ಏಕಶ್ಲೋಕೀ ರಾಮಾಯಣ ಎಂದು ಪ್ರಸಿದ್ಧವಾದ ಇದು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಬಹುದು.
ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹೀಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಮ್ ।
ವಾಲೀನಿರ್ದಲನಂ ಸಮುದ್ರತರಣಂ ಲಂಕಾಪುರೀದಾಹನಂ
ಪಶ್ಚಾದ್ರಾವಣಕುಂಭಕರ್ಣಹನನಮೇತದ್ಧಿ ರಾಮಾಯಣಮ್ ॥
ಇದು ರಾಮಾಯಣದ ಕತೆಯನ್ನು ನಾಲ್ಕೇ ಸಾಲುಗಳಲ್ಲಿ ಹೇಳುತ್ತದೆ. ಮೊದಲಿಗೆ ರಾಮ ಕಾಡಿಗೆ ಹೋದನು. ಬಂಗಾರದ ಜಿಂಕೆಯನ್ನು ಕೊಂದನು. ಸೀತೆಯ ಅಪಹರಣವಾಯ್ತು. ಜಟಾಯು ಸತ್ತ. ಸುಗ್ರೀವನೊಡನೆ ರಾಮನ ಸಖ್ಯವಾಯ್ತು. ವಾಲೀವಧೆ ಆಯ್ತು. ಸಾಗರೋಲ್ಲಂಘನವೂ ಆಯ್ತು. ಹನುಮ ಲಂಕೆಯನ್ನು ಸುಟ್ಟದ್ದಾಯ್ತು. ಆಮೇಲೆ ರಾವಣ ಕುಂಭಕರ್ಣರನ್ನು ಇತಿಶ್ರೀಗೊಳಿಸಲಾಯ್ತು ಎಂಬಲ್ಲಿಗೆ ರಾಮಾಯಣ ಮುಗಿಯಿತು.
ಒಮ್ಮೆ ದಾಸಯ್ಯನೊಬ್ಬ ಭಿಕ್ಷೆ ಬೇಡುತ್ತ ತಿರುಗುತ್ತಿದ್ದವನು ಒಂದು ಮನೆಯೆದುರಿಗೆ ಬಂದುನಿಲ್ಲುತ್ತಾನೆ. ಆ ಮನೆಯಲ್ಲೊಬ್ಬ ಅಜ್ಜಿ ವಾಸವಾಗಿರುತ್ತಾಳೆ. ಭಿಕ್ಷೆ ಕೊಡಿ ಎಂದು ದಾಸಯ್ಯ ಕೇಳಿದ್ದಕ್ಕೆ ನನ್ನ ಬಳಿ ಏನೂ ಇಲ್ಲವಲ್ಲ ಎನ್ನುತ್ತಾಳೆ ಅಜ್ಜಿ. ಬಾಯಾರಿಕೆಯಾಗಿದೆ ಸ್ವಲ್ಪ ಮಜ್ಜಿಗೆಯಾದರೂ ಕೊಡಿ ಎಂದು ದಾಸಯ್ಯನ ಬೇಡಿಕೆ. ಅಜ್ಜಿಯ ಬಳಿ ಅರ್ಧ ಲೋಟವಾಗುವಷ್ಟು ಮಜ್ಜಿಗೆ ಇತ್ತು, ಆದರೆ ಸುಮ್ಸುಮ್ನೆ ಯಾಕೆ ಕೊಡೋದಂತ ಯೋಚನೆ ಮಾಡುತ್ತಾಳೆ. ‘ಮಜ್ಜಿಗೆ ಕೊಡುತ್ತೇನೆ, ಆದರೆ ನೀನು ರಾಮಾಯಣವನ್ನೋ ಮಹಾಭಾರತ ಭಾಗವತ ಇತ್ಯಾದಿ ಪುರಾಣಕತೆಯನ್ನೋ ಹೇಳಬೇಕಾಗುತ್ತದೆ.’ಎನ್ನುತ್ತಾಳೆ. ಅದಕ್ಕೊಪ್ಪಿದ ದಾಸಯ್ಯ ಈಮೇಲಿನ ಶ್ಲೋಕವನ್ನು ಹೇಳುತ್ತಾನೆ. ಇಷ್ಟೇನಾ ಎಂದು ನಿರಾಸೆಯಿಂದೆಂಬಂತೆ ಅಜ್ಜಿ ಕೇಳುತ್ತಾಳೆ.
’ಮತ್ತೆಷ್ಟು? ಅರೆಲೋಟ ಮಜ್ಜಿಗೆಗೆ ತಕ್ಕಷ್ಟೇ ರಾಮಾಯಣ. ಹಾಗಾಗಿ ಇದು ಮಜ್ಜಿಗೆ ರಾಮಾಯಣ!’ ಎಂದು ದಾಸಯ್ಯ ಉವಾಚ.
ಇದನ್ನು ದೂರದಿಂದ ನೋಡುತ್ತಿದ್ದ ಇನ್ನೊಬ್ಬ ಜಿಪುಣಾಗ್ರೇಸರ, ಆ ದಾಸಯ್ಯ ಅವನ ಮನೆಗೆ ಬಂದು ಭಿಕ್ಷೆ ಕೇಳಿದಾಗ ಮೆಣಸಿನಕಾಯಿ ಕೊಡುತ್ತಾನೆ. ಅವನದೂ ಅದೇ ಷರತ್ತು, ರಾಮಾಯಣ ಹೇಳದೇ ಭಿಕ್ಷೆ ಸಿಗೋದಿಲ್ಲ ಅಂತ. ದಾಸಯ್ಯನ ಬುದ್ಧಿಯಾದರೋ ಮೆಣಸಿನಕಾಯಿಯಷ್ಟೇ ಚುರುಕು. ಅವನೆನ್ನುತ್ತಾನೆ: "ಹುಟ್ಟಿ ಕಟ್ಟಿ ಕುಟ್ಟಿ ಮುಟ್ಟಿ" - ತಗೊಳ್ಳಿ ಇದು ನಿಮಗೆ ನಾಲ್ಕೇನಾಲ್ಕು ಪದಗಳಲ್ಲಿ ರಾಮಾಯಣ! "ಅದು ಹೇಗೆ?" ಎಂದು ತಕರಾರೆತ್ತುತ್ತಾನೆ ಜಿಪುಣಾಗ್ರೇಸರ.
"ಶ್ರೀರಾಮಚಂದ್ರನು ಹುಟ್ಟಿ, ವಾನರಸೇನೆಯನ್ನು ಕಟ್ಟಿ, ರಾವಣಾಸುರನನ್ನು ಕುಟ್ಟಿ, ಮರಳಿ ಅಯೋಧ್ಯೆ ಮುಟ್ಟಿದಾಗ ರಾಮಾಯಣ ಮುಗಿಯಿತು." - ಮೆಣಸಿನಕಾಯಿ ಪಡೆದುಕೊಂಡ ದಾಸಯ್ಯ ಕೂಲ್ ಆಗಿಯೇ ಉತ್ತರಿಸಿ ಅಲ್ಲಿಂದ ಮುನ್ನಡೆಯುತ್ತಾನೆ
Subscribe , Follow on
Facebook Instagram YouTube Twitter WhatsApp