-->

ನಾರದರ ಉಪದೇಶ , ಮಹಾಭಾರತ ಸಾರ

 ಸಮುದ್ರದಲ್ಲಿ ಬರುವ ತೆರೆಗಳಿಗೆ ಎದೆ ಉಬ್ಬಿಸಿ ನಿಂತರೆ ಕೊಚ್ಚಿಕೊಂಡು ಹೋಗುತ್ತೇವೆ. ಬಾಗಿದರೆ ಅಲ್ಲಿಯೇ ಶಾಶ್ವತವಾಗಿ ನಿಲ್ಲುತ್ತೇವೆ. ಅದರಂತೆ ಸಂಸಾರ ಎಂಬ ಕ್ಷಯ ಸಾಗರದಲ್ಲಿ ತಲೆ ಬಾಗಿ ನಡೆದರೆ ಮಾತ್ರ ನಿಲ್ಲಲು ಸಾಧ್ಯ. ಜಗತ್ತಿನ ಪ್ರತಿ ವಸ್ತು ಭಗವಂತನಿಂದ ನಿರ್ಮಿತವಾದ್ದು ಎಂದು ಭಾವಿಸಬೇಕು.
ಭಗವಂತನಿಗಾಗಿ ನಾವು ಏನೂ ಮಾಡುವುದಿಲ್ಲ. ಅದರ ಅಗತ್ಯಯೂ ದೇವರಿಗಿಲ್ಲ. ನಮಗಾಗಿ.ನಾವು ಉದ್ಧಾರ ಆಗುವುದಕ್ಕಾಗಿ ಭಗವಂತನ ಸೇವೆ ಮಾಡಬೇಕು. ನಿಶ್ವಾರ್ಥ ಭಾವನೆಯಿಂದ ಭಕ್ತಿ ಮಾಡಬೇಕು. ನಮಗಾಗಿ ಪರಮಾತ್ಮ ಎಲ್ಲವನ್ನೂ ಸೃಷ್ಠಿಸಿದ್ದಾನೆ. ಆತನಿಂದ ಪಡೆದಿದ್ದನ್ನು ಆತನಿಗೆ ಸಮಪಿ೮ಸಬೇಕು. ಅದೂ ನಮ್ಮಿಂದಾಗುತ್ತಿಲ್ಲ. ಪ್ರಪಂಚದಲ್ಲಿ ನನ್ನದು ಎಂಬ ವಸ್ತು ಯಾವುದೂ ಇಲ್ಲ ಎಂಬ ಸತ್ಯ ಅರಿಯಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ.
ನಾವು ಗಳಿಸುವ ಪುಣ್ಯ ಅಲ್ಪ ಅದನ್ನೂ ಕಳೆದುಕೊಳ್ಳಲು ನಾವು ಹೊರಟಿದ್ದೇವೆ. ಪ್ರತಿಯೊಬ್ಬರಲ್ಲೂ ಒಂದೊಂದು ನ್ಯೂನ್ಯತೆ ಇರುತ್ತದೆ. ಜೀವನದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ವ್ಯವಹಾರಿಕ ಪಯಣದ ಜತೆ ಅಧ್ಯಾತ್ಮಿಕದತ್ತ ಒಲವು ಬೆಳೆಸಿಕೊಳ್ಳಬೇಕು.
ಮನುಷ್ಯ ತಾನು ಮಾಡಿದ ಅಧರ್ಮ ಅವನ ಅಧೋಗತಿಗೆ ಕಾರಣವಾಗುತ್ತದೆ. ಸುತ್ತಮುತ್ತ ಸಾವು ಅದರ ಮಧ್ಯೆ ನಾವು ಬದುಕುತ್ತಿದ್ದೇವೆ. ಇಂಥ ಪ್ರಪಂಚದೊಳಗೆ ಬುದುಕುವುದೇ ಒಂದು ದೊಡ್ಡ ಸಾಹಸ.
ಇಂದ್ರ ದೇವರು ಭಗವಂತನ ನೈರ್ಮಲ್ಯಕ್ಕೆ ಅವಮಾನ ಮಾಡಿದ್ದಕ್ಕೆ ಇಂದ್ರಲೋಕ ಕಳೆದುಕೊಳ್ಳಬೇಕಾಯಿತು. ನಾವು ಕೂಡ ಭಗವಂತನಿಗೆ ಅಪಮಾನ ಮಾಡಿದರೆ ಕಷ್ಟಕ್ಕೆ ಸಿಲುಕುತ್ತೇವೆ. ಕಷ್ಟ ಬಂದಾಗಲಾದರೂ ದೇವರ ನಾಮಸ್ಮರಣೆ ಮಾಡಬೇಕು. ಭಗವಂತನಲ್ಲಿ ಭಕ್ತಿ ಬೆಳೆಸಿಕೊಳ್ಳಬೇಕು. ಕೊನೆ ಪಕ್ಷ ಭಕ್ತಿ ಸಾಧನೆಗೆ ಪ್ರಯತ್ನಿಸಬೇಕು.
ಸಂಪತ್ತು, ಅಂತಸ್ತಿನಿಂದ ಭಗವಂತನನ್ನು ಒಲಿಸಿಕೊಳ್ಳುವುದು ಸಾಧ್ಯವಿಲ್ಲ. ನಿಶ್ಚಲವಾದ ಭಕ್ತಿಯಿಂದ ಮಾತ್ರ ಪರಮಾತ್ಮನನ್ನು ಒಲಿಸಿಕೊಳ್ಳಬಹುದು. ದೇವರಲ್ಲಿ ತಾರತಮ್ಯವಿಲ್ಲ. ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ.
ಮಾನವ ಜನ್ಮ ದೊಡ್ಡದು. ಎಷ್ಟೋ ತಪಸ್ಸಿನ ಫಲದಿಂದ ಸಿಗುವ ಈ ಜನ್ಮವನ್ನು ವ್ಯರ್ಥ ಹಾಳುಮಾಡಿಕೊಳ್ಳದೆ ಸಾಧನೆಯತ್ತ ಚಿತ್ತ ಹರಿಸಬೇಕು. ಬಹು ಚಂಚಲವಾದ ಮನಸ್ಸಿಗೆ ಉತ್ತಮ ಸಂಸ್ಕಾರ ನೀಡಬೇಕು. ಮನಸಿನ ಕೈಯಲ್ಲಿ ನಾವಿರಬಾರದು ಮನಸ್ಸನ್ನು ನಮ್ಮ ಕೈಯಲ್ಲಿಟ್ಟುಕೊಳ್ಳಬೇಕು. ನಾವು ಹೇಳಿದಂತೆ ಮನಸ್ಸು ಕೇಳಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ.  

ನಾರದರ ಉಪದೇಶ , ಮಹಾಭಾರತ ಸಾರ
ನಾವು ಮಾಡಿದ ಪಾಪ ನಮ್ಮನ್ನು  ಪೀಡಿಸುತ್ತದೆ. ಯಜ್ಞಯಾಗಾದಿ ಎಲ್ಲಿ ನಡೆಯುತ್ತಿವೆಯೋ ಅಲ್ಲಿ ಸುಭೀಕ್ಷೆ ಇರುತ್ತದೆ. ಹೋಮ ಮಾಡುವುದರಿಂದ ಶುದ್ಧ ವಾತಾವರಣ ನಿರ್ಮಾಣವಾಗುತ್ತದೆ. ಯಜ್ಞ ಹೇಗೆ ಮಾಡಬೇಕು ಎಂದು ನಮಗೆತಿಳಿಸಿಕೊಡುವುದಕ್ಕಾಗಿಯೇ ಶ್ರೀ ಕೃಷ್ಣನು ಪಾಂಡವರಿಂದ ಅಶ್ವಮೇಧ ಯಾಗ ಮಾಡಿಸಿದ್ದಾನೆ. ನಾವು ಹೇಗೆ ಬದುಕಬೇಕು ಎಂಬುದನ್ನು ಭಗವಂತ ಕಲಿಸಿಕೊಟ್ಟಿದ್ದಾನೆ ಎಂದು ನಾರದು ಯಧಿಷ್ಢಿರನಿಗೆ ಧರ್ಮ ಪರಿಪಾಲನೆ ಕುರುತು ಉಪದೇಶ ನೀಡುತ್ತಾರೆ. ಧರ್ಮ ನಾಶವಾಗಿ ಎಲ್ಲೆಂದರಲ್ಲಿ ಅಧರ್ಮ ತಾಂಡವಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಮಹಾಭಾರತ ನೀಡಿದ ಈ ಸಂದೇಶ ಉಪಯುಕ್ತವಾಗಿದೆ.

- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

–>