗೆ, ಬಾಗಿನದ ಜೊತೆಗೆ, ಗ್ರಂಥಗಳನ್ನೂ ಉಡಿತುಂಬಿದಳು.
ಮೊಟ್ಟ ಮೊದಲು, ಕನ್ನಡ ಗ್ರಂಥಗಳನ್ನು ಉಡಿತುಂಬುವ ಪರಿಪಾಠ ಹಾಕಿಕೊಟ್ಟವಳು ಅತ್ತಿಮಬ್ಬೆ. ಹೀಗೆ ಮಹಾದಾನಿಯಾಗಿದ್ದ ಅತ್ತಿಮಬ್ಬೆ, " " ದಾನಚಿಂತಾಮಣಿ ಅತ್ತಿಮಬ್ಬೆ " ಎಂದೇ ಪ್ರಸಿದ್ದಿಯಾದಳು.
ವೀರ ಕನ್ನಡಿಗರೆ, ನಾವೂ ಕೂಡ ನಮ್ಮ ಮನೆಯಲ್ಲಿಯ ಸಮಾರಂಭಗಳಲ್ಲಿ ಕನ್ನಡ ಗ್ರಂಥಗಳನ್ನು ಉಡಿತುಂಬೋಣ.
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp