-->

ಇಂತಿ ನಿನ್ನ ಅಮ್ಮ.. ಮನ ಕಲಕುವ ಒಂದು ಪತ್ರ

ನಾನು ಎತ್ತಿ ಆಡಿಸಿ ಬೆಳೆಸಿದ ಮಗನೇ,
ನೀನೀಗ ನನ್ನ ಎದೆಯೆತ್ತರಕ್ಕೆ ಬೆಳೆದು ನಿಂತಿರುವೆ.
ಮುಂದೊಂದು ದಿನ ನನ್ನ ವಿಷಯಕ್ಕೆ ತಲೆಹಾಕಬೇಡ ಎಂದು ಹೇಳಿಬಿಡುತ್ತಿಯೇನೋ ?
ಮರೆತು ಹಾಗೆಂದು ಹೇಳಬೇಡ, ಸಹಿಸುವ ಶಕ್ತಿ ನನಗಿಲ್ಲ ಮಗನೇ..!

ಚಿಕ್ಕವನಾಗಿದ್ದಾಗ ನೀ ಕೇಳಿದ ಎಲ್ಲ ಪ್ರಶ್ನೆಗೂ ಉತ್ತರ ಕೊಟ್ಟಿರುವೆ.
ವಯಸ್ಸಾದ ಮೇಲೇ ನಾನೂ ಹೀಗೆ ಕೇಳಿದ್ರೆ ಬಾಯಿಮುಚ್ಚು ಎಂದೂ
ಮರೆತೂ ಗದರಬೇಡ, ಅಮ್ಮ ಬೆದರಿ ನಿಂತಾಳು ಮಗನೇ..!

ಚಿಕ್ಕ ವಯಸ್ಸಿನಲ್ಲಿ ನೀ ತಿಂದು ಬಿಟ್ಟ ಅನ್ನವನ್ನು ನಾನು ತಿಂದಿರುವೆ.
ಕೈ ನಡುಗುವ ಕಾಲದಲ್ಲಿ  ತಟ್ಟೆಯಿಂದ ನಾನು ಅನ್ನ ಚೆಲ್ಲಿದರೆ ಮರೆತೂ
ನನ್ನ ಬೈಯಬೇಡ ಮಗನೇ..
ನನ್ನ ಸಂಕಟ ಹೇಳಲಾಗದು ನಿನಗೇ..!

ವಯಸ್ಸಾದ ಮೇಲೆ ಮೂತ್ರಚೀಲ‌ ಜಾರಬಹುದು, ಹನಿ ಹನಿ  ತೊಟ್ಟಿಕ್ಕಬಹುದು.
ಛೀ ಎಂದು ಮುಖ ಸಿಂಡರಿಸಬೇಡ ಮಗನೇ,
ನಿನ್ನ ಉಚ್ಚೆ ಒರೆಸಿದ ವಾಸನೆ ನನ್ನ ಸೆರಗಿನಲ್ಲಿ ಇನ್ನೂ ಇದೆ..!

ದೇಹ ಗಟ್ಟಿಯಾಗಿದ್ದಾಗಲೇ ಮಸಣಕ್ಕೆ ಹೋಗಬೇಕೆಂಬ ಇಚ್ಛೆ ನನಗೇನೋ ಇದೆ
ಹೆಚ್ಚುದಿನ ಬದುಕಿದರೆ ಅಪ್ಪಿ ತಪ್ಪಿಯೂ ನನ್ನ ವೃದ್ಧಾಶ್ರಮಕ್ಕೆ ಅಟ್ಟಬೇಡ.
ನಿನ್ನ ಬಿಟ್ಟು,ಈ ಜೀವ ಬಿಡಲಾಗದು ಮಗನೇ..!



ನವಮಾಸಗಳು ನಿನಗೆ ರಕ್ತ ಕೊಟ್ಟವಳು ನಾನು
ನನ್ನ ರಕ್ತವನ್ನೇ ಹಾಲಾಗಿ ಕುಡಿಸಿದವಳು ನಾನು
ಮೈಬಲಿತ ಮೇಲೆ ನನ್ನ ಪರದೇಶಿಯಾಗಿ ಬಿಟ್ಟುಹೋಗದಿರು
ನನ್ನ ರಕ್ತ ಒಣಗಿಹೋದೀತು ಮಗನೇ..!

ಪ್ರಾಣ ಹೋಗುವ ಕೊನೆಯ ಕ್ಷಣದವರೆಗೂ ನನ್ನ ಬಳಿಯೇ ಇರು ಎಂದು
ಕೂಗಿ ಕರೆಯುವೆ,  ಬೆನ್ನು ತಿರುಗಿಸಿ ಹೋಗಿಬಿಡಬೇಡ
ನೀನು ನನ್ನನ್ನು ಪ್ರೀತಿಸುವೆ ಎಂಬುದು ಕೇವಲ ನಂಬಿಕೆಯಲ್ಲ
ಮಕ್ಕಳು,  ಎಲ್ಲ ತಾಯಂದಿರ ಪ್ರಾಣಪಕ್ಷಿ ಎಂದು ಅರಿತುಕೋ ಮಗನೇ..!

ಇದನ್ನು ನೀನು ಓದಿ ಅಳುವೆ ಎಂದು ಗೊತ್ತು ನನಗೆ,
ನೀ ಅತ್ತರೆ ನನ್ನ ಹೃದಯ ಬಿರಿಯುವುದು,
ಕರುಳಬಳ್ಳಿ ನಲುಗುವುದು
ನೀ ಅಳಬೇಡ ಮಗನೇ,
ಹೆಣ್ಣನ್ನು ಗೌರವಿಸು ಅಷ್ಟೇ ಸಾಕು ನನಗೇ..!

- ಇಂತಿ ನಿನ್ನ ಅಮ್ಮ..!

Terms | Privacy | 2024 🇮🇳
–>