ದಾನಗಳ ಉತ್ತಮ ವಿಧಿಯನ್ನು ಹೇಳು, ಭೂದಾನ ಮಾಡುವುದರಿಂದ ಏನು ಪ್ರಯೋಜನ ಎಂದು ಧರ್ಮರಾಜ ಕೇಳುತ್ತಾನೆ.ಯಜ್ಞ ಮಾಡುವ ಬ್ರಾಹ್ಮಣನಿಗೆ ಕ್ಷತ್ರೀಯ ರಾಜನು ಮಾತ್ರವೇ ಭೂಮಿಯನ್ನು ದಾನವಾಗಿ ಕೊಡಬಲ್ಲನು.
ಹಾಗೆ ಕ್ಷತ್ರೀಯನು ಕೊಡುವ ಭೂದಾನವನ್ನು ಬ್ರಾಹ್ಮಣನು ವಿಧಿವತ್ತಾಗಿ ಪ್ರತಿಗ್ರಹಿಸಬಲ್ಲನು. ಬೇರೆ ಯಾರೂ ಭೂದಾನವನ್ನು ಮಾಡಲಾರರು.
ಫಲಾಕಾಂಕ್ಷಿಗಳಾದ ಎಲ್ಲ ವರ್ಣದವರಿಗೂ ಯಾವುದನ್ನು ದಾನವಾಗಿ ಕೊಡಲು ಸಾಧ್ಯವಾಗುವುದೋ ಅಥವಾ ವೇದದಲ್ಲಿ ಯಾವ ದಾನವು ಪ್ರತಿಪಾದಿತವಾಗಿದೆಯೋ ಅದರ ಕುರಿತು ತಿಳಿಸಿಕೊಡುವಂತೆ ಧರ್ಮ ರಾಜ ಪ್ರಾರ್ಥಿಸುತ್ತಾನೆ.
ಗೋವು,ಭೂಮಿ ಮತ್ತು ಸರಸ್ವತಿ ಈ ಮೂರಕ್ಕೂ ಗೌ ಎಂಬ ಸಮಾನವಾದ ಹೆಸರಿದೆ. ಈ ಮೂರನ್ನೂ ದಾನವಾಗಿ ಕೊಡಬೇಕು. ಈ ಮೂರರ ದಾನದ ಫಲ ಒಂದೇ ಆಗಿರುತ್ತದೆ. ಇವು ಮನುಷ್ಯನ ಸರ್ವಕಾಮನೆಗಳನ್ನು ಪೂರ್ಣಮಾಡಿಕೊಡುತ್ತವೆ.
ಯಾವ ಬ್ರಾಹ್ಮಣನು ತನ್ನ ಶಿಷ್ಯನಿಗೆ ಧರ್ಮಾನುಕೂಲವಾದ ಬ್ರಾಹ್ಮೀ ಸರಸ್ವತಿಯನ್ನು (ವೇದವಿದ್ಯ) ಉಪದೇಶಿಸುವನೊ ಅವನು ಭೂದಾನ, ಗೋದಾನಗಳಿಗೆ ಸಮಾನವಾದ ಫಲವನ್ನು ಹೊಂದುತ್ತಾನೆ.
ಗೋವುಗಳು ಶೀಘ್ರ ಫಲ ಕೊಡುತ್ತವೆ. ಅಲ್ಪ ದ್ರವ್ಯ ದಿಂದ ಬಾಧಿಸಲ್ಪಡುತ್ತವೆ. ಎಲ್ಲರಿಗೂ ಸುಖವನ್ನುಂಟು ಮಾಡುತ್ತವೆ. ಅಭ್ಯುದಯ ಬಯಸುವ ಪ್ರತಿಯೊಬ್ಬರು ಗೋವುಗಳ ಬಲ ಭಾಗದಿಂದ (ಪ್ರದಕ್ಷಿಣೆ) ಹೋಗಬೇಕು. ಗೋವುಗಳನ್ನು ಒದೆಯಬಾರದು. ಗೋವು ಮಂಗಳಕ್ಕೆ ಆಶ್ರಯಭೂತವಾದ ದೇವತೆ. ಅವುಗಳು ಸರ್ವ ಕಾಲದಲ್ಲೂ ಪೂಜೆಗೆ ಯೋಗ್ಯವಾಗಿವೆ.
ಗೋವುಗಳನ್ನು ಕೆಲಸಕ್ಕೆ ಉಪಯೋಗಿಸಬಹುದು. ಕಾರ್ಯಾರ್ಥವಾಗಿ ಪ್ರೇರೇಪಿಸುವುದು ಮೊದಲಿನಿಂದಲೇ ದೇವತೆಗಳು ಏರ್ಪಡಿಸಿದ ಶಾಶ್ವತವಾದ ಧರ್ಮವಾಗಿದೆ.
ಗೋವುಗಳಿಂದ ಸೇವೆ ಸ್ವೀಕರಿಸುವುದು ದೋಷವಲ್ಲ. ಅದು ದೈವಿಕವಾದ ನಿಯಮ. ದೇವತೆಗಳಿಗೂ ಸಮ್ಮತವಾದದ್ದು. ಮನುಷ್ಯರ ಕಾರ್ಯಕ್ಕೆ ಮಾತ್ರವಲ್ಲ ದೇವಕಾರ್ಯಕ್ಕೂ ಅವುಗಳ ಸೇವೆ ಅನಿವಾರ್ಯವಾಗಿದೆ.
ಅವುಗಳಿಂದ ಯೋಗವನ್ನು ಪಡೆಯುವುದು ಮಾತ್ರವಲ್ಲದೇ ಅವುಗಳ ಸೇವೆಯನ್ನು ಭಕ್ತಿಯಿಂದ ಮಾಡಬೇಕು. ಗೋವುಗಳನ್ನು ಹಿಂಸಿಸಬಾರದು.
ಎಂಥ ಲಕ್ಷಣಗಳುಳ್ಳ ಗೋವುಗಳನ್ನು ದಾನ ಮಾಡಬೇಕು ಮತ್ತು ದಾನಪಡೆಯುವ ಬ್ರಾಹ್ಮಣನ ಲಕ್ಷಣ ಹೇಗಿರಬೇಕು ಎಂದು ಧರ್ಮರಾಜ ಪ್ರಶ್ನಿಸುತ್ತಾನೆ.
ಆಗ ಭೀಷ್ಮರು ಹೇಳುತ್ತಾರೆ, ದುರಾಚಾರಿಗಳಿಗೆ, ಪಾಪಿಷ್ಠನಿಗೆ, ಲೋಭಿಗೆ ,ಸುಳ್ಳು ಹೇಳುವವರಿಗೆ, ಶ್ರಾದ್ಧಕರ್ಮ ಮಾಡದಿರುವವರಿಗೆ ಯಾವುದೇ ಕಾರಣಕ್ಕೂ ಗೋ ದಾನ ಮಾಡಬಾರದು.
ಬಹು ಪುತ್ರವಂತನು, ನಿತ್ಯಾಗ್ನಿಹೋತ್ರಿಯೂ, ವೇದಾಂತ ನಿಷ್ಠನೂ ಆಗಿರುವ ಶ್ರೋತ್ರಿಯರಿಗೆ ಹತ್ತು ದಾನ ಮಾಡುವುದರಿಂದ ಅವಸಾನ ನಂತರದಲ್ಲಿ ಉತ್ತಮ ಲೋಕವನ್ನು ಹೊಂದುವರು.
ಗೋ ದಾನವನ್ನು ತೆಗೆದುಕೊಂಡವರು ಗೋವು ಪಡೆದ ನಂತರ ಆತ್ಮಪ್ರೇತನಾಗಿ ಧರ್ಮ ಆಚರಣೆ ಮಾಡಬೇಕು. ಅಂಥ ಧರ್ಮಾಚರಣೆಯಿಂದ ಲಭ್ಯವಾಗುವ ಸಂಪೂರ್ಣ ಒಂದು ಭಾಗವು ಗೋವನ್ನು ದಾನವನ್ನಾಗಿ ಕೊಟ್ಟವನಿಗೆ ಸೇರುತ್ತದೆ.ಗೋದಾನ ಪಡೆದವರು ನಿಮಿತ್ಯವಾಗಿ ಪ್ರತಿಗಾಹಿಗೆ ಧರ್ಮದಲ್ಲಿ ಪ್ರವೃತ್ತಿ ಉಂಟಾದುದರಿಂದ ಆ ಧರ್ಮ ಕಾರ್ಯದ ಒಂದು ಅಂಶ ದಾನಿಗೆ ಸೇರುತ್ತದೆ. ಎಂದು ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಗೋದಾನದ ಬಗ್ಗೆ ಹೇಳಿದರು.
- ಶಾಮಸುಂದರ ಕುಲಕರ್ಣಿ,ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter X WhatsApp