ಬಿರುಬಿಸಿಲಲ್ಲಿ ರಸ್ತೆಗಿಳಿದಿದ್ದ ಆ ಹುಡುಗನ ಬಗಲಲ್ಲಿ ಥರೇವಾರಿ ಆಟಿಕೆ ಸಾಮಾನುಗಳು, ಅಲಂಲಕಾರಿಕ ಸಾಮಾನುಗಳು. ತನ್ನ ಬದುಕಿಗೆ ಒಂದು ರಂಗು ತಂದುಕೊಳ್ಳಬೇಕು ಅಂತಾದರೆ ಆ ಹುಡುಗನಿಗೆ ಆ ಬಣ್ಣ ಬಣ್ಣದ ಸರಂಜಾಮುಗಳನ್ನೆಲ್ಲ ಬಿಕರಿಯಾಗಿಸಲೇಬೇಕಾದ ಜರೂರತ್ತಿತ್ತು. ಶಾಲೆಯ ಫೀಸು ತುಂಬಲು ಬೇಕಾದ ಹಣ ಗಳಿಸಿಕೊಳ್ಳಲು ಆ ಹುಡುಗನ ಎದುರಿಗಿದ್ದ ಮಾರ್ಗವದು. ಆ ದಿನ ಆತ ತುಂಬ ಬಳಲಿಹೋಗಿದ್ದ. ಏನನ್ನಾದರೂ ಖರೀದಿಸಿ ತಿನ್ನೋಣ ಎಂದರೆ ಜೇಬಲ್ಲಿದ್ದ ಪುಡಿಗಾಸು ಏನಕ್ಕೂ ಸಾಕಾಗುವಂತಿರಲಿಲ್ಲ. ಬೇಡಿ ಪಡೆಯುವುದು ಆತನ ಜಾಯಮಾನವಲ್ಲ.
ಅಷ್ಟಾಗಿಯೂ ಇನ್ನೇನು ತಲೆ ತಿರುಗಿ ಬಿದ್ದು ಬಿಡುತ್ತೀನೇನೊ ಎಂಬಂತಾದಾಗ ಮನೆಯೊಂದರ ಬಾಗಿಲು ಬಡಿದ. ಊಟ ಕೊಡುತ್ತೀರಾ ಎಂದು ಕೇಳಬೇಕೆಂದುಕೊಂಡ. ಬಾಗಿಲು ತೆರೆದು ಪ್ರಸನ್ನ ವದನಳಾಗಿ ನಿಂತಿದ್ದ ಯುವತಿಯನ್ನು ನೋಡಿ ಅವನಿಗೇನೋ ಮುಜುಗರ ಕಾಡಿಬಿಟ್ಟಿತು. ಒಂದು ಲೋಟ ನೀರು ಸಿಗಬಹುದಾ?' ಎಂದು ಕೇಳಿದ. ಆತನ ಬಳಲಿಕೆಯ ಮುಖವನ್ನು ಓದಿಕೊಂಡು ಹೋದಳೇನೋ ಎಂಬಂತೆ ಆಕೆ ಮನೆಯೊಳಗೆ ಹೋಗಿ ನೀರಿನ ಬದಲು ಉದ್ದ ಲೋಟದಲ್ಲಿ ಹಾಲು ತಂದುಕೊಟ್ಟಳು. ತುಂಬು ಸಂತೃಪ್ತಿಯೊಂದಿಗೆ ಕೊನೆಯ ಬಿಂದುವನ್ನೂ ಕುಡಿದು ಮುಗಿಸಿದ ಆ ಹುಡುಗ. ಇದಕ್ಕೆ ಪ್ರತಿಯಾಗಿ ನಾನೇನು ಕೊಡಲಿ?' ಎಂದ. ನೀನೇನೂ ಕೊಡಬೇಕಿಲ್ಲ. ನಮ್ಮ ಉದಾರತೆಗೂ ಒಂದು ಬೆಲೆ ಸಿಗಬೇಕು ಎಂದು ಅಪೇಕ್ಷಿಸಬಾರದು ಅಂತ ನಮ್ಮಮ್ಮ ನಂಗೆ ಯಾವಾಗ್ಲೂ ಹೇಳ್ತಿರ್ತಾಳೆ' ಎಂದವಳು ಮೆಲುವಾಗಿ ನಕ್ಕು ಮನೆಯೊಳಗೆ ಹೋದಳು. ಆ ಮನೆಯಿಂದ ಮುಂದೆ ಸಾಗುತ್ತಿದ್ದ ಆ ಹುಡುಗನ ಹೃದಯದಲ್ಲಿ ಒಂಥರದ ಸಂಭ್ರಮ. ವ್ಯಾಸಂಗಕ್ಕಾಗಿ ಕಷ್ಟಪಡಬೇಕಾದ ತನ್ನ ಸ್ಥಿತಿಯನ್ನು ಅವಲೋಕಿಸಿಕೊಳ್ಳುತ್ತ ಆತ ಹಲವು ಬಾರಿ ಇದೇನಪ್ಪಾ ದೇವರೇ' ಎಂದು ಹತಾಶ ಉಸಿರು ಹೊರಹಾಕಿದ್ದ. ಆದರೀಗ ಒಂದು ಲೋಟ ಹಾಲು ಕೇವಲ ಹೊಟ್ಟೆ ತುಂಬಿಸಿರಲಿಲ್ಲ, ಬದಲಿಗೆ ದೇವರ ಮೇಲೆ ಹಾಗೂ ಜನರ ಮೇಲೆ ನಂಬಿಕೆ ಇಟ್ಟುಕೊಳ್ಳುವುದನ್ನು ಕಲಿಸಿತ್ತು. ಆ ಹುಡುಗನ ಮುಖದಲ್ಲಿ ಹೊಸತೊಂದು ಜೀವನಪ್ರೀತಿ. ಆತ ಮುಂದೆ ದೊಡ್ಡ ಪಟ್ಟಣ ಸೇರಿ ಪ್ರಖ್ಯಾತ ವೈದ್ಯನಾಗಿ ಉಲ್ಲಸಿತ ವೃತ್ತಿ ಜೀವನ ನಡೆಸುತ್ತಿದ್ದ. ಹಾಗೊಂದು ದಿನ ಆತನೆದುರು ಒಂದು ಪ್ರಕರಣ ಬಂತು. ಹೆಂಗಸೊಬ್ಬಳಿಗೆ ಯಾವುದೋ ವಿಚಿತ್ರ ರೋಗ. ಅವಳಿದ್ದ ಚಿಕ್ಕ ಪಟ್ಟಣದ ವೈದ್ಯರುಗಳಿಗೆಲ್ಲ ಅದೇನೆಂದು ಬಗೆ ಹರಿಯದೇ ಇಲ್ಲಿ ಕಳುಹಿಸಿದ್ದರು. ಚಿಕಿತ್ಸೆಯ ವೆಚ್ಚವನ್ನೆಲ್ಲ ಭರಿಸುವ ಆರ್ಥಿಕ ಚೈತನ್ಯವೂ ಅವಳಿಗೆ ಇರಲಿಲ್ಲ. ಸಹಜ ವಿಚಾರಣೆಯ ಧಾಟಿಯಲ್ಲಿ ಆತ ಕೇಳಿದ, ಆಕೆ ಎಲ್ಲಿಂದ ಬಂದವಳು?'.
ಅದಕ್ಕೆ ಉತ್ತರ ಸಿಗುತ್ತಿದ್ದಂತೆ ಆತನ ಕಣ್ಣುಗಳು ಮಿನುಗಿದವು! ಆಕೆಯ ವೈದ್ಯಕೀಯ ವರದಿಗಳನ್ನು ಹುರುಪಿನಿಂದ ಪರಿಶೀಲಿಸುತ್ತಲೇ ಆಕೆಯ ವಾರ್ಡ್‌ಗೆ ಹೋದ. ಅವನಂದುಕೊಂಡಿದ್ದು ನಿಜವಾಗಿತ್ತು. ಅವಳಿಗೇನೂ ಈತನ ಮುಖ ನೆನಪಿರಲಿಲ್ಲ, ಆದರೆ ಇವನಿಗೆ ಆ ಮುಖ ಮರೆತೀತಾದರೂ ಹೇಗೆ? ಅವಳೇ.. ಒಂದು ಲೋಟ ಹಾಲಿನ ದೇವತೆ! ಅವಳಿಗೆ ಬಂದಿರುವ ರೋಗ ಅದೇನೇ ಆಗಿರಲಿ, ಇದು ತನ್ನ ವೈದ್ಯಕೀಯ ಜೀವನದ ಸವಾಲು ಎಂದೇ ಆತ ಅಂದುಕೊಂಡ. ಪರೀಕ್ಷೆ, ಚಿಕಿತ್ಸೆ ಎಲ್ಲ ಶುರುವಾಯಿತು. ಕೊನೆಗೂ ಒಂದು ದಿನ ಗೆಲುವಿನ ನಗೆ ಅವನದಾಗಿತ್ತು. ಚಿಕಿತ್ಸೆ ಫಲಕಾರಿಯಾಗಿತ್ತು. ಆಕೆಯ ಚಿಕಿತ್ಸೆಯ ವೆಚ್ಚದ ಬಿಲ್ ಆತನ ಅಂಕಿತಕ್ಕಾಗಿ ಬಂತು. ಆ ಬಿಲ್‌ಗೆ ಒಂದು ಸಾಲಿನ ಒಕ್ಕಣೆ ಬರೆದು ಆತ ಸಹಿ ಮಾಡಿದ. ಇತ್ತ ಬಿಲ್ಲು ತಲುಪುತ್ತಲೇ ಆ ಹೆಂಗಸು ತುಂಬ ದುಗುಡದಿಂದ ಅದನ್ನು ತೆರೆದುನೋಡಲು ಎತ್ತಿಕೊಂಡಳು. ಕಾಯಿಲೆ ವಾಸಿಯಾಗಿದ್ದ ಖುಷಿ ಅವಳದಾಗಿದ್ದರೂ ಆಸ್ಪತ್ರೆಯ ಬಿಲ್ ಪಾವತಿಸಲು ಮತ್ತೆ ಜೀವವನ್ನೇ ತೇಯಬೇಕಾಗುತ್ತದೆ ಎಂಬ ವಾಸ್ತವದ ಅರಿವು ಅವಳಿಗಿತ್ತು. ಹಾಗಂದುಕೊಂಡೇ ಪಾವತಿಯ ಪದರ ತೆಗೆದರೆ ಬಿಲ್‌ನ ಮೊತ್ತಕ್ಕಿಂತ ಮೊದಲು ಆ ಒಕ್ಕಣೆ ಕಣ್ಣಿಗೆ ರಾಚಿತು. ಒಂದು ಲೋಟ ಹಾಲಿನೊಂದಿಗೆ ಎಲ್ಲವೂ ಸಂದಾಯವಾಗಿದೆ.' ಮುಂದೇನೂ ಗಮನಿಸಲಾಗದಂತೆ ಆಕೆಯ ಕಣ್ಣುಗಳು ಮಂಜಾಗಿದ್ದವು.
ಜೀವನದಲ್ಲಿ ತುಂಬ ಹಿತ ನೀಡುವ ನಂಬಿಕೆ ಅಂದರೆ- ನಾವು ಮಾಡುವ ಒಳ್ಳೆಯ ಕೆಲಸ ನಮ್ಮನ್ನು ಕಾಯುತ್ತೆ ಅನ್ನೋದು. ಈ ಮೇಲಿನ ಕತೆಯಂತೆ ಒಬ್ಬರಿಂದ ಪ್ರೀತಿ ಪಡೆದುಕೊಂಡವರೇ ಮತ್ತೊಂದು ಸಂದರ್ಭದಲ್ಲಿ ಆ ಕಾಳಜಿಯನ್ನು ಮೆರೆಯುತ್ತಾರೆ ಅಂತೇನಲ್ಲ. ಆದರೆ ತುಂಬ ದುರ್ಭರ ಕ್ಷಣದಲ್ಲಿ ಎಲ್ಲಿಂದಲೋ ಅಂಥದೊಂದು ಸಹಾಯ ಒಲಿದು ಬರುತ್ತದೆ. ಒಳ್ಳೆಯತನಕ್ಕೆ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಸುಳ್ಳು ಎಂದೇ ಇಟ್ಟುಕೊಂಡರೂ ಅದರಿಂದ ನೀವು ಕಳೆದುಕೊಳ್ಳುವುದೇನಿಲ್ಲ. ಏಕೆಂದರೆ ಆ ಕ್ಷಣದ ನಿಮ್ಮ ಪ್ರೀತಿ- ಕಾಳಜಿಗಳಿಂದ ಜಗತ್ತನ್ನು ಸುಂದರವಾಗಿಸಿದ ಶ್ರೇಯಸ್ಸು ನಿಮ್ಮ ಖುಷಿಯ ಆಯಸ್ಸನ್ನಂತೂ ಹೆಚ್ಚಿಸುತ್ತದೆ. ಅಂಥ ದಿವ್ಯ ಆನಂದಕ್ಕಿಂತ ಹೆಚ್ಚಿನದು ಏನಿದೆ?
Subscribe , Follow on
Facebook Instagram YouTube Twitter X WhatsApp