ದಮಯಂತಿ ಸ್ವಯಂವರ ಮುಗಿಸಿಕೊಂಡು ಇಂದ್ರಾದಿ ದೇವತೆಗಳು ಹೊರಟಿರುತ್ತಾರೆ. ಎದುರಿಗೆ ಕಲಿಯು ದ್ವಾಪರನೊಂದಿಗೆ ಭೇಟಿಯಾದ. ಎಲ್ಲಿಗೆ ಹೊರಟಿರುವಿ ಎಂದು ಇಂದ್ರನು ಕೇಳುತ್ತಾನೆ. ನಾನು ಬಯಸಿದ ದಮಯಂತಿಯ ಸ್ವಯಂ ವರ ಇದೆ. ಅಲ್ಲಿಗೆ ಹೊರಟಿರುವೆ ಎಂದು ಕಲಿ ಹೇಳುತ್ತಾನೆ. ಇಂದ್ರನು ನಕ್ಕ. ಸ್ವಯಂವರ ಮುಗಿದು ಹೋಗಿದೆ. ನೀನು ಅಲ್ಲಿಗೆ ಹೋಗಿ ಏನು ಮಾಡುವಿ ಎಂದು ಇಂದ್ರ ಕೇಳಿದ.
ಕಲಿಗೆ ಅಚ್ಚರಿ ಆಯಿತು. ನಾನು ಬಯಸಿದ ದಮಯಂತಿಯನ್ನು ಪಡೆಯಲೇಬೇಕು. ನಳನಿಗೆ ಕಷ್ಟಕೊಟ್ಟು ನನ್ನ ಬಯಕೆ ಈಡೇರಿಸಿಕೊಳ್ಳುವೆ ಎಂದ ಕಲಿ.
ದ್ವಾಪರ ಸಂಶಯವನ್ನು ಪ್ರಚೋದಿಸುವ ಅಸುರ. ಕಲಿಯು ಜನರನ್ನು ತಪ್ಪುದಾರಿಗೆ ತರುವ ದುಷ್ಟ. ಇಬ್ಬರು ಸೇರಿ ನಳನಲ್ಲಿ ಪ್ರವೇಶಿಸಲು ಮುಂದಾಗಿದ್ದಾರೆ.
ಆಗ ಇಂದ್ರನು ಹೇಳುತ್ತಾನೆ, ಧರ್ಮವಂತನಾದ ನಳನಲ್ಲಿ ಪ್ರವೇಶಿಸುವ ಶಕ್ತಿ ನಿನ್ನಲ್ಲಿಲ್ಲ. ನಳ ಮಹಾರಾಜ ನಿಷ್ಠೆಯಿಂದ ಧರ್ಮ ಅನುಷ್ಠಾನ ಗೊಳಿಸಿದ್ದಾನೆ. ಸುಮ್ಮನೆ ವಾಪಸ್ ಹೋಗು ಎಂದು ಇಂದ್ರನು ಕಲಿಗೆ ಬುದ್ದಿವಾದ ಹೇಳಿದ.
ದುಷ್ಟನಾದ ಕಲಿಗೆ ಬುದ್ದಿಮಾತು ಬೇಕಿರಲಿಲ್ಲ. ಪಕ್ಕದಲ್ಲಿದ್ದ ದ್ವಾಪರನ ಸಹಾಯ ಬೇಡಿದ. ನಾನು ಕರೆದಾಗ ನೀನು ಬರಬೇಕು ಎಂದು ಕಲಿಯು ದ್ವಾಪರನಿಗೆ ಹೇಳಿದ.
ಕಲಿ ಎಷ್ಟೇ ಪ್ರಯತ್ನಿಸಿದರೂ ನಳನಲ್ಲಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಲಿಯು ಮಹಾ ಪ್ರಯತ್ನಿಸಿದರೂ ನಳನಯಲ್ಲಿ ದೋಷ ಸಿಗಲಿಲ್ಲ.
ಕಲಿಯನ್ನು ನಿಗ್ರಹಿಸಲು ಧರ್ಮಾಚರಣೆ ಬ್ರಹ್ಮಾಸ್ತ್ರವಾಗಿದೆ ಎಂಬ ದಿವ್ಯ ಸಂದೇಶ ನಳ ಮಹಾರಾಜ ನೀಡಿದ್ದಾನೆ.
ಎಲ್ಲಿ ಧರ್ಮ ಆಚರಿಸುವುದಿಲ್ಲವೋ ಅಲ್ಲಿ ಕಲಿಯವಾಸ. ಇಂದು ನಾವು ಧರ್ಮಾಚರಣೆ ಮರೆತು ಕಲಿಯನ್ನು ಸ್ವಾಗತಿಸುತ್ತಿದ್ದೇವೆ. ಕೇವಲ ಕಲಿಯನ್ನು ಮಾತ್ರವಲ್ಲ ಕಲಿಯ ಜತೆ ದ್ವಾಪರನನ್ನು ಬರಮಾಡಿಕೊಳ್ಳುತ್ತಿದ್ದೇವೆ. ದ್ವಾಪರ ಸಂಶಯ ಹುಟ್ಟಿಸುತ್ತಿದ್ದಾನೆ. ಕಲಿ ತಪ್ಪು ಮಾರ್ಗ ಅನುಸರಿಸಲು ಪ್ರೇರೆಪಿಸುತ್ತಿದ್ದಾನೆ. ಇವರಿಬ್ಬರನ್ನೂ ದೂರ ಇಡಬೇಕಾದರೆ ಧರ್ಮ ಆಚರಿಸುವುದು ಅಗತ್ಯವಾಗಿದೆ. ನಳನಲ್ಲಿನ ಧರ್ಮ ನಿಷ್ಠೆ ಇಂದು ನಾವೆಲ್ಲರೂ ಅನುಸರಿಸಬೇಕಿದೆ. ಮಹಾ ಶಕ್ತಿವಂತ ಕಲಿಗೆ ದಮಯಂತಿಯ ಸ್ವಯಂವರ ನಡೆದಿದ್ದೇ ಗೊತ್ತಾಗದಂತೆ ಧರ್ಮ ಮಾಡಿತು. ಅಂದರೆ ಧರ್ಮದಲ್ಲಿ ಎಂಥ ಶಕ್ತಿ ಇದೆ ಎಂದು ಯೋಚಿಸಬೇಕು.ನಾವೆಲ್ಲರೂ ಧರ್ಮ ವನ್ನು ಆಚರಿಸುವ ಮೂಲಕ ಕಲಿಗೆ ನಮ್ಮ ಜೀವನದಲ್ಲಿ ಪ್ರವೇಶ ನೀಡದಂತೆ ನೋಡಿಕೊಳ್ಳಬೇಕು.
- ಶಾಮಸುಂದರ ಕುಲಕಣಿ, ಕಲ್ಬುರ್ಗಿ (9886465925 )
Subscribe , Follow on
Facebook Instagram YouTube Twitter X WhatsApp