ಇದು ತ್ರೇತಾಯುಗದಲ್ಲಿ ನಡೆದ ಕಥೆ. ದಶರಥನ ಪತ್ನಿ ಕೈಕೆಯ ಕಾರಣದಿಂದಾಗಿ ಶ್ರೀರಾಮನು ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕಾಗಿ ಬಂದಿದ್ದು ಎಲ್ಲರಿಗೂ ತಿಳಿದ ವಿಚಾರ. ಶ್ರೀ ರಾಮನು ವನವಾಸಕ್ಕೆ ಹೊರಟಾಗ ಅವನ ಜೊತೆ ಮಡದಿ ಸೀತಾಮಾತೆ ಮತ್ತು ತಮ್ಮ ಲಕ್ಷ್ಮಣನು ಬರುತ್ತೇನೆ ಎಂದು ಹೊರಟರು. ಅವರೆಲ್ಲಾ ವನವಾಸಕ್ಕೆ ಹೊರಟ ಮೇಲೆ ಅಯೋಧ್ಯೆಯಲ್ಲಿ ರಾಜಾ ದಶರಥನು ರಾಮನ ಯೋಚನೆಯಲ್ಲಿಯೇ ಕೊರಗಿ ಕೊರಗಿ ಹಾಸಿಗೆ ಹಿಡಿದು ಕೊನೆಗೆ ಪ್ರಾಣತ್ಯಾಗ ಮಾಡಿದನು. ನಾಲ್ಕು ಜನ ಗಂಡು ಮಕ್ಕಳಿದ್ದರೂ ದಶರಥನು ಸಾಯುವ ಕಾಲದಲ್ಲಿ ಒಬ್ಬರು ಇಲ್ಲದಂತಾಗುತ್ತದೆ. ಇದಕ್ಕೆಲ್ಲಾ ದಶರಥನಿಗೆ ಋಷಿ ದಂಪತಿಗಳು ಕೊಟ್ಟ ಶಾಪ.
ವನವಾಸಕ್ಕೆ ಹೊರಟ ರಾಮ-ಸೀತೆ ಮತ್ತು ಲಕ್ಷ್ಮಣರು, ಪುಣ್ಯಕ್ಷೇತ್ರ ಗಳನ್ನೆಲ್ಲಾ ದರ್ಶನ ಮಾಡುತ್ತಾ , ಪವಿತ್ರವಾದ ಗಯಾ ಕ್ಷೇತ್ರಕ್ಕೆ ಬರುತ್ತಾರೆ. ರಾಮ- ಲಕ್ಷ್ಮಣರು ತಂದೆಯಾದ ದಶರಥನಿಗೆ ಪಿಂಡ ಪ್ರದಾನ ಮಾಡುವ ಸಲುವಾಗಿ ಸೀತಾಮಾತೆಯನ್ನು ಗಯಾ ಕ್ಷೇತ್ರದ ಫಲ್ಗುಣಿ ನದಿ ದಡದಲ್ಲಿ ಕುಳಿತಿರಲು ಹೇಳಿ ಅವರಿಬ್ಬರು ಹಣ್ಣುಹಂಪಲುಗಳನ್ನು ತರಲು ಕಾಡಿಗೆ ಹೋಗುತ್ತಾರೆ. ಸೀತಾಮಾತೆಯು ಅವರಿಬ್ಬರ ಬರುವನ್ನೇ ಕಾಯುತ್ತಾ ಕುಳಿತಿರುವಾಗ, ಇದ್ದಕ್ಕಿದ್ದಂತೆ ನದಿಯೊಳಗಿಂದ ಕೈಯೊಂದು ಹೊರಗೆ ಬಂದು ಸೀತಾಮಾತೆಯ ಮುಂದೆ ಚಾಚುತ್ತದೆ. ಇದನ್ನು ನೋಡಿದ ಹೆದರಿದ ಸೀತೆ ಅಲ್ಲಿದ್ದ ಬಂಡೆಯ ಹಿಂದೆ ನಿಂತು ಚಾಚಿದ ಕೈಯನ್ನೇ ನೋಡುತ್ತಿದ್ದಳು.
ಎಲ್ಲಿಂದಲೋ ಒಂದು ಅಶರೀರವಾಣಿ ಕೇಳುತ್ತದೆ. ಸೀತಾ ನನಗೆ ಹಸಿವಾಗುತ್ತದೆ ಎಂದು ಹೇಳಿದಂತಾಯಿತು. ಎರಡು-ಮೂರು ಸಲ ಅದೇ ರೀತಿ ಕೂಗಿದಾಗ ಆ ದ್ವನಿ ದಶರಥ ಮಹಾರಾಜನದು ಎಂದು ಅವಳಿಗೆ ತಿಳಿಯುತ್ತದೆ. ಸೀತೆಗೆ ಏನು ಮಾಡುವುದೆಂದು ತಿಳಿಯಲಿಲ್ಲ . ಏನಾದರೂ ಮಾಡಲು ಅಲ್ಲಿ ಪದಾರ್ಥಗಳು ಇರಲಿಲ್ಲ. ಇದುವರೆಗೂ ಕೇಳಿದವರಿಗೆಲ್ಲ ಯಥೇಚ್ಛವಾಗಿ ಕೊಟ್ಟವಳು ಸೀತಾಮಾತೆ. ಈಗ ಹಸಿದವರಿಗೆ ಆಹಾರ ಇಲ್ಲ ಎನ್ನುವುದು ಮಹಾಪಾಪ. ಹೀಗಿರುವಾಗ ಏನು ಮಾಡಲಿ ಎಂದು ಚಡಪಡಿಸುತ್ತಿದ್ದಳು. ಹಸಿವು ಎಂದು ಆಹಾರ ಕೇಳುತ್ತಿರುವುದು ಅಯೋಧ್ಯೆಯ ಮಹಾರಾಜ, ಶ್ರೀರಾಮನ ತಂದೆ, ನನಗೆ ಮಾವ, ಯೋಚಿಸಿ ಕೊನೆಗೆ ದಾರಿಕಾಣದೆ ನದಿ ದಡದಲ್ಲಿದ್ದ ಮಣ್ಣನ್ನೇ ತೆಗೆದು ಮೂರು ಉಂಡೆ ಮಾಡಿ, ಅದರೊಳಗೆ ಅನ್ನವನ್ನು ಆವಾಹನೆ ಮಾಡಿ ಚಾಚಿದ ಕೈಗಳ ಮೇಲೆ ಇಡುತ್ತಾಳೆ. ಈ ರೀತಿ ಮಾಡಿದ ಕೆಲಸಕ್ಕೆ ಅಲ್ಲಿಯೇ ಇದ್ದ ಐವರು ಸಾಕ್ಷಿಯಾಗುತ್ತಾರೆ. ದಶರಥನು ಇದರಿಂದ ಸಂತೃಪ್ತನಾಗಿ ಆಶೀರ್ವದಿಸಿ ಮಾಯವಾಗುತ್ತಾನೆ. ಸ್ವಲ್ಪ ಸಮಯದಲ್ಲಿ ರಾಮ ಮತ್ತು ಲಕ್ಷ್ಮಣ ಹಣ್ಣು ಹಂಪಲುಗಳನ್ನು ಸಂಗ್ರಹಿಸಿಕೊಂಡು ತರುತ್ತಾರೆ. ಇಲ್ಲೀತನಕ ನಡೆದದ್ದನ್ನೆಲ್ಲಾ ಸೀತೆಯು ಅವರಿಗೆ ಹೇಳುತ್ತಾಳೆ. ಆದರೆ ರಾಮ- ಲಕ್ಷ್ಮಣರು ಇದನ್ನು ನಂಬುವುದಿಲ್ಲ . ಇದನ್ನು ಗ್ರಹಿಸಿದ ಸೀತೆಯು ತಾನು ಸಾಕ್ಷಿಯಾಗಿರಿಸಿಕೊಂಡ ವರನ್ನು ತೋರಿಸಿ ರಾಮ ಮತ್ತು ಲಕ್ಷ್ಮಣ ರಿಗೆ ಹೇಳುತ್ತಾಳೆ ಇವರೇ ಅದಕ್ಕೆ ಸಾಕ್ಷಿಗಳು ಎಂದು.
ಮುಂದೆ ಬಂದು ನಡೆದ ಘಟನೆಯನ್ನು ಹೇಳಿ ಎಂದು ಕೇಳಿಕೊಂಡರೆ, ಅದರಲ್ಲಿ ಫಲ್ಗುಣಿ ನದಿ, ಹಸು, ಬ್ರಾಹ್ಮಣ, ತುಳಸಿಗಿಡ, ಹೇಳಲಿಚ್ಛಿಸಲಿಲ್ಲ. ಅರಳಿಮರ ಮಾತ್ರ ಎಲ್ಲವನ್ನೂ ಬಿಡದಂತೆ ಚೆನ್ನಾಗಿ ವಿವರಿಸಿ ರಾಮನಿಗೆ ಹೇಳಿತು. ರಾಮಲಕ್ಷ್ಮಣರು ಇದನ್ನು ಕೇಳಿ ಸೀತೆಯ ಸಮಯಪ್ರಜ್ಞೆಯನ್ನು ಮೆಚ್ಚಿ ಹೊಗಳಿದರು.
ಆದರೆ ಸಾಕ್ಷಿ ಹೇಳಲು ಹಿಂಜರಿದಂಥ ಪಲ್ಗುಣಿ ನದಿ, ಬ್ರಾಹ್ಮಣ, ಹಸು ಮತ್ತು ತುಳಸಿ ಗಿಡದ, ಮೇಲೆ ಸೀತಾಮಾತೆಗೆ ಸಿಟ್ಟುಬಂದು ಅವುಗಳಿಗೆ ಶಾಪ ಕೊಡುತ್ತಾಳೆ. ಫಲ್ಗುಣಿ ನದಿಗೆ "ಮಳೆಗಾಲದಲ್ಲಿಯೂ ನೀರಿಲ್ಲದೆ ಬರಿದಾಗಿರು" ಎಂದು ಶಪಿಸುತ್ತಾಳೆ. ಎರಡನೆಯದಾಗಿ ಬ್ರಾಹ್ಮಣನಿಗೆ "ಹೇ ವಿಪ್ರೋತ್ತಮರೆ, ನೀವು ನಡೆದ ಸತ್ಯವನ್ನು ಹೇಳದೆ ನನಗೆ ಮೋಸ ಮಾಡಿದಿರಿ ಇದಕ್ಕಾಗಿ ನೀವು ಈ ಕ್ಷೇತ್ರದಲ್ಲಿಯೇ ಇದ್ದು, ಇಲ್ಲಿಗೆ ಬರುವ ಯಾತ್ರಾರ್ಥಿಗಳನ್ನು ಕೇಳಿ, ಪೀಡಿಸಿ, ಅವರು ಕೊಡುವ ದಾನದ ಆದಾಯದಿಂದ ನಿಮ್ಮ ಜೀವನ ನಡೆಸುವಂತಾಗಲಿ" ಎಂದು ಶಾಪ ಕೊಡುತ್ತಾಳೆ. ಮೂರನೆಯದಾಗಿ ಹಸುವಿಗೆ, "ನೋಡು ಗೋಮಾತೆ ಸತ್ಯವಂತೆಯಾದ ನೀನೂ ನನ್ನ ಪರವಾಗಿ ಸಾಕ್ಷಿ ಹೇಳಲು ಹಿಂಜರಿದೆ ಆದ್ದರಿಂದ ನೀನು ಸಹ ಈ ಕ್ಷೇತ್ರದಲ್ಲಿಯೇ ಇದ್ದು, ಯಾತ್ರಾರ್ಥಿಗಳು ಬಂದು ಪಿತೃ ಕಾರ್ಯಕ್ಕಾಗಿ ಇಡುವ ಪಿಂಡಗಳನ್ನೆ ನೀನು ಆಹಾರವಾಗಿ ತಿನ್ನಬೇಕು ಅದರಿಂದ ಎಂದಿಗೂ ನಿನ್ನ ಹೊಟ್ಟೆತುಂಬದಿರಲಿ" ಎಂದು ಶಪಿಸುತ್ತಾಳೆ. ಇನ್ನು ನಾಲ್ಕನೆಯದಾಗಿ ತುಳಸಿ ಗಿಡಕ್ಕೆ, "ಎಷ್ಟೊಂದು ಪವಿತ್ರಳಾದವಳು, ಪುಣ್ಯವಂತೆ, ಎಂದುಕೊಂಡಿದ್ದೆ. ಆದರೆ ನೀನು ಸಹ ನಿಜವನ್ನು ಹೇಳಲಿಲ್ಲ. ಆದ್ದರಿಂದ ನೀನು ಎಲ್ಲೆಂದರಲ್ಲಿ ಹುಟ್ಟಿ ಬೆಳೆಯುವಂತಹ ಗಿಡವಾಗು" ಎಂದು ಶಾಪ ಕೊಟ್ಟಳು.
ಸೀತೆಯು ಕೊಟ್ಟ ಶಾಪದಂತೆ ಗಯಾ ಕ್ಷೇತ್ರದಲ್ಲಿರುವ ಫಲ್ಗುಣಿ ನದಿ ಬತ್ತಿದೆ.
ನದಿ ತೀರದಲ್ಲಿ ಇರುವ ಹಸುಗಳಿಗೆ ಅವರಿವರು ಇಡುವ ಪಿಂಡದ ಅನ್ನವೇ ಆಹಾರವಾಗಿದೆ. ಉಳಿದಂತೆ ಬ್ರಾಹ್ಮಣನಿಗೆ ಯಾತ್ರಾರ್ಥಿಗಳು ಕೊಡುವ ಪುಡಿಗಾಸುಗಳೇ ಬದುಕಿಗೆ ಆದಾಯವಾಗಿದೆ. ಕೊನೆಯದಾಗಿ ತನ್ನ ಪರವಾಗಿ ರಾಮ- ಲಕ್ಷ್ಮಣರಿಗೆ ಸತ್ಯವನ್ನೇ ಹೇಳಿದ ಅರಳಿ ಮರದ ಕಾರ್ಯವನ್ನು ಮೆಚ್ಚಿ ವರ ಕೊಡುತ್ತಾಳೆ. "ಅರಳಿ ಮರವೇ, ಇಂದಿನಿಂದ ನೀನು ಎಂದೆಂದೂ ಬಾಡದಂತೆ ಹಚ್ಚ ಹಸಿರಾಗಿರು. ಭೂಲೋಕದಲ್ಲಿ ದೇವ ವೃಕ್ಷವಾಗಿ ಎಲ್ಲರಿಂದ
ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡು" ಎಂದು ಹರಸಿದಳು. ಈ ರೀತಿಯಿಂದ
ಈ ನಾಲ್ವರು ಸೀತಾಮಾತೆಯ ಶಾಪಕ್ಕೆ ಗುರಿಯಾಗಿದ್ದಾರೆ.
ವಾಮೇ ಭೂಮಿಸುತಾ ಪುರಶ್ಚಹನುಮಾನ್ ಪಶ್ಚಾತ್ ಸುಮಿತ್ರಾ ಸುತ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವ್ ದಿ ಕೋಣೆಷುಚ!
ಸುಗ್ರೀವಶ್ಚ ವಿಭೀಷಣಶ್ಚಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೆ ನೀಲ ಸರೋಜಕೋಮಲ ರುಚಿಂ ರಾಮಂಭಜೇ ಶಾಮಲಂ!
ತನ್ನ ಜೊತೆ ಸೀತೆಯನ್ನು , ಮುಂದೆ ಹನುಮಂತನನ್ನು ತನ್ನ ಹಿಂದೆ ಲಕ್ಷ್ಮಣನನ್ನೊ, ಅಕ್ಕಪಕ್ಕಗಳಲ್ಲಿ ಶತ್ರುಘ್ನ ಮತ್ತು ಭರತರನ್ನು ಇಟ್ಟುಕೊಂಡು ಸುಗ್ರೀವ ವಿಭೀಷಣ ಮತ್ತು ಅಂಗದ ಜಾಂಬುವಂತ ರೊಂದಿಗೆ ಇರುವ ಶ್ರೀರಾಮನನ್ನು ಭಜಿಸುತ್ತೇನೆ.
ಬರಹ - ಆಶಾ ನಾಗಭೂಷಣ
Subscribe , Follow on
Facebook Instagram YouTube Twitter X WhatsApp