ಬಾಹ್ಲಿಕರಾಜನ ಪುತ್ರಿ ರೋಹಿಣಿಯನ್ನು ಕೂಡ ವಸುದೇವನು ಮದುವೆಯಾಗಿದ್ದ. ಆ ರೋಹಿಣೆಯೇ ಮೂಲದಲ್ಲಿ ಸುರಭಿ. ವಸುದೇವನ ನಿಯತ ಪತ್ನಿ.ಕಾಶೀ ರಾಜನ ಮಗಳು ದಿತಿಯನ್ನು ಪುತ್ರಿಕಾ ಪುತ್ರಕ ನ್ಯಾಯದಿಂದ ವಸುದೇವನು ಮದುವೆಯಾಗಿದ್ದನು. ಕರವೀರ ಪುರ (ಕೊಲ್ಹಾಪುರ) ರಾಜನ ಮಗಳು ದನು ಎಂಬುವಳನ್ನೂ ವಸುದೇವನು ತನ್ನ ಧರ್ಮ ಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ದಿತಿ ಮತ್ತು ದನು ಇವರಿಬ್ಬರು ಮೂಲದಲ್ಲಿ ವಸುದೇವನ ನಿಯತ ಪತ್ನಿಯರೆ.ಪುತ್ರಿಕಾಪುತ್ರಕ ನ್ಯಾಯ ಪದ್ದತಿ ಎಂದರೆ, ಒಬ್ಬರಾಜನಿಗೆ ಪುರುಷ ಸಂತಾನವಿಲ್ಲದಾಗ ತನ್ನ ಮಗಳ ಹೊಟ್ಟೆಯಲ್ಲಿ ಜನಿಸುವ ಗಂಡು ಮಗು ತನಗೆ ಕೊಡಬೇಕು ಎಂದು ಮಗಳ ಮದುವೆ ಕಾಲದಲ್ಲಿ ಮಾಡಿಕೊಳ್ಳುವ ಒಪ್ಪಂದಕ್ಕೆ ಪುತ್ರಿಕಾಪುತ್ರಕ ಪದ್ಧತಿ ಎನ್ನುವರು. ಈ ಪದ್ಧತಿ ಅಂದಿನ ಕಾಲದಲ್ಲಿ ಜಾರಿಯಲ್ಲಿತ್ತು.ಮಗಳ ಮಗನನ್ನು ತನ್ನ ಮಗನೆಂದು ತಿಳಿಯುವ ಪದ್ಧತಿ ಅದು.
ಹಿಂದೆ ವಿಷ್ಣುನೇ ಇಲ್ಲ ನಾನೆ ವಿಷ್ಣು ಎಂದು ಹೇಳಿಕೊಳ್ಳುತ್ತಿದ್ದ ಪಾಪಿಷ್ಠನಾದ ವೇನನೇ ಇಂದು ಕಾಶಿರಾಜನ ಮಗಳಾದ ದಿತಿಯ ಹೊಟ್ಟೆಯಲ್ಲಿ ಪೌಂಡ್ರಿಕ ವಾಸುದೇವನಾಗಿ ವಸುದೇವನಿಗೆ ಮಗನಾಗಿ ಹುಟ್ಟಿದ್ದಾನೆ. ಇಲ್ಲೂ ಕೂಡ ನಾನೆ ವಿಷ್ಣು ಎಂದು ಅವನ ವಾದ.ಒಳ್ಳೆ ಮನೆತನದಲ್ಲಿ ಹುಟ್ಟಿದ್ದರೂ ಅವನು ಹಿಂದಿನ ಜನ್ಮದ ಗುಣವನ್ನು ಬಿಡಲಿಲ್ಲ. ತಾಮಸ ಜೀವಿಯು ಎಂದೂ ಸಾತ್ವಿಕನಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿಕೊಡುತ್ತದೆ.
ಮಧು ಎಂಬ ದೈತ್ಯನ ಮಗನೇ ಧುಂದುವು. ಅವನನ್ನು ಶ್ರೀ ಹರಿಯು ಹಿಂದೆಯೇ ಕೊಂದಿದ್ದಾನೆ. ಕರವೀರ ಪುರದ ರಾಜನ ಮಗಳಾದ ದನುವಿನಲ್ಲಿ ಇಂದು ಅವನೇ ಸ್ವಗಾಲ ವಾಸುದೇವನಾಗಿ ವಸುದೇವನ ಮಗನಾಗಿ ಜನಿಸಿದ್ದಾನೆ. ಈ ಇಬ್ಬರ ಮಕ್ಕಳ ನಂತರ ವಸುದೇವನು ದೇವಕಿಯ ಜತೆ ಮದುವೆಯಾದನು.ತಾಯಿಯ ಜತೆ ಇಲ್ಲವೆಂಬ ಕಾರಣದಿಂದ ಈ ಇಬ್ಬರು ಪುತ್ರರು ಯಾದವರಿಗೆ ಸದಾ ವೈರಿಗಳಾಗಿದ್ದರು. ಉಳಿದವರಲ್ಲಿ ವಸುದೇವನು ಉತ್ತಮ ಮಕ್ಕಳನ್ನು ಪಡೆದಿದ್ದಾನೆ.
ಯಾವ ಯಾವ ದೇವತೆಗಳು ಪೃಥ್ವಿಯಲ್ಲಿ ಅವತರಿಸಿದ್ದಾರೋ ಅವರೆಲ್ಲರೂ ವ್ಯಾಸಾವತಾರಿಯಾದ ಶ್ರೀಹರಿಯ ಶಿಷ್ಯರಾದರು. ಎಲ್ಲರು ತಮ್ಮ ತಮ್ಮ ಯೋಗ್ಯತೆಗನುಸಾರವಾಗಿ ಶ್ರೀ ಹರಿಯ ಗುಣಗಳನ್ನು ತಿಳಿದುಕೊಂಡಿದ್ದರು. ಮರೀಚಿ ಋಷಿಗಳ ಮಕ್ಕಳು ಆರು ಜನರು ಮುನಿಗಳಾಗಿಯೇ ಜನಿಸಿದರು. ನಾವೆ ಸುಂದರರು ಎಂಬ ಗರ್ವ ಅವರಲ್ಲಿತ್ತು. ಕೃಷನಾದ ದೇವಕ ಋಷಿಗೆ ಪರಿಹಾಸ್ಯ ಮಾಡಿದರು. ಆಗ ದೇವಕ ಋಷಿಯು ನೀವೆಲ್ಲರೂ ದೈತ್ಯರಾಗಿರಿ ಎಂದು ಶಾಪ ಕೊಟ್ಟರು. ಆ ಶಾಪದ ಪರಿಣಾಮವಾಗಿ ಅವರೆಲ್ಲರೂ ಕಾಲನೇಮಿ ಎಂಬ ಅಸುರನಲ್ಲಿ ಹುಟ್ಟಿದರು. ಅವರೆಲ್ಲರು ಅವಧ್ಯರಾಗಬೇಕು ಎಂದು ತಪಸ್ಸು ಮಾಡಿದರು.
ದೊಡ್ಡವರಿಗೆ, ಜ್ಞಾನಿ ಗಳಿಗೆ ಅಪಹಾಸ್ಯ ಮಾಡಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಾಭಾರತ ಎಚ್ಚ ರಿಕೆ ನೀಡಿದೆ.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ {(9886465925)
Subscribe , Follow on
Facebook Instagram YouTube Twitter X WhatsApp