ಯಾವ ದಾನ ಮಾಡುವುದರಿಂದ ಏನು ಲಾಭ ಈ ವಿಷಯದ ಕುರಿತು ಒಬ್ಬ ಬ್ರಾಹ್ಮಣ ಮತ್ತು ಯಮ ಧರ್ಮನ ನಡುವೆ ನಡೆದ ಸಂವಾದವನ್ನು ಭೀಷ್ಮಾಚಾರ್ಯರು ಧರ್ಮ ರಾಜನಿಗೆ ಹೇಳುತ್ತಾರೆ.
ಮಧ್ಯದೇಶದಲ್ಲಿ ಗಂಗಾ- ಯಮುನಾ ಮಧ್ಯಭಾಗದಲ್ಲಿ ಯಾಮುನ ಪರ್ವತದ ಕೆಳಭಾಗದಲ್ಲಿ ಬ್ರಾಹ್ಮಣರ ದೊಡ್ಡ ಅಗ್ರಹಾರವಿತ್ತು. ಪರ್ಣಶಾಲಾ ಎಂಬ ಹೆಸರಿನಿಂದ ವಿಖ್ಯಾತಿ ಪಡೆದಿದ್ದ ಆ ಗ್ರಾಮವು ಅತ್ಯಂತ ರಮಣಿಯವೂ ಆಗಿತ್ತು. ಅಲ್ಲಿ ವಿದ್ವಾಂಸರಾದ ಅನೇಕ ಬ್ರಾಹ್ಮಣರು ವಾಸವಾಗಿದ್ದರು.
ಒಮ್ಮೆ ಯಮರಾಜನು ಕಪ್ಪು ವಸ್ತ್ರವನ್ನುಟ್ಟಿದ್ದ ತನ್ನ ದೂತನಿಗೆ ಕರೆದನು.
ಭೂಲೋಕದಲ್ಲಿ ಗಂಗಾ - ಯಮುನೆಯರ ಮಧ್ಯದಲ್ಲಿರು ಬ್ರಾಹ್ಮಣರ ಅಗ್ರಹಾರಕ್ಕೆ ಹೋಗು ಅಲ್ಲಿರುವ ಅಗಸ್ತ್ಯಗೋತ್ರದ ಅಗಸ್ತ್ಯ ಶರ್ಮಾ ಎಂಬ ಹೆಸರಿನ ವಿದ್ವಾಂಸ, ಅಧ್ಯಾಪಕನಾಗಿರುವ ಬ್ರಾಹ್ಮಣನನ್ನು ಇಲ್ಲಿಗೆ ಕರೆದುಕೊಂಡು ಎಂದು ಹೇಳಿದ.
ಆದರೆ ಅದೇ ಗ್ರಾಮದಲ್ಲಿ ಅವನಿಗೆ ಅನುರೂಪನಾದ ಮತ್ತೊಬ್ಬ ಬ್ರಾಹ್ಮಣನು ಇರುವನು ಅವನು ಕೂಡ ಅಗಸ್ತ್ಯ ಗೋತ್ರದವನೆ ಆಗಿರುವನು. ಅವನ ಮನೆಯು ಅಗಸ್ತ್ಯ ಶರ್ಮಾ ನ ಮನೆಯ ಪಕ್ಕದಲ್ಲಿದೆ. ಗುಣ, ವೇದಾಧ್ಯಯನ ಮತ್ತು ಕುಲಗಳಲ್ಲಿಯು ಅವನಿಗೆ ಸದೃಶ್ಯನಾಗಿ ಇರುವನು. ಅವನಿಗಿರುವಷ್ಟು ಮಕ್ಕಳು ಇವನಿಗಗೂ ಇವೆ. ಎಲ್ಲದರಲ್ಲೂ ಅಗಸ್ತ್ಯ ಶರ್ಮಾ ನಿಗೆ ಸಮನಾಗಿರುವನು. ನೀನು ಅವನನ್ನು ಕರೆತರಬೇಡ. ಅಗಸ್ತ್ಯ ಶರ್ಮಾನನ್ನು ಮಾತ್ರ ಇಲ್ಲಿಗೆ ಕರೆದುಕೊಂಡು ಬಾ ಎಂದು ಆಜ್ಞೆ ಮಾಡಿದ.
ಯಮರಾಜನ ಆಜ್ಞೆ ಯಂತೆ ಯಮದೂತನು ಪರ್ಣ ಶಾಲಾ ಗ್ರಾಮಕ್ಕೆ ಹೋದನು. ಯಮನು ಹೇಳಿದ್ದಕ್ಕೆ ವಿರುದ್ಧವಾಗಿ ಯಾರನ್ನು ಕರೆತರುವುದು ಬೇಡ ವೆಂದು ಹೇಳಿದ್ದನೋ ಅವನನ್ನೇ ಯಮನ ಬಳಿ ಕರೆದುಕೊಂಡು ಬಂದನು.
ತಾನು ಹೇಳಿದ ಬ್ರಾಹ್ಮಣನ್ನು ತನ್ನ ದೂತ ಕರೆದುಕೊಂಡು ಬರಲಿಲ್ಲವೆಂದು ಯಮನಿಗೆ ತಿಳಿಯಿತಾದರೂ ಬ್ರಾಹ್ಮಣನಿಗೆ ಸತ್ಕರಿಸಿ ಸ್ವಾಗತಿಸಿದನು. ಇವರನ್ನು ಕರೆದುಕೊಂಡು ಹೋಗು, ನಾ ಹೇಳಿದ ಮತ್ತೊಬ್ಬ ಬ್ರಾಹ್ಮಣನನ್ನು ಕರೆದುಕೊಂಡು ಬಾ ಎಂದುಹೇಳಿದ.
ತಾನು ಹೇಳಿದ ಬ್ರಾಹ್ಮಣನನ್ನು ಕರೆ ತರಲಿಲ್ಲ ಎಂದು ಯಮನು ಕೋಪಗೊಳ್ಳಲಿಲ್ಲ. ಆ ಬ್ರಾಹ್ಮಣನನ್ನು ಗೌರವಿಸಿ ಇವರನ್ನು ಬಿಟ್ಟು ನಾ ಹೇಳಿದ ಬ್ರಾಹ್ಮಣನನ್ನು ಕರೆದುಕೊಂಡು ಬರುವಂತೆ ಯಮನು ದೂತನಿಗೆ ಹೇಳಿದನು.
ಯಮದೂತನು ಹೇಳಿದ ಆ ಮಾತನ್ನು ಕೇಳಿದ ಬ್ರಾಹ್ಮಣನು ಯಮನಿಗೆ ಹೇಳುತ್ತಾನೆ. ಯಮಧರ್ಮನೆ ನನ್ನ ಉಳಿದ ಆಯುಷ್ಯವನ್ನು ಇಲ್ಲಿಯೇ ಕಳೆಯುತ್ತೇನೆ ಎಂದನು.
ಕಾಲದ ವಿಧಾನ ನಿನಗೆ ತಿಳಿದಿಲ್ಲ. ಕಾಲವು ಮುಗಿಯದೇ ಬರುವವರನ್ನು ಇಲ್ಲಿ ಇರಲು ಅವಕಾಶವಿಲ್ಲ. ನೀನು ತಕ್ಷಣವೇ ಭೂಲೋಕಕ್ಕೆ ಹೊರಟುಹೋಗು. ಏನನ್ನಾದರೂ ಹೇಳುವುದಾದರೆ ಹೇಳು ಎಂದು ಯಮನು ಹೇಳಿದ.
ಪ್ರಪಂಚದಲ್ಲಿ ಯಾವ ಕಾರ್ಯ ಮಾಡುವುದರಿಂದ ಮಹಾ ಪುಣ್ಯ ಲಭಿಸುತ್ತದೆ.ಈ ವಿಷಯವನ್ನು ಹೇಳು. ಧರ್ಮದ ವಿಷಯದಲ್ಲಿ ನೀನೆ ಪ್ರಮಾಣಭೂತನಾಗಿರುವೆ ಎಂದು ಬ್ರಾಹ್ಮಣ ಪ್ರಾರ್ಥಿಸುತ್ತಾನೆ.
ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ತಿಲದಾನ ಶ್ರೇಷ್ಠ ವಾದದ್ದು, ತಿಲದಾನದಿಂದ ಶಾಶ್ವತವಾದ ಪುಣ್ಯ ಲಭಿಸುತ್ತದೆ.
ಪ್ರತಿಯೊಬ್ಬರೂ ಶಕ್ತ್ಯಾನುಸಾರವಾಗಿ ಎಳ್ಳು ದಾನ ಮಾಡಬೇಕು.ನಿತ್ಯವೂ ತಿಲದಾನ ಮಾಡುವುದರಿಂದ ದಾತೃವಿನ ಸಕಲಕಾಮನೆಗಳು ಪೂರ್ಣಗೊಳ್ಳುತ್ತದೆ. ಶ್ರಾದ್ಧಕರ್ಮಗಳಲ್ಲಿ ವಿದ್ವಾಂಸರು ತಿಲವನ್ನು ಪ್ರಶಂಸನೆ ಮಾಡುತ್ತಾರೆ. ನೀನು ಕೂಡ ಶಾಸ್ತ್ರವಿಧಿಯಾಗಿ ಎಳ್ಳುದಾನ ಮಾಡು ಎಂದು ಯಮನು ಹೇಳುತ್ತಾನೆ.
ವೈಶಾಖ ಮಾಸದ ಹುಣ್ಣಿಮೆದಿನ ಬ್ರಾಹ್ಮಣರಿಗೆ ತಿಲದಾನ ಮಾಡಬೇಕು.
ಶ್ರೇಯಸ್ಸನ್ನು ಅಪೇಕ್ಷಿಸುವವರು ಸರ್ವ ಪ್ರಕಾರದಿಂದಲೂ ಮನೆಯಲ್ಲಿ ಎಳ್ಳನ್ನು ಉಪಯೋಗಿಸಬೇಕು.ಅದೇ ರೀತಿ ಜಲದಾನವೂ ಮಾಡಬೇಕು.
ಮನುಷ್ಯರು ಕೆರೆ, ಸರೋವರ, ಬಾವಿಗಳನ್ನು ತೋಡಿಸಿ ಜನರಿಗೆ ನೀರಿನ ದಾಹ ತೀರಿಸಬೇಕು. ಅರವಟ್ಟಿಗೆ ಇಡಬೇಕು ಇದು ಸರ್ವೋತ್ತಮ ಪುಣ್ಯದ ಕೆಲಸವಾಗಿದೆ ಎಂದು ಯಮನು ಉಪದೇಶ ನೀಡಿದ.
ಆಗ ಯಮದೂತರು ಆ ಬ್ರಾಹ್ಮಣನನ್ನು ಕರೆದುಕೊಂಡು ಭೂ ಲೋಕಕ್ಕೆ ಹೋದರು.
ಯಮಧರ್ಮನು ಕರೆತರಲು ಹೇಳಿದ್ದ ಅಗಸ್ತ್ಯ ಶರ್ಮಾ ಬ್ರಾಹ್ಮಣನನ್ನು ದೂತರು ಕರೆದುಕೊಂಡು ಬಂದರು.
ಪ್ರತಾಪವಂತನಾದ ಯಮಧರ್ಮನು ಧರ್ಮಜ್ಞನಾದ ಬ್ರಾಹ್ಮಣನನ್ನು ಸ್ವಾಗತಿಸಿ ಸತ್ಕರಿಸಿದನು.
ನಂತರ ಯಮನು ಅಗಸ್ತ್ಯ ಶರ್ಮಾ ನಿಗೂ ದಾನದ ಮಹಿಮೆ ಬಗ್ಗೆ ಉಪದೇಶಿಸಿ ಮರಳಿ ಭೂ ಲೋಕಕ್ಕೆ ಕಳಿಸಿ ಕೊಟ್ಟನು ಎಂದು ಭೀಷ್ಮರು ಧರ್ಮ ರಾಜನಿಗೆ ಯಮ ಮತ್ತು ಬ್ರಾಹ್ಮಣರ ಸಂವಾದ ಬಗ್ಗೆ ಹೇಳಿದರು.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter X WhatsApp