-->

ಫ್ಯಾನ್‌ ಹಾಕಿ ಮಲಗುತ್ತೀರಾ? ಇದರ ಒಳಿತು, ಕೆಡಕು ಅರಿಯಿರಿ - Using Fan while sleeping , Know its pros and cons

 ನಮ್ಮ ಹಲವಾರು ಸಮಸ್ಯೆಗಳಿಗೆ ನಿದ್ದೆ ಒಂದು ಕಾರಣವೆಂಬುವುದು ಗೊತ್ತೇ? ಹೌದು ನಿದ್ದೆಯಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದು ನಿಮ್ಮ ಮೈತೂಕ, ಮಾನಸಿಕ ಆರೋಗ್ಯ, ಸಂತಾನೋತ್ಪತ್ತಿ ಸಾಮಾರ್ಥ್ಯ ಇವುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇನ್ನು ನಮ್ಮ ನಿದ್ದೆಯ ಮೇಲೆ ನಾವು ಮಲಗುವ ಕೋಣೆ ತುಂಬಾ ಪ್ರಭಾವ ಬೀರುತ್ತದೆ. ರೂಮ್‌ನಲ್ಲಿ ತುಂಬಾ ಸೆಕೆಯಿದ್ದರೆ ನಿದ್ದೆ ಬರುವುದಿಲ್ಲ, ಗಾಳಿ ಬೆಳಕಿನ ಓಡಾಟ ಚೆನ್ನಾಗಿದ್ದರೆ ಉಸಿರಾಡುವ ಗಾಳಿ ಸ್ವಚ್ಛವಾಗಿರುತ್ತದೆ. ಇನ್ನು ನಮ್ಮಲ್ಲಿ ಅನೇಕರಿಗೆ ಫ್ಯಾನ್‌ ಹಾಕಿ ಮಲಗುವ ಅಭ್ಯಾಸವಿರುತ್ತದೆ. ಬೇಸಿಗೆಯಲ್ಲಿ ಸೆಕೆಗೆ ಫ್ಯಾನ್‌ ಹಾಕಿ ಮಲಗಲೇಬೇಕಾಗುತ್ತದೆ, ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ, ಆದರೆ ನಮ್ಮಲ್ಲಿ ಕೆಲವರಿಗೆ ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಯಾವುದೇ ಕಾಲವಾಗಿರಲಿ ಫ್ಯಾನ್‌ ಬೇಕೆ ಬೇಕು. ಫ್ಯಾನ್‌ ಹಾಕಿ ಚಳಿ ಅಂತ ಕಂಬಳಿ ಹೊದ್ದು ಮಲಗುವವರು ಇದ್ದಾರೆ.

 
ಇಲ್ಲಿ ಫ್ಯಾನ್‌ ಹಾಕಿ ಮಲಗುವುದರಿಂದ ನಿಮ್ಮ ಶರೀರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹೇಳಿದ್ದೇವೆ ನೋಡಿ:

ಬೇಸಿಗೆಯಲ್ಲಿ ಫ್ಯಾನ್‌ ಕೆಳಗಡೆ ಮಲಗಿದರೆ
ಸೆಕೆಯಲ್ಲಿ ಫ್ಯಾನ್‌ ಇಲ್ಲದೆ ಮಲಗುವುದು ತುಂಬಾ ಕಷ್ಟವಾಗುವುದು. ಒಂದು ಐದು ನಿಮಿಷ ಕರೆಂಟ್‌ ಹೋದರೆ ಸೆಕೆಯಿಂದ ಒದ್ದಾಡಿ ಬಿಡುತ್ತೇವೆ. ನೀವು ಸೆಕೆಗೆ ಫ್ಯಾನ್ ಹಾಕಿ ಮಲಗುವುದಾದರೆ ಈ ಅಂಶಗಳನ್ನು ಗಮನಿಸಿ.
ಮಲಗುವ ಕೋಣೆಯ ಕಿಟಕಿ ತೆರೆದಿರಲಿ. ಇದರಿಂದ ಹೊರಗಿನಿಂದಲೂ ಗಾಳಿ ಬರುವುದರಿಂದ ಕೋಣೆಯ ಉಷ್ಣಾಂಶ ಕಡಿಮೆಯಾಗುವುದು. ಆದರೆ ಕಿಟಕಿ ತೆರೆದು ಮಲಗಿದರೆ ಕಳ್ಳರ ಭಯವೂ ಇರುವುದರಿಂದ ಹೆಚ್ಚಿನವರು ಕಿಟಕಿ ಹಾಕಿ ಮಲಗುತ್ತಾರೆ. ಆದರೆ ಕಿಟಕಿಗಳಲ್ಲಿ ನೆಟ್‌ ಹಾಕಿಸಿದರೆ ಕಿಟಕಿ ತೆರೆದಿಡಬಹುದು. ಕಿಟಿಕಿ ಹಾಕಿಯೇ ಮಲಗಬೇಕು ಎಂದಾದರೆಮಲಗುವ ಮುನ್ನ ಒಮದು ಅರ್ಧ ಗಂಟೆ ಕಿಟಕಿ ಬಾಗಿಲುಗಳನ್ನು ತೆರೆದಿಡಿ, ಕೋಣೆಯೊಳಗೆ ಸ್ವಲ್ಪ ಗಾಳಿ ಓಡಾಡಲಿ, ನಂತರ ಫ್ಯಾನ್‌ ಹಾಕಿ ಮಲಗಿದರೆ ಕೋಣೆಯಲ್ಲಿ ಸೆಕೆ ಹೆಚ್ಚಿರುವುದಿಲ್ಲ.

ಸೆಕೆಯಲ್ಲಿ ನಿದ್ದೆಗೆ ಸಹಕಾರಿ
ತುಂಬಾ ಸೆಕೆಯಿದ್ದಾಗ ಫ್ಯಾನ್ ಇಲ್ಲಾಅಂದ್ರೆ ಆಗಾಗ ಎಚ್ಚರವಾಗುವುದು. ರಾತ್ರಿ ಸರಿಯಾಗಿ ನಿದ್ದೆ ಬಾರದಿದ್ದರೆ ಹಗಲಿನಲ್ಲಿ ಕೆಲಸ ಮಾಡುವಾಗ ತೂಕಡಿಕೆ ಬರುವುದು ಸಹಜ. ಫ್ಯಾನ್‌ ಗಾಳಿ ನಿಮ್ಮನ್ನು ತಣ್ಣಗೆ ಇಟ್ಟು ನಿದ್ದೆಗೆ ಸಹಾಯ ಮಾಡುತ್ತದೆ.

ಚಿಕ್ಕ ಮಕ್ಕಳಲ್ಲಿ SIDS ಸಾವು ತಪ್ಪಿಸುತ್ತದೆ

SIDS ಸಾವು ಎಂದರೆ Sudden Infant Death Syndrome ಎಂದು ಕರೆಯುತ್ತಾರೆ. ಇದ್ದಕ್ಕಿದ್ದಂತೆ ಆರೋಗ್ಯವಂತ ಮಗು ಸಾವನ್ನಪ್ಪುತ್ತಾದೆ. ಈ ರೀತಿಯ ಸಾವು ಒಂದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವುದು. ನಿದ್ದೆಯಲ್ಲಿಯೇ ಮಗು ಸಾವನ್ನಪ್ಪಲು ಕೋಣೆಯಲ್ಲಿ ಉಷ್ಣಾಂಶ ಹೆಚ್ಚಿ, ಇಂಗಾಲದ ಡೈ ಆಕ್ಸೈಡ್‌ ಹೆಚ್ಚಾಗಿರುವುದು ಕೂಡ ಒಂದು ಕಾರಣ. ಆದ್ದರಿಂದ ತುಂಬಾ ಸೆಕೆಯಿರುವಾಗ ಮಕ್ಕಳ ಕೋಣೆಯ ಕಿಟಕಿ ತೆರೆದು ಮೆಲ್ಲನೆ ಫ್ಯಾನ್‌ ಹಾಕಿ. ಫ್ಯಾನ್‌ ಗಾಳಿ ಮಗುವಿಗೆ ನೇರವಾಗಿ ಬಡೆಯುವಂತೆ ಹಾಕಬೇಡಿ, ಫ್ಯಾನ್‌ ಗಾಳಿ ತುಂಬಾ ವೇಗವಾಗಿದ್ದರೆ ಮಗುವಿಗೆ ಉಸಿರು ಕಟ್ಟಬಹುದು.
ಇನ್ನು ಫ್ಯಾನ್‌ ಅಡಿಯಲ್ಲಿ ಮಲಗುವುದರಿಂದ ಈ ಸಮಸ್ಯೆಗಳು ಉಂಟಾಗುವುದು

ತ್ವಚೆ ಮತ್ತು ಕಣ್ಣು ಡ್ರೈಯಾಗುವುದು
ಫ್ಯಾನ್‌ ಅನ್ನು ತುಂಬಾ ವೇಗವಾಗಿ ತಿರುಗುವಂತೆ ಇಟ್ಟುಅದರ ಕೆಳಗಡೆ ಮಲಗುವುದರಿಂದ ಕಣ್ಣುಗಳು ಒಣಗುವುದು, ತ್ವಚೆ ಕೂಡ ಒಣಗುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇನ್ನು ಫ್ಯಾನ್‌ ಗಾಳಿ ಅಧಿಕವಾಗಿದ್ದರೆ ಸೈನಸೈಟಿಸ್, ತಲೆನೋವು, ಮೂಗು ಕಟ್ಟುವುದು ಈ ಸಮಸ್ಯೆ ಉಂಟಾಗುವುದು. ಮಕ್ಕಳಿಗೆ ಫ್ಯಾನ್ ಗಾಳಿ ಅಧಿಕ ತಾಗಿದರೆ ಶೀತ ಉಂಟಾಗುವುದು.

ಅಲರ್ಜಿ ಉಂಟು ಮಾಡುವುದು
ಫ್ಯಾನ್‌ ಸ್ವಚ್ಛವಾಗಿರದಿದ್ದರೆ ಅದರ ಗಾಳಿಯ ಜೊತೆಗೆ ಅದರಲ್ಲಿರುವ ದೂಳು ಕೂಡ ಕೋಣೆಯಲ್ಲಿ ಹರಡುವುದು, ಇದರಿಂದ ಆ ಗಾಳಿಯನ್ನು ಉಸಿರಾಡಿದಾಗ ಅಲರ್ಜಿ ಸಮಸ್ಯೆ ಉಂಟಾಗುವುದು. ಇದರಿಂದ ಸೀನು, ಗಂಟಲು ಕೆರೆತ, ಉಸಿರಾಟದ ತೊಂದರೆ ಕೂಡ ಉಂಟಾಗುವುದು.

ಸ್ನಾಯು ನೋವು ಹೆಚ್ಚಾಗುವುದು
ಫ್ಯಾನ್‌ ಗಾಳಿ ಒಂದೇ ಕಡೆ ಬೀಸುತ್ತಿದ್ದರೆ ಅಥವಾ ಫ್ಯಾನ್‌ಗೆ ಸಮೀಪ ಮಲಗುವುದರಿಂದ ಸ್ನಾಯು ಸೆಳೆತ ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಇದರಿಂದ ಸ್ನಾಯು ಸೆಳೆತ ಕೂಡ ಉಂಟಾಗುವುದು.

ಫ್ಯಾನ್‌ ಗಾಳಿಯಿಂದ ಉಂಟಾಗುವ ಸಮಸ್ಯೆ ತಡೆಗಟ್ಟಲು ಟಿಪ್ಸ್
* ನೀವು ಟೇಬಲ್‌ ಫ್ಯಾನ್‌, ಪಡೆಸ್ಟಾಲ್ ಫ್ಯಾನ್‌ ಬಳಸುತ್ತಿದ್ದರೆ ಅದನ್ನು ಸ್ವಲ್ಪ ದೂರದಲ್ಲಿಡಿ. ಇದರಿಂದ ಕಣ್ಣು ಡ್ರೈಯಾಗುವುದು, ತಲೆನೋವು, ಮೂಗು ಕಟ್ಟುವುದು ಮುಂತಾದ ಸಮಸ್ಯೆ ತಡೆಗಟ್ಟಬಹುದು.
* ಸೀಲಿಂಗ್‌ ಫ್ಯಾನ್ ಬಳಸುವುದು ಒಳ್ಳೆಯದು.
* ಮಧ್ಯದಲ್ಲಿ ಸ್ವಲ್ಪ ಹೊತ್ತು ಫ್ಯಾನ್‌ ಆಫ್‌ ಮಾಡಿ ನಂತರ ಹಾಕಿ, ಇದರಿಂದ ಬಿಸಿ ಗಾಳಿ ಬೀಸುವುದನ್ನು ತಡೆಗಟ್ಟಬಹುದು.
* ಮಲಗುವ ಮುನ್ನ ತಣ್ಣೀರಿನಲ್ಲಿ ಸ್ನಾನ ಮಾಡಿ
* ತೆಳು ಬಣ್ಣದ ಕರ್ಟನ್ ಬಲಸಿ
* ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದನ್ನು ಅಭ್ಯಾಸಮಾಡಿ.
* ಸೆಕೆ ಸಮಯದಲ್ಲಿ ತಂಪಾದ ವಸ್ತುಗಳನ್ನು ಸೇವಿಸಿ.
* ಫ್ಯಾನ್‌ ಅನ್ನು ತುಂಬಾ ವೇಗದಲ್ಲಿ ಹಾಕಬೇಡಿ...
 
- ನಮ್ಮ ಓದುಗರು ನೀಡಿದ ಲೇಖನ 
Terms | Privacy | 2024 🇮🇳
–>