-->

Significance of Lord Shiva's ornaments - ಶಿವನ ಆಭರಣ

 ಶಿವ ದೇವರು ಎಲ್ಲಾ ದೇವತೆಗಳಿಂದ ವಿಭಿನ್ನ. ಭಸ್ಮ ಧಾರಿ, ತ್ರಿಶೂಲಧಾರಿ, ಹಾವನ್ನೇ ಆಭರಣವನ್ನಾಗಿಸಿಕೊಂಡಿರುವ ಮಹೇಶ್ವರ ದೇವಾಧಿದೇವ. ಚಿನ್ನದ ಆಭರಣಗಳನ್ನೇ ಧರಿಸದೇ ರುದ್ರಾಕ್ಷಿ, ಹಾವನ್ನೇ ತನ್ನ ಆಭರಣವನ್ನಾಗಿಸಿಕೊಂಡಿರುವ ಶಿವ ಸರಳತೆಯನ್ನೇ ಮೈಗೂಡಿಸಿಕೊಂಡವನು. ಹುಲಿಯ ಚರ್ಮವನ್ನೇ ತನ್ನ ಆಸನವಾಗಿಸಿ ಕೈಲಾಸ ವಾಸಿಯಾಗಿರುವ ಮಹಾದೇವ ಭಕ್ತನುರಾಗಿ. ಶಿವನನ್ನು ಅಲಂಕರಿಸಿರುವ ಈ ಆಭರಣಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಂಡಿವೆ. 





1. *ಹಾವು* 'ಜೀವ' ವನ್ನು ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸುವ ಶಿವನ ಆಭರಣವಾಗಿರುವ ಹಾವು ಶಿವನ ಕುತ್ತಿಗೆಯಲ್ಲಿ ವಿರಾಜಮಾನವಾಗಿರುತ್ತದೆ. ಪ್ರತಿಯೊಬ್ಬ ಜೀವ ಸಂಕುಲವೂ ತನ್ನ ಬದುಕಿನ ಏಳಿಗೆಗೆ ದೇವರನ್ನು ನಂಬಿರಬೇಕೆಂಬ ತತ್ವವನ್ನು ಇದು ಪ್ರತಿನಿಧಿಸುತ್ತದೆ. ನಮಗೆ ಹಾವೆಂದರೆ ಭಯ, ಆದರೆ ಆ ಪರಶಿವನು ಎಲ್ಲಾ ರೀತಿಯ ಭಾವನೆಗಳಿಂದ ಮುಕ್ತನಾಗಿರುವುದರಿಂದ ಯಾವುದೇ ಭಯ ಶಿವ ದೇವರಿಗಿಲ್ಲ ಮತ್ತು ಹಾವು ಅವರ ಕೊರಳನ್ನು ಸುತ್ತುವರಿದಿದೆ.

2. *ಭಸ್ಮ ಅಥವಾ ವಿಭೂತಿ* ನೀವು ಗಮನಿಸರಬಹುದು ಶಿವನು ತನ್ನ ಮೈಗೆಲ್ಲಾ ಪವಿತ್ರ ಭಸ್ಮವನ್ನು ಹಚ್ಚಿಕೊಂಡಿರುತ್ತಾರೆ. ಭಸ್ಮ ಅಥವಾ ವಿಭೂತಿ ಮಾನವನ ಜೀವನದ ಕೊನೆಯನ್ನು ಪ್ರತಿನಿಧಿಸುತ್ತದೆ. ಶಿವನು ತನ್ನ ಮೈಗೆಲ್ಲಾ ಭಸ್ಮವನ್ನು ಧರಿಸಿರುವ ಉದ್ದೇಶವೇನೆಂದರೆ ಯಾರೊಬ್ಬರೂ ತಮ್ಮ ಅಂತ್ಯವನ್ನು ತಪ್ಪಿಸಿಕೊಳ್ಳಲಾರರು ಎಂಬ ತತ್ವ ಇದರಲ್ಲಡಗಿದೆ. ಭೂಮಿಯಲ್ಲಿ ಜನ್ಮ ತಾಳಿರುವ ಪ್ರತಿಯೊಂದೂ ಬೂದಿಗೆ ಸೇರುತ್ತದೆ ಎಂಬ ಅಂಶ ಇಲ್ಲಿನದು.

3. *ಜಟಾಧಾರಿ* ಶಿವನ ಕಟ್ಟಿದ ತುರುಬು ಅಥವಾ ಜಟೆಯು ವಾಯುವಿನ ಅಧಿಪತಿ ಎಂಬುದನ್ನು ತೋರಿಸುತ್ತದೆ. ಎಲ್ಲಾ ಚರಾಚರ ಸಂಕುಲಗಳಿಗೂ ವಾಯು ಅಥವಾ ಗಾಳಿ ಅನಿವಾರ್ಯವಾದುದು.

4. *ರುದ್ರಾಕ್ಷಿ* ಶಿವನ ಕೊರಳಹಾರ ಮತ್ತು ಮಣಿಕಟ್ಟಿನ ಆಭರಣ ರುದ್ರಾಕ್ಷಿಯಾಗಿದೆ. ಕೊರಳ ಹಾರವು 108 ರುದ್ರಾಕ್ಷಿಗಳನ್ನು ಹೊಂದಿದ್ದು ಭೂಮಿಯ ರಚನೆಗೆ ಬಳಸಲಾದ ಅಂಶಗಳನ್ನು ಪ್ರತಿನಿಧಿಸುತ್ತದೆ. ಎಲ್ಲಾ ಘಟಕಗಳಿಗೂ ಅಂಶಗಳಿಗೂ ಶಿವನೇ ದೇವರು ಎಂಬ ಅಂಶವನ್ನು ರುದ್ರಾಕ್ಷಿ ಬಿಂಬಿಸುತ್ತದೆ.

5. *ಹುಲಿಯ ಚರ್ಮ* ಹುಲಿಯ ಚರ್ಮವು ಬಲ ಅಥವಾ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಶಕ್ತಿಯು ಶಿವನ ಒಂದು ಪಾರ್ಶ್ವವಾಗಿರುವುದರಿಂದ, ಭೂಮಿಯಲ್ಲಿ ಪ್ರಸ್ತುತವಿರುವ ಎಲ್ಲಾ ಪ್ರಕಾರದ ಶಕ್ತಿಗಳಿಂದ ಆತನ ಜಯವನ್ನು ತೋರಿಸುತ್ತದೆ.

6. *ಅರ್ಧಚಂದ್ರ* ಶಿವನನ್ನು 'ಚಂದ್ರಶೇಖರ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ತಲೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವುದಕ್ಕೆ ಶಿವನಿಗೆ ಈ ಹೆಸರು. ಜೀವಿಯ ಪ್ರಕ್ರಿಯೆಯನ್ನು ಒಳಗೊಂಡಂತೆ, ಪ್ರಾರಂಭದಿಂದ ಅಂತ್ಯದವರೆಗಿನ ಕಾಲ ಚಕ್ರವನ್ನು ಅರ್ಧ ಚಂದ್ರ ಪ್ರತಿನಿಧಿಸುತ್ತದೆ. ಚಂದ್ರನು ಕಾಲದ ಅಳತೆಯಾದ್ದರಿಂದ ಶಿವ ದೇವರ ತಲೆಯಲ್ಲಿರುವ ಅರ್ಧಚಂದ್ರ ಕಾಲದ ಮೇಲಿನ ಆತನ ಹಿಡಿತವನ್ನು ತೋರಿಸುತ್ತದೆ. ಕಾಲದ ಅಳತೆಯ ಹಿಂದಿರುವ ಶಕ್ತಿ ಶಿವ ದೇವರು ಮತ್ತು ಆತನೇ ಶಾಶ್ವತ ವಾಸ್ತವವಾಗಿರುವನು.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ

 

–>