ನಾನು ಎಂಬ ಎರಡಕ್ಷರ ನನ್ನಿಂದ ದೂರಾಗುವ ವರೆಗೂ ಸಾಧನೆ ಅಸಾಧ್ಯ. ಯಾವುದೇ ಸಾಧನೆ ಮಾಡಬೇಕಾದರೆ ನಾನು ಎಂಬ ಅಹಂಕಾರ ಇರಬಾರದು, ನಾನೇ ಮಾಡಿದ್ದು, ಎಲ್ಲ ನನ್ನಿಂದಲೇ ಆಗುತ್ತಿದೆ ಎಂಬ ಹುಚ್ಚು ಕಲ್ಪನೆ ನಮ್ಮಲ್ಲಿ ಬಂದರೆ ವ್ಯಕ್ತಿತ್ವ ವಿನಾಶದತ್ತ ಸಾಗುತ್ತದೆ. ವ್ಯಕ್ತಿತ್ವ ವಿಕಾಸನಕ್ಕೆ ನಾನು ನನ್ನಿಂದ ದೂರ ಇಡಲೇಬೇಕು.
ನಾನು ಎಂಬುದು ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ, ಇಡೀ ಜೀವನವನ್ನೆ ಹಾಳು ಮಾಡುವ ಶಕ್ತಿ ಆ ಎರಡಕ್ಷರದಲ್ಲಿದೆ. ಎಲ್ಲ ಭಗವಂತನೆ ಮಾಡಿಸುವುದು ಎಂದು ಅಂದುಕೊಂಡು ನೋಡಿ ಎಂಥ ಸಮಾಧಾನ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ನಾನು ಎಂಬ ಅಹಂಕಾರ ಬೆಳೆಯುತ್ತಿದೆ. ಇದು ವ್ಯಕ್ತಿಯ ಬೆಳವಣಿಗೆಗೆ ಮತ್ತು ಸಮಾಜದ ಮೇಲೂ ಮಾರಕ ಪರಿಣಾಮ ಬೀರುತ್ತದೆ. ಎಲ್ಲವನ್ನು ಮಾಡಿಸುವವನು ದೇವರು ಎಂಬ ಸತ್ಯ ಗೊತ್ತಿದ್ದರೂ ನಾನೆ ಮಾಡಿದ್ದು ಎಂದು ಜಂಬ ಕೊಚ್ಚಿಕೊಳ್ಳುವುದು ಯಾಕೆ?. ಜೀವನ ಎಂಬ ನಾಟಕದದಲ್ಲಿ ನಾನು ಪಾತ್ರದಾರಿ ಮಾತ್ರ. ಆಡಿಸುವ ಸೂತ್ರದಾರಿ ಭಗವಂತನಿದ್ದಾನೆ. ಆತ ಹೇಳಿದಂತೆ ನಾನು ನಟನೆ ಮಾಡುವೆ ಎಂದು ಕೊಳ್ಳಿ. ಆಗ ಪರಸ್ಪರ ದ್ವೇಷ,ಅಸೂಹೆ, ಕಲಹ ಯಾವುದು ನಮ್ಮತ್ತಿರ ಸುಳಿಯುದಿಲ್ಲ. ದೇವರು ಕೊಟ್ಟ ಆಯುಷ್ಯವನ್ನು ನಾನು ಎಂಬ ಅಹಂಕಾರದಿಂದ ವ್ಯರ್ಥ ಮಾಡಿಕೊಳ್ಳುವ ಬದಲು ನಮಗೆ ಕೊಟ್ಟ ಆಯುಷ್ಯದಲ್ಲಿ ಸಾಧನೆ ಮಾಡಲು ಪ್ರಯತ್ನಿಸಬೇಕು. ಜನ್ಮ ದಿನ ಆಚರಿಸಿಕೊಳ್ಳುವುದು ಸಂಭ್ರಮ ವಲ್ಲ. ನಿಮ್ಮ ಆಯುಷ್ಯದಲ್ಲಿ ಒಂದು ವರ್ಷ ಕಡಿಮೆ ಆಯಿತು. ನಿನ್ನ ಸಾವಿಗೆ ಒಂದು ವರ್ಷ ಸಮೀಪಿಸಿರುವಿ ಉಳಿದ ಆಯುಷ್ಯದಲ್ಲಿ ಏನನ್ನಾದರೂ ಸಾಧಿಸು ಎಂಬ ಎಚ್ಚರಿಕೆ ಘಂಟೆಯೇ ಜನ್ಮ ದಿನೋತ್ಸವದ ಸಂಕೇತ.
ನನಗೆ ಈಗ 50ರ ಸಂಭ್ರಮ ಎಂದು ಜಂಬಕೊಚ್ಚಿಕೊಳ್ಳಬೇಡಿ, 50 ವರ್ಷ ಸುಮ್ಮನೆ ಕಳೆದುಬಿಟ್ಟೆನಲ್ಲ. ಮುಂದಾದರೂ ಸಾಧನೆ ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು. ಆದರೆ ನಾವು ಅದನ್ನು ಲೆಕ್ಕಿಸುವುದಿಲ್ಲ. ಸಾಧನೆ ಬಗ್ಗೆ ವಿಚಾರವೇ ಮಾಡುವುದೇ ಇಲ್ಲ.ಜನ್ಮ ದಿನವನ್ನು ವೈಭವದಿಂದ ಆಚರಿಸಿಕೊಳ್ಳುತ್ತೇವೆ.
ಭಗವಂತ ಎಲ್ಲರಿಗೂ ಎಚ್ಚರಿಕೆ ನೀಡುತ್ತಾನೆ. ಅದನ್ನು ತಿಳಿದುಕೊಂಡು ಸಾಧನೆಗೆ ಮುಂದಾಗವುದು ನಿಜವಾದ ಮಾನವನ ಲಕ್ಷಣ. ಸಾಧನೆ ಮಾಡಬೇಕಾದರೆ ನಾನು ಎಂಬ ಅಹಂಕಾರ ಖಂಡಿಸುವುದು ಅಗತ್ಯವಾಗಿದೆ. ಅಹಂಕಾರ ಖಂಡಿಸುವುದು ಅಷ್ಟು ಸುಲಭದ ಮಾತಲ್ಲ. ಸತ್ಸಂಗ, ಸದ್ವಿಚಾರ. ಗುರುಹಿರಿಯ ಪ್ರವಚನ ಕೇಳಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ನಾನು ಎಂಬುವುದು ನಮ್ಮ ದೇಹ ಎಂಬ ಸಾಮ್ರಾಜ್ಯದಲ್ಲಿ ಮೆರೆಯುತ್ತಿದ್ದರೆ ಸಾಧನೆಗೆ ಅವಕಾಶ ಸಿಗುವುದಿಲ್ಲ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಸಾಧನೆ ಸಿದ್ದಿಸಿಕೊಳ್ಳಬೇಕಾದರೆ ನಾನು ಎಂಬ ಅಹಂಕಾರ ಕಳೆದುಕೊಳ್ಳಬೇಕು. ಏನೆಲ್ಲ ದಾನ ಮಾಡಿ ಕೊನೆಗೆ ನಾನೆ ಇದನ್ನು ಕೊಟ್ಟಿದ್ದು ಎಂದು ಹೇಳಿದರೆ ನಾವು ಮಾಡಿದ ದಾನದ ಮಹತ್ವ ಕಳೆದುಕೊಳ್ಳುತ್ತದೆ. ನಾನು ಎಂಬ ಅಹಂಕಾರ ಬಿಟ್ಟು ಸಾಧನೆಯತ್ತ ಹೆಜ್ಜೆ ಹಾಕಲು ನಾವೆಲ್ಲರೂ ಪ್ರಯತ್ನಿಸೋಣ. ನಾನು ನನ್ನಿಂದ ದೂರಾಗದ ಹೊರತು ನಾನು ನಾನಾಗಲಾರೆ.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ
Subscribe , Follow on
Facebook Instagram YouTube Twitter WhatsApp