ಓಂ ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್
ಓಂ ಶಾಂತಿ: ಶಾಂತಿ: ಶಾಂತಿ: ||
(ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ, ಎಲ್ಲರೂ ಎಲ್ಲೆಡೆ ಶುಭವನ್ನು ನೋಡಲಿ ಯಾರೂ ಎಂದಿಗೂ ದು:ಖವನ್ನುಅನುಭವಿಸದಿರಲಿ, ಓಂ ಶಾಂತಿ, ಶಾಂತಿ, ಶಾಂತಿ)
ಇಂದು ನಾವು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇವೆ.
ಸಮಸ್ಯೆಗೆ ಪರಿಹಾರವನ್ನು ಪಡೆಯಲು ವೈದ್ಯರತ್ತ ಧಾವಿಸುತ್ತೇವೆ. ಸಾಮಾನ್ಯವಾಗಿ ಯಾವುದೇ ವೈದ್ಯರು ರೋಗಿಯನ್ನು ಕೂಲಂಕಷವಾಗಿ ತಪಾಸಣೆ ಮಾಡಿ ಸೂಕ್ತ ಔಷಧ ಮತ್ತು ಪಥ್ಯಗಳನ್ನು ಸೂಚಿಸಿ ಕಳುಹಿಸುತ್ತಾರೆ. ರೋಗಿಯೂ ಒಂದಷ್ಟು ದಿನ ಔಷಧಗಳನ್ನು ಸೇವಿಸಿ ಆರೋಗ್ಯವನ್ನು ಪಡೆಯಬಹುದು.
ಆದರೆ ಬಹುತೇಕವಾಗಿ ಕೆಲವು ಆರೋಗ್ಯ ಸಮಸ್ಯೆಗಳು ಎಷ್ಟು ದಿನಗಳಾದರೂ ಸರಿಹೋಗುವುದೇ ಇಲ್ಲ. ಕಾರಣವೇನು?
ಆ ವೈದ್ಯರು ಸರಿಯಿಲ್ಲ ಎಂದು ಇನ್ನೊಬ್ಬ ವೈದ್ಯರನ್ನು ಹುಡುಕುವುದು. ಇದೇ ಒಂದು ಪದ್ಧತಿಯಾಗಿಬಿಡುತ್ತದೆ.
ಇಂದು ಸಮಾಜಿಕ ಜಾಲತಾಣಗಳಲ್ಲಿ ಪ್ರತಿ ಸಮಸ್ಯೆಗೂ ನೂರಾರು ತರಹದ ಸಲಹೆ ಸೂಚನೆಗಳು. ಯಾವುದು ಸರಿ ಯಾವುದು ತಪ್ಪು..ಇದನ್ನು ಗುರುತಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ.
ಈ ಪರಿಸ್ಥಿತಿಯಲ್ಲಿ ಮನಸ್ಸಿಗೆ ಬಂದಂತೆ ಔಷಧೋಪಚಾರಗಳನ್ನು ಅನುಸರಿಸಿ, ಸಮಸ್ಯೆಯನ್ನು ದುಪ್ಪಟ್ಟು ಮಾಡಿಕೊಂಡವರೆಷ್ಟೋ ಮಂದಿ.
ನಿಸರ್ಗ ಮನೆ ಶಿರಸಿಯ ಡಾ. ವೆಂಕಟರಮಣ ಹೆಗಡೆಯವರು, ಡಾ. ಬಿ.ಎಮ್ ಹೆಗಡೆಯವರು, ಸದ್ಗುರುಗಳು ಇನ್ನೂ ಹಲವು ತಜ್ಞರ ಸಮಗ್ರ ಜೀವನ ದೃಷ್ಟಿಕೋನ ಮತ್ತು ನೈಸರ್ಗಿಕವಾದ ರೋಗ ಪರಿಹಾರೋಪಾಯಗಳು ಬಹಳ ಸರಳ ಮತ್ತು ಅತ್ಯಂತ ಪರಿಣಾಮಕಾರಿ ಎಂಬುದನ್ನು ಗುರುತಿಸಿಕೊಂಡಿದ್ದು, ದಿನನಿತ್ಯ ಪಾಲಿಸಲು ಸಾಧ್ಯವಾಗಬಹುದಾದ ಕೆಲವು ಸೂತ್ರಗಳನ್ನು ನಾಲ್ಕು ಜನರೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.
ಭಗವಂತನ ಕೊಡುಗೆ ಈ ನಮ್ಮ ಶರೀರ. ಈ ಶರೀರದಲ್ಲಿ ಅವನಿದ್ದಾನೆ. ದೇಗುಲದಂತಹ ಈ ಪ್ರದೇಶವನ್ನು ನಾವು ಅತ್ಯುತ್ತಮವಾಗಿ ರಕ್ಷಿಸಿಕೊಂಡು ಅವನಿಗೇ ಪುನಃ ಅರ್ಪಿಸಬೇಕಲ್ಲವೇ?
ಮನುಷ್ಯನಿಗೆ ಆರೋಗ್ಯ ಎಲ್ಲಕ್ಕಿಂತಲೂ ಮುಖ್ಯ. ಇದನ್ನು ಒಪ್ಪದವರು ಜಗತ್ತಿನಲ್ಲಿ ಯಾರೂ ಇರಲಾರರೇನೋ! A healthy mind in a healthy body' - ಆರೋಗ್ಯವಂತ ಮನುಷ್ಯ ಆಕಾಶವನ್ನೇ ಮುಟ್ಟಬಲ್ಲ!
ನಮ್ಮ ಬದುಕಿನಲ್ಲಿ ಆರೋಗ್ಯವೇ ಮುಖ್ಯ ಎನ್ನುವುದಾದರೆ......ಈ ಸೂತ್ರಗಳನ್ನು ಕಲಿತು ಅಳವಡಿಸಿಕೊಳ್ಳೋಣ.
ನಮ್ಮ ಆರೋಗ್ಯದ ಸೂತ್ರ ನಮ್ಮ ಕೈಯಲ್ಲೇ ಇದೆ!
ಸೂತ್ರ ೧ - ಭಾವ ಶುದ್ಧಿ
ಅಹಂಕಾರವನ್ನು ಬಿಡಿ,ಅಂತಃಕರಣವನ್ನು ಬೆಳೆಸಿಕೊಳ್ಳಿ.
ಅನಾಚಾರವನ್ನು ಬಿಡಿ, ಆಚಾರವನ್ನು ಬೆಳೆಸಿಕೊಳ್ಳಿ.
ಆತಂಕವನ್ನು ಬಿಡಿ, ಆತ್ಮಾವಲೋಕನವನ್ನು ಮಾಡಿಕೊಳ್ಳಿ.
ಆಡಂಬರವನ್ನು ಬಿಡಿ, ಆತ್ಮೀಯತೆಯನ್ನು ಬೆಳೆಸಿಕೊಳ್ಳಿ.
ಸೂತ್ರ ೨ - ಮನಃ ಶುದ್ಧಿ
ಪ್ರಾತಃಕಾಲದಲ್ಲಿ ಏಳಿ. ಪ್ರಾರ್ಥನೆ ಮಾಡಿ. ಧ್ಯಾನ ಮಾಡಲು ಪ್ರೇರಿತರಾಗಿ. ಸಾಧ್ಯವಿಲ್ಲವೇ ಅಥವಾ ಇಷ್ಟವಿಲ್ಲವೇ? ಕನಿಷ್ಠ ಪಕ್ಷ ಒಂದಷ್ಟು ಹೊತ್ತು ಮೌನವಾಗಿ ಕುಳಿತುಕೊಳ್ಳಿ.
ಸೂತ್ರ ೩ - ದೇಹ ಶುದ್ಧಿ
ವ್ಯಾಯಾಮ, ಯೋಗ, ನಡಿಗೆ ಯಾವುದೇ ರೀತಿಯಲ್ಲಿ ದೈಹಿಕಶ್ರಮದ ಕ್ರಿಯೆಯಲ್ಲಿ ತೊಡಗಿ.
ಬೆಳಗಿನ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟದ ನಂತರ ೧೦ ನಿಮಿಷವಾದರೂ ಓಡಾಡಿ ಅಥವಾ ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ. ದಿನಕ್ಕೆ ಒಂದು ಅಥವಾ ಎರಡು ಸಲ ಸ್ನಾನ.
ಸೂತ್ರ ೪- ಶುದ್ಧ ಆಹಾರ ಪದಾರ್ಥಗಳ ಆಯ್ಕೆ
ಹಿತ ಭುಕ್ ಮಿತ ಭುಕ್ -
ಇಂದು ಇದು ಅತ್ಯಂತ ಮಹತ್ವದ ಆಚರಣೆಯಾಗಬೇಕು.
ಕಾರ್ಬೋಹೈಡ್ರೇಟ್ ಧಾನ್ಯಗಳನ್ನು ಕಡಿಮೆ ಮಾಡಿ.
ತರಕಾರಿ, ಕಾಳು, ಮೊಳಕೆ ಕಾಳು, ಹಣ್ಣುಗಳು, ಶುದ್ಧ ತುಪ್ಪ, ಎಣ್ಣೆ, ಬೆಣ್ಣೆ, ಹಾಲು ಮೊಸರು ಗಾಣದಿಂದ ತೆಗೆದ ಕಲಬೆರಕೆ ರಹಿತ ಕಡಲೇಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ ಇತ್ಯಾದಿಗಳನ್ನು ಮಿತವಾಗಿ ಬಳಸಿ.
ಪರಿಷ್ಕರಣೆಗೊಂಡ ಎಣ್ಣೆಗಳಿಗೆ ವಿದಾಯ ಹೇಳಿ.(Refined oil ಎಂದರೆ ಶುದ್ಧ ಎಣ್ಣೆ ಎಂದು ಮೋಸ ಹೋಗಿದ್ದು ಸಾಕು)
ಹೊರಗಿನ ತಿಂಡಿಗಳಿಗೆ ವಿದಾಯ ಹೇಳಿ.
ಮನೆಯಲ್ಲೇ ಬೇಕಾದ್ದನ್ನು ಶುದ್ಧವಾಗಿ ಮಾಡಿ ತಿನ್ನಿ.
ಅಪರೂಪಕ್ಕೆ ಹೊರಗೆ ತಿಂದಾಗ ಅಂದಿನ ರಾತ್ರಿ ಮತ್ತು ಮರುದಿನ ಸ್ವಲ್ಪ ಮಟ್ಟಿಗೆ ಲಂಗಣ ಮಾಡಿ. ತಿಂದದ್ದು ಹೆಚ್ಚಾಯಿತು ಎನಿಸಿದರೆ ಬಿಸಿ ನೀರನ್ನು ಕುಡಿಯಿರಿ.
ಸೂತ್ರ ೫- ಪಚನೇಂದ್ರಿಯಗಳ ಶುದ್ಧಿ
ಆರೋಗ್ಯಕರ ಪಾನೀಯಗಳು
ಬೆಳಗ್ಗೆ ಎದ್ದು ಮುಖಮಾರ್ಜನಾದಿಗಳು ಮುಗಿದ ಮೇಲೆ
೧-೨ ಲೋಟ ಬಿಸಿ ನೀರನ್ನು ಅಥವಾ ನಿಂಬೆ, ಜೇನು ತುಪ್ಪ (ಮಧುಮೇಹ ಇರುವವರುಜೇನುತುಪ್ಪ ಇಲ್ಲದೇ ಸೇವಿಸಿ) ಸುಮಾರಾದ ಬಿಸಿ ನೀರನ್ನು ಸೇವಿಸಿ.
ಸ್ವಲ್ಪ ಹೊತ್ತಿನ ನಂತರ ಪಾಲಕ್, ಪುದಿನಾ, ದಂಟು, ಮೆಂತೆ ಇತ್ಯಾದಿ ಯಾವುದಾದರೂ ಒಂದು ಹಿಡಿ ಸೊಪ್ಪು, ಕಾಲುಚಮಚದಷ್ಟು ನೆನಸಿದ ಅಥವಾ ಹಸಿಯಾಗಿ ಪುಡಿ ಮಾಡಿದ ಮೆಂತೆಕಾಳು, ಜೀರಿಗೆ (ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಸಮಸ್ಯೆಗೆ ತಕ್ಕಂತೆ ಕೆಲವು ಮೂಲಿಕೆಗಳನ್ನು ಬಳಸಬಹುದು) ಇವುಗಳನ್ನು ಮಿಕ್ಕಿಯಲ್ಲಿ ಅರೆದು ಕುಡಿಯಿರಿ , ಅಥವಾ ಬೂದುಗುಂಬಳದ ರಸವನ್ನು ಸೇವಿಸಿ.
ಬೆಳಗಿನ ಸಾಮಾನ್ಯವಾಗಿ ನಾವು ಸೇವಿಸುವ ತಿಂಡಿಗೆ ಬದಲು ಅಥವಾ ತಿಂಡಿಗೆ ಮೊದಲು
ಇಂದು ಲೋಟ ಹಾಲು, ಒಂದು ಸಿಪ್ಪೆ ತೆಗೆದ ಸೇಬು ಅಥವಾ ಬಾಳೆಹಣ್ಣು ಅಥವಾ ಪಪಾಯ ಅಥವಾ ಸಪೋಟ ಅಥವಾ ಬೆಣ್ಣೆ ಹಣ್ಣು, ಒಂದು ಚಮಚ ಪೀನಟ್ ಬಟರ್ ಅಥವಾ ಎರಡು ಮೂರು ಚಮಚ ಶೇಂಗಾ , ೧ ಚಮಚ ಪ್ರೋಟೀನ್ ಪೌಡರ್, ೪-೫ ಬಾದಾಮಿ ಬೆರೆಸಿ ಬ್ಲೆಂಡ್ ಮಾಡಿ ಸೇವಿಸಿ. (ಮಧುಮೇಹ ಇರುವವರು ಕೆಲವು ಹಣ್ಣುಗಳನ್ನು ಬಿಟ್ಟು ಸೇವಿಸಿ)
ಬಾದಾಮಿ, ವಾಲ್ನಟ್ , ಶೇಂಗಾ ಪುಡಿ ಹಾಕಿದ ರಾಗಿ ಗಂಜಿಯನ್ನು ಸೇವಿಸಬಹುದು.
ಇದನ್ನು ರಾತ್ರಿ ಊಟದ ಬದಲಾಗಿಯೂ ಸೇವಿಸಬಹುದು.
ರಾತ್ರಿ ಮಲಗುವಾಗ ಒಂದು ಚಿಕ್ಕ ಲೋಟ ಶುದ್ಧ ಅರಿಶಿನದ ಹಾಲು ಅಥವಾ ಕೇವಲ ಒಂದು ಲೋಟ ಬಿಸಿನೀರನ್ನು ಕುಡಿಯಿರಿ.
ರಾತ್ರಿ ಹೀಗೆ ಬಿಸಿನೀರನ್ನು ಕುಡಿಯುವುದರಿಂದ ರಾತ್ರಿಯ ಹೊತ್ತು ಆಗಬಹುದಾದ ಹೃದಯ ಸ್ತಂಭನದಂತಹ ಅವಗಢಗಳು ತಪ್ಪುತ್ತವೆ ಎಂದು ಓದಿದೆ.
ಸೂತ್ರ ೬- ಸಮತೋಲಿತ ಆಹಾರ ಪದ್ಧತಿ
ತಿಂಡಿ - ಯಾವುದೇ ತಿಂಡಿಗೆ ಅಥವಾ ತಿಂಡಿಯ ಜೊತೆಗೆ ಬೇಳೆ, ಕಾಳು, ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಸೇರಿಸಿ.
ಉದಾಹರಣೆಗೆ - ಉಪ್ಪಿಟ್ಟಿಗೆ ತರಕಾರಿಗಳು ಹೆಚ್ಚಿರಲಿ. ರವೆ ಕಡಿಮೆ ಹಾಕಿ.
ದೋಸೆ - ಇಡ್ಲಿ, ಚಪಾತಿ ಇವುಗಳ ಜೊತೆಗೆ ಹಸಿ ಕಾಯಿ ಚಟ್ನಿ ಮತ್ತು ತರಕಾರಿ, ಕಾಳುಗಳ ಪಲ್ಯ ಇರಲಿ. ಇದರಿಂದ ಕಾರ್ಬಗಳ ಪ್ರಮಾಣ ಕಡಿಮೆಯಾಗುತ್ತದೆ.
ಮಧ್ಯಾಹ್ನದ ಊಟ - ಅನ್ನ- ಚಪಾತಿ-ಮುದ್ದೆ -ಯಾವುದಾದರೂ ಒಂದು ಸಂಪೂರ್ಣ ಊಟದ ಅರ್ಧ ಅಥವಾ ಅರ್ಧಕ್ಕಿಂತಾ ಕಡಿಮೆ ಇರಲಿ, ಬೇಳೆ, ಕಾಳು, ಸೊಪ್ಪು, ತರಕಾರಿಗಳ ಸಾಂಬಾರ್ ಅಥವಾ ಹುಳಿ/ ಕೂಟು, ಪಲ್ಯ, ಹಸಿ ತರಕಾರಿ ಸಲಾಡ್ ಮತ್ತು ಮೊಸರು ಅಥವಾ ಮಜ್ಜಿಗೆ.
ಹಪ್ಪಳ, ಉಪ್ಪಿನಕಾಯಿ ಇತ್ಯಾದಿಗಳನ್ನು ಅಪರೂಪವಾಗಿ ಸೇವಿಸಿ.
ರಾತ್ರಿಯ ಊಟ - ಆದಷ್ಟೂ ಕಡಿಮೆ ಪ್ರಮಾಣದಲ್ಲಿರಲಿ.
ಮೇಲೆ ಬೆಳಗಿನ ತಿಂಡಿಗೆ ಬದಲು ಹೇಳಿರುವ smoothie ಯನ್ನು ಕುಡಿಯಬಹುದು. ಜೊತೆಗೆ ಹಸಿತರಕಾರಿ.
ಊಟ ಮಾಡುವವರು ಒಂದು ಸಣ್ಣ ಬಟ್ಟಲು ಅನ್ನ ಅಥವಾ ೧-೨ ಚಪಾತಿ, ತರಕಾರಿ ಪಲ್ಯ ಮತ್ತು ಮಜ್ಜಿಗೆಯನ್ನು ಸೇವಿಸಿ.
ಸೂತ್ರ ೭ - ವ್ಯರ್ಜ್ಯ ವಿಷಾಹಾರ
× ಬೆಳಗ್ಗೆ ಮಾಡಿದ ಆಹಾರವನ್ನು ರಾತ್ರಿಯವರೆಗೂ ಸೇವಿಸಬಹುದು. ಆದರೆ ಅದನ್ನು ಮರುದಿನ ತಂಗಳಾದ ಮೇಲೆ ಸೇವಿಸಬಾರದು. (ತಂಗಳು ಮೊಸರನ್ನ ಒಳ್ಳೆಯದು ಎಂದು ಕೇಳಿದ್ದೇನೆ. ಆದರೆ ಅಪರೂಪಕ್ಕಾದರೆ ಪರವಾಗಿಲ್ಲ ಎಂಬುದು ನನ್ನ ಅನಿಸಿಕೆ)
ಆಗಾಗ ಎಷ್ಟು ಬೇಕೋ ಅಷ್ಟನ್ನು ಶುದ್ಧವಾಗಿ, ಬಿಸಿಬಿಸಿಯಾಗಿ, ತಾಜಾ ಆಗಿ ತಿಂದರೆ ಮಾತ್ರ ಆರೋಗ್ಯ.
× ಅತಿಯಾದ ಕಾಫಿ ಮತ್ತು ಟೀ ಸೇವನೆ ಬೇಡ.
× ಮತ್ತೆ ಮತ್ತೆ ಬಿಸಿ ಮಾಡಿದ ಆಹಾರ ಬೇಡ.
ಮತ್ತೆ ಮತ್ತೆ ಕರಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಬೇಡ.
× ಹೊರಗಿನ ಯಾವುದೇ ತಿಂಡಿಯನ್ನು ೯೯% ಬಿಡಿ.
ವನಸ್ಪತಿ, ಕೃತಕ ಬಣ್ಣ ಬಳಸಿದ ತಿನಿಸುಗಳು ಬೇಡ.
× ಸಿಹಿ ತಿಂಡಿಗಳು ಅದರಲ್ಲೂ ಸಕ್ಕರೆಯಿಂದ ಮಾಡಿದ ತಿಂಡಿ, ಮೈದಾಹಿಟ್ಟಿನಿಂದ ತಯಾರಾದ ಖಾದ್ಯಗಳು, ಬಿಳಿ ಬಣ್ಣದ ಪುಡಿ ಉಪ್ಪು, ಪಾಲಿಷ್ ಮಾಡಿದ ಅಕ್ಕಿ- ಇವುಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ.
× ಬೀಡಿ, ಸಿಗರೇಟು, ತಂಬಾಕು, ಮದ್ಯ, ಮಾದಕ ವಸ್ತುಗಳು, ಅತಿಯಾದ ಎಲೆಅಡಿಕೆ ಇವುಗಳು ಬೇಡವೇ ಬೇಡ.
ಅದರಲ್ಲೂ ಔಷಧಿ - ಪಥ್ಯದಲ್ಲಿರುವವರು ಇವುಗಳ ಸೇವನೆ ಮಾಡುವುದರಿಂದ ಔಷಧಿಗಳು ಪರಿಣಾಮ ಬೀರುವುದಿಲ್ಲ ಅಥವಾ ಪೂರ್ಣ ಪರಿಣಾಮ ಬೀರುವುದಿಲ್ಲ ಅಥವಾ ಅಡ್ಡ ಪರಿಣಾಮವನ್ನು ಬೀರಬಹುದು.
ನಮ್ಮ ಇಡೀ ದೈಹಿಕ ವ್ಯವಸ್ಥೆಯನ್ನೇ ಅವ್ಯವಸ್ಥಿತಗೊಳಿಸುವ ಇವುಗಳ ಅಗತ್ಯವಿದೆಯೇ ಎಂಬುದನ್ನು ಯೋಚಿಸಬೇಕು.
ಸೂತ್ರ ೮- ಒತ್ತಡದಿಂದ ಬಿಡುಗಡೆ
ಇಂದಿನ ಕೆಲಸದಲ್ಲಿ ಒತ್ತಡ ಅನಿವಾರ್ಯ.
ಒತ್ತಡವಿಲ್ಲದ ಕೆಲಸ ಎನ್ನುವ ಕೆಲಸ ಯಾವುದೂ ಇಲ್ಲ.
ಮನೆವಾಳ್ತೆ ನೋಡುವ ಗೃಹಿಣಿಗೂ ಹತ್ತಾರು ಒತ್ತಡಗಳಿರುತ್ತವೆ.
ಒತ್ತಡದಿಂದ ತಪ್ಪಿಸಿಕೊಳ್ಳಲು ಅನೇಕ ಚಟಗಳಿಗೆ ದಾಸರಾಗುವ ಮಂದಿ ಇದ್ದಾರೆ.
ಅದರ ಬದಲು
ಪ್ರತಿಯೊಬ್ಬರೂ ತಮಗೆ ಅನುಕೂಲವಾದ ಒಂದು ಗಂಟೆಯ ಸೂಕ್ತ ಸಮಯವನ್ನು ಗುರುತಿಸಿಕೊಂಡು, ಆ ಸಮಯವನ್ನು ತಮ್ಮದೇ ವೈಯಕ್ತಿಕ ಸಮಯವನ್ನಾಗಿ ಮಾಡಿಕೊಳ್ಳಬೇಕು. ಆ ಸಮಯದಲ್ಲಿ ಗಂಡ, ಹೆಂಡತಿ, ಮಕ್ಕಳು, ಪೋಷಕರು ಯಾರೂ ಇರುವುದಿಲ್ಲ. ಆ ಸಮಯವನ್ನು ತಾವು ಅತ್ಯಂತ ಪ್ರೀತಿಸುವ ಹವ್ಯಾಸಕ್ಕಾಗಿ ಮೀಸಲಿಡಬಹುದು.
ಪರಸ್ಪರ ಪತಿ ಪತ್ನಿ, ಮಕ್ಕಳು, ತಂದೆತಾಯಿ...ಹೀಗೆ ಕುಟುಂಬದೊಂದಿಗೆ ಆನಂದವಾಗಿ ಕಳೆಯುವ ಸಮಯವೂ ಒತ್ತಡವನ್ನು ಕಡಿಮೆ ಮಾಡುತ್ತದೆ.
ಪುಟ್ಟ ಮಕ್ಕಳ ಆಟ - ಒಡನಾಟ, ತೋಟದಲ್ಲಿ ಸುತ್ತುವುದು, ಆಕಾಶ, ನಕ್ಷತ್ರ ವೀಕ್ಷಣೆ ...ಇತ್ಯಾದಿ ಚಟುವಟಿಕೆಗಳು ಮನಸ್ಸನ್ನು ಆಹ್ಲಾದಕರವನ್ನಾಗಿ ಮಾಡುತ್ತವೆ...
ಸೂತ್ರ ೯ - ನಿದ್ರೆ
ಶರೀರಕ್ಕೆ ೬-೮ ತಾಸುಗಳ ನಿದ್ರೆ ಅತ್ಯಗತ್ಯ.
ಇಡೀ ಶರೀರ ಮತ್ತು ಮನಸ್ಸಿಗೆ ತಾಜಾತನವನ್ನು ತಂದುಕೊಡುವ ಜಾದೂ ಸೂತ್ರ ನಿದ್ರೆ. ಹಸಿವು, ನೋವು, ಹಿಂಸೆ, ಮಾನಾಪಮಾನ, ದುಃಖ...ಇವುಗಳನ್ನು ಇದು ಮರೆಸಿಬಿಟ್ಟು ಮರುದಿನ ಮರುಹುಟ್ಟನ್ನು ಕೊಡುತ್ತದೆ.
ತಡರಾತ್ರಿಯವರೆಗೆ ಎಚ್ಚರವಿದ್ದು ತಡವಾಗಿ ಮಲಗುವುದರಿಂದ ಮೆದುಳಿನ ನರಗಳಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚು ಎಂಬುದು ಹಲವು ಸಂಶೋಧಕರ ಅಂಬೋಣ.
'ನಿದ್ರೆಗೊಮ್ಮೆ ನಿತ್ಯ ಮರಣ ಎದ್ದಸಲಾ ನವೀನ ಜನನ...ನಮಗೆ ಏಕೆ ಬಾರದೋ' ..ಕವಿವಾಣಿ ಹಾಗೆಂದರೂ ಪ್ರತಿ ದಿನ ನವನವೀನವೆಂದೇ ಭಾವಿಸಿದರೆ ಬದುಕು ಸೊಗಸು.
ಈ ೯ ಸೂತ್ರಗಳು ಸಮಗ್ರ ಜೀವನದ ಸೋಪಾನಗಳು.ಮೊದಲು ನಮ್ಮ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಪಣ ತೊಡೋಣ. ಆರೋಗ್ಯವಾದ ಶರೀರ ಮತ್ತು ಮನಸ್ಸು ಮಾತ್ರ ಸ್ವಸ್ಥ ಸಮಾಜವನ್ನು ನಿರ್ಮಿಸಬಲ್ಲದು
- ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp