ಪ್ರತಿಯೊಂದು ಮಾಸಕ್ಕೂ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು ನೀಡುವ ಮಾಸವಾಗಿದೆ. ಈ ಮಾಸದಲ್ಲಿ ಬರುವ ಹಬ್ಬಗಳು ಆಚರಣೆಗಳು ಭಾವಕ್ಕೆ ಹೆಚ್ಚು ಹತ್ತಿರವಾದುವುಗಳಾಗಿವೆ. ಶ್ರಾವಣ ಹುಣ್ಣಿಮೆಯೆಂಬುದು ಅತ್ಯಂತ ಅಭೂತಪೂರ್ವ ದಿನವಾಗಿದ್ದು, ಇದೊಂದು ಪುಣ್ಯಪ್ರದ ಕಾಲವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ಆಚರಿಸಬೇಕಾದ ಸಂಸ್ಕಾರಯುತವಾದ ಆಚರಣೆಯೇ ರಕ್ಷಾ ಬಂಧನ. ಇದೊಂದು ಮಹತ್ವ ಪೂರ್ಣ ಆಚರಣೆಯಾಗಿದೆ. ನಮ್ಮಲ್ಲಿ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ತಮ್ಮ ರಕ್ಷಣೆಯ ಸಲುವಾಗಿ ಸುಂದರವಾದ ದಾರ ಕಟ್ಟುವ ದಿನ / ಸಮಯ/ ಸಂದರ್ಭವೇ ರಕ್ಷಾಬಂಧನ ಎಂಬ ಭಾವನೆಯಿದೆ. ಇದು ತಪ್ಪಲ್ಲ. ಆದರೆ ಇದಕ್ಕೆ ಮಿಗಿಲಾದ ಅತ್ಯಂತ ಅದ್ಭುತವಾದ ಕಲ್ಪನೆಯನ್ನು ರಕ್ಷಾ ಬಂಧನವು ಹೊಂದಿದೆ.
ಸರ್ವಸಾಮಾನ್ಯವಾಗಿ ರಕ್ಷಾ ಬಂಧನದ ನಂತರ ಬರುವ ಉಪಕರ್ಮದ ದಿನದಂದೇ ಈ ರಕ್ಷಾಬಂಧನ ಬರುತ್ತದೆ. ಇದರ ಸಮ್ಮಿಲನದ ತಾತ್ಪರ್ಯವೇನೆಂದರೆ ವಿದ್ಯಾರ್ಜನೆಗಾಗಿ ದೀಕ್ಷಿತನಾದ ಅಗ್ರಜನೇ / ಅನುಜನೇ ನಿನ್ನ ವಿದ್ಯೆಯೆಂಬುದು ನನ್ನನ್ನು ಮತ್ತು ನನ್ನಂತಿರುವ ಸ್ತ್ರೀಸಂಕುಲವನ್ನು ಹಾಗೆಯೇ ತಾಯಿ ಭಾರತಿಯ ಸಂರಕ್ಷಣೆಗಾಗಿ ಮುಡುಪಾಗಿರಲಿ ಮತ್ತು ಅದರ ರಕ್ಷಣೆಯೂ ಕೂಡ ನಿನ್ನ ವಿದ್ಯಾರ್ಜನೆಯ ಮೂಲ ಉದ್ದೇಶ ಎಂಬುದನ್ನು ನೆನಪಿಸುವ ಸಲುವಾಗಿ ಈ ರಕ್ಷೆಯನ್ನು ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ಕಟ್ಟುತ್ತಾರೆ ಎಂಬುದು ರಕ್ಷಾ ಬಂಧನದ ಹಿಂದೆ ತಿಳಿಯಬೇಕಾದ ಸತ್ಯಾಂಶ.
ಮನುಷ್ಯ ತನ್ನ ಬದುಕಿನಲ್ಲಿ ಹಲವು ವಸ್ತುಗಳ ರಕ್ಷಣೆ ಮಾಡಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷವೂ ಹೌದು. ಇದರ ತಾತ್ಪರ್ಯ - ಸ್ತ್ರೀಯರು ಅಬಲರು ಎಂದಲ್ಲ. ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು
ಭೂಮಿಯನ್ನು ತಾಯಿ ಎಂಬ ಭಾವದಿಂದ,
ವಿದ್ಯೆಯನ್ನು ಸರಸ್ವತೀ ಎಂಬ ಭಾವದಿಂದ, ಸಹೋದರಿಯರನ್ನು ತಾಯಿಸಮಾನರು ಎಂಬ ಭಾವದಿಂದ ಹೀಗೆ ಬೇರೆಬೇರೆ ಕಾರಣಗಳಿಂದ ನಾವು ಅವರನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸನಾತನ ಸಂಪ್ರದಾಯದ ಪ್ರಕಾರ ಯಾವುದೇ ಕಾರ್ಯಕ್ಕೂ ನಾವು ಕಂಕಣಬದ್ಧರಾಗಬೇಕು. ಈ ಎಲ್ಲಾ ಕಾರಣಗಳಿಂದ ರಕ್ಷಾಬಂಧನವು ಸಂಘಟಿತವಾಗಿ ಹರಿದುಬಂದಿದೆ.
ಇನ್ನು ಎಲ್ಲಾ ಕಾರ್ಯದ ಆರಂಭದಲ್ಲೂ ಆಯಾಯ ಕರ್ಮದ ರಕ್ಷಣೆಯ ಹೊಣೆ ಇರುವುದರಿಂದ ರಕ್ಷೆಯ ಧಾರಣೆಯೆನ್ನುವುದು ಅನೂಚಾನವಾಗಿ ನಡೆದುಬಂದ ಪದ್ಧತಿಯಾಗಿದೆ. ಹಿಂದಿನ ಕಾಲದಲ್ಲಿ ಕಂಕಣ ಧಾರಣೆಯೆನ್ನುವುದು ಒಂದು ವಿಶೇಷವಾದ ಸಂಸ್ಕಾರವಾಗಿತ್ತು. ಆದರೆ, ಈ ಕಾಲದಲ್ಲಿ ಇದರ ಮಾಹಿತಿಯ ಕೊರೆತೆಯಿಂದಾಗಿ ಯುವಜನತೆಯಲ್ಲಿ ರಕ್ಷಾ ಬಂಧನದ ಆಚರಣೆಯ ಮಹತ್ವದ ಅರಿವು ಇಲ್ಲದಂತಾಗಿದೆ. ಆದ್ದರಿಂದ ಸರ್ವ ಯುವಜನರು ಪ್ರಸ್ತುತ ವರ್ತಮಾನದಲ್ಲಿ ಈ ಆಚರಣೆಯನ್ನು ಪುನಃ ಆರಂಭಿಸಲು ಮುಂದಾಗಬೇಕಿದೆ.
ರಕ್ಷಾಬಂಧನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ದೇಶ ಕಾಯುವ ಯೋಧರು, ಮಾಹಿತಿ ನೀಡಿ ರಕ್ಷಿಸುವ ಮಾಧ್ಯಮದವರು, ಸಾಗಿಸುವ ಸಾರಿಗೆಯವರು, ಅನ್ನ ನೀಡುವ ರೈತರು, ಅಕ್ಷರ ಕಲಿಸುವ ಗುರುಗಳು, ಆರಕ್ಷಕರು ಇವರೆಲ್ಲಾ ನಮ್ಮ ರಕ್ಷಕರೇ ಹೌದು. ಹೀಗೇ ಹಲವಾರು ಪ್ರಾಮಾಣಿಕ ಶಕ್ತಿಗಳು ನಮ್ಮ ರಕ್ಷಕರೇ ಆಗಿರುವರು. ಇವರೊಂದಿಗೆ ಸಾಧ್ಯವಾದಷ್ಟು ಭಾವಬಾಂಧವ್ಯ ದಾರದೊಂದಿಗೆ ಬೆಸೆಯೋಣ. ಈ ಸಲದ ರಕ್ಷಾಬಂಧನವನ್ನು ಅರಿತು ಅರಿವಿರುವವರೊಂದಿಗೆ ಅರಿವಿಗಾಗಿ ಆಚರಿಸೋಣ ಅಲ್ಲವೇ ?
"ರಕ್ಷೆ ಧರಿಸುವ ಮಂತ್ರ :-"
"ಯೇನಬದ್ಧೋಬಲೀರಾಜಾ ದಾನವೇಂದ್ರೋ ಮಹಾಬಲಃ |
ತೇನತ್ವಾಮಭಿಬಧ್ನಾಮಿ ರಕ್ಷೇಮಾಚಲ ಮಾಚಲ ||"
Subscribe , Follow on
Facebook Instagram YouTube Twitter X WhatsApp