-->

ಶ್ರಾದ್ಧ ಏಕೆ, ಏನು, ಹೇಗೆ ? ಮಹಾಭಾರತ ಸಾರ

 ಧರ್ಮಾರಣೆ ಬಗ್ಗೆ ತಳಿಸಿಕೊಡಿ. ಶ್ರಾದ್ಧದ ಬಗ್ಗೆ ಅರಿತುಕೊಳ್ಳುವ ಆಸೆಯಾಗಿದೆ. ಶ್ರಾದ್ಧದ ಬಗ್ಗೆ ಸವಿಸ್ತಾರವಾಗಿ ತಿಳಿಸು ಎಂದು ಯುಧಿಷ್ಠಿರ ಭೀಷ್ಮಾಚಾರ್ಯರಲ್ಲಿ ಪ್ರಾರ್ಥಿಸುತ್ತಾನೆ.
ಪ್ರತಿಯೊಬ್ಬರು ಬಯಸುವುದು ಋಣರಹಿತ ಬದುಕು. ಸಾಲವಿಲ್ಲದ ಸಂಸಾರವೇ ಸರ್ವಾಪೇಕ್ಷಿತ. ಲೌಖಿಕವಾಗಿ ಶ್ರಮಪಟ್ಟು ಸಂಪಾದನೆ ಮಾಡಿ  ಸಾಲವಿಲ್ಲದೆ ಬದುಕಬಹುದು. ಆದರೆ ಹುಟ್ಟುವಾಗಲೆ ಸಂಪಾದಿಸಿಕೊಂಡು ಬಂದ ಸಾಲದ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ.
ಜನಿಸುವಾಗಲೇ ದೇವಋಣ, ಋಷಿ ಋಣ, ಪಿತೃಋಣ, ಭೂತ ಋಣ ಹಾಗೂ ಜನಋಣ  ಹೀಗೆ ಐದು ಪ್ರಕಾರದ ಸಾಲಗಳು ಮನುಷ್ಯನ ಜತೆಯಲ್ಲಿಯೇ ಬಂದಿರುತ್ತವೆ. ಧನ ಸಂಪಾದಿಸಬೇಕಾದರೆ ಈ ಶರೀರ ಬೇಕು. ಈ ದೇಹವನ್ನು ಕೊಟ್ಟವರು ಯಾರು?. ತಂದೆ ತಾಯಿಯಿಂದ ಬಂದ ಈ ದೇಹ ಅವರಿಂದಲೇ ಬೆಳದಿದ್ದು, ಶರೀರ ಇರುವಷ್ಟು ಕಾಲ ಪಿತೃಋಣ ಅವರ್ಜನೀಯ. ಇದಕ್ಕಾಗಿಯೇ ಪಿತೃತರ್ಪಣ, ಪಿಂಡ ಪ್ರದಾನ, ತೀರ್ಥಯಾತ್ರೆ, ಗಯಾ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧ ಮಾಡಬೇಕಾಗುತ್ತದೆ.
ಶ್ರಾದ್ಧ ಎಂದರೇನು ?. ಹೇಗೆ ಮಾಡಬೇಕು. ಏಕೆ ಮಾಡಬೇಕು. ಮಾಡದಿದ್ದರೆ ಏನಾಗುತ್ತದೆ ?. ಇಲ್ಲಿ ನಾವು ಕೊಟ್ಟ ಅನ್ನಾದಿಗಳು ಪಿತೃಗಳಿಗೆ ಮುಟ್ಟುತ್ತವಯೇ?. ನಾವು ಕರೆದಾಗ ಬರುವಷ್ಟು ಅವರು ದೈವಿಶಕ್ತಿಗಳುಳ್ಳವರೆ ?. ಪಿತೃಗಳು ನರಕಾದಿಗಳಲ್ಲಿದ್ದರೆ ಅಥವಾ ಪುನರ್ಜನ್ಮ ತೆಗೆದುಕೊಂಡಿದ್ದರೆ  ಅವರು ಶ್ರಾದ್ಧಕಾಲದಲ್ಲಿ ಹೇಗೆ ಬರುವರು ಎಂಬ ಪ್ರಶ್ನೆಗಳು ಉದ್ಭವಿಸುವುದು ಸಹಜ.
ಕೆಲವರು ಶ್ರಾದ್ಧವನ್ನು ನಾಮಕಾವಾಸ್ತೆ ಮಾಡುತ್ತಾರೆ. ತಂದೆ,ತಾಯಿಯಶ್ರಾದ್ಧ ಮಾಡದಿದ್ದರೆ ನಾಲ್ಕು ಜನ ಏನಂದಾರೂ ಎಂದು ಕೆಲವರು ಮಾಡುತ್ತಾರೆ. ಯಾವುದೆ ಕರ್ಮವನ್ನು ಮಾಡಬೇಕಾದರೆ ಮೊದಲು ಅದರ ಮಹತ್ವ ತಿಳಿದುಕೊಳ್ಳಬೇಕು.
ತನ್ನ ಕುಟುಂಬದವ ಒಳಿತಿಗಾಗಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಕಾರ್ಯಕ್ಕೆ ಶ್ರಾದ್ಧ ಎನ್ನುವರು. ಮಂತ್ರಪೂರ್ವಕವಾಗಿ ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಅತ್ರೇಯ ಮುನಿಯ ಪುತ್ರ ನಿಮಿಯು ಪ್ರಥಮ ಶ್ರಾದ್ಧಕರ್ತ ಎಂದು ವರಹಾಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ದೇವಕಾರ್ಯಕಿಂತಲೂ ಪಿತೃಕಾರ್ಯ ಶ್ರೇಷ್ಠ. ಶ್ರಾದ್ಧ ಮಾಡದಿದ್ದರೆ ಅಂಥವರ ರಕ್ತವನ್ನು ಪಿತೃಗಳು ಪಾನ ಮಾಡುತ್ತಾರೆ. ಎಂದರೆ ದೇಹದಲ್ಲಿನ ರಕ್ತ ಸೇವಿಸುವುದು ಎಂದಲ್ಲ. ರೋಗಿಗಳು, ದರಿದ್ರರು ಅವರ ಅಂಶದಲ್ಲಿ ಜನಿಸುತ್ತಾರೆ.
ನಾವು ಕೊಟ್ಟ ಪಿಂಡದ ಅನ್ನಾದಿಗಳು ಇಲ್ಲಿಯೇ ನಾಶವಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ನಾವುಕೊಟ್ಟ ಪಿಂಡದ ಅನ್ನ ನೇರವಾಗಿ ಪಿತೃಗಳಿಗೆ ಮುಟ್ಟುವುದಿಲ್ಲ. ಇಲ್ಲಿ ನಾವು ವಸು,ರುದ್ರ, ಅದಿತ್ಯಾಂತರ್ಗತನಾದ ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ರೂಪಿಯಾದ ಭಗವಂತನನ್ನು ಉದ್ದೇಶಿಸಿ ಪಿತೃಗಳ ನಾಮ-ಗೋತ್ರಗಳನ್ನು ಉಚ್ಚರಿಸಿ ಅನ್ನಾದಿಗಳನ್ನು ಕೊಟ್ಟಾಗ ಆಯಾ ದೇವತೆಗಳು ಅದರ ಸಾರವನ್ನು ಸ್ವೀಕರಿಸಿ ಅದರ ಲವನ್ನು ಪಿತೃಗಳು ಎಲ್ಲಿ ಯಾವ ರೂಪದಲ್ಲಿರುತ್ತಾರೋ ಯಾವ ಆಹಾರದಿಂದ ತೃಪ್ತರಾಗುತ್ತಾರೋ ಅಂಥ ಆಹಾರವನ್ನು ನೀಡುತ್ತಾರೆ.
ನಮ್ಮ ಪಿತೃಗಳಿಗೂ- ಶ್ರಾದ್ಧ ಕಾರ್ಯಕ್ಕೂ ಮಧ್ಯೆ ಮಾದ್ಯಮವಾಗಿ ಚಿರ ಪಿತೃಗಳು ನಿಂತಿರುತ್ತಾರೆ. ಅವರನ್ನು ಪ್ರಾರ್ಥಿಸಿ ಶ್ರಾದ್ಧ ಆರಂಭಿಸಬೇಕು. ಶ್ರಾದ್ಧದಲ್ಲಿ ಕುತುಪಕಾಲಕ್ಕೆ ಬಹಳ ಮಹತ್ವ ನೀಡಲಾಗಿದೆ.
ಕುತುಪ ಎಂದರೆ ಉತ್ತಮವಾದ ಭೂಮಿ, ಉತ್ತಮ ಕಾಲ, ಉತ್ತಮ ಸ್ಥಳದಲ್ಲಿ ಶ್ರಾದ್ಧ ಮಾಡುವುದು. ಕುತ್ಸಿವಾದ ಪಾಪವನ್ನು ಸುಟ್ಟು ಹಾಕುವ ಕಾಲಕ್ಕೆ(ಸಮಯ) ಕುತುಪ ಕಾಲ ಎನ್ನುವರು. ಬೆಳಗ್ಗೆ 11.36ಕ್ಕೆ ಆರಂಭವಾಗಿ ಮಧ್ಯಾಹ್ನ 3.30ರ ವರೆಗಿನ ವೇಳೆಗೆ ಕುತುಪ ಕಾಲ ಎನ್ನುವರು. ಇಷ್ಟರೊಳಗಾಗಿ ಶ್ರಾದ್ಧಕರ್ಮ, ಬ್ರಾಹ್ಮಣರ ಭೋಜನ, ತರ್ಪಣ ಹಾಗೂ ಕತೃವಿನ ಭೋಜನ ಮುಗಿಯಬೇಕು.
*ಅಮವಾಸ್ಯ ದರ್ಶ*
ಮಾನವರ ಒಂದು ತಿಂಗಳ ಕಾಲಾವಧಿ ಪಿತೃಗಳಿಗೆ ಒಂದು ದಿವಸವಾಗುತ್ತದೆ. ಅಮವಾಸ್ಯೆಯ ದಿನ ಪಿತೃಗಳಿಗೆ ಮಧ್ಯಾಹ್ನ ಕಾಲ. ಹುಣ್ಣಿಮೆ ದಿನ ರಾತ್ರಿಕಾಲ. ಮಧ್ಯಾಹ್ನ ಸೂರ್ಯನ ಕಿರಣದಿಂದ ನೊಂದ ಪಿತೃಗಳಿಗೆ ತಿಲತರ್ಪಣ ಕೊಡುವುದುರಿಂದ ಪಿತೃಗಳು ತೃಪ್ತರಾಗುತ್ತಾರೆ.
ಕೃಷ್ಣಪಕ್ಷದಲ್ಲಿ ಸೂರ್ಯ-ಚಂದ್ರರು ಸಮ್ಮುಖದಲ್ಲಿ ಬರುವುದರಿಂದ ಪಿತೃಗಳಿಗೆ ಸೂರ್ಯ ದರ್ಶನವಾಗುತ್ತದೆ. ದರ್ಶನವಿದ್ದ ದಿನ ಪಿತೃಗಳಿಗೆ ತಿಲತರ್ಪಣ ಕೊಡಬೇಕು.ದರ್ಶನದ ಅನಂತರದ ದಿನಗಳಲ್ಲಿ ತಿಲವಿಲ್ಲದೆ ಸರ್ವಪಿತೃಗಳಿಗೆ ನಿರ್ಮಾಲ್ಯ ತೀರ್ಥದಿಂದ ತರ್ಪಣ ಕೊಡಬೇಕು.
ವರಹಾರೂಪಿಯಾದ ಭಗವಂತನು ಹಿರಾಣ್ಯಾಕ್ಷನನ್ನು ಸಂಹರಿಸಿ ಭೂದೇವಿ ಜತೆಗೆ ಬರುತ್ತಿರುವಾಗ ಆತನ ಗಲ್ಲಕ್ಕೆ ಮೆತ್ತಿಕೊಂಡಿದ್ದ ಮಣ್ಣಿನ ಮುದ್ದೆಯೂ ಮೂರು ಪಿಂಡಗಳಾಗಿ ಭೂಮಿ ಮೇಲೆ ಬಿದ್ದವು ಅವುಗಳನ್ನು ಪಿತೃ, ಪಿತಾಮಹ, ಪ್ರಪಿತಾಮಹ ಎಂದು ಮೂರು ಪಿತೃಗಳನ್ನು ಉದ್ದೇಶಿಸಿ ಆರಾಧಿಸುವ ಪದ್ಧತಿ ರೂಢಿಯಲ್ಲಿ ಬಂದಿದೆ.
ವಿಶ್ವದೇವರ ಸ್ಥಾನದಲ್ಲಿ ಸಮಸಂಖ್ಯೆಲ್ಲಿ ಹಾಗೂ ಪಿತೃಸ್ಥಾನದಲ್ಲಿ ವಿಷಮ ಸಂಖ್ಯೆಲ್ಲಿ ಬ್ರಾಹ್ಮಣರು ಇರಬೇಕು. ಶ್ರಾದ್ಧ ಭೋಜನಕ್ಕೆ ಆಮಂತ್ರಿತನಾದ ಬ್ರಾಹ್ಮಣನು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಅಂಥ ಬ್ರಾಹ್ಮಣ ಪತಿತನಾಗಿ ರೋಗಿಯಾಗುತ್ತಾನೆ.ಅಲ್ಲದೆ ನರಕಯಾತನೆ ಅನುಭವಿಸುತ್ತಾನೆ.
ಶ್ರಾದ್ಧ ಮಾಡುವ ದಿನದಂದು ಕತೃಗಳು  ತಾಂಬೂಲ ಸೇವಿಸಬಾರದು. ತೈಲಾಭ್ಯಂಜನ ಮಾಡಬಾರದು. ಎರಡು ಬಾರಿ ಊಟ, ಸ್ತ್ರೀ ಸಂಗ, ಔಷಧಿ ಸೇವೆ, ಪರಾನ್ನ ಭೋಜನ ನಿಷೇಧ. ಇವು ಶ್ರಾದ್ಧದ ಹಿಂದಿನ ದಿನ ಮತ್ತು ಶ್ರಾದ್ಧದ ದಿವಸ ಅನ್ವಯವಾಗುತ್ತದೆ. ಶ್ರಾದ್ಧಕ್ಕೆ ಆಮಂತ್ರಿಸಿದ ಬ್ರಾಹ್ಮಣನನ್ನು ಯಾವ ಕಾರಣಕ್ಕೂ ವಾಪಸ್ ಕಳಿಸಬಾರದು. ಕಳಿಸಿದರೆ ಬ್ರಹ್ಮ ಹತ್ಯೆ ಪಾಪಕ್ಕೆ ಗುರಿಯಾಗುತ್ತಾನೆ. ಶ್ರಾದ್ಧಕರ್ಮ ಮಾಡಿಸುವುದಾಗಿ ಒಪ್ಪಿ ಹಚ್ಚಿನ ದಕ್ಷಿಣೆ ಆಸೆಗಾಗಿ ಬರುವುದಿಲ್ಲ ಎಂದು ವೈದಿಕರು ಹೇಳಬಾರದು. ಬ್ರಾಹ್ಮಣರು ಲೋಭಾದಿಗಳನ್ನು ಬಿಡಬೇಕು.

ಕಶ್ರಾದ್ಧ ಏಕೆ, ಏನು, ಹೇಗೆ ?  ಮಹಾಭಾರತ ಸಾರ
ಶ್ರಾದ್ಧ ಕರ್ಮ ಮಾಡಿದವರು ಅಂದು ಒಂದೇ ಸಲ ಊಟ ಮಾಡಬೇಕು. ವೇದ ಅಧ್ಯಯನ, ಪರ ಊರಿಗೆ ಪಯಣ, ಸ್ತ್ರೀ ಸಂಗ ಮಾಡಕೂಡದು. ಆದಿನ ಪ್ರಯಾಣ ಮಾಡಿದರೆ ಮುಂದಿನ ಜನ್ಮದಲ್ಲಿ ಕುದುರೆಯಾಗಿ, ಎರಡು ಬಾರಿ ಊಟ ಮಾಡಿದವರು ಕಾಗೆಯಾಗಿ ಜನಿಸುತ್ತಾರೆ. ಹೊರಗಿನ ತಿಂಡಿ ತಿನಸು ಸೇವಿಸಿದರೆ ಹಂದಿ ಜನ್ಮ. ಆ ದಿನ ದಾನ ಸ್ವೀಕರಿಸಿದರೆ ಬಡತನ ಪ್ರಾಪ್ತಿ. ದಾನ ಕೊಟ್ಟವನಿಗೂ ಪುಣ್ಯ ಫಲ ಸಿಗದು.
ಶ್ರಾದ್ಧವನ್ನು ಪಿಂಡ ಪ್ರದಾನ ಸಹಿತವಾಗಿಯೇ ಮಾಡಬೇಕು. ಮೃತ ತಿಥಿಯನ್ನು ಬಿಟ್ಟು ಅನಿವಾರ್ಯ ಕಾರಣದಿಂದ ಬೇರೆ ತಿಥಿಯಂದು ಶ್ರಾದ್ಧ ಮಾಡಬೇಕಾದ ಪ್ರಸಂಗ ಬಂದರೆ ಕೃತ್ತಿಕಾ, ರೋಹಿಣಿ , ರೇವತಿ, ಮಘಾ, ಜೇಷ್ಠಾ, ಮೂಲಾ ನಕ್ಷತ್ರಗಳನ್ನು  ಹಾಗೂ ಭಾನುವಾರ ಶುಕ್ರವಾರ ಬಿಟ್ಟು ಉಳಿದ ದಿನಗಳಲ್ಲಿ ಮಾಡಬೇಕು. ಪಿಂಡ ಪ್ರದಾನ ಶ್ರಾದ್ಧ ಮಾಡಲು ಅಸಮರ್ಥರಾದವರು ಸಂಕಲ್ಪ ಶ್ರಾದ್ಧ ವನ್ನಾದರೂ  ಮಾಡಲೇಬೇಕು. ಇಷ್ಟೂ ಮಾಡಲೂ ಆಗದವರು ಪಿತೃಸೂಕ್ತವನ್ನು ಪಠಿಸಬೇಕು ಎಂದು ಭೀಷ್ಮರು ಶ್ರಾಧ್ದ ಮಾಡುವ ವಿಧಾನ ಮತ್ತು ಮಹಿಮೆ ವಿವರಿಸಿದರು.
ನಮ್ಮನ್ನು ಹೆತ್ತು-ಹೊತ್ತು ಸಾಕಿ ಸಲುಹಿದ ತಂದೆ ತಾಯಿಗಳಿಗೆ ವರ್ಷಕ್ಕೊಮ್ಮೆ ಶ್ರಾದ್ಧ  ಮಾಡುವ ಮೂಲಕ ಅವರ ಋಣ ತೀರಿಸಲು ನಮ್ಮಿಂದ ಆಗುತ್ತಿಲ್ಲವಲ್ಲ. ಮೂರ್ನಾಲ್ಕು ಜನ  ಅಣ್ಣ ತಮ್ಮಂದಿ
ರಿದ್ದರೆ  ನಾನೊಬ್ಬನೇ ಮಾಡಿಕೊಳ್ಳಬೇಕೇನು ಎಂಬ ತಕರಾರಿನ ಮಾತುಗಳು ಕೇಳಿ ಬರುತ್ತವೆ. ಇದು ಸರಿಯಲ್ಲ ಶ್ರಾದ್ಧ ಕರ್ಮ ಮಾಡುವಾಗ ಮನೆಯಲ್ಲಿ ಕಲಹ ಮಾಡಬಾರದು ಎಂದಿದೆ.
ಶ್ರಾದ್ಧ ಮಾಡುವುದು ಕತೃವಿನ ಆದ್ಯ ಕರ್ತವ್ಯವಾಗಿದೆ. ಯಾವ ಕಾರಣಕ್ಕೂ ಅದನ್ನು ಬಿಡಕೂಡದು ಎಂದು ಭೀಷ್ಮರು ಹೇಳಿದರು.

- ಶಾಮಸುಂದರ ಕುಲಕರ್ಣಿ, ಕಲ್ಬುರ್ಗ (9886465925)

Terms | Privacy | 2024 🇮🇳
–>