-->

ಮನುಷ್ಯತ್ವ ಮರೆಯದಿರೋಣ , ಸಣ್ಣ ಕಥೆ

ಒಂದಾನೊಂದು ಕಾಲದಲ್ಲಿ ಒಬ್ಬ ಮಹಾಕೋಪಿಷ್ಟ ಜಮೀನ್ದಾರನಿದ್ದ. ತನಗೆ ಯಾರಾದರೂ ಎದುರಾಡಿದರೆ, ತಪ್ಪು ಮಾಡಿದರೆ ಅವರನ್ನು ತನ್ನ ಮನೆಯ ನಾಯಿಗಳಿಗೆ ಆಹಾರವಾಗಿ ಕೊಟ್ಟು ಸಾಯಿಸಿಬಿಡುವುದು ಅವನ ವಿಲಕ್ಷಣ ಪರಿಪಾಠವಾಗಿತ್ತು. ಅವನ ನಾಯಿಗಳೂ ಅಷ್ಟೇ ಕ್ರೂರವಾಗಿದ್ದವು, ಯಾರಾದರೂ ಸಿಕ್ಕಿದರೆ ಸಾಕು ಸೀಳಿ ತಿಂದುಬಿಡುತ್ತಿದ್ದವು. ಜಮೀನ್ದಾರನಿಗೊಬ್ಬ ನಂಬಿಕಸ್ತ ಸಹಾಯಕನಿದ್ದ. ಅವನೋ ಸಾತ್ವಿಕ ಗುಣದವನು. ತನ್ನೊಡೆಯನ ಕ್ರೌರ್ಯವನ್ನು ಕಂಡು ಆತ ರೋಸಿಹೋಗಿದ್ದ. ಆದರೇನು ಮಾಡುವುದು? ಆಡುವಂತಿರಲಿಲ್ಲ, ಅನುಭವಿಸುವಂತಿರಲಿಲ್ಲ.

ಮನುಷ್ಯತ್ವ ಮರೆಯದಿರೋಣ , ಸಣ್ಣ ಕಥೆ


ಒಮ್ಮೆ ಯಾವುದೋ ಸಣ್ಣ ಪ್ರಮಾದವಾಗಿಹೋಯಿತು. ಆ ಸಹಾಯಕ ಒಡೆಯನ ವಿರುದ್ಧವೇ ಮಾತಾಡುವ ಸ್ಥಿತಿ ನಿರ್ವಣವಾಯಿತು. ವಾಡಿಕೆಯಂತೆ ಜಮೀನ್ದಾರ ಇವನಿಗೂ ಶಿಕ್ಷೆ ವಿಧಿಸಿದ, ನಾಯಿಗಳನ್ನು ಕರೆತರುವಂತೆ ಆಳುಗಳಿಗೆ ತಿಳಿಸಿದ. ಆಗ ಸಹಾಯಕ, ‘ಸ್ವಾಮೀ, ನಾನೀಗ ನಿಮ್ಮ ನಾಯಿಗಳಿಗೆ ಆಹಾರವಾಗುತ್ತೇನೆ ಎಂಬುದು ಗೊತ್ತು. ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ’ ಎಂದ. ‘ಏನದು ಬೇಗ ಹೇಳು’ ಎಂದು ಜಮೀನ್ದಾರ ದರ್ಪ ತೋರಿದ. ‘ನಾನು ಹತ್ತಾರು ವರ್ಷಕಾಲ ಅನನ್ಯ ಶ್ರದ್ಧಾಭಕ್ತಿಗಳಿಂದ ತಮ್ಮ ಸೇವೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಕೊಡುಗೆಯನ್ನೇನೂ ನಾನು ಬೇಡುವುದಿಲ್ಲ. ಆದರೆ ಇನ್ನೂ ಹತ್ತು ದಿನಗಳ ಕಾಲ ಬದುಕುವುದಕ್ಕೆ ದಯವಿಟ್ಟು ನನಗೆ ಅವಕಾಶ ಮಾಡಿಕೊಡಬೇಕು’ ಎಂದು ಸಹಾಯಕ ಬಿನ್ನವಿಸಿಕೊಂಡ. ಇದೆಂಥ ವಿಚಿತ್ರ ಬೇಡಿಕೆ ಎಂದು ಅಚ್ಚರಿಗೊಂಡರೂ, ಇನ್ನೊಂದು ಹತ್ತು ದಿನ ತಾನೇ? ಆಮೇಲೆ ಹೇಗೂ ಸಾಯುತ್ತಾನೆ ಎಂಬ ಎಣಿಕೆಯೊಂದಿಗೆ ಜಮೀನ್ದಾರ ಸಹಾಯಕನಿಗೆ ಬೇರೊಂದು ಜಾಗದಲ್ಲಿ ಇರುವುದಕ್ಕೆ ವ್ಯವಸ್ಥೆ ಮಾಡಿ, ಅವನ ಮೇಲೊಂದು ಕಣ್ಣಿಟ್ಟಿರುವಂತೆ ಆಳುಗಳಿಗೆ ಸೂಚಿಸಿದ. ಮರುದಿನದಿಂದ ಸಹಾಯಕನ ದಿನಚರಿಯೇ ಬದಲಾಯಿತು. ಬೆಳಗಾಗೆದ್ದು ನಾಯಿಗಳಿಗೆ ಆಹಾರ ನೀಡುತ್ತಿದ್ದ, ಮೈದಡವಿ ಮುದ್ದಿಸುತ್ತಿದ್ದ, ಸ್ನಾನಮಾಡಿಸಿ ಆಟವಾಡಿಸುತ್ತಿದ್ದ. ಹೀಗೆ ದಿನವಿಡೀ ಅವುಗಳ ಜತೆ ಕಾಲ ಕಳೆಯತೊಡಗಿದ. ಆ ನಾಯಿಗಳೂ ಇವನ ಆಪ್ತತೆಯನ್ನು ಆನಂದಿಸುತ್ತಿದ್ದವು. 11ನೆಯ ದಿನ ಬಂದಿತು. ಅದು ಸಹಾಯಕನಿಗೆ ಶಿಕ್ಷೆ ಜಾರಿಯಾಗುವ ದಿನ. ನಾಯಿಗಳನ್ನು ಕರೆತಂದು ಸಹಾಯಕನ ಸಮೀಪದಲ್ಲಿ ಬಿಡುವಂತೆ ಜಮೀನ್ದಾರನ ಆಜ್ಞೆಯಾಯಿತು. ಹೀಗೆ ಬಂದ ನಾಯಿಗಳು ಆತನನ್ನು ಸೀಳಿ ತಿಂದೇಬಿಡುತ್ತವೆ ಎಂದು ನಿರೀಕ್ಷಿಸಿದ್ದ ಜಮೀನ್ದಾರನಿಗೆ ಅಚ್ಚರಿ ಕಾದಿತ್ತು. ಸಹಾಯಕನನ್ನು ಸುತ್ತುವರಿದ ನಾಯಿಗಳು ಪ್ರೀತಿಯಿಂದ ಅವನ ಕಾಲನ್ನು ನೆಕ್ಕಲು ಶುರುಮಾಡಿದವು. ಆತ ಕೂಡ ಮಮಕಾರದಿಂದ ಅವನ್ನು ಮುದ್ದಿಸತೊಡಗಿದ. ಈ ದೃಶ್ಯ ಕಂಡು ಗೊಂದಲಗೊಂಡ ಜಮೀನ್ದಾರನನ್ನು ಕುರಿತು ಸಹಾಯಕ ಹೀಗೆಂದ- ‘ಸ್ವಾಮೀ, ಇಷ್ಟು ವರ್ಷ ನಿಮ್ಮ ಸೇವೆ ಮಾಡಿದೆ, ಆದರೆ ನನಗೆ ಸಿಕ್ಕ ಪ್ರತಿಫಲ ಸಣ್ಣ ಪ್ರಮಾದಕ್ಕೆ ಮರಣದಂಡನೆ; ಆದರೆ ಈ ನಾಯಿಗಳನ್ನು ನಾನು ಪ್ರೀತಿಸಿ ಆರೈಕೆ ಮಾಡಿದ್ದು ಅನ್ನವಿಟ್ಟಿದ್ದು ಹತ್ತೇ ದಿನ. ಪರಿಣಾಮ? ನನಗೆ ಸಿಕ್ಕಿದ್ದು ಜೀವದಾನ. ಈಗ ಹೇಳಿ, ಮನುಷ್ಯರಾಗಿ ಹುಟ್ಟಿ ಮನುಷ್ಯತ್ವವನ್ನು ಮರೆತು ಪ್ರಾಣಿಯಾಗಿ ಬದುಕುವುದು ಮೇಲೋ ಅಥವಾ ಪ್ರಾಣಿಯಾದರೂ ಒಳ್ಳೆಯತನದಿಂದ ಉಪಕಾರ ಸ್ಮರಣೆಯಿಂದ ಬದುಕುವುದು ಮೇಲೋ?’. ತಪ್ಪಿನ ಅರಿವಾಗಿ ಜಮೀನ್ದಾರ ತಲೆತಗ್ಗಿಸಿದ, ಸಹಾಯಕನಲ್ಲಿ ಕ್ಷಮೆ ಕೋರಿದ

–>