-->

ಇಂದ್ರ -ಬ್ರಹ್ಮರ‌ ಸಂವಾದ , ಮಹಾಭಾರತ ಸಾರ

ಇಂದ್ರ ಮತ್ತು ಬ್ರಹ್ಮದೇವರ ನಡುವೆ ನಡೆದ ಸಂವಾದದ ಕುರಿತು ಭೀಷ್ಮರು ಧರ್ಮರಾಜನಿಗೆ ಹೇಳುತ್ತಾರೆ.
ಚತುರ್ಮುಖನೆ ಗೋ ಲೋಕದ ಜನರು ತಮ್ಮದೇ ಆದ ತೇಜಸ್ಸಿನಿಂದ  ಸ್ವರ್ಗ ಲೋಕದ ಜನರ ಕಾಂತಿಯನ್ನು  ತಿರಸ್ಕರಿಸಿ ಹೋಗುತ್ತಿರುವುದನ್ನು ನಾನು ಕಂಡಿದ್ದೇನೆ. ಈ ವಿಷಯದಲ್ಲಿ ನನಗೊಂದು ಸಂದೇಹವಿದೆ ಎಂದು ಇಂದ್ರನು ಕೇಳುತ್ತಾನೆ.
ಗೋ ದಾನ ಮಾಡುವವರು ಅವಸಾನದ ನಂತರ ವಾಸ ಮಾಡುವ ಲೋಕಗಳು ಎಂಥವು. ಆ ಲೋಕಗಳು ಹೇಗಿವೆ. ಅಲ್ಲಿ ಎಂಥ ಫಲಗಳು ಸಿಗುತ್ತವೆ, ಅಲ್ಲಿಯ ಸರ್ವಶ್ರೇಷ್ಠವಾದ ಗುಣ ಯಾವುದು, ಗೋ ದಾನ ಮಾಡುವವರು ಎಲ್ಲ ಚಿಂತೆಯಿಂದ ಮುಕ್ತರಾಗಿ ಅಲ್ಲಿಗೆ ಹೇಗೆ ಹೋಗುತ್ತಾರೆ ಎಂಬುದನ್ನು ತಿಳಿಸು ಎಂದು ಇಂದ್ರ ಪ್ರಾರ್ಥನೆ ಮಾಡುತ್ತಾನೆ. ಗೋದಾನ ಮಾಡಿದವರು ಅಲ್ಲಿ ಎಷ್ಟು ಕಾಲ ಸುಖಭೋಗ ಅನುಭವಿಸುತ್ತಾರೆ, ಬಹುದಾನಿಯು ಅಲ್ಪ ದಾನಿ ಮತ್ತು ಅಲ್ಪದಾನಿಯೂ ಬಹುದಾನಿಗೆ ಹೇಗೆ ಸಮಾನನಾಗುತ್ತಾನೆ, ಗೋದಾನದಲ್ಲಿ ಎಂಥ ದಕ್ಷಿಣೆ ಶ್ರೇಷ್ಠವೆನಿಸುತ್ತದೆ ಈ ಎಲ್ಲ ವಿಷಯಗಳ ಕುರಿತು ತಿಳಿಸಿಕೊಡು ಎಂದು ಕೇಳುತ್ತಾನೆ.
ಆಗ ಬ್ರಹ್ಮದೇವರು ಹೇಳುತ್ತಾರೆ, ಅನೇಕ ಪ್ರಕಾರವಾದ ಗೋಲೋಕಗಳಿವೆ.ಆ ಲೋಕಗಳನ್ನು ನಿನಗೆ ನೋಡಲಾಗದು.ನಾನು ಆ ಲೋಕಗಳನ್ನು ನೋಡಬಲ್ಲೆ ಮತ್ರು ಪತಿವ್ರತಾ ಸ್ತ್ರೀಯರು ನೋಡಬಲ್ಲರು.‌ಉತ್ತಮವಾದ ಅನುಷ್ಠಾನ ಮಾಡುವ ಋಷಿಗಳು, ಸಾತ್ವಿಕ ಬುದ್ದಿಯುಳ್ಳ ಬ್ರಾಹ್ಮಣರು ಆ ಲೋಕಗಳಿಗೆ ಹೋಗಬಲ್ಲರು.
ಉತ್ತಮವಾದ ವ್ರತ ಆಚರಿಸುವ ಯೋಗಿಗಳು ಶರೀರವನ್ನು ಬಿಟ್ಟು ಮೋಕ್ಷಕ್ಕೆ ಹೋಗುವ ಸಮಯದಲ್ಲಿ ಆ ಲೋಕಗಳನ್ನು ಅಲ್ಲಿಂದಲೇ ನೋಡುವರು.

ಇಂದ್ರ -ಬ್ರಹ್ಮರ‌ ಸಂವಾದ , ಮಹಾಭಾರತ ಸಾರ
ಆ ಗೋ ಲೋಕವು ಕಲಾತೀತವಾದ ಲೋಕವಾಗಿದೆ. ಅಲ್ಲಿ ವಾಸಿಸುವವರಿಗೆ ವೃದ್ದಾಪ್ಯವೇ ಬರುವುದಿಲ್ಲ. ಅಲ್ಲಿ ಯಾರಿಗೂ ಯಾವರೀತಿಯ ಅಶುಭ ವಾಗುವುದಿಲ್ಲ. ರೋಗಗಳ ಬಾಧೆ ಇರುವುದಿಲ್ಲ.ಅಲ್ಲಿನ ಗೋವುಗಳು ಸಂಕಲ್ಪ ಮಾತ್ರದಿಂದಲೇ ಎಲ್ಲ ಕಾಮನೆಗಳನ್ನು ಪಡೆದುಕೊಂಡು ಭೋಗಿಸುತ್ತವೆ. ಅದೊಂದು ಮನಮೋಹಕ ಲೋಕವಾಗಿದೆ. ಶೋಕ, ದುಃಖ, ಕಾಯಕ್ಲೇಶಗಳನ್ನು  ಸಹಿಸುವ ಸಹನಾಶೀಲ, ದಯಾಳುಗಳಾದ , ಗುರುಜನ ಆಜ್ಞೆ ಯಂತೆ ವರ್ತಿಸುವ ಅಹಂಕಾರ, ಮಮಕಾರಗಳಿಂದ ವಿಹಿತರಾದ ಮಾನವ ಶ್ರೇಷ್ಠರು ಅಂಥ ಲೋಕಕ್ಕೆ ಹೋಗುತ್ತಾರೆ ಎಂದು ಬ್ರಹ್ಮದೇವರು ಇಂದ್ರನಿಗೆ ಗೋ ಲೋಕದ ಮಹಿಮೆಯನ್ನು ಹೇಳಿದರು.
 

- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)

Terms | Privacy | 2024 🇮🇳
–>