-->

ಗುರುವೇ ಹೇಳಿದರೂ ಪ್ರತಿಜ್ಞೆ ಮುರಿಯದ ಪ್ರಿಯ ಶಿಷ್ಯ ಭೀಷ್ಮ

 ಭೀಷ್ಮ ಸೇನಾಬಲವನ್ನು ತೆಗೆದುಕೊಂಡು ಕಾಶಿರಾಜನ ಪಟ್ಟಣವನ್ನು ಸೇರಿದ. ಇದೇ ಸಮಯದಲ್ಲಿ ಕಾಶಿರಾಜ ತನ್ನ ಕುಮಾರಿಯರಿಗೆ ಸ್ವಯಂವರವನ್ನು ಏರ್ಪಡಿಸಿದ್ದ. ತನಗೆ ಬೇಕಾದ ಗಂಡನನ್ನು ಹುಡುಗಿಯೇ ಆರಿಸಿಕೊಳ್ಳುವ ಪದ್ಧತಿಯೇ ಸ್ವಯಂವರ.

ಭೀಷ್ಮ ಸ್ವಯಂವರ ಸಭಾ ಮಂಟಪವನ್ನು ಹೊಕ್ಕ. ಭೀಷ್ಮ ಬಂದನೆಂದು ಎಲ್ಲರಿಗೂ ಆಶ್ಚರ್ಯ. ಕಾಶಿರಾಜನ ಮಕ್ಕಳು ಅಂಬೆ, ಅಂಬಿಕೆ ಮತ್ತು ಅಂಬಾಲಿಕೆ ಹೂಮಾಲೆಗಳನ್ನು ಕೈಯಲ್ಲಿ ಹಿಡಿದು ಸ್ವಯಂವರ ಮಂಟಪದಲ್ಲಿ ಕಾಣಿಸಿಕೊಂಡರು. ಕಾಶಿರಾಜನ ಕಡೆಯವರು ಒಬ್ಬೊಬ್ಬ ರಾಜರ ಗುಣಗಾನ ಮಾಡಿ ಪರಿಚಯ ಮಾಡಿಕೊಟ್ಟರು. ಭೀಷ್ಮನ ಸರದಿ ಬಂತು. ಸಭೆಯಲ್ಲಿ ರಾಜರು ಗುಸುಗುಸು ಮಾತಾಡಲು ಪ್ರಾರಂಭಿಸಿದರು. – “ಮದುವೆಯೇ ಆಗುವುದಿಲ್ಲ  ಎಂದು ಪ್ರತಿಜ್ಞೆ ಮಾಡಿದ ಭೀಷ್ಮನು ಇವನೇ ಏನು? ಇವನೆಂತಹ ಬ್ರಹ್ಮಚಾರಿ! ನಾಚಿಕೆಗೇಡು.”

ಭೀಷ್ಮನು ರಾಜರ ಮಾತು ಕೇಳಿ ರೋಷದಿಂದ ಎದ್ದು ನಿಂತ. ಕಣ್ಣುಗಳಲ್ಲಿ ಕೋಪದ ಉರಿ ಎದ್ದಿತ್ತು. ಒರೆಯಲ್ಲಿದ್ದ ಕತ್ತಿಯನ್ನು  ಹೊರತೆಗೆದು ಝಳಪಿಸಿದ. ಎದೆ ಚಾಚಿ ಸಿಂಹಗರ್ಜನೆ ಮಾಡಿದ – “ಸ್ವಯಂವರಕ್ಕೆ ಬಂದಿರುವ ರಾಜರುಗಳೇ, ಕೇಳಿ. ನಾನು ಮದುವೆಯಾಗಲು ಬಂದಿಲ್ಲ. ಮದುವೆ ಆಗುವುದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದೇನೆ. ಸಾಯುವವರೆಗೂ ನಾನು ಬ್ರಹ್ಮಚಾರಿಯಾಗಿಯೆ ಉಳಿಯುವೆನು. ನನಗೆ ಪ್ರಾಣವಾದ ಒಬ್ಬ ತಮ್ಮನಿದ್ದಾನೆ. ಅವನೇ ಸದ್ಗುಣ ಸಂಪನ್ನನಾದ ವಿಚಿತ್ರವೀರ್ಯ. ಅವನು ಹಸ್ತಿನಾವತಿಯ ರಾಜ. ಅವನು ಯುವಕ. ಸುಂದರ ಪುರುಷ. ಮಹಾಪರಾಕ್ರಮಿ. ಪ್ರಜಾಪ್ರೇಮಿ. ಧರ್ಮಪ್ರಭು. ಸ್ವಯಂವರ ಮಂಟಪಕ್ಕೆ ಬರುವುದು ಅವನ ಗೌರವಕ್ಕೆ ಕಡಿಮೆ. ಆದುದರಿಂದ ಅವನ ಪರವಾಗಿ ನಾನು ಬಂದಿದ್ದೇನೆ. ಈಗ ಕಾಶಿರಾಜನ ಮೂವರು ಕುಮಾರಿಯರನ್ನೂ ನಾನು ಹಸ್ತಿನಾವತಿಗೆ ಕರೆದುಕೊಂಡು ಹೋಗುತ್ತೇನೆ. ವಿಚಿತ್ರವೀರ್ಯನಿಗೆ ಮದುವೆ ಮಾಡುತ್ತೇನೆ. ನಿಮ್ಮಲ್ಲಿ ಪರಾಕ್ರಮಿಗಳಿದ್ದರೆ ನನ್ನೊಡೆನ ಯುದ್ಧ ಮಾಡಿ ರಾಜಕುಮಾರಿಯನ್ನು ಗೆದ್ದುಕೊಳ್ಳಿರಿ.”

ಭೀಷ್ಮನ ಸಿಂಹಗರ್ಜನೆಗೆ ಸ್ವಯಂವರ ಮಂಟಪ ನಡುಗಿಹೋಯಿತು. ರಾಜರು ಭೀಷ್ಮನನ್ನು ಎದುರಿಸುವುದು ತಮ್ಮಿಂದ ಆಗದೆಂದು ತಲೆ ಬಗ್ಗಿಸಿಬಿಟ್ಟರು. ಸಾಲ್ವರಾಜ ಅಂಬೆಯನ್ನು ಸ್ವಯಂವರದಲ್ಲಿ ಗೆಲ್ಲಬೇಕೆಂದು ಬಂದಿದ್ದ. ಅವನು ಎದ್ದು ನಿಂತು ಭೀಷ್ಮನನ್ನು ಎದುರಿಸಿದ. ಕತ್ತಿಯನ್ನು ಬೀಸುತ್ತ ಕೊಬ್ಬಿದ ಗೂಳಿಯ ಹಾಗೆ ಹುಂಕರಿಸಿದ – “ಭೀಷ್ಮ, ನೀನೊಬ್ಬನೆ ಗಂಡುಗಲಿಯಲ್ಲ. ಯಾರು ಶೂರರೋ ನೋಡೋಣ. ಯುದ್ಧಕ್ಕೆ ಬಾ.”



ಸಾಲ್ವರಾಜ ದಳಪತಿಯಾದ. ಸ್ವಯಂವರಕ್ಕೆ ಬಂದಿದ್ದ ರಾಜರು ಅವನೊಡನೆ ಸೇರಿಕೊಂಡು ಭೀಷ್ಮನ ಮೇಲೆ ಬಿದ್ದರು. ಭೀಷ್ಮನು ಪ್ರಳಯ ರುದ್ರನಾಗಿ ಶತ್ರುಗಳನ್ನು ಕೊಚ್ಚಿಕೆಡಹಿದ. ಸಾಲ್ವರಾಜ ಸೋತು ಹೋದ. ಅವನನ್ನು ನಂಬಿದ್ದ ರಾಜರು ಓಡಿಹೋದರು.

ಅಂಬೆ ಭೀಷ್ಮನನ್ನು ಬೇಡಿಕೊಂಡಳು – “ಧರ್ಮಾತ್ಮ, ನಾನು ಮನಸ್ಸಿನಲ್ಲಿ ಗಂಡನೆಂದು ಸಾಲ್ವರಾಜನನ್ನು ಒಪ್ಪಿಕೊಂಡಿದ್ದೇನೆ. ನ್ಯಾಯ ಧರ್ಮವನ್ನು ತಿಳಿದ ನೀವು ನನಗೆ ದಾರಿ ತೋರಿ.”

ಭೀಷ್ಮ ಅಂಬೆಯ ಬೇಡಿಕೆಯನ್ನು ಕೇಳಿ ದಯಾಮಯನಾಗಿ ನುಡಿದ – “ತಾಯಿ, ನಿನ್ನನ್ನು ಬಿಟ್ಟುಬಿಡುವೆನು. ಸಾಲ್ವರಾಜನನ್ನು ಮದುವೆಯಾಗಿ ಸುಖವಾಗಿ ಬಾಳು. ನಿನಗೆ ಮಂಗಳವಾಗಲಿ.”

ಗುರುವೇ ಹೇಳಿದರೂ ಪ್ರತಿಜ್ಞೆ ಮುರಿಯಲಾರ

ಭೀಷ್ಮನನ್ನು ಬಿಟ್ಟು ಅಂಬೆ ಸಾಲ್ವರಾಜನ ಬಳಿಗೆ ಹೋದಳು. ಯುದ್ಧದಲ್ಲಿ ಸೋತೆನೆಂದು ಅವನಿಗೆ ಜೀವವೇ ಬೇಡವಾಗಿತ್ತು. ಅವನು ಅಂಬೆಯನ್ನು ನೋಡಿ ತಲೆ ತಗ್ಗಿಸಿದ. ಬೇಸರದಿಂದ ಹೇಳಿದ – “ನಾನು ಭೀಷ್ಮನಿಂದ ಸೋತಿದ್ದೇನೆ. ಅವನು ನಿನ್ನನ್ನು ಯುದ್ಧಮಾಡಿ ಜಯಿಸಿದ. ಆದುದರಿಂದ ನೀನು ಭೀಷ್ಮನ ಸ್ವತ್ತು.”

ಅಂಬೆ ಮತ್ತೆ ಭೀಷ್ಮನಲ್ಲಿಗೆ ಬಂದಳು. ಭೀಷ್ಮನ ಪಾದಗಳಿಗೆ ಬಿದ್ದಳು. ಸಾಲ್ವರಾಜ ಹೇಳಿದುದನ್ನು ತಿಳಿಸಿದಳು- “ದಯಾಮಯ, ಸಾಲ್ವರಾಜ ನನ್ನನ್ನು ಕೈಬಿಟ್ಟ. ನಮ್ಮ ತಂದೆ ನನ್ನನ್ನು ಸೇರಿಸಿಕೊಳ್ಳುವುದಿಲ್ಲ. ನನಗೆ ನೀವೇ ಗತಿ ಇನ್ನು. ಕೈಬಿಡಬೇಡಿ.”

ಭೀಷ್ಮ ಏನೂ ಮಾಡುವಹಾಗಿರಲಿಲ್ಲ. ಅವನು ತನ್ನ ಪ್ರತಿಜ್ಞೆ ಬಿಡುವಂತಿಲ್ಲ. ಅವನು ಅಂಬೆಗಾಗಿ ಮರುಗಿದ. ಸಮಾಧಾನದ ನುಡಿ ನುಡಿದ – “ತಾಯಿ, ನೀನು ಮೊದಲಿಂದಲೂ ಮನಸ್ಸಿನಲ್ಲಿ ಸಾಲ್ವರಾಜ ಗಂಡನೆಂದು ಸಂಕಲ್ಪ ಮಾಡಿಕೊಂಡವಳು. ಆದುದರಿಂದ ಅವನೇ ನಿನಗೆ ಪತಿ. ನಾನು ಬ್ರಹ್ಮಚಾರಿ. ವಿಚಿತ್ರವೀರ್ಯನಿಗೆ ನಿನ್ನನ್ನು ಮದುವೆ ಮಾಡಲು ಸಾಧ್ಯವಿಲ್ಲ. ನಿನ್ನ ಹಣೆಯ ಬರಹವನ್ನು ನಾವು ತಪ್ಪಿಸಲು ಸಾಧ್ಯವಿಲ್ಲ.”

ಅಂಬೆಯ ಗೋಳಾಟ ಹೇಳತೀರದು. ಆದರೆ ಭೀಷ್ಮನ ಮನಸ್ಸು ಕರಗಲಿಲ್ಲ. ಅಂಬೆ ಪರಶುರಾಮನ ಬಳಿಗೆ ಹೋದಳು. ಪರಶುರಾಮ ಭೀಷ್ಮನಿಗೆ ಗುರುವೆಂದು ಅವಳು ಬಲ್ಲಳು. ಅವನಿಂದ ಹೇಳಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದ್ದಳು. ಪರಶುರಾಮನಿಗೆ ತನ್ನ ಗೋಳು ಹೇಳಿಕೊಂಡಳು. ಅವನ ಹೃದಯ ಕರಗಿತು.  ಅಂಬೆಯನ್ನು ಕರೆದುಕೊಂಡು ಭೀಷ್ಮನ ಬಳಿಗೆ ಬಂದ.

ಭೀಷ್ಮ “ಗುರುವನ್ನು ಕಂಡೆನಲ್ಲ” ಎಂದು ಸಂತೋಷಪಟ್ಟ. ಅಂಬೆಯು ಗುರುವಿನೊಡನೆ ಬಂದಿರುವುದನ್ನು ಕಂಡು ಕುಗ್ಗಿಹೋದ. ಅಂಬೆ ತನಗೆ ಏನೋ ಸಂಕಟ ತಂದಿದ್ದಾಳೆ ಎಂದು ಅರ್ಥಮಾಡಿಕೊಂಡ. ಭೀಷ್ಮ ಗುರುದೇವನ ಪಾದಮುಟ್ಟಿ ನಮಸ್ಕರಿಸಿದ. ಪರಶುರಾಮ ಭೀಷ್ಮನಿಗೆ ತಾನು ಬಂದ ಕಾರಣವನ್ನು ತಿಳಿಸಿದ – “ವತ್ಸ, ನೀನು ನನ್ನ ಪ್ರಿಯ ಶಿಷ್ಯ. ನನ್ನ ಅಪ್ಪಣೆಯನ್ನು ಪಾಲಿಸುವಿ ಎಂಬ ನಂಬಿಕೆ ನನಗಿದೆ. ಅಂಬೆಯನ್ನು ಹಿಡಿದು ತಂದವನು ನೀನು. ಆದುದರಿಂದ ಅಂಬೆಯನ್ನು ಸ್ವೀಕರಿಸುವುದು ನಿನ್ನ ಧರ್ಮ.”


“ಇದು ನನ್ನ ಪ್ರತಿಜ್ಞೆ!”

ಭೀಷ್ಮ ಪರಶುರಾಮನಿಗೆ ಕೈಮುಗಿದು ನುಡಿದ. “ಗುರುದೇವ, ನಾನು ಬ್ರಹ್ಮಚಾರಿ. ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದನ್ನು ನೀವು ಬಲ್ಲಿರಿ. ಪ್ರತಿಜ್ಞೆಗೆ ಭಂಗ ತರಬೇಡಿ. ಕ್ಷಮಿಸಿ.”

ಪರಶುರಾಮನಿಗೆ ಕೋಪ ಬಂತು. ಉರಿಗಣ್ಣು ಬಿಟ್ಟು ಸಿಡಿಲಿನಂತೆ ಗುಡುಗಿದ – ‘ಭೀಷ್ಮ, ನನ್ನನ್ನು ಎದುರು ಹಾಕಿಕೊಂಡು ಈವರೆಗೆ ಯಾರೂ ಬದುಕಿಲ್ಲ. ನೀನು ನನ್ನನ್ನು ತಿರಸ್ಕಾರ ಮಾಡಿದರೆ ನಾಶವಾಗಿ ಹೋಗುವೆ. ಕ್ಷತ್ರಿಯ ಕುಲವನ್ನು ಇಪ್ಪತ್ತೊಂದು ಸಲ ಸಂಹಾರ ಮಾಡಿದ ಗಂಡುಗೊಡಲಿಯ ರಾಮ ನಾನು.”

“ಗುರುದೇವ, ಚೆನ್ನಾಗಿ ಬಲ್ಲೆ. ಆದರೆ ಆಗ ಭೀಷ್ಮ ಎಂಬ ಮಹಾಕ್ಷತ್ರಿಯನ ಅವತಾರವಾಗಿರಲಿಲ್ಲ. ನೀವು ಇದನ್ನು ಬಲ್ಲಿರಷ್ಟೆ?”

ಪರಶುರಾಮನಿಗೆ ತಡೆಯಲಾರದಷ್ಟು ಸಿಟ್ಟು ಬಂದಿತು. ಗುರು ಶಿಷ್ಯರಿಗೆ ಕಾಳಗವೇ ಪ್ರಾರಂಭವಾಯಿತು. ಗುರು ಶಿಷ್ಯ ಇಬ್ಬರೂ ಬಾಣಗಳಿಂದ ಹಣಾಹಣಿ ಯುದ್ಧ ಮಾಡಿದರು.

ಗುರು ಸೋತರೆ ತನಗೆ ಅಪಕೀರ್ತಿ – ಭೀಷ್ಮ ಹಾಗೆ ಭಾವಿಸಿಕೊಂಡ.

ಶಿಷ್ಯ ಸೋತರೆ ನನಗೆ ಅಪಮಾನ – ಪರಶುರಾಮ ಹಾಗೆ ಭಾವಿಸಿಕೊಂಡ. ಆದುದರಿಂದ ಯಾರೂ ಸೋಲಲಿಲ್ಲ. ಯಾರೂ ಗೆಲ್ಲಲಿಲ್ಲ.

ಪರಶುರಾಮ ಶಿಷ್ಯನ ಬಿಲ್ಲುಗಾರಿಕೆಯನ್ನು ಮೆಚ್ಚಿಕೊಂಡ. “ಭೀಷ್ಮನಂಥ ಶಿಷ್ಯನಿಂದ ಸೋಲುವುದೂ ಗುರುವಿಗೆ ಕೀರ್ತಿಯೇ” ಎಂದು ಹೆಮ್ಮೆಪಟ್ಟ. ಅದೇ ಸಮಯದಲ್ಲಿ ಭೀಷ್ಮನ ಒಂದು ಬಾಣ ಬಂದು ಪರಶುರಾಮನನ್ನು ತಾಗಿತು. ಅವನು ಮೂರ್ಛೆ ಬಿದ್ದ.

ಭೀಷ್ಮ ಕೂಡಲೆ ಕೈಯ್ಯಲ್ಲಿದ್ದ ಬಿಲ್ಲುಬಾಣಗಳನ್ನು ನೆಲದ ಮೇಲೆ ಎಸೆದ. “ಗುರುದ್ರೋಹವಾಯಿತು” ಎಂದು ಸಂಕಟದಿಂದ ಪರಶುರಾಮನ ಕಡೆ ಓಡಿದ. “ನನ್ನ ಬಾಳು ಸುಡಲಿ. ಗುರುದ್ರೋಹ ಮಾಡಿದ ಪಾಪಿ ನಾನು” ಎಂದು ಪಶ್ಚಾತ್ತಾಪಪಟ್ಟ.

ಪರಶುರಾಮ ಮೂರ್ಛೆಯಿಂದ ಎಚ್ಚೆತ್ತ. ಶಿಷ್ಯನನ್ನು ಪ್ರೀತಿಯಿಂದ ಬಾಚಿ ತಬ್ಬಿಕೊಂಡ. ಅಭಿಮಾನದಿಂದ ಹೊಗಳಿದ – “ಪ್ರಿಯ ಶಿಷ್ಯ ಭೀಷ್ಮ. ಸೋತೆನೆಂದು ನನಗೆ ಕೋಪವಿಲ್ಲ. ನಿನ್ನಂಥ ಶಿಷ್ಯನಿಂದ ಸೋಲುವುದೂ ಗುರುವಿಗೆ ಹೆಮ್ಮೆಯೇ. ಭೂಲೋಕದಲ್ಲಿ ನಿನ್ನ ಸಮಾನರಾದ ಕ್ಷತ್ರಿಯರಿಲ್ಲ. ನಿನ್ನ ಪ್ರತಿಜ್ಞೆಗೆ ಜಯವಾಯಿತು.”

ಭೀಷ್ಮ ಗುರುವಿಗೆ ತಲೆಬಾಗಿದ . ಗುರು ಶಿಷ್ಯನನ್ನು ಆಶೀರ್ವದಿಸಿದ. ಆದರೆ ಆ ಸಮಯದಲ್ಲಿ ಅಂಬೆ ಕಸಿವಿಸಿ ಹೊಂದಿ ಹೊರಟುಹೋಗಿದ್ದಳು. ಅವಳು ಎಲ್ಲಿಗೆ ಹೋದಳು?


‘ನಿನ್ನಂಥ ಶಿಷ್ಯನಿಂದ ಸೋಲುವುದೂ ಗುರುವಿಗೆ ಹೆಮ್ಮೆಯೇ’

ಭೀಷ್ಮ ಮಹಾ ಸಂಭ್ರಮದಿಂದ ವಿಚಿತ್ರವೀರ್ಯನ ಮದುವೆ ಮಾಡಿದ.

Terms | Privacy | 2024 🇮🇳
–>