ಗೋ ಪೂಜೆ ಎಲ್ಲ ತಪಸ್ಸಿಗಿಂತಲೂ ಶ್ರೇಷ್ಠವಾದದ್ದು. ಈ ಕಾರಣದಿಂಲೇ ಮಹೇಶ್ವರನು ಗೋವುಗಳೊಡನೆ ಇದ್ದು ತಪಸ್ಸು ಮಾಡಿದ್ದಾನೆ ಎಂದು ಭೀಷ್ಮರು ಧರ್ಮರಾಜನಿಗೆ ಹೇಳಿದರು.
ಗೋವುಗಳು ಚಂದ್ರನೊಡನೆ ಬ್ರಹ್ಮಲೋಕದಲ್ಲಿ ವಾಸ ಮಾಡುತ್ತವೆ. ಅಲ್ಲಿ ವಾಸಮಾಡುವ ಬ್ರಹ್ಮರ್ಷಿಗಳು ಹಾಗೂ ಸಿದ್ಧರು ಪರಾಗತಿ(ಮೋಕ್ಷವನ್ನು) ಪ್ರಾರ್ಥಿಸುತ್ತಾರೆ. ಅವರೊಡನೆ ಗೋವುಗಳು ಕೂಡ ಮೋಕ್ಷನ್ನು ಪ್ರಾರ್ಥಿಸುತ್ತವೆ.
ಗೋವುಗಳು ತಮ್ಮ ಹಾಲು, ಮೊಸರು, ತುಪ್ಪ, ಸಗಣಿ ಯಿಂದಲೂ ಚರ್ಮ, ಮೂಳೆ, ಕೊಂಬು ಹಾಗೂ ಬಾಲಗಳಿಂದಲೂ ಜಗತ್ತಿಗೆ ಉಪಕಾರವನ್ನು ಮಾಡುತ್ತವೆ. ಲೋಕ ಕಲ್ಯಾಣಕ್ಕಾಗಿ ಗೋವು ಸದಾ ಕರ್ಮ ಗಳನ್ನು ಮಾಡುತ್ತವೆ. ಗೋವುಗಳಿಗೆ ಶೀತ, ಬಿಸಿಲು, ಮಳೆಯಾಗಲಿ ಬಾಧೆಪಡಿಸುವುದಿಲ್ಲ. ಅವುಗಳಿಗೆ ಯಾವ ವಿಧವಾದ ದುಃಖವೂ ಉಂಟಾಗುವುದಿಲ್ಲ. ಈ ಕಾರಣದಿಂದಲೇ ಗೋವುಗಳು ಬ್ರಾಹ್ಮಣರೊಡನೆ ಪರಮ ಪದ ಸ್ವರೂಪವಾದ ಬ್ರಹ್ಮಲೋಕಕ್ಕೆ ಹೋಗುತ್ತವೆ.
ಗೋವು ಮತ್ತು ಬ್ರಾಹ್ಮಣರು ಒಂದೇ ಎಂದು ವಿದ್ವಾಂಸರು ಹೇಳುತ್ತಾರೆ.
ಒಂದು ಸಲ ರಂತಿದೇವನು ಯಜ್ಞ ದಲ್ಲಿ ಗೋವುಗಳನ್ನು ಯಜ್ಞ ಪಶುವನ್ನಾಗಿ ಕಲ್ಪಿಸಿಕೊಂಡನು. ಆ ಗೋವುಗಳನ್ನು ತೊಳೆಯುವಾಗ ಅವುಗಳ ಚರ್ಮದ ಮೂಲಕ ಹೋರಟ ನೀರೆ ಚರ್ಮಣ್ವತೀರ್ಥ ಎಂಬ ಹೆಸರಿನ ನದಿಯಾಗಿ ಪ್ರವಹಿಸಿತು. ಅಂದಿನಿಂದ ರಂತಿದೇವನು ಗೋವುಗಳನ್ನು ಪಶುತ್ವದಿಂದ ಮುಕ್ತಗೊಳಿಸಿ ಯಜ್ಞಾಂಗವಾಗಿ ದಾನಕೊಡಲು ಶುರುಮಾಡಿದನು.
ಯಾರು ಇಂಥ ಪರಮ ಪವಿತ್ರವಾದ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡುವರೋ ಅವರು ಮಹಾ ಆಪತ್ತಿನಿಂದ ಪಾರಾಗುತ್ತಾರೆ. ಸಾವಿರ ಗೋವು ದಾನ ಮಾಡಿದವರು ಮರಣಾಂತರದಲ್ಲಿ ನರಕಕ್ಕೆ ಹೋಗುವುದಿಲ್ಲ.ಅವರು ಸರ್ವತ್ರ ವಿಜಯವನ್ನೇ ಹೊಂದುತ್ತಾರೆ.
ದೇವರಾಜನಾದ ಇಂದ್ರನು ಗೋವಿನ ಹಾಲು ಅಮೃತವೆಂದು ಹೇಳಿರುವನು. ಗೋ ದಾನ ಮಾಡಿದರೆ ಅಮೃತವನ್ನೇ ದಾನ ಮಾಡಿದಂತಾಗುತ್ತದೆ.
ಹಾಲಿನ ಮೂಲಕ ಸಕಲ ಪ್ರಾಣಿಗಳನ್ನು ಗೋವುಗಳು ರಕ್ಷಿಸುತ್ತವೆ.ಹೀಗಾಗಿ ಗೋವು ಸಕಲ ಪ್ರಾಣಿಗಳ ಪ್ರಾಣ ಎಂದು ಕರೆಯಲ್ಪಟ್ಟಿದೆ.
ವಧೆಮಾಡುವ ಸಲುವಾಗಿ ಗೋವು ಕೊಡಬಾರದು. ರಹಸ್ಯದಲ್ಲಿ ಕೊಲ್ಲುವ ಕಟುಗರಿಗೂ ಕೊಡಬಾರದು. ಅಂಥವರಿಗೆ ಗೋ ದಾನ ಮಾಡಿದರೆ ಅಕ್ಷಯವಾಗಿ ನರಕಕ್ಕೆ ಹೋಗುವರು.
ಹತ್ತುಸಾವಿರ ಗೋ ದಾನ ಮಾಡಿದವರು ಅವಸಾನದ ನಂತರ ಇಂದ್ರನ ಜತೆಯಲ್ಲಿಯೇ ಆನಂದವಾಗಿರುತ್ತಾರೆ. ಲಕ್ಷ ಗೋ ದಾನ ಮಾಡಿದವರು ಅಕ್ಷಯವಾದ ಲೋಕವನ್ನು ಹೊಂದುತ್ತಾರೆ ಎಂದು ಭೀಷ್ಮರು ಗೋದಾನದ ಮಹತ್ವದ ಬಗ್ಗೆ ಹೇಳಿದರು.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter X WhatsApp