ಭೂಮಂಡಲದಲ್ಲಿ ಅಸುರ ಶಕ್ತಿ ಪ್ರಬಲವಾಗಿ ಬೆಳೆದು ಸಜ್ಜನರಿಗೆ ಪೀಡೆ ನೀಡುತ್ತಿರುವುದನ್ನು ತಡೆಯಬೇಕು ಎಂದು ಎಲ್ಲ ದೇವತೆಗಳು ಬ್ರಹ್ಮನ ಬಳಿ ತೆರಳಿ ಪ್ರಾರ್ಥಿಸುತ್ತಾರೆ. ಬ್ರಹ್ಮನು ದೇವತೆಗಳ ಜತೆ ನಾರಾಯಣನ ಬಳಿ ತೆರಳಿ ಪ್ರಾರ್ಥಿಸುತ್ತಾನೆ.
ಭೂ ಲೋಕದಲ್ಲಿ ರಾಕ್ಷಸರ ಹಾವಳಿ ಹೆಚ್ಚಾಗಿದೆ. ಅಧರ್ಮ ತಾಂಡವವಾಡುತ್ತಿದೆ. ನೀನು ಅವತರಿಸಿ ಧರ್ಮ ಪ್ರತಿಷ್ಠಾಪಿಸಬೇಕು ಎಂದು ಪ್ರಾರ್ಥನೆ ಮಾಡುತ್ತಾರೆ. ದೇವತೆಗಳ ಪ್ರಾರ್ಥನೆಗೆ ಮನ್ನಿಸಿ ಭಗವಂತ ಶೇಷನ ಮೇಲಿಂದ ಎದ್ದು ಸಕಲ ದೇವತೆಗಳ ಮಧ್ಯೆ ಬಂದು ನಿಂತನು.
ಬ್ರಹ್ಮದೇವರು ಭಗವಂತನಿಗೆ ನಮಸ್ಕರಿಸಿ, ಪೂರ್ವದಲ್ಲಿ ನಾನು ವರುಣನಿಗೆ ಕೆಲ ಉತ್ತಮ ಗೋವುಗಳನ್ನು ಕೊಟ್ಟಿದ್ದೆ. ಆದರೆ ಕಷ್ಯಪನು ಗರ್ವದಿಂದ ನಾನು ಕೊಟ್ಟ ಗೋವುಗಳನ್ನು ಅಪಹರಿಸಿದನು. ಸುರಭಿಯ ಆಕರ್ಷಣೆ ಯಿಂದ ಪ್ರಚೋದಿತನಾಗಿ ಕಷ್ಯಪನು ಈ ಕೆಲಸ ಮಾಡಿದನೆಂದು ವರುಣನಿಂದಲೇ ಕೇಳಿದೆ. ನೀನು ಕ್ಷತ್ರಿಯನಾಗಿ ಹುಟ್ಟಿ ಗೋವಿನಿಂದಲೇ ಉಪಜೀವಿಸು ಎಂದು ನಾನು ಕಷ್ಯಪರಿಗೆ ಶಾಪ ಕೊಟ್ಟಿದ್ದೇನೆ. ಕ್ಷತ್ರಿಯನಾದವನಿಗೆ ಗೋಜೀವನ ನೀಚ ಕೆಲಸವೇ ಸರಿ ಎಂದು ಬ್ರಹ್ಮನು ಭಗವಂತನಿಗೆ ಹೇಳಿದ.
ಆ ಕಷ್ಯಪನೇ ಶೂರ ಎಂಬ ಯಾದವರ ಮನೆತನದಲ್ಲಿ ಹುಟ್ಟಿದ್ದಾನೆ. ಬಹಳಷ್ಟು ಗೋ ಸಂಪತ್ತು ಹೊಂದಿದ್ದಾನೆ. ಆ ಶೂರನ ಪುತ್ರನೇ ವಸುದೇವನು. ಅದಿತಿಯೇ ದೇವಕಿಯಾಗಿ ಅವನಿಗೆ ಹೆಂಡತಿಯಾಗಿದ್ದಾಳೆ. ಸುರಭಿಯು ರೋಹಿಣಿಯಾಗಿ ಮತ್ತೊಬ್ಬ ಹೆಂಡತಿಯಾಗಿದ್ದಾಳೆ. ಈಗ ನೀನು ಅಲ್ಲಿ ದೇವಕಿಯ ಮಗನಾಗಿ ಅವತರಿಸು. ದ್ರೋಣನಾಮಕ ವಸು ತನ್ನ ಹೆಂಡತಿಯಾದ ಧರಾದೇವಿ ಸಹಿತ ಅಲ್ಲಿಯೇ ಹುಟ್ಟಿದ್ದಾನೆ. ಆತನು ನಿನ್ನ ತಂದೆ ಯಾಗಬೇಕು ಎಂದು ತಪಸ್ಸು ಆಚರಿಸುತ್ತಿದ್ದಾನೆ. ನಿನ್ನ ಇಚ್ಛೆ ಫಲಿಸಲಿ ಎಂದು ನಾನು ಅವನಿಗೆ ವರವನ್ನು ಕೊಟ್ಟಿದ್ದೇನೆ. ಅವನೆ ನಂದ ನೆಂಬ ಹೆಸರಿಂದ ಹುಟ್ಟಿದ್ದಾನೆ. ಅವನ ಹೆಂಡತಿಯೇ ಯಶೋಧೆ. ಶೂರನಿಂದ ಸ್ವೀಕರಿಸಲ್ಪಟ್ಟ ವೇಶ್ಯೆಯಲ್ಲಿ ಹುಟ್ಟಿದ್ದರಿಂದ ಅವನು ಗೋಪಾಲಕನಾಗಿದ್ದಾನೆ.
ವಸುದೇವ, ದೇವಕಿಯರು ಕೂಡ ನೀನೆ ಮಗನಾಗಬೇಕು ಎಂದು ತಪಸ್ಸು ಮಾಡಿದ್ದಾರೆ. ಹೀಗಾಗಿ ಮೊದಲು ನೀನು ಅಲ್ಲಿ ಮೂಲಸ್ವರೂಪದಿಂದ ಪ್ರಕಟನಾಗು. ನಂತರ ಗೋಕುಲದಲ್ಲಿ ನಂದಗೋಪನ ಮನೆಗೆ ಹೋಗು ಎಂದು ಬ್ರಹ್ಮದೇವರು ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾರೆ.
ಬ್ರಹ್ಮನ ಮಾತನ್ನು ಮನ್ನಿಸಿದ ಭಗವಂತ ಎಲ್ಲ ದೇವತೆಗಳು ತಮ್ಮ ತಮ್ಮ ಯೋಗ್ಯತೆಗನುಗುಣವಾಗಿ ಭೂಲೋಕದಲ್ಲಿ ಜನ್ಮ ತಾಳಿ ಎಂದು ಹೇಳಿದನು.
ಶ್ರೀ ಹರಿಯ ಆಜ್ಞೆ ಯಂತೆ ದೇವತೆಗಳು ಅಲ್ಲಲ್ಲಿ ಹುಟ್ಟಿದರು. ಕುಬೇರನು ಮಾತ್ರ ತಾನು ದೇವತೆಯಾದರೂ ನರಕಾಸುರನ ಮಗನಾಗಿ ಜನಿಸಿದನು.
ಪಾಪಿಷ್ಟನಾದ ನರಕಾಸುರನು ರುದ್ರದೇವರು ಕುಬೇರನಿಗೆ ಕೊಟ್ಟಿದ್ದ ಸುಪ್ರತೀಕ ಎಂಬ ಆನೆಯನ್ನು ಅಪಹರಿಸಿದ್ದನು. ಅದನ್ನು ಮರಳಿ ಪಡೆಯುವ ಉದ್ದೇಶದಿಂದ ಕುಬೇರನು ನರಕಾಸುರನ ಮಗನಾಗಿ ಜನಿಸಿದ್ದಾನೆ. ಅವನೇ ಭಗದತ್ತನು.
ಆ ಭಗದತ್ತನಿಗೆ ಮಹಾಸುರವೇಶವಿತ್ತು. ಜತೆಯಲ್ಲಿ ರುದ್ರಾವೇಶವೂ ಇತ್ತು. ಈ ಎರಡು ಕಾರಣದಿಂದ ಅವನು ಬಲಿಷ್ಠನಾಗಿದ್ದನು. ದೇವೇಂದ್ರನ ಶಿಷ್ಯನು ಹೌದು. ತಂದೆ ನರಕಾಸುರನು ಹತನಾದ ನಂತರ ಅವನು ಸ್ವಧರ್ಮದಲ್ಲಿ ನಿರತನಾದನು. ಅವನಲ್ಲಿನ ಅಸುರಾವೇಶವು ಕಳೆದು ಹೋಯಿತು.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter WhatsApp