-->

ಸಗಣಿ ಉಂಡೆ ಒಂದು ಸುಂದರವಾದ ನೀತಿಕಥೆ

ಬಹಳ ಕಾಲದ ಹಿಂದೆ ಭೂಲೋಕದಲ್ಲಿ ಒಂದು ರಾಜ್ಯವನ್ನು ಒಬ್ಬ ಒಳ್ಳೆಯ ರಾಜ ಆಳುತ್ತಿದ್ದ.  ದೇವರ್ಷಿ ನಾರದರು ಅವನಿಗೆ ಉತ್ತಮ ಗತಿ ಕೊಡಿಸಲು  ಆಲೋಚನೆ ಮಾಡಿ ಅರಮನೆಗೆ ಬಂದರು.  ಅವನು ನಾರದರಿಗೆ ತಮ್ಮ ಆದರಾತಿಥ್ಯ ಸ್ವೀಕರಿಸಿ ಭೋಜನಾದಿಗಳನ್ನು ಮಾಡಿಕೊಂಡು ತಮಗೂ ಹಾಗೂ ತಮ್ಮ ರಾಜ್ಯಕ್ಕೆ ಆಶೀರ್ವಾದ ಮಾಡಬೇಕು ಎಂದು ಕೋರಿದ.ಅದಕ್ಕೆ ನಾರದರು ಒಂದು ನಿಬಂಧನೆ ಹಾಕಿದರು, ಅದೇನೆಂದರೆ ಊಟ ಮಾಡಿದ ಬಳಿಕ ರಾಜ ಅವರಿಗೆ ತೃಪ್ತಿ ಆಗಿ ಸಾಕು ಇನ್ನು ತಾಂಬೂಲ ಬೇಡ ಎನ್ನುವವರೆಗೂ ಎಲೆ ಅಡಿಕೆ  ಹಾಕಿ ಕೊಳ್ಳಲು ಸಿದ್ಧಪಡಿಸಿ ಕೊಡಬೇಕು.  ಅದಕ್ಕೆ ರಾಜ ಸಂತೋಷದಿಂದ ಒಪ್ಪಿ ನಾರದರ ಸೇವೆಗೆ ಮುಂದಾದರು.


ಪೂಜಾದಿ ಭೋಜನಾದಿಗಳನ್ನು ಮುಗಿದ ಬಳಿಕ ಅವರು ಒಪ್ಪಂದದ ಪ್ರಕಾರ ತಾಂಬೂಲ ಸೇವನೆಗೆ ಕುಳಿತರು. ರಾಜ ಮುಂಜಾಗ್ರತೆ ವಹಿಸಿ ಬುಟ್ಟಿಗಟ್ಟಲೆ ವೀಳ್ಯದೆಲೆ ,ಸಾಕಷ್ಟು ಅಡಿಕೆ,  ತಾಂಬೂಲಕ್ಕೆ ಬೇಕಾದ ಎಲ್ಲಾ ರೀತಿಯ ಸಾಮಗ್ರಿಗಳನ್ನು  ಸಿದ್ಧಪಡಿಸಿ ಆಹ್ವಾನ ನೀಡಿದ ನಂತರ ಅವರು ಶ್ರೀ ಹರಿಯ ಸ್ಮರಿಸಿ ತಾಂಬೂಲ ಮೆಲ್ಲಲು ಶುರು ಮಾಡಿದರು, ರಾಜ ಬಹಳ ಶ್ರದ್ಧೆ ಮತ್ತು ಭಕ್ತಿ ಭಾವದಿಂದ ಮಡಸಿ ಕೊಡುವುದು, ಅದನ್ನು ನಾರದರು ನಗು ನಗುತ್ತಾ ತಿನ್ನುವುದು ಹೀಗೆ ಸುಮಾರು ಎರಡು ಮೂರು ಗಂಟೆಗಳ ಕಾಲ ನಡೆದರೂ ನಾರದರು ಸಾಕು ಅನ್ಲಿಲ್ಲ , ರಾಜ ಕೊಡುವುದು ನಿಲ್ಲಿಸಲಿಲ್ಲ ಹೀಗೇ ಮತ್ತೆ  ಮೂರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ನಡೆಯುತ್ತಲೇ ಇದೆ. ಆದರೂ ನಾರದರು ಸಾಕು ಅನ್ಲಿಲ್ಲ, ಆದರೆ  ರಾಜ ಕೊಡುವುದು ಸ್ವಲ್ಪ ಸ್ವಲ್ಪ ತಡವಾಗುತ್ತಿತ್ತು. ಅವರು ತನ್ಮಯತೆಯಿಂದ ಕಣ್ಣು ಮುಚ್ಚಿ ಶ್ರೀ ಹರಿ  ಸ್ಮರಣೆಯಿಂದ ಮೆಲ್ಲುತ್ತಿದ್ದರು. ಈ ಹೊತ್ತಿಗೆ ರಾಜನಿಗೆ ಸಾಕಾಗಿ ಹೋಗಿತ್ತು, ಯಾವಾಗ ಇವರ ತಾಂಬೂಲ ತಿನ್ನುವ ಕಾರ್ಯಕ್ರಮ ನಿಲ್ಲುವುದು ಎಂದು ಹಪಹಪಿಸಿದ . ನಾರದರು ಈಗಾಗಲೇ ಹಲವಾರು ಬುಟ್ಟಿಗಟ್ಟಲೆ  ವೀಳ್ಯದೆಲೆ ತಿಂದು ಮುಗಿಸಿದ್ದರು. ಆದರೂ ಮೇಲೆ ಏಳುವ ಲಕ್ಷಣಗಳು ಕಂಡು ಬರಲಿಲ್ಲ.  ತಾಂಬೂಲಕ್ಕೆ ಕೈ ಹಿಡಿಯುತ್ತಿದ್ದರು. ಈ ಸಮಯದಲ್ಲಿ ರಾಜ ಸಂಪೂರ್ಣವಾಗಿ ಸಂಯಮ ಕಳೆದುಕೊಂಡ. ಇವರು ದೇವರ್ಷಿಗಳು , ಪೂಜನೀಯರು ಬ್ರಹ್ಮ ಮಾನಸ ಪುತ್ರರು , ಈ ಎಲ್ಲಾ ಅಂಶಗಳನ್ನು ಮರೆತ, ಅವರ ಮೇಲಿನ ಪೂಜ್ಯ ಭಾವನೆ ಕಳೆದುಕೊಂಡ ಹೇಗಾದರೂ ಮಾಡಿ ಅವರನ್ನು ಎಬ್ಬಿಸಲು ಯೋಚಿಸಿದ.  ಕೊನೆಗೆ ಗೋಡೆಯ ಪಕ್ಕ ಗೋಮಯ ಮಾಡಲು  ತಂದು ಇಟ್ಟಿರುವ ಸಗಣಿಯ ಚೂರನ್ನು ( ಒಂದು ಬಟಾಣಿ ಕಾಳಿನಷ್ಟು)  ತಾಂಬೂಲದ ಜೊತೆಗೆ ಸೇರಿಸಿ ಕೊಟ್ಟು ಬಿಟ್ಟ. ಯಾವಾಗ ಈ ತಾಂಬೂಲ ಬಾಯಲ್ಲಿ ಸ್ಪರ್ಶ ಆಯಿತೋ ತಕ್ಷಣವೇ ಅವರು ಸಾಕಪ್ಪಇನ್ನು, ತೃಪ್ತಿ ಆಯ್ತು. ದೇವರು ನಿನ್ನ ಹಾಗೂ ನಿನ್ನ ಪರಿವಾರವನ್ನು  ರಾಜ್ಯವನ್ನು
 ಕಾಪಾಡಲಿ ಎಂದು ತಿಳಿಸಿ ಹರಿ ನಾಮ ನೆನೆದು ವೈಕುಂಠ ಕೆ ಹೋದರು. ಆದರೆ ಅವನು ಮಾತ್ರ ತನ್ನ ಉಪಾಯ ಫಲಿಸಿದ್ದಕ್ಕೆ  ಮನದಲ್ಲಿಯೇ ಹಿರಿ ಹಿರಿ  ಹಿಗ್ಗಿಹೋದನು.
 

ಸಗಣಿ ಉಂಡೆ ಒಂದು ಸುಂದರವಾದ ನೀತಿಕಥೆ

 

ನಂತರ  ಸಂಜೆ ತನ್ನ ಮಂತ್ರಿ,  ಸೇನಾ ಮುಖ್ಯಸ್ಥ ಇನ್ನೂ ಅನೇಕ ಆಪ್ತರನ್ನು   ಕರೆದುಕೊಂಡು ವಾಯು ವಿಹಾರಕ್ಕೆ ಹೋದಾಗ ಅಲ್ಲಿ ಏನಾಶ್ಚರ್ಯ?  ಎಂದು ಕಾಣದ ಎಂದೂ ಕೇಳದ ಒಂದು ದೊಡ್ಡ ಸಗಣಿಯ ಬೆಟ್ಟ ರಾಜ್ಯದ ಸರಹದ್ದಿನಲ್ಲಿ ಕಾಣಿಸಿತು. ಎಲ್ಲರೂ ಚಕಿತರಾದರೂ ಅದು ಎಲ್ಲಿಂದ ಬಂತು, ಹೇಗೆ ಬಂತು, ಯಾವುದಕ್ಕೂ ಉತ್ತರ ಇಲ್ಲ. ಆದರೆ ರಾಜನಿಗೆ ಅರ್ಥವಾಯಿತು ತನ್ನ ದ್ರೋಹ ಫಲ ನೀಡಿತು ಎಂದು ತಿಳಿದುಕೊಂಡ. ಯಾರಿಗೂ ತನ್ನ ಕುಕೃತ್ಯ  ತಿಳಿಸದೆ ಇದು ಹೇಗೆ ಇಲ್ಲಿ ಬಂದಿದೆ,  ಇದನ್ನು ಹೇಗೆ ಖಾಲಿ ಮಾಡಬೇಕು ಎಂದು ಸಲಹೆ ಕೇಳಲು , ಅವರು ಮಹಾರಾಜ ಮಹಾನುಭಾವರು ಶ್ರೀ ನಾರದರ ಆತಿಥ್ಯದಲ್ಲಿ  ಏನಾದರೂ ಅಹಿತಕರ ಘಟನೆಗಳು  ಅಪಚಾರ ನಡೆದಿದ್ದರೆ ಈ ರೀತಿ ಆಗುತ್ತದೆ ಎಂದು ತಿಳಿಸಿದರು .ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ನಾರದರಿಗೆ ಪ್ರಾರ್ಥನೆ ಸಲ್ಲಿಸಿದರು
ರಾಜನಿಗೆ ನಿಜವಾದ ಪಶ್ಚಾತ್ತಾಪ ಉಂಟಾಗಿದೆ ಪರಿ ಪರಿಯಾಗಿ ಬೇಡಿಕೊಂಡ ಮೇಲೆ ಹೇಳುತ್ತಾರೆ, ನೀನು ಒಂದು ತಿಂಗಳು ಪೂರ್ತಿ ನಿನ್ನ ಮದುವೆ ವಯಸ್ಸಿಗೆ ಬಂದ ಮಗಳ ಜೊತೆಗೆ ಪ್ರತಿ ದಿನ ಸಂಜೆ ವೇಳೆಗೆ ಎಲ್ಲ ಜನರ ಕಣ್ಣಿಗೆ ಕಾಣುವ ಹಾಗೆ ರಥದಲ್ಲಿ ಕುಳಿತು ಸಗಣಿ ಬೆಟ್ಟದ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಡಿ ಕಂಡು ಹೋಗಿ ರಾತ್ರಿ ಸರಿಹೊತ್ತಿನಲ್ಲಿ ಅರಮನೆಗೆ ಬರಲು ತಿಳಿಸುತ್ತಾರೆ. ತಿಂಗಳ ನಂತರ ಮತ್ತೆ ಸಗಣಿ ಬೆಟ್ಟಕ್ಕೆ ಭೇಟಿ ಮಾಡಿ ತಮ್ಮನ್ನು ಸ್ಮರಿಸಲು ಹೇಳುತ್ತಾರೆ.
ನಾರದರ ಸಲಹೆಯಂತೆ ವಯಸ್ಸಿಗೆ ಬಂದ ಮಗಳ ಜೊತೆಗೆ ಪ್ರತಿ ದಿನ ಸಂಜೆ ವೇಳೆಗೆ ರಾಜನು ಅಡವಿಗೆ ಹೋಗಿ ರಾತ್ರಿ ಸರಿಹೊತ್ತಿನಲ್ಲಿ ಅರಮನೆಗೆ ಬರುತ್ತಿರುತ್ತಾನೆ.  ಮೊದಲಿಗೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಜನ ದಿನ ಕಳೆದಂತೆ ರಾಜನ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಾರೆ. ಆದರೆ ನಾರದರ ಅಣತಿಯಂತೆ ರಾಜ ಯಾರೊಬ್ಬರ ಜೊತೆಗೆ ಹೆಚ್ಚು ಮಾತನಾಡದೆ ತಿಂಗಳ ನಂತರ ಮತ್ತೆ ಸಗಣಿ ಬೆಟ್ಟಕ್ಕೆ ಭೇಟಿ ಮಾಡಿ ನೋಡಿದಾಗ ಅದು ಮತ್ತೆ ಆಶ್ಚರ್ಯ,  ಸಗಣಿ ಬೆಟ್ಟವೆಲ್ಲಾ ಖಾಲಿ ಆಗಿ, ಒಂದು ಸಣ್ಣ ಲಿಂಬೆ ಹಣ್ಣಿನ ಗಾತ್ರದ ಸಗಣಿ ಉಂಡೆ ಇರುತ್ತದೆ.  ಅವನಿಗೆ ಏನು ಮಾಡಬೇಕು ಎಂದು ತೋರದೆ, ನಾರದರನ್ನು ಬೇಡಿಕೊಳ್ಳುತ್ತಾನೆ. ಅಲ್ಲಿ ಪ್ರತ್ಯಕ್ಷವಾಗಿ ಅವರು ಹೇಳುತ್ತಾರೆ. ರಾಜ ಹಿರಿಯರಿಗೆ, ಸ್ವೋತ್ತಮರಿಗೆ ,ದೇವರಿಗೆ, ಮಾಡಿದ ದ್ರೋಹ, ವಂಚನೆ, ನೋವುಗಳು, ಎಲ್ಲವೂ ಅಧಿಕ ಪಟ್ಟು ನೋವು, ದುಃಖ, ಹಿಂಸೆ ಹಾಗೂ ನರಕದ ಬಾಗಿಲಿಗೆ ದೂಡುವುದು.
ನೀನು ತಾಂಬೂಲ ದಲ್ಲಿ ಇಟ್ಟು ಕೊಟ್ಟ ಬಟಾಣಿ ಗಾತ್ರದ ಸಗಣಿ, ಬೆಟ್ಟದ ಗಾತ್ರದ ಪಾಪ, ಅಷ್ಟೇ ಗಾತ್ರದ ಸಗಣಿ ತಿನ್ನುವ ಪ್ರಾರಬ್ದ, ಎಲ್ಲವೂ ಅಂಟಿಕೊಂಡಿತು. ಆದರೆ ನಿನ್ನ ರಾಜ್ಯದ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚಿನ ತಲೆ ಕೊಡುವುದು ಬಿಟ್ಟು, ದಿನವೂ ನಿನ್ನನ್ನು ಆಡಿಕೊಂಡೇ ಇದ್ದು,  ನಿನ್ನ ಪಾಪ, ಪ್ರಾರಬ್ದ ಹಂಚಿಕೊಂಡರು. ಆದರೆ ನೀನು  ಮಾಡಿದ  ಕುಕೃತ್ಯಕ್ಕೆ  ಫಲವಾಗಿ  ಈ ಲಿಂಬೆ ಗಾತ್ರದ ಸಗಣಿ ಉಂಡೆ ತಿನ್ನದೇ  ಬೇರೆ ಯಾವ ರೀತಿಯ ದಾರಿ ಇಲ್ಲ. ಈ ಉಂಡೆಯನ್ನು ಈಗ ಬೇಕಾದರೂ ತಿನ್ನಬಹುದು ಅಥವಾ  ಮುಂದಿನ ಜನುಮಗಳಲ್ಲಿ  ಸಗಣಿ ತಿನ್ನುವ ಹುಳು ಆಗಿ ಹುಟ್ಟಿ, ಈ ಉಂಡೆ ಖಾಲಿ ಆಗುವವರೆಗೂ ಸಗಣಿ ಹುಳವಾಗಿ ಜನ್ಮ ಎತ್ತಬೇಕಾಗುತ್ತದೆ ಎಂದು ಹೇಳಿದರು. ಆಗ ರಾಜ ಪೂಜ್ಯರೇ,  ನಾನು ನನ್ನ ಜೀವನದಲ್ಲಿ ಮಾಡಿದ ಮಹಾಪರಾಧವನ್ನು ಒಪ್ಪಿಕೊಳ್ಳುತ್ತೇನೆ.  ನನ್ನನ್ನು ಕ್ಷಮಿಸಿ.  ನನಗೆ ಮುಂದಿನ ಜನ್ಮ ಎತ್ತಿ  ಸಗಣಿ ಹುಳ ಆಗಿ ಹುಟ್ಟಿ ಬೆಳೆದು ನಂತರ ಈ ಸಗಣಿ ತಿಂದುಮುಗಿಸಿ,  ನನ್ನ ಪ್ರಾರಬ್ದ ಕಳೆದು ಕೊಳ್ಳುವೆ ಎಂದು ಭರವಸೆ ನನಗಿಲ್ಲ. ಆದುದರಿಂದ ಈಗಾಗಲೇ ಮಾಡಲಾಗಿರುವ ಮಹಾ ಪಾಪಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಈ ಲಿಂಬೆ ಗಾತ್ರದ ಸಗಣಿ ಉಂಡೆಯನ್ನು ತಿನ್ನುವೆ ಎಂದು ಹೇಳಿ, ರಾಜ ಆ ಉಂಡೆಯನ್ನು  ತೆಗೆದು ಕೊಂಡು ದೇವರ ಪ್ರಸಾದವೆಂದು ತಿಂದು ಬಿಡುತ್ತಾರೆ
 ಅದಕ್ಕೆ  ದೇವರಿಗೆ,ದೇವರ ಭಕ್ತರಿಗೆ, ಯಾರಿಗೂ ಅಪಚಾರ, ದ್ರೋಹ, ವಂಚನೆ, ನೋವುಗಳು,  ಉಂಟು ಮಾಡಬಾರದು.

-  ವೀಣಾ ಜೋಶಿ

–>