*ಮಾನವನ ಬದುಕಿನಲ್ಲಿ ಅನೇಕ ಬಾರಿ ಅನೇಕ ತರಹದ ಅಪ್ರಿಯ, ಅಸಹ್ಯ ಘಟನೆಗಳು ಜರಗುವುದಿದೆ. ಆಗ ಶಾಂತಿ ಪ್ರೇಮಿಗಳು ಅಂಥ ಪ್ರಸಂಗದಲ್ಲಿ ಅಹಿಂಸಾವಾದಿಗಳಾಗಿ,* *ಶಾಂತಿಯಿಂದ ಸಹಿಸಿಕೊಳ್ಳಬೇಕು. ಅಶಾಂತರಾಗಿ ಹಿಂಸಾಪ್ರಿಯರಂತೆ* *ವಿರೋಧಿಸಬಾರದು ಎಂದು ಅಹಿಂಸಾ ವಾದಿಗಳು ವಾದಿಸುವುದು,* *ಉಪದೇಶಿಸುವುದು ಉಂಟು. ಆದರೆ ಹಿಂಸಾ ಪ್ರೇಮಿಗಳ ಅನ್ಯಾಯ, ಅತ್ಯಾಚಾರಗಳನ್ನು ಹೇಗೆ ಮತ್ತು ಏಕೆ* *ಪ್ರತಿಭಟಿಸಬೇಕೆಂಬುದನ್ನು ನಿರೂಪಿಸುವಂತಹ ಸ್ವಾಮಿ ವಿವೇಕಾನಂದರ ಬದುಕಿನ ಒಂದು ಮಾರ್ಗದರ್ಶಕ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ.*
*ಇದು ಬ್ರಿಟಿಷ್ ಆಡಳಿತ ಕಾಲದ ಪ್ರಸಂಗ. ಸ್ವಾಮಿ ವಿವೇಕಾನಂದರು ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರು ಕುಳಿತಿದ್ದ* *ಕಂಪಾರ್ಟ್‌ಮೆಂಟ್‌ನಲ್ಲಿ ಒಬ್ಬ ಭಾರತೀಯ ಮಹಿಳೆಯೂ ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಳು. ಮುಂದಕ್ಕೆ ಒಂದು* *ಸ್ಟೇಶನ್‌ನಲ್ಲಿ ಇಬ್ಬರು ಆಂಗ್ಲ ಆಧಿಕಾರಿಗಳು ಬಂದು ಅದೇ* *ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಎದುರಿನ ಸೀಟಿನಲ್ಲಿ ಕುಳಿತರು. ಆಂಗ್ಲರ ಆಡಳಿತ ಕಾಲವಾದ್ದರಿಂದ* *ಭಾರತೀಯರೊಂದಿಗೆ ಅಸಭ್ಯ ವ್ಯವಹಾರ ಮಾಡುವುದು* *ಸಹಜವೆಂಬಂತೆ ಆ ಮಹಿಳೆಯೆದುರು ವರ್ತಿಸತೊಡಗಿದರು.*
*ಮೊದಲಿಗೆ ಆ ಮಹಿಳೆಯ ಜತೆಗಿದ್ದ ಮಗುವಿನ* *ಕಿವಿಯನ್ನು ಹಿಂಡುವುದು, ಕೆನ್ನೆಯನ್ನು ಚಿವುಟುವುದು ಮೊದಲಾಗಿ ಕೀಟಲೆ ಮಾಡತೊಡಗಿದರು.* *ಇದರಿಂದ ಬೇಸರಗೊಂಡ ಮಹಿಳೆಯು ಮುಂದಿನ ಸ್ಟೇಶನ್ ಬಂದಾಗ, ಬೇರೆ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಒಬ್ಬ ಭಾರತೀಯ ಪೊಲೀಸ್ ಅಧಿಕಾರಿಗೆ ದೂರು ನೀಡಿದಳು. ಆ ದೂರಿನಂತೆ ಆ ಪೊಲೀಸ್ ಅಧಿಕಾರಿ ಬಂದರೂ ದೂರು ಆಂಗ್ಲರ ವಿರುದ್ಧ ಎಂದು ಗೊತ್ತಾದಾಗ, ಆತ ಏನೂ ಹೇಳದೆ ಹೊರಟು ಹೋದರು. ಇದನ್ನು ಕಂಡ ಆ ಆಂಗ್ಲ ಅಧಿಕಾರಿಗಳು ಮತ್ತೆ ಕೀಟಲೆ ಆರಂಭಿಸಿದರು.*
*ಇದೆಲ್ಲವನ್ನೂ ಬಹು ಹೊತ್ತಿನಿಂದ ಗಮನಿಸುತ್ತಿದ್ದ ವಿವೇಕಾನಂದರು ಈ ಆಂಗ್ಲ ಅಧಿಕಾರಿಗಳಿಗೆ ಸೂಕ್ತ ಪಾಠ ಕಲಿಸಬೇಕೆಂದು* *ನಿರ್ಧರಿಸಿದರು. ತಕ್ಷ ಣ ತಾವು ಕುಳಿತಲ್ಲಿಂದ ಎದ್ದು, ಆಂಗ್ಲ ಅಧಿಕಾರಿಗಳ ಎದುರುಗಡೆ ನಿಂತುಬಿಟ್ಟರು.*
*ಅವರ ಬಲಿಷ್ಠ ಕಾಯವನ್ನು ವೀಕ್ಷಿಸಿದ ಆಂಗ್ಲರು ಗಾಬರಿಯಾದರು. ಮೊದಲಿಗೆ* *ವಿವೇಕಾನಂದರು ಅವರಿಬ್ಬರ ಕಣ್ಣುಗಳನ್ನು ದಿಟ್ಟಿಸಿ ನೋಡಿದರು. ಬಳಿಕ ಎಡಗೈಯ ಶರ್ಟ್‌ನ ತೋಳನ್ನು ಮೇಲಕ್ಕೆ* *ಸರಿಸಿದರು ಮತ್ತು ಕೈಯನ್ನು ತಿರುಗಿಸಿ ಅವರಿಗೆ ತಮ್ಮ ಬಾಹುಗಳ ಸುಪುಷ್ಟವೂ, ಬಲಿಷ್ಠವೂ ಆದ ಮಾಂಸ ಖಂಡಗಳನ್ನು ತೋರಿಸಿದರು.* *ವಿವೇಕಾನಂದರ ಈ ನಡವಳಿಕೆಯನ್ನು ಕಂಡು ಇಬ್ಬರೂ ಆಂಗ್ಲ ಅಧಿಕಾರಿಗಳು* *ಗಾಬರಿಯಾದರು ಮತ್ತು ಮುಂದಿನ ಸ್ಟೇಶನ್ ಬಂದೊಡನೆ ಇಳಿದು ಇನ್ನೊಂದು* *ಕಂಪಾರ್ಟ್‌ಮೆಂಟ್‌ಗೆ ಹತ್ತಿಕೊಂಡರು.*
*ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳನ್ನು ಅರಿತಿದ್ದ ಧೀಮಂತ ಪುರುಷರಾಗಿದ್ದು ತಮ್ಮ ಪ್ರವಚನಗಳಲ್ಲಿ ಈ ಉದಾಹರಣೆಯನ್ನು ನೀಡುತ್ತಿದ್ದರು. ಅವರು ಹಿಂಸೆಯ ಪರವಾಗಿರಲಿಲ್ಲ. ಆದರೆ* *ಹಿಂಸಾತ್ಮಕವಾಗಿರುವವರನ್ನು ಎದುರಿಸಲು* *ಕೆಲವೊಮ್ಮೆ ದೃಢವಾದ ಶಾರೀರಿಕ ನಿಲುವುಗಳೇ ಬೇಕು. ದೃಢವಾದ ದೇಹವನ್ನೂ* *ವಿವೇಕಯುತವಾದ ಪ್ರಜ್ಞೆಯನ್ನೂ ಸ್ವಾಮಿ ವಿವೇಕಾನಂದರು* *ಪ್ರತಿಪಾದಿಸುತ್ತಿದ್ದರು. ನಾವು ಅನ್ಯಾಯವನ್ನು* *ಪ್ರತಿಭಟಿಸದೆ, ಸಹಿಸುತ್ತಾ ಮುನ್ನಡೆದರೆ ಅನ್ಯಾಯ ಮಾಡುವವರು ಮತ್ತಷ್ಟು ಬಲಿಷ್ಠರಾಗುತ್ತಾರೆ.* *ಆದ್ದರಿಂದ ಅಧರ್ಮ, ಅನೀತಿ, ಅನ್ಯಾಯ ಮಾಡುವವರನ್ನು ಪ್ರತಿಭಟಿಸುವುದೂ ಕೂಡ ನ್ಯಾಯ, ನೀತಿ, ಧರ್ಮಗಳ ರಕ್ಷಣೆಯೇ ಆಗಿದೆ ಎಂಬುದನ್ನು* *ಮರೆಯುವಂತಿಲ್ಲ.*
Subscribe , Follow on
Facebook Instagram YouTube Twitter X WhatsApp