ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಹಬ್ಬಗಳಲ್ಲಿ ದೇವರನ್ನು ಪೂಜಿಸಿ ಐದು ಜನ ಮುತ್ತೈದೆಯರಿಗೆ ಬಾಗಿನ ಕೊಡುವುದು ವಾಡಿಕೆ. ಗೌರಿಯನ್ನು ಪೂಜಿಸುವ ಪ್ರತಿಯೊಬ್ಬರು ಬಾಗಿನವನ್ನು ಕೊಡುತ್ತಾರೆ. ಐದು ಜನಕ್ಕೆ ನೀಡದೆ ಇದ್ದರೂ ಸಹ ತಾವು ಪೂಜಿಸುವ ಗೌರಮ್ಮ ಹಾಗೂ ಇನ್ನೊಬ್ಬ ಹಿರಿಯ ಮುತ್ತೈದೆಯನ್ನು ಕರೆದು ಊಟ ಹಾಕಿ, ಕೈ ಕಾಲಿಗೆ ಅರಿಶಿಣ ಹಚ್ಚಿ, ಗಂಧ ಅಕ್ಷತೆ ಹಾಕಿ 3 ಬಾರಿ ನಿವಾಳಿಸಿ ಬಾಗಿನ ಕೊಡಲಾಗುತ್ತದೆ. ಮದುವೆಯಾಗಿ ಮೊದಲ ಬಾರಿಗೆ ಮನೆಗೆ ಬರುವ ಹೆಣ್ಣುಮಕ್ಕಳಿಗೆ, ಅತ್ತೆಯಂದಿರಿಗೆ ಹಾಗೂ ಇನ್ನಿಬ್ಬರು ಮುತ್ತೈದೆಯರು ಚಿಕ್ಕಮಕ್ಕಳು ಅಥವಾ ಹಿರಿಯ ಮುತ್ತೈದೆ ಹಾಗೂ ಸ್ವರ್ಣಗೌರಿಗೆ ಸೇರಿ 5 ಜನರಿಗೆ ಬಾಗಿನ ನೀಡಲಾಗುತ್ತದೆ.
ಬಾಗಿನ ಕೊಡುವ ಸಂಪ್ರದಾಯ ಬಾಗಿನಕೊಟ್ಟು ತೆಗೆದುಕೊಳ್ಳುವ ಈ ಸಂಪ್ರದಾಯಕ್ಕೂ ಹಿನ್ನೆಲೆಯಿದೆ. ನಾಗರಪಂಚಮಿಯ ಹಬ್ಬದಂದು ಸಹೋದರಿಯರು ತಮ್ಮಅಣ್ಣ-ತಮ್ಮಂದಿರಿಗೆ ಭಂಡಾರ ಕೂರಿಸಿ, ಪೂಜೆ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ದಕ್ಷಿಣೆ ಪಡೆದು ಹೋದ ಸಹೋದರರು ತಮ್ಮ ತವರಿನ ಕುಡಿಗಳಾದ ಸೋದರಿಯರಿಗೆ ಮತ್ತೆ ಏನನ್ನಾದರೂ ನೀಡಿ ಬಾಂಧವ್ಯ ವೃದ್ಧಿಸಿಕೊಳ್ಳಲು ಕಾದಿರುತ್ತಾರೆ. ಗೌರಿಹಬ್ಬದ ಈ ಸಂದರ್ಭವೇ ಅವರಿಗೆ ಪ್ರಶಸ್ತ. ಆದ್ದರಿಂದಲೇ ಬಿದಿರಿನ ಮೊರದಲ್ಲಿ ಮಂಗಲದ್ರವ್ಯಗಳನ್ನಿಟ್ಟು ತವರಿನಿಂದ ನೀಡಿ ಆಶೀರ್ವದಿಸುತ್ತಾರೆ. ಇದನ್ನು ಪಡೆದ ಸ್ತ್ರೀಯರು ತಮ್ಮ ಅಮ್ಮಂದಿರ ಹೆಸರಿನಲ್ಲಿ ‘ತಾಯಿ ಬಾಗಿನ’ವನ್ನು ತೆಗೆದಿಟ್ಟುಕೊಳ್ಳುತ್ತಾರೆ.
ಬಾಗಿನದಲ್ಲಿ ಇರುವ ವಸ್ತುಗಳು ಹಾಗೂ ಅವುಗಳ ಅಧಿದೇವತೆ –
೧. ಅರಿಶಿನ - ಗೌರೀ ದೇವಿ
೨. ಕುಂಕುಮ - ಮಹಾಲಕ್ಷ್ಮೀ
೩. ಸಿಂಧೂರ - ಸರಸ್ವತೀ
೪. ಕನ್ನಡಿ - ರೂಪಲಕ್ಷ್ಮೀ
೫. ಬಾಚಣಿಗೆ - ಶೃಂಗಾರಲಕ್ಷ್ಮೀ
೬. ಕಾಡಿಗೆ - ಲಜ್ಜಾಲಕ್ಷ್ಮೀ
೭. ಅಕ್ಕಿ - ಶ್ರೀ ಲಕ್ಷ್ಮೀ
೮. ತೊಗರಿಬೇಳೆ - ವರಲಕ್ಷ್ಮೀ
೯. ಉದ್ದಿನಬೇಳೆ - ಸಿದ್ದಲಕ್ಷ್ಮೀ
೧೦. ತೆಂಗಿನಕಾಯಿ - ಸಂತಾನಲಕ್ಷ್ಮೀ
೧೧. ವೀಳ್ಯದ ಎಲೆ - ಧನಲಕ್ಷ್ಮೀ
೧೨. ಅಡಿಕೆ - ಇಷ್ಟಲಕ್ಷ್ಮೀ
೧೩. ಫಲ(ಹಣ್ಣುಗಳು) - ಜ್ಞಾನಲಕ್ಷ್ಮೀ
೧೪. ಬೆಲ್ಲ - ರಸಲಕ್ಷ್ಮೀ
೧೫. ವಸ್ತ್ರ - ವಸ್ತ್ರಲಕ್ಷ್ಮೀ
೧೬. ಹೆಸರುಬೇಳೆ - ವಿದ್ಯಾಲಕ್ಷ್ಮೀ ಎಂಬ ವಾಡಿಕೆಯಿದೆ.
ಬಾಗಿನ ತಯಾರಿಸುವ ವಿಧಾನ :
ಸ್ವರ್ಣಗೌರಿ ವ್ರತದಂದು ಕೊಡುವ ಬಾಗಿನವನ್ನು ತಯಾರಿಸುವುದೇ ಹೆಣ್ಣುಮಕ್ಕಳಿಗೆ ಬಲು ಪ್ರಮುಖ ಕೆಲಸ. ಇದನ್ನು ತಯಾರಿಸುವುದರಲ್ಲೂ ವಿಧಾನಗಳಿವೆ. ಸ್ವರ್ಣಗೌರಿ ಹಬ್ಬದ ಬಾಗಿನಕ್ಕೆ ಹೊಸ ಮೊರಗಳನ್ನು ಹಬ್ಬಕ್ಕೆ ಮುಂಚಿನ ಅಮಾವಾಸ್ಯೆಗೆ ಮೊದಲೇ ತೊಳೆದು ಒಣಗಿಸಿ ಮೊರಗಳಿಗೆ ಅರಿಶಿನ ಹಚ್ಚಬೇಕು.
ದೊಡ್ಡವರಿಗೆ ಎರಡು ಜೊತೆ ದೊಡ್ಡ ಮೊರ, ಚಿಕ್ಕವರಿಗೆ ಒಂದು ಜೊತೆ ಸಣ್ಣಮೊರಕ್ಕೆ ಮಧ್ಯದಲ್ಲಿ ಕುಂಕುಮ ಇಟ್ಟುಕೆಳಗೆ ಮೇಲೆ ಚಂದ್ರ (ಕೇಸರಿ ಬಣ್ಣವಿರುತ್ತದೆ.) ಮತ್ತು ಕಾಡಿಗೆ ಚುಕ್ಕೆಗಳನ್ನು ಇಡಬೇಕು. ಐದು ಎಳೆ ಅರಿಶಿನ ದಾರಕ್ಕೆ ಒಂದು ಅರಿಶಿನದ ಕೊನೆಕಟ್ಟಿ ಮೇಲೆ ಮುಚ್ಚುವ ಮೊರಕ್ಕೆ ಕಟ್ಟಬೇಕು.
ಬಾಗಿನದ ಈ ಮೊರಗಳಿಗೆ 16 ಬಟ್ಟಲಡಿಕೆ, 16 ಅರಿಶಿನ ಕೊನೆ, 16 ವೀಳ್ಯದೆಲೆ, ನಾಲ್ಕು ಕಪ್ಪು ಬಣ್ಣದ ಚಿಕ್ಕ ಗೌರಿ ಬಳೆ, ಎರಡು ಬಿಚ್ಚೋಲೆ, ಕರಿಮಣಿ, ಅರಿಶಿನ ಕುಂಕುಮದ ತಲಾ ಎರಡೆರಡು ಡಬ್ಬಿಗಳು, ಗೌರಿದಾರ, ಒಂದು ಕಾಡಿಗೆ ಡಬ್ಬಿ, ಒಂದು ಕನ್ನಡಿ, ಒಂದು ಬಾಚಣಿಗೆ, ಗಾಜಿನ ಬಳೆಗಳು ಒಂದು ಡಜನ್ ಬೆಳ್ಳಿಯ ಅಥವ ವೈಟ್ ಮೆಟಲ್‌ನ ಕಾಲುಂಗುರಗಳು ಒಂದು ಜೊತೆ, ಎರಡು ಹವಳದ ಮಣಿ, ಎರಡು ಮುತ್ತಿನ ಮಣಿ, ಒಂದು ಗ್ರಾಂ ಚಿನ್ನದ ತಾಳಿ ಬೊಟ್ಟು ಒಂದು, ದುಂಡನೆಯ ಕುಂಕುಮವಿಡಲು ವೈಟ್ ಮೆಟಲ್/ಬೆಳ್ಳಿಯ ಒಂದು ಬೊಟ್ಟಿನ ಕಡ್ಡಿ (ಮೊಳೆತರಹ ಇರುತ್ತದೆ.)
16 ಎಳೆ ಹಸಿದಾರಕ್ಕೆ ಅರಿಶಿನ ನೀರು ಹಚ್ಚಿ 16 ಗಂಟು ಹಾಕಿ ಅದರಲ್ಲಿ ಒಂದು ಗಂಟಿಗೆ ಹೂವು ಮತ್ತು ಪತ್ರೆ ಸೇರಿಸಿ ಕಟ್ಟಬೇಕು. ಗೌರಿಗೆ ಪೂಜೆಯ ನಂತರ ಮುತ್ತೈದೆಯರನ್ನು ಪೂರ್ವ ಅಥವಾ ಉತ್ತರದ ಕಡೆಗೆ ಮುಖ ಮಾಡಿ ಕುಳ್ಳಿರಿಸಿ ಅವರ ಅಂಗೈ, ಅಂಗಾಲುಗಳಿಗೆ ಅರಿಶಿನದ ನೀರು ಹಚ್ಚಿ, ಕುಂಕುಮ ಹೂವು ಕೊಟ್ಟು ಬಾಗಿನ ಮುಚ್ಚಿ ಒಂದು ಉದ್ದರಣೆ ನೀರು, ಅಕ್ಷತೆ ಹಾಕಿ ನಮ್ಮ ಸೆರಗನ್ನು ಅದರ ಮೇಲಿಟ್ಟು ಕೊಡಬೇಕು.
ಬಾಗಿನ ತೆಗೆದುಕೊಳ್ಳುವ ಮುತ್ತೈದೆ ಸಹ ತಮ್ಮ ಸೀರೆಯ ಸೆರಗನ್ನು ಭುಜದ ಮೇಲಿಂದ ಮುಂದಕ್ಕೆ ತಂದು ಎರಡೂ ಕೈಗಳಿಂದ ಬಾಗಿನವನ್ನು ಹಿಡಿದುಕೊಂಡು ಅಡ್ಡಡ್ಡ ಉದ್ದುದ್ದ ಅಲ್ಲಾಡಿಸಬೇಕು. ಮೇಲಿನ ಮುಚ್ಚಳವಿರುವ ಮೊರವನ್ನು ತುಂಬಿರುವ ಮೊರದ ಕೆಳಕ್ಕೆ ಇಟ್ಟು ಎರಡೂ ಮೊರಗಳನ್ನು ಮತ್ತೆ ಅಡ್ಡ ಉದ್ದ ಅಲ್ಲಾಡಿಸಿ ಕೊಡಬೇಕು.
1) ಮದುವೆಯಾದ ಹೆಣ್ಣು ಮಕ್ಕಳಿಗೆ ಮೊದಲ ವರ್ಷದ ಗೌರಿ ಹಬ್ಬ ತುಂಬಾ ವಿಜೃಂಭಣೆಯಿಂದ ಮಾಡುತ್ತಾರೆ. 16 ಮೊರದ ಬಾಗಿನಗಳನ್ನು ಮೇಲೆ ಹೇಳಿದ ರೀತಿಯಲ್ಲಿ ತಯಾರಿಸಿ ಗೌರಿಗೆ ಎಲ್ಲಾ ಬಾಗಿನಗಳನ್ನು ತೋರಿಸಿ ನಂತರ 15 ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ. ಒಂದು ಬಾಗಿನವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.
2) ಬಾಗಿನದಲ್ಲಿ ಅವರ ಶಕ್ತಿಗೆ ಅನುಸಾರವಾಗಿ ಬೆಳ್ಳಿ, ಬಂಗಾರದ ಸಣ್ಣ ವಸ್ತುಗಳನ್ನು ಹಾಕಿ ಕೊಡುತ್ತಾರೆ. ಮೊರದ ಬಾಗಿನದ ಮೇಲೆ ಇತ್ತೀಚೆಗೆ ಕುಂದನ್ ಅಥವಾ ಚಮಕಿ ಗೋಲ್ಡನ್ ರಿಬ್ಬನ್‌ಗಳಿಂದ ಅಲಂಕರಿಸಿ ಕೊಡುತ್ತಾರೆ. ಮುತ್ತೈದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಳ್ಳಬೇಕು.
3) ಅವರಿಗೆ ಪಾನಕ ಕೋಸಂಬರಿ ಸಹ ಕೊಟ್ಟು ಕೈ ದಾರ ಕಟ್ಟಿಸಿಕೊಳ್ಳಬೇಕು. ಸ್ವರ್ಣಗೌರಿಗೆ ಷೋಡಶೋಪಚಾರ ಸೇವೆ ಮಾಡಿ ಸಂತೃಪ್ತಿಪಡಿಸುವಂತೆ ಷೋಡಶ ಮಂಗಳದ್ರವ್ಯ ಗಳನ್ನು ಮೊರದ ಬಾಗಿನಕ್ಕೆ ಹಾಕಿ ಮುತ್ತೈದೆಗೆ ಕೊಟ್ಟು ಆಧರಿಸಬೇಕು.
4) ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿ ಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುತ್ತಾರೆ.
5) ಮೊರದ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮೊರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರ ತರಹ ಜೊತೆಯಲ್ಲಿ, ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಎನ್ನುವ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಎನ್ನುವ ಕಾರಣಕ್ಕೆ 16 ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿನ ಕೊಡುತ್ತಾರೆ.
6) ಬಾಗಿನವನ್ನು ಹೊತ್ತು ಸಂಭ್ರಮದಿಂದ ಓಡಾಡುವ ಸುಮಂಗಲಿಯರನ್ನು ಅಂದಿನಿಂದ ಒಂದು ವಾರಗಳ ಕಾಲ ನೋಡಬಹುದು. ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರವೂ ಕಲಶದಲ್ಲಿ ಮಂಗಳಗೌರಿಯನ್ನು ಆವಾಹನ ಮಾಡಿ ಸ್ತ್ರೀಯರು ಷೋಡಶೋಪಚಾರಗಳಿಂದ ಪೂಜೆ ಮಾಡುತ್ತಾರೆ.
ಮಕ್ಕಳ ಬಾಗಿನ
1) ಮಕ್ಕಳ ಬಾಗಿನಕ್ಕೆ ಕಾಲಕ್ಕೆ ತಕ್ಕಂತೆ ಬರುವ ಫ್ಯಾಷನಬಲ್ ಶೃಂಗಾರ ಸಾಧನಗಳು (ಬಳೆ, ಬಿಂದಿ, ಹೇರ್ ಕ್ಲಿಪ್, ನೈಲ್ ಪಾಲಿಶ್, ಸರ, ಓಲೆ ಮತ್ತು ರುಮಾಲು ಇತ್ಯಾದಿ)ಹಾಕಿ ಜೊತೆಗೆ ಹಣ್ಣುಗಳು ಸಣ್ಣ ತೆಂಗಿನಕಾಯಿ ವಿಳ್ಳೇದೆಲೆ ಅಡಿಕೆ, ಸಹ ಸೇರಿಸುತ್ತಾರೆ. ಈ ಬಾಗಿನವನ್ನು ಸಮವಯಸ್ಕ ಕನ್ನಿಕೆಗೆ ಕೊಡಿಸುತ್ತಾರೆ. ಒಟ್ಟಿನಲ್ಲಿ ಈ ಹಬ್ಬ ಹೆಣ್ಣು ಮಕ್ಕಳಿಗೆ ತುಂಬಾ ಖುಷಿ ಮತ್ತು ಸಂಭ್ರಮವನ್ನು ತರುತ್ತದೆ.
2) ಮೊರದ ಬಾಗಿನದ ಬದಲು ಉಪಯೋಗವಾಗುವಂತಹ ಫ್ರೂಟ್ ಬಾಕ್ಸ್‌ಗಳನ್ನು ಸಹ ಕೊಡುವುದು ರೂಢಿಯಿದೆ. ಕುಂಕುಮ ಇಡುವ ಮುಂಚೆ ಬೊಟ್ಟಿನ ಪೇಸ್ಟ್‌ನ ಒಂದು ಚಿಕ್ಕ ಡಬ್ಬಿ. ಒಂದು ತೆಂಗಿನಕಾಯಿ, ಒಂದು ಸೌತೇಕಾಯಿ, ಒಂದು ಮುಸುಕಿನ ಜೋಳ, ಐದು ತರಹದ ಹಣ್ಣುಗಳು, ಒಂದು ರವಿಕೆ ಪೀಸ್, ಅಕ್ಕಿ, ತೊಗರಿಬೇಳೆ, ಬೆಲ್ಲ, ಕಡ್ಲೆಬೇಳೆ, ಹೆಸರುಬೇಳೆ, ರವೆ, ಎಲ್ಲವನ್ನು ಒಂದೊಂದು ಪ್ರತ್ಯೇಕವಾಗಿ ಕವರಿಗೆ ಹಾಕಿ, ಮುಚ್ಚಿ ದೊಡ್ಡವರ ಮತ್ತು ಮಕ್ಕಳ ಬಾಗಿನದ ಮೊರಗಳಿಗೆ ಹಾಕಬೇಕು. ಐದು ರೂ. ದಕ್ಷಿಣೆ ಹಾಕಿಡಬೇಕು.
3) ಇನ್ನು ಹಬ್ಬದ ದಿನ ಮನೆಯಲ್ಲಿ ಚಿಕ್ಕ ಹೆಣ್ಣು ಮಕ್ಕಳು (ಕನ್ನಿಕೆಯರು) ಇದ್ದರೆ ಅವರಿಗಾಗಿ ಚಿಕ್ಕ ಗೌರಿ ತಂದು ಸ್ಥಾಪಿಸಿ ಚಿಕ್ಕ ಚಿಕ್ಕ ಪೂಜೆ ಸಾಮಾನುಗಳನ್ನು ತಟ್ಟೆಯಲ್ಲಿ ಜೋಡಿಸಿಕೊಂಡು ಪೂಜೆ ಮಾಡಿಸುತ್ತಾರೆ.
ಮೊರದ ಬಾಗಿನಕ್ಕೆ ಅಣಿಯಾದ ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆ-ಬಿಚ್ಚೋಲೆ, ಕನ್ನಡಿ, ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ, ನಾದಿನಿಯರಿಗೆ ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು, ಭಕ್ಷ್ಯಗಳು ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು.
ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ, ಗೌರಿ ಮೂರ್ತಿಯನ್ನು ಶೃಂಗರಿಸಿ, ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು. ಪತ್ರೆಗಳನ್ನು, ಹೂವುಗಳನ್ನು, ಹೂವಿನ ಮಾಲೆಗಳನ್ನು ಕಟ್ಟಿ, 5 ತೆಂಗಿನಕಾಯಿ ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ, ಚಂದನ, ಅಡಿಕೆ, ದಶಾಂಗಂ, 5 ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ, ಗೆಜ್ಜೆವಸ್ತ್ರಗಳು, 16 ಎಳೆಯ ಗೆಜ್ಜೆವಸ್ತ್ರ ಹಾಗೆ 16 ಎಳೆ ದೋರ ಗ್ರಂಥಿಗಳನ್ನು ತಯಾರಿಸಬೇಕು. ಅದಕ್ಕೆ 16 ಗಂಟನ್ನು ಹಾಕಿ ದಾರವನ್ನು ಸಿದ್ಧಪಡಿಸಬೇಕು.
ಪಂಚಾಮೃತ ಅಭಿಷೇಕ ಮಧುಪರ್ಕ, ಮಂಗಳಾರತಿ ಬತ್ತಿಗಳು. ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ 2 ತೆಂಗಿನಕಾಯಿಗಳು ನಾಲ್ಕು ವಿಳ್ಳೆದೆಲೆ, ಅಡಿಕೆಗಳು, ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು. ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದು.
ಷೋಡಶಲಕ್ಷ್ಮೀಯರು
ಮುತ್ತ್ತೈದೆ ದೇವತೆಯರು 16 ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ.
ಗೌರಿ,
ಪದ್ಮಾ,
ಶುಚಿ,
ಮೇಧಾ,
ಸಾವಿತ್ರಿ,
ವಿಜಯಾ,
ಜಯಾ,
ದೇವಸೇನಾ,
ಸಾಹಾ,
ಮಾತರಲೋಕಾ,
ಮಾತಾರಾ,
ಶಾಂತೀ,
ಪೃಥ್ವಿ,
ಧೃತೀ,
ತುಷ್ಟೀ,
ಸ್ವಧಾದೇವಿ..
ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ.
16 ಈ ದೇವತೆಗಳು ನಿತ್ಯಸುಮಂಗಲಿಯರು.
16 ಈ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ, ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು.
16 ಈ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ.
16 ಅರಿಸಿನ ದಾರ, 16 ಗಂಟುಗಳು, 16 ಬಾಗಿನ, 16 ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ.
ದಾನಗಳು ಮತ್ತು ಫಲಗಳು
1. ಅರಿಸಿನ ದಾನ :
ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ.
ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ.
2. ಕುಂಕುಮ ದಾನ :
ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ. ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ. ದೃಷ್ಟಿದೋಷ ನಿವಾರಣೆ ಆಗುತ್ತದೆ. ಕೋಪ, ಹಠ,ಕಮ್ಮಿ ಆಗುತ್ತದೆ.
3. ಸಿಂಧೂರ ದಾನ :
ಸತಿ ಪತಿ ಕಲಹ ನಿವಾರಣೆ. ರೋಗಭಾಧೆ, ಋಣಭಾದೆ ನಿವಾರಣೆ. ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ. ಈ ಕಾರಣಕ್ಕೆ ಶ್ರೀ ಆಂಜನೇಯ ಸ್ವಾಮಿಗೆ ಕೇಸರಿ ಅಲಂಕಾರ ಮಾಡುತ್ತಾರೆ.
4. ಕನ್ನಡಿ ದಾನ :
ಕನ್ನಡಿಗೆ ಸಂಸ್ಕೃತದಲ್ಲಿ “ದರ್ಪಣ” ಎನ್ನುತ್ತಾರೆ.
ಇದನ್ನು ಯಾರು ಪ್ರತಿದಿನ ನೋಡುತ್ತಾರೆಯೋ ಅವರಿಗೆ ಅಪಮೃತ್ಯು ಬರುವುದಿಲ್ಲ.
ಕನ್ನಡಿ ದಾನ ಮಾಡುವುದರಿಂದ ಚರ್ಮವ್ಯಾಧಿ ಬರುವುದಿಲ್ಲ. ದೇವರಿಗೆ, ದೇವಾಲಯಗಳಲ್ಲಿ ದರ್ಪಣ ಸೇವೆ ಮಾಡಿಸಿದರೆ, ನಿಮ್ಮ ಸಮಸ್ತ ಪಾಪಗಳೂ ನಿವಾರಣೆಯಾಗುತ್ತದೆ.
ರಾತ್ರಿ ಕಾಲ, ಹಾಗೂ ಒಡೆದ ಕನ್ನಡಿಯನ್ನು ಬಳಸಿದರೆ, ದಾರಿದ್ರ್ಯ ಹಾಗೂ ಬಡತನ ಬರುತ್ತದೆ…
5. ಬಾಚಣಿಗೆ ದಾನ :
ಬಾಚಣಿಗೆ ದಾನ ಮಾಡುವುದರಿಂದ, ಮುಖದಲ್ಲಿ ತೇಜಸ್ಸು ಹೆಚ್ಚಾಗಿ, ಮನೆಯಲ್ಲಿ ಅಲಂಕಾರದ ವಸ್ತುಗಳು ಜಾಸ್ತಿಯಾಗುತ್ತದೆ…
6. ಕಾಡಿಗೆ ದಾನ :
ಕಾಡಿಗೆ ದಾನ ಮಾಡುವುದರಿಂದ ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತದೆ, ಮನೆಯ ಮೇಲೆ ಆಗಿರುವ, ಅಥವಾ ದಂಪತಿಗಳ ಮೇಲೆ ಆಗಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
7. ಅಕ್ಕಿ ದಾನ :
ಅಕ್ಕಿ ಎಷ್ಟು ದಾನ ಮಾಡುತ್ತೀರೋ ಅಷ್ಟೂ ಅನ್ನಪೂರ್ಣೇಶ್ವರೀ ದೇವಿ ತೃಪ್ತಳಾಗುತ್ತಾಳೆ. ಧನಲಕ್ಷ್ಮೀ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮನೆಯಲ್ಲಿ ಶಾಂತ ವಾತಾವರಣ ಇದ್ದು, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ.
8. ತೊಗರಿಬೇಳೆ ದಾನ:
ತೊಗರಿಬೇಳೆ ದಾನ ಮಾಡುವುದರಿಂದ ಕುಜದೋಷ ನಿವಾರಣೆಯಾಗುತ್ತದೆ.
ಪ್ರತಿದಿವಸ ತೊಗರಿಬೇಳೆಯನ್ನು ಯಾರು ತಿನ್ನುತ್ತಾರೋ ಅವರಿಗೆ ಧೈರ್ಯ ಜಾಸ್ತಿ ಇರುತ್ತದೆ. ಈ ಕಾರಣಕ್ಕೆ ಹುಳಿ ಮತ್ತು ಸಾಂಬಾರ್ ನಲ್ಲಿ ತೊಗರಿಬೇಳೆ ಜಾಸ್ತಿ ಉಪಯೋಗಿಸುವುದು. ತೊಗರಿಬೇಳೆ ದಾನದಿಂದ ಸತಿಪತಿ ಕಲಹ ನಿವಾರಣೆಯಾಗುತ್ತದೆ,
9. ಉದ್ದಿನ ಬೇಳೆ ದಾನ :
ಪ್ರತೀ ತಿಂಗಳು, ಪ್ರತೀ ವರ್ಷ, ಮಹಾಲಯ ಅಮಾವಾಸ್ಯೆ, ತರ್ಪಣ ಕೊಡದೇ ಇದ್ದರೆ, ವೈಧಿಕ ಮಾಡುವಾಗ ದೋಷಗಳಾಗಿದ್ದರೆ, ಜಾತಕದಲ್ಲಿ ಪಿತೃಶಾಪ ಇದ್ದರೆ, ಮಕ್ಕಳು ಕೆಟ್ಟದಾರಿಯಲ್ಲಿ ನಡೆಯುತ್ತಿದ್ದರೆ, ಶತೃಗಳ ಕಾಟ ಜಾಸ್ತಿ ಆಗಿದ್ದರೆ, ಉದ್ದಿನ ಬೇಳೆ ದಾನ ಮಾಡುವುದರಿಂದ ಈ ದೋಷಗಳೆಲ್ಲಾ ನಿವಾರಣೆಯಾಗುತ್ತದೆ.
10. ತೆಂಗಿನಕಾಯಿ :
ತೆಂಗಿನಕಾಯಿಗೆ ಅಧಿದೇವತೆ ಸಂತಾನ ಲಕ್ಷ್ಮಿ, ಇಷ್ಟಾರ್ಥ ಪ್ರದಾಯಿನಿ ಅಂತನೂ ಕರೆಯುತ್ತಾರೆ.
ಮಕ್ಕಳಾಗಿಲ್ಲ, ಸಂತಾನ ಸಮಸ್ಯೆ ಇರೋವ್ರು ತೆಂಗಿನಕಾಯಿ ದಾನ ಮಾಡುತ್ತಾ ಬಂದರೆ ಸಂತಾನವಾಗುತ್ತದೆ. ತಾಂಬೂಲದ ಜೊತೆ ತೆಂಗಿನಕಾಯಿ ದಾನ ಮಾಡೋದ್ರಿಂದ “ಅಶ್ವಮೇಧಯಾಗದ ” ಫಲ ಬರುತ್ತದೆ. ಸಕಲ ಕಷ್ಟಗಳೂ ನಿವಾರಣೆಯಾಗುತ್ತದೆ .
11. ವೀಳ್ಯದೆಲೆ ದಾನ :
ವೀಳ್ಯದೆಲೆಗೆ ದೇವತೆ ಧನಲಕ್ಷ್ಮೀ. ವೀಳ್ಯದೆಲೆ ತಾಂಬೂಲ ದಾನ ಮಾಡುವುದರಿಂದ ಅಧಿಕವಾದ ಧನ ಪ್ರಾಪ್ತಿಯಾಗುತ್ತದೆ. ಮಹಾಲಕ್ಷ್ಮಿಯು ಅಂತಹ ಮನೆಯಲ್ಲಿ ಶಾಶ್ವತವಾಗಿ ನೆಲೆಸಿರುತ್ತಾಳೆ. ಗಂಗಾದೇವಿ ಪ್ರಸನ್ನಳಾಗುತ್ತಾಳೆ. ಮನೆಯ ಮುಂದೆ ವೀಳ್ಯದೆಲೆ ಬಳ್ಳಿ ಬೆಳೆದರೆ, ಆ ಮನೆಯ ಸರ್ವ ದೋಷವೂ, ವಾಸ್ತು ದೋಷವೂ ನಿವಾರಣೆಯಾಗುತ್ತದೆ.
12. ಅಡಿಕೆ ದಾನ :
ಅಡಿಕೆಗೆ ಸಂಸ್ಕೃತದಲ್ಲಿ ಪೂಗೀಫಲ ಎನ್ನುತ್ತಾರೆ. ಯಾರು ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಬಹಳ ಬೇಗ ಬಯಕೆಗಳು ಈಡೇರುತ್ತವೆ. ಬರೀ ಅಡಿಕೆಯನ್ನು ತಿಂದರೆ “ಬ್ರಹ್ಮಹತ್ಯಾದೋಷ” ಬರುತ್ತದೆ.
13. ಫಲದಾನ :
ಫಲದಾನಕ್ಕೆ ಜ್ಞಾನಲಕ್ಷ್ಮಿ ಅಧಿಪತಿ. ಫಲದಾನ ಮಾಡುವುದರಿಂದ ನಿಮ್ಮ ಕಾರ್ಯಗಳು ಸುಸೂತ್ರವಾಗಿ, ಸುಗಮವಾಗಿ ನಡೆಯುತ್ತದೆ, ಹಾಗೂ ಲಾಭದಾಯಕವಾಗುತ್ತದೆ.
ಸ್ತ್ರೀ ಶಾಪ ನಿವಾರಣೆಯಾಗುತ್ತದೆ, ಗುರು ಪೂಜೆ ಮಾಡಿ ಹಣ್ಣು ದಾನ ಮಾಡಿದರೆ ಗುರುದೋಷಗಳು ನಿವಾರಣೆಯಾಗುತ್ತದೆ.
ಅಮಾವಾಸ್ಯೆ ಅಥವ ವೈದಿಕದ ದಿನ ಹಣ್ಣುದಾನ ಮಾಡಿದರೆ ಸಕಲ ಪಿತೃದೋಷ ನಿವಾರಣೆಯಾಗುತ್ತದೆ.
14. ಬೆಲ್ಲದಾನ :
ಬೆಲ್ಲದಲ್ಲಿ ಬ್ರಹ್ಮದೇವರು, ಶ್ರೀ ಮಹಾಲಕ್ಷ್ಮಿಯು, ಶ್ರೀ ಮಹಾ ಗಣಪತೀ ದೇವರ ಸಾನಿಧ್ಯ ಇರುತ್ತದೆ.
ಬೆಲ್ಲವನ್ನು ದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ. ನಿತ್ಯದಾರಿದ್ರ್ಯ ಅನುಭವಿಸುವವರು ಬೆಲ್ಲಕ್ಕೆ ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾ ಬಂದರೆ ದಾರಿದ್ರ್ಯ ಹಾಗೂ ಬಡತನ ನಿವಾರಣೆಯಾಗುತ್ತದೆ. ಗಣಪತಿಗೆ ಬೆಲ್ಲ ಮತ್ತು ಮಹಾಲಕ್ಷ್ಮಿಗೆ ಬೆಲ್ಲದನ್ನ ನೈವೇದ್ಯ ಮಾಡಿದರೆ ತುಂಬಾ ವಿಶೇಷ, ಧನ ಧಾನ್ಯ ಸಮೃದ್ಧಿಯಾಗುತ್ತದೆ.
15. ವಸ್ತ್ರ ದಾನ :
ವಸ್ತ್ರದಾನ ಮಾಡುವುದರಿಂದ ಕುಲದೇವತೆ ತೃಪ್ತಿಯಾಗುತ್ತಾರೆ, ಸುಮಂಗಲೀ ದೋಷ ನಿವಾರಣೆಯಾಗುತ್ತದೆ.
ಸ್ತ್ರೀ ದೋಷ ಮತ್ತು ಶಾಪಗಳು ನಿವಾರಣೆಯಾಗುತ್ತದೆ. ಸಕಲ ದೇವತೆಗಳು ತೃಪ್ತರಾಗುತ್ತಾರೆ. ಆರೋಗ್ಯಭಾಗ್ಯವಾಗುತ್ತದೆ.
ದಾನವನ್ನು ತೆಗೆದುಕೊಂಡ ವಸ್ತ್ರಗಳನ್ನು ದಾನ ಮಾಡಬಾರದು.
16. ಹೆಸರುಬೇಳೆ :
ವಿದ್ಯಾಲಕ್ಷ್ಮಿ ಅನುಗ್ರಹವಾಗುತ್ತದೆ, ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಾರೆ.
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಹೆಸರುಬೇಳೆ ದಾನದಿಂದ ಸಕಲ ದೇವಿಗಳೂ ತೃಪ್ತರಾಗುತ್ತಾರೆ. ಮಾಟ ಮಂತ್ರ ಮನೆಯ ಮೇಲೆ ಕೆಲಸ ಮಾಡುವುದಿಲ್ಲ. ಹೆಂಗಸರ ಗರ್ಭಕೋಶದ ಸಮಸ್ಯೆ ನಿವಾರಣೆಯಾಗುತ್ತದೆ.
- ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp