ಕುಂಕುಮಾರ್ಚನೆಯನ್ನು ಮಾಡುವುದರ ಹಿಂದಿನ ಮಹತ್ವ
ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮ ಜಪವನ್ನು ಮಾಡುತ್ತಾ, ಒಂದು ಚಿಟಕಿ ಕುಂಕುಮವನ್ನು ಅರ್ಪಿಸುವ ಕೃತಿಗೆ ಕುಂಕುಮಾರ್ಚನೆ ಎಂದು ಕರೆಯುತ್ತಾರೆ .
ದೇವಿಯ ನಾಮ ಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ಹಿಡಿದು ತಲೆಯ ತನಕ ಅರ್ಪಿಸಬೇಕು ಅಥವಾ ಕುಂಕುಮದ ಅಭಿಷೇಕ ಮಾಡಬೇಕು ಕೆಲವೆಡೆಗಳಲ್ಲಿ ಚರಣಗಳಿಗೆ ಮಾತ್ರ ಕುಂಕುಮವನ್ನು ಅರ್ಪಿಸುತ್ತಾರೆ
ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸಬೇಕು.
ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸಬೇಕು. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ
ಶಕ್ತಿ ತತ್ವದ ನಿರ್ಮಿತಿಯು ಕೆಂಪು ಪ್ರಕಾಶದಿಂದ ಆಗಿದೆ. ಕುಂಕುಮದಲ್ಲಿ ಶಕ್ತಿ ತತ್ವವನ್ನು ಆಕರ್ಷಿಸುವ ಕ್ಷಮತೆಯೂ ಹೆಚ್ಚಾಗಿ ಬರುತ್ತದೆ. ಆದುದರಿಂದ ದೇವಿಯ ಮೂರ್ತಿ ಕುಂಕುಮಾರ್ಚನೆಯನ್ನು ಮಾಡಿದರೆ ದೇವಿಯು ಜಾಗೃತವಾಗುತ್ತಾಳೆ.
ಜಾಗೃತ ಮೂರ್ತಿಯಲ್ಲಿನ ಶಕ್ತಿ ತತ್ವವು ಕುಂಕುಮದಲ್ಲಿ ಬರುತ್ತದೆ. ಆಮೇಲೆ ಆ ಕುಂಕುಮವನ್ನು ನಾವು ಹಚ್ಚಿಕೊಳ್ಳುವುದರಿಂದ ಅದರಲ್ಲಿನ ದೇವಿಯ ಶಕ್ತಿಯೂ ನಮಗೆ ಲಭಿಸುತ್ತದೆ
#ಕುಂಕುಮ
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ?
ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?
#ಶಾಸ್ತ್ರ :
ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ.
ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.
ಇತರರಿಗೆ ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು?
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ.
ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.
#ಕುಂಕುಮಾರ್ಚನೆ
ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ 'ಕುಂಕುಮಾರ್ಚನೆ' ಎನ್ನುತ್ತಾರೆ.
ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.
ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.
ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.
ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.
#ಹಣೆಗೆ_ಕುಂಕುಮಧಾರಣೆ_ಮಾಡಿಕೊಳ್ಳುವಾಗ
ಕುಂಕುಮಂ ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ | ಧಾರಣೇನಾಸ್ಯ ಶುಭದಂ ಶಾಂತಿರಸ್ತು ಸದಾಮಮ
ಎಂದು ಹೇಳಿಕೊಂಡು ಕುಂಕುಮಧಾರಣೆ ಮಾಡಿಕೊಳ್ಳಬೇಕು.
ಕುಂಕುಮ ಧರಿಸಿದ ನಾರಿಯನ್ನು ನೋಡಿದರೆ ಸಾಕ್ಷಾತ್ ದೇವಿ ಗೌರಿಯಂತೆ ಎನ್ನುವುದುಂಟು!
ಮಹಿಳೆಯರು ಮಾತ್ರವಲ್ಲ, ಪುರುಷರೂ ವಿವಿಧ ರೀತಿಯಲ್ಲಿ ಕುಂಕುಮ ಧಾರಣೆ ಮಾಡುತ್ತಾರೆ.
ಭಾರತೀಯ ಪರಂಪರೆ, ಸಂಸ್ಕೃತಿಗಳಲ್ಲಿ ಕುಂಕುಮಕ್ಕೆ ಮಹತ್ವದ ಬೆಲೆಯುಂಟು. ಉಂಗುರದ ಬೆರಳಿನಿಂದ ಭ್ರೂಮಧ್ಯೆ ಪುರುಷರೂ, ಸ್ತ್ರೀಯರೂ ಮಕ್ಕಳೂ ಕುಂಕುಮಧಾರಣೆ ಮಾಡುತ್ತಾರೆ.
ಉತ್ತರ ಭಾರತದಲ್ಲಿ ಕೂದಲಿನ ಬೈತಲೆಯ ಭಾಗದಲ್ಲಿ ಕುಂಕುಮ ನೀಳವಾಗಿ ಹಚ್ಚಿಕೊಳ್ಳುತ್ತಾರೆ. ಇದಕ್ಕೆ "ಮಾಂಗ್ ಮೇ ಸಿಂಧೂರ್ ಲಗಾನಾ' ಎನ್ನಲಾಗುತ್ತದೆ.
ಉತ್ತರ ಭಾರತದಲ್ಲಿ ಇದು ಮದುವೆಯಾದ ಸ್ತ್ರೀಯರು ಮಾತ್ರ ಹಚ್ಚುವ ಸಂಪ್ರದಾಯ.
ಆದರೆ ದಕ್ಷಿಣ ಭಾರತದಲ್ಲಿ ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ , ಹೆಣ್ಣು ಮಕ್ಕಳಲ್ಲಿಯೂ ಸಂಪ್ರದಾಯ.
ವಿವಿಧ ರೀತಿಯಲ್ಲಿ ಕುಂಕುಮ ಬಳಸುವ ಸಂಪ್ರದಾಯವಿದೆ.
ಅದಕ್ಕೆ ವಿವಿಧ ಅರ್ಥವೂ ಇದೆ. ವೈಷ್ಣವರಲ್ಲಿ ಧರಿಸುವ ಬಿಳಿಯ ಗೆರೆಗಳ ನಡುವಿನ ಕುಂಕುಮ ಲಕ್ಷ್ಮೀದೇವಿಯ ಪಾದಕಮಲವನ್ನು ಸಾಂಕೇತಿಕವಾಗಿ ಸಂಬೋಧಿಸಿದರೆ, ಬಿಳಿ ಗೆರೆಗಳು ಶ್ರೀಮನ್ನಾರಾಯಣನ ಪಾದಗಳ ಚಿಹ್ನೆಯಾಗಿವೆ.
ಅಂತೆಯೇ ಭ್ರೂಮಧ್ಯೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.
ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳಗ್ರಂಥಿಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ.
ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಆದ್ದರಿಂದ ಭ್ರೂಮಧ್ಯೆ ಧರಿಸಿದ ಕುಂಕುಮ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಸ್ರಾವ (ಹಾರ್ಮೋನ್) ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.
ಮಾತ್ರವಲ್ಲ ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಇತರ ನಿರ್ನಾಳ ಗ್ರಂಥಿಯಿಂದ ಹಾರ್ಮೋನ್‌ಗಳೂ ಕ್ರಮಬದ್ದವಾಗಿ ಸ್ರವಿಸಲು ಸಾಧ್ಯವಾಗುವಂತೆ ಮಾಡುತ್ತದೆ.
ಕುಂಕುಮವನ್ನು ಅರಸಿನ ಅಥವಾ ಕೇಸರಿಯಿಂದ ತಯಾರಿಸಲಾಗುತ್ತದೆ. ಅರಸಿನ ಪುಡಿಯೊಂದಿಗೆ ಸುಣ್ಣವನ್ನು ಸೇರಿಸಿದರೆ ಅದು ಅದ್ಭುತ ಕೆಂಪು ಬಣ್ಣದ ಕುಂಕುಮವಾಗಿ ಮಾರ್ಪಡುತ್ತದೆ.
ಹಾಂ! ಕುಂಕುಮ ಕಲಬೆರಕೆಯದೋ ಎಂದು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಸುಣ್ಣ ಸೇರಿಸಿದರೆ ಹಳದಿ ಬಣ್ಣ ಪಡೆಯದಿದ್ದರೆ, ಕಲಬೆರಕೆಯ ಕುಂಕುಮ ಎಂದರ್ಥ.
ಕಲಬೆರಕೆಯ ಕುಂಕುಮ, ರಾಸಾಯನಿಕಗಳಿರುವ ಕುಂಕುಮ ಲೇಪಿಸಿದಾಗ ತುರಿಕೆ ಕಜ್ಜಿಗಳೂ ಉಂಟಾಗುವುದಿದೆ. ಆದ್ದರಿಂದ ಮುತುವರ್ಜಿ ಅವಶ್ಯ.
ಅಲ್ಲದೆ ಕೃತಕ ಬಿಂದಿಗಳನ್ನು , ಕುಂಕುಮ ಬಣ್ಣದ ಸ್ಟಿಕರ್‌ಗಳನ್ನು ಬಳಸಿದರೂ, ಅದರ ನಿಜವಾದ ಪರಿಣಾಮ ಪ್ರಭಾವ ಉಂಟಾಗುವುದಿಲ್ಲ.
ಆದರೂ ನಾವು ಅನುಕೂಲಕ್ಕೆಂದೋ, ಫ್ಯಾಷನ್ ಎಂದೋ ಕುಂಕುಮದ ಬಿಂದಿ, ಸ್ಟಿಕರ್‌ಗಳನ್ನು , ಬಣ್ಣ ಬಣ್ಣದ ಸ್ಟಿಕರ್‌ಗಳನ್ನೋ ಬಿಂದಿಗಳನ್ನೋ ಬಳಸುವುದು ಸರ್ವೇಸಾಮಾನ್ಯವಾಗಿದೆ.
ಹಾಂ, ನಮ್ಮ ದೇಹದಲ್ಲಿರುವ 7 ಚಕ್ರಗಳಲ್ಲಿ 6ನೆಯ ಚಕ್ರ ಸ್ಥಿತವಾಗಿರುವುದು ಭ್ರೂಮಧ್ಯೆ - ಅದೇ ಆಜ್ಞಾಚಕ್ರ. ಅದನ್ನು "ಮರ್ಮಪ್ರದೇಶ'ವೆಂದೂ ಕರೆಯಲಾಗುತ್ತದೆ.
ದೇಹದ ಒಳಗಿರುವ 3ನೆಯ ಕಣ್ಣು ಕೂಡ ಇದೇ ಭಾಗದಲ್ಲಿ ಸ್ಥಿತವಾಗಿದೆ. 3ನೆಯ ಕಣ್ಣು ಇಂದ್ರಿಯವಲ್ಲ, ಬದಲಾಗಿ ಇಂದ್ರಿಯಾತೀತ. ಈ ಭಾಗದಿಂದಲೇ ಜೀವಾತ್ಮದ ರಹದಾರಿ ಪರಮಾತ್ಮನತ್ತ ಸಾಗುವ ಪ್ರಕ್ರಿಯೆ ಆರಂಭ.
ಆದ್ದರಿಂದಲೇ ಅಲ್ಲಿರಿಸುವ ಕುಂಕುಮ ಕ್ಕೆ ಅಷ್ಟೊಂದು ಪಾವಿತ್ರ್ಯ. ಕುಂಕುಮ ಮಂಗಲಕರವೂ ಹೌದು.
ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಜಾನಪದೀಯ ಮಾತೊಂದಿದೆ. "ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ'.
ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ , ಹಬ್ಬ ಹರಿದಿನಗಳಲ್ಲಿ ಅರಶಿನಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ.
ಅದು ಮಂಗಲಪ್ರದವೆಂದು ನಂಬಿಕೆ. ದೇವಿದೇವತೆಯರ ಪೂಜೆಗೆ ಕುಂಕುಮ ಪವಿತ್ರವಾದ್ದರಿಂದ, ಅದನ್ನೇ ಬಳಸಲಾಗುತ್ತದೆ. ಅದನ್ನೇ ಕುಂಕುಮಾರ್ಚನೆ ಎನ್ನಲಾಗುತ್ತದೆ.
ಶಕ್ತಿ ಮತ್ತು ಲಕ್ಷ್ಮೀದೇವಿಯರ ಪೂಜೆಯಲ್ಲಿ ಕುಂಕುಮಾರ್ಚನೆಗೆ ಹೆಚ್ಚು ಮಹತ್ವವಿದೆ. ಹಾಂ! ಕುಂಕುಮ ಔಷಧೀಯವೂ ಹೌದು ಕುಂಕುಮವನ್ನು ಎಣ್ಣೆಯೊಂದಿಗೆ ಬೆರೆಸಿ ಮೊಡವೆಗಳಿಗೆ ಲೇಪಿಸಿದರೆ ಮೊಡವೆ ಮಾಯುತ್ತದೆ.
ಕುಂಕುಮದೊಂದಿಗೆ ಇತರ ಅಂಶಗಳನ್ನು ಹೊಂದಿರುವ ತೈಲವನ್ನು (ಕುಂಕುಮಾದಿ ತೈಲ)ನಿತ್ಯ ಲೇಪಿಸಿದರೆ ಮೊಡವೆ ಕಲೆ ನಿವಾರಣೆಯಾಗುವುದು ಮಾತ್ರವಲ್ಲ ಮೊಗದ ಚರ್ಮವೂ ಸ್ನಿಗ್ಧ ಮತ್ತು ಕೋಮಲವಾಗಿ
ಹೊಳೆಯುತ್ತದೆ.
ಉತ್ತರ ಭಾರತದ ದೇವಾಲಯಗಳಲ್ಲಿ "ಟೀಕಾಲಗಾನ' ಎಂದು ಹೆಬ್ಬೆಟ್ಟಿನಿಂದ ದೇವರಿಗೆ ಅರ್ಚಿಸಿದ ಕುಂಕುಮದಿಂದ ಹಣೆಯ ಮೇಲೆ ತಿಲಕ ಲೇಪನ ಮಾಡುತ್ತಾರೆ.
ವಿವಿಧ ಸಾಧುಸಂತರೂ ಕುಂಕುಮವನ್ನು ತಿಲಕವಾಗಿ ವಿವಿಧ ರೂಪದಲ್ಲಿ ಬಳಸುತ್ತಾರೆ. ಬ್ರಹ್ಮಾನಂದ ಪುರಾಣದಲ್ಲಿ ಕೆಂಪು ತಿಲಕವು ಸಂಯಮ ಮತ್ತು ವಿನಯವನ್ನು ಉಂಟುಮಾಡುತ್ತದೆ ಎನ್ನಲಾಗಿದೆ.
ನಿತ್ಯ ಕುಂಕುಮದ ತಿಲಕಧಾರಣೆ ಸೌಭಾಗ್ಯ, ದೇವದೇವತೆಗಳ ಆಶೀರ್ವಾದ ಉಂಟುಮಾಡುತ್ತದೆ. ದೀರ್ಘ ಜೀವನಕ್ಕೆ ಸಹಕಾರಿ.
ಯೌವ್ವನಕಾರಕವೂ ಹೌದು ಎನ್ನಲಾಗಿದೆ. ಅನಾಮಿಕಾ (ಉಂಗುರದ) ಬೆರಳಿನಿಂದ ಸರಿಯಾದ ರೀತಿಯಲ್ಲಿ ಧಾರಣೆ ಮಾಡಿದ ಕುಂಕುಮಾದಿಗಳ ತಿಲಕವು ಮೋಕ್ಷಕಾರಕವೆಂದು ಅದರ ಮಹತ್ವವನ್ನು ಶಾಸ್ತ್ರಗಳಲ್ಲಿ ಸಾರಲಾಗಿದೆ.
ಶಿಕ್ಷಪತ್ರಿ ಶ್ಲೋಕಗಳಲ್ಲಿ ಇವುಗಳನ್ನು ವಿವರಿಸಲಾಗಿದೆ. ಉಪನಿಷದ್, ಬ್ರಹ್ಮಾನಂದ ಪುರಾಣ, ಪದ್ಮ ಪುರಾಣಗಳಲ್ಲೂ ತಿಲಕದ ಉಲ್ಲೇಖವಿದೆ.
ಹೋಳಿ ಹಬ್ಬದ ಸಮಯದಲ್ಲೂ ಕುಂಕುಮದ ಜೊತೆಗೆ ವಿವಿಧ ರಂಗುಗಳನ್ನು ಎರಚಿ ಸಂತಸ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. ಹೀಗೆ ಕುಂಕುಮಧಾರಣೆಗೆ ವಿವಿಧ ಬಗೆಯ ಮಹತ್ವ, ಅರ್ಥಗಳಿವೆ.
ಸರ್ವರಿಗೂ ಶುಭವಾಗಲಿ ಸುಮಂಗಲಿಯರಿಗೆ ಸುರಕ್ಷಾ ಕವಚ ಈ ಕುಂಕುಮ ನಿಮ್ಮ ಸುರಕ್ಷೆ ನಿಮ್ಮ ಬೆರಳಿನಲ್ಲಿದೆ. ಅನುಸರಿಸುವುದು ನಿಮಗೆ ಕಷ್ಟಕರ ಅನ್ನಿಸಬಹುದು ಅದನ್ನು ರೂಢಿಸಿಕೊಂಡು ಬಂದಾಗ ಕಷ್ಟ ಅನ್ನೊದೆ ಇರೊದಿಲ್ಲ ಅಲ್ವ ಆಸ್ತಿಕ ಬಂಧುಗಳೆ.
- ನಮ್ಮ ಓದುಗರು ನೀಡಿದ ಲೇಖನ ಸಂಗ್ರಹ
Subscribe , Follow on
Facebook Instagram YouTube Twitter X WhatsApp