ಇಂದಿನ ಬೆಂಗಳೂರು ನಗರದ ವಾಣಿಜ್ಯ ಪ್ರದೇಶದ ಬಿ ವಿ ಕೆ ಐಯ್ಯಂಗಾರ್ ರಸ್ತೆಯ ಹೆಸರು ಕೇಳದವರಿಲ್ಲ.
ಬಿ ವಿ ಕೆ ಐಯ್ಯಂಗಾರ್ ಅವರ ಪೂರ್ವಜರು ಬಿಂಡಿಗನವಿಲೆ ಯಿಂದ ಬೆಂಗಳೂರಿಗೆ ಬಂದವರು. ಅವರ ತಂದೆ ಬ್ರಿಟಿಷ್ ಕಮಿಷನರ್ ಗಳ ಆಡಳಿತದಲ್ಲಿ ಪೇ ಮಾಸ್ಟರ್ ಆಗಿದ್ದವರು. ಸರ್ ಮಾರ್ಕ್ ಕಬ್ಬನ್, ಬೌರಿಂಗ್ ಅವರ ಆಡಳಿತದಲ್ಲಿ ತಮ್ಮ ಜಾಣ್ಮೆ, ಕೌಶಲ್ಯ ತೋರಿದವರು.
1824 ರಲ್ಲಿ ಹುಟ್ಟಿದ ಬಿ ವಿ ಕೃಷ್ಣ ಐಯ್ಯಂಗಾರ್ ಬ್ರಿಟಿಷ್ ಆಡಳಿತದ ನ್ಯಾಯಾಂಗ ಇಲಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡವರು. ತಮ್ಮ ಪ್ರಾಮಾಣಿಕತೆ, ಜಾಣ್ಮೆ ಯಿಂದ ಜುಡಿಷಿಯಲ್ ಶಿರಸ್ತೇದಾರ್ ಆಗಿ ಬಡ್ತಿ ಪಡೆದವರು. 1858ರಲ್ಲಿ ಪ್ರಿನ್ಸಿಪಲ್ ಸದರ್ ಮ್ಯಾಜಿಸ್ಟ್ರೇಟ್ ಬಡ್ತಿ ಪಡೆದುಕೊಂಡು ತುಮಕೂರು ಜಿಲ್ಲೆಯಲ್ಲಿ ಸರಳ ಕನ್ನಡದಲ್ಲಿಯೇ ತಮ್ಮ ತೀರ್ಪುಗಳನ್ನು ಕೊಟ್ಟವರು. ಕೆಲವೇ ದಿನಗಳ ವಿಚಾರಣೆ, ಎರಡೇ ಪುಟಗಳ ನಿಖರ ತೀರ್ಪು ಅವರ ಹೆಗ್ಗಳಿಕೆ. ಇಂದಿನಂತೆ 10 ರಿಂದ 60 ವರ್ಷ ವಿಚಾರಣೆ ಇರದೇ ಇದ್ದುದರಿಂದ ಜನರು ಅವರ ಬಗ್ಗೆ ಅಭಿಮಾನ ಪಡುತ್ತಿದ್ದರು. ಕೃಷ್ಣ ಐಯಂಗಾರ್ ಅವರ ನಿಷ್ಠೆ, ನ್ಯಾಯ ಪರತೆ, ಪ್ರಾಮಾಣಿಕತೆ ಅವರ ಯುರೋಪಿಯನ್ ವರಿಷ್ಠರ ಗಮನ ಸೆಳೆದಿತ್ತು.
ಪ್ರಮೋಷನ್ ಮೇಲೆ ಕೋಲಾರ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಆಗಿ ಅವರು ನೇಮಕವಾದಾಗ ಅವರ ವಿರುದ್ಧ ಕೇಳಿ ಬಂದ ಟೀಕೆಗಳು ಬಹಳ. ಇಡೀ ದಕ್ಷಿಣ ಭಾರತದ ಮೊದಲ ಯುರೋಪಿಯನ್ ಅಲ್ಲದ ಭಾರತೀಯ ಡೆಪ್ಯೂಟಿ ಕಮಿಷನರ್ ಆಗಿ ನೇಮಕವಾದವರು ಅವರು. ಆದರೆ ಅಲ್ಲಿ ಅತ್ಯುತ್ತಮ ಅಧಿಕಾರಿ ಎಂದು ಹೆಸರು ಪಡೆವರು ಕೃಷ್ಣ ಐಯ್ಯಂಗಾರ್. ಆಗಿನ ಕಮಿಷನರ್ ಬೌರಿಂಗ್ ಅವರ ಮೆಚ್ಚುಗೆಗೆ ಪಾತ್ರರಾದ ಅಧಿಕಾರಿ.
1864 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಬ್ರಿಟಿಷ್ ಸರ್ಕಾರದಿಂದ ರಾಜ ವಂಶ ಕ್ಕೆ ಆಡಳಿತದ ಹಸ್ತಾಂತರ ಆಗಬೇಕೆಂದು ಇವರ ಸಹಾಯ ಕೇಳಿದ್ದರು. ಕಮಿಷನರ್ ಬೌರಿಂಗ್ ಅವರ ವಿರೋಧದ ನಡುವೆಯೂ ಕೃಷ್ಣ ಐಯ್ಯಂಗಾರ್ ಅವರು ಲಂಡನ್ ನ ಅಧಿಕಾರಿ ಗಳೊಂದಿಗೆ ತಮ್ಮ ಯುರೋಪಿಯನ್ ಮಿತ್ರ ರೊಂದಿಗೆ ಈ ಬಗ್ಗೆ ಪತ್ರ ವ್ಯವಹಾರ ನಡೆಸಿ ಮೈಸೂರು ರಾಜ ಮನೆತನಕ್ಕೆ ಅಧಿಕಾರ ಹಸ್ತಾಂತರವಾಗಲು ತಮ್ಮ ಕೊಡುಗೆ ನೀಡಿದರು.
ಮಹಾರಾಜರ ಪರವಾಗಿ ತಮ್ಮ ತನು ಮನ ಧನ ಗಳನ್ನು ಒತ್ತೆ ಇಟ್ಟು ದುಡಿದವರು, ಅವರು.
ಖ್ಯಾತ ಅಣು ವಿಜ್ಞಾನಿ ಡಾಕ್ಟರ್ ರಾಜಾ ರಾಮಣ್ಣ ಅವರು ಬಿ ವಿ ಕೆ ಐಯ್ಯಂಗಾರ್ ಅವರ ವಂಶಜರು.
ಇಂದು ಬಿ ವಿ ಕೆ ಐಯಂಗಾರ್ ರಸ್ತೆಯಲ್ಲಿ ಸಾಕಷ್ಟು ನಡೆದಾಡಿದ ಜನರಿದ್ದಾರೆ ಆದರೆ ಬಿ ವಿ ಕೆ ಐಯಂಗಾರ್ ಯಾರು? ಎಂದು ತಿಳಿಯದೇ ಇರುವವರು ಅತ್ಯಧಿಕ.
ಸೆಕ್ಯುಲರ್ ಭಾರತದಲ್ಲಿ ಜಾತಿ ಕಾರಣದಿಂದ ಮರೆತು ಹೋದ ಮಹಾನುಭಾವರಲ್ಲಿ ಇವರೂ ಒಬ್ಬರು.
Subscribe , Follow on
Facebook Instagram YouTube Twitter X WhatsApp