-->

ದೀಪಾವಳಿ ಹಬ್ಬದ ವಿಶಿಷ್ಟತೆ , Characteristics of Deepawali festival

ದೀಪಾವಳಿ ಹಬ್ಬ ಭಾರತ ದೇಶದಲ್ಲಿ  ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಪೌರಾಣಿಕ, ಆಧ್ಯಾತ್ಮಿಕ ಹಿನ್ನೆಲೆ ಇದೆ.

ಪ್ರಥಮ ಯುಗವಾದ ಸತ್ಯಯುಗದಲ್ಲಿ, ದೈತ್ಯ ರಾಜ ಬಲಿ ಚಕ್ರವರ್ತಿಯನ್ನು ಶ್ರೀಹರಿಯು ವಾಮನ ರೂಪ ದಿಂದ ಅವತರಿಸಿ ತ್ರಿವಿಕ್ರಮನಾಗಿ ಪಾತಾಳಕ್ಕೆ ಮೆಟ್ಟಿದ ದಿನ ಬಲಿ ಪಾಡ್ಯ ದೀಪಾವಳಿ ಪ್ರತಿಪದೆ ಆಗಿದೆ.ಇದಕ್ಕೂ ಮೊದಲು ಆಶ್ವಿನ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನದಿಂದ ಪ್ರಾರಂಭ ಆಗುವದು. ಈ ದಿನವನ್ನು ಜಲಪೂರ್ಣ ತ್ರಯೋದಶಿ, ನಿಂತು ತುಂಬುವ ಹಬ್ಬ ಎಂದೂ, ಅಂದು ಸಾಯಂಕಾಲ ಆಚರಿಸುವರು. ನಮಗೆ ಅಣ್ಣ ಆಹಾರ ಇರದೇ ಇದ್ದರೂ ಬದುಕುತ್ತೇವೆ. ಆದರೆ ನೀರು ಮುಖ್ಯ. ಕಾರಣ ನಾವು ನೀರು, ವರುಣ ಪೂಜೆಯನ್ನು ಮೊದಲು ಮಾಡುತ್ತೇವೆ. ಆದರ ಸಂಗಡ ಗಣಪತಿಯ ಪೂಜೆಯನ್ನು ಮಾಡುತ್ತೇವೆ.

ನಾವು ದಿನಾಲೂ ಬಚ್ಚಲ ಮನೆ ಸ್ನಾನಕ್ಕೆ, ಕಾಲು ತೊಳೆಯಲು ಉಪಯೋಗಿಸುತ್ತೇವೆ. ಸಮಾರಂಭಗಳಲ್ಲಿ ಮುಂದಿನ ಬಗಿಲಿಗೆ ತಳಿರು ತೋರಣ  ಕಟ್ಟಿದರೆ ಇಂದು ಬಚ್ಚಲ ಮನೆಗೆ ಕಟ್ಟುತ್ತೇವೆ. ಅಲ್ಲಿ ಸುಣ್ಣ ಹಚ್ಚಿ ಎಲ್ಲ ಪಾತ್ರೆ ತುಂಬಿ ಇಡುತ್ತೇವೆ. ಮಲೆನಾಡು, ಉತ್ತರ ಕರ್ನಾಟಕದಲ್ಲಿ ಮಾಲಿಂಗನ ಬಳ್ಳಿಯನ್ನು ಪಾತ್ರೆಗಳಿಗೆ ಸುತ್ತಿ, ದೀಪ ಹಚ್ಚಿ ಇಡುತ್ತೇವೆ.ಹಿಂದಿನ ಕಾಲದಲ್ಲಿ ಬಚ್ಚಲದಲ್ಲಿ ಹಂಡೆಯಲ್ಲಿ ನೀರು ಕಾಸುತ್ತಿದ್ದೆವು.ಈಗಿನ ಆಧುನಿಕ ದಿನದಲ್ಲಿ ಹೀಟರ್, ಗೀಸರ್ ಬಂದಿದ್ದರಿಂದ ಹಳೆಯ ವಸ್ತುಗಳು ಮನದಿಂದ ದೂರ ಆಗುತ್ತಿವೆ. ಆದರ ಸಂಗಡ ಸಂಸ್ಕೃತಿ, ಸಂಸ್ಕಾರ ದೂರ ಆಗುತ್ತಿದೆ ಎಂದೂ ಬರೆಯಲು ವ್ಯಥೆ ಎನಿಸುವದು. ತ್ರಯೋದಶಿ ದಿನ ಅಂಗಳದಲ್ಲೂ ರಂಗೋಲಿ ಹಾಕಿ ಆಕಾಶಬುಟ್ಟಿ ಹಚ್ಚುವರು.



ಆಧ್ಯಾತ್ಮಿಕವಾಗಿ ಯಮದೀಪ ದಾನ ಮಾಡುವರು. ಪಕ್ಷ ಮಾಸದಲ್ಲಿ ಬಂದ ಪಿತೃ ದೇವತೆಗಳು ಈಗ ತುಲಮಾಸದ ವರೆಗೆ ಇದ್ದು ತಮ್ಮ್ ಲೋಕಕ್ಕೆ ಹಿಂದಿರುಗುತ್ತಾರೆ. ರಾತ್ರಿ ಸಮಯದಲ್ಲಿ ಅವರಿಗೆ ದಾರಿ ಕಾಣಲೆಂದು ದೀಪ ಹಚ್ಚುವರು. ಇನ್ನೊಂದು ದೃಷ್ಟಿಯಿಂದ ಹೇಳುವದಾದರೆ ರಾತ್ರಿ, ಸಂಜೆ ಸಮಯ ಗೂಡಿಗೆ ಮರಳುವ ಹಕ್ಕಿ, ಪಕ್ಷಿಗಳಿಗೆ ದಾರಿ ಕಾಣಲೆಂದು ದೀಪಗಳನ್ನು ಗೋಡೆಯ ಮೇಲೆ, ಮನೆಯ ಹಂಚಿನ ಮೇಲೆ ಇಡುತ್ತಾರೆ.ಮತ್ತೊಂದು  ವಿಚಾರ ಏನೆಂದರೆ ಮಾನವರಿಗೆ ಅಪಮೃತ್ಯು ಪರಿಹಾರಕ್ಕೆ ಯಮನ ಹೆಸರಿನಲ್ಲಿ ದೀಪವನ್ನು ಹಚ್ಚುತ್ತಾರೆ.

ದೀಪಾವಳಿ ಎಂದರೆ ದೀಪ +ಆವಳಿ  ಆವಳಿ ಎಂದರೆ ಸಾಲು. ದೀಪಗಳ ಸಾಲನ್ನು ಹಚ್ಚಿ ಸಂತೋಷಸುವದೇ ದೀಪಾವಳಿ ಎನಿಸಿದೆ.  ತ್ರೇತಾ ಯುಗದಲ್ಲಿ ಶ್ರೀ ರಾಮನು ವಿಜಯದಶಮಿ ದಿನ ದುಷ್ಟ ರಾವಣನನ್ನು ಸಂಹಾರ ಮಾಡಿ, ದೀಪಾವಳಿ ಪಾಡ್ಯ ದಿನ ಪಟ್ಟಾಭಿಷೇಕ  ಮಾಡಿಸಿ ಕೊಂಡನೆಂದು ಕಥೆ ಇದೇ.

ಜಲಪೂರ್ಣ ತ್ರಯೋದಶಿ ಮರುದಿನವೇ ನರಕ ಚತುರ್ದಶಿ. ಅಂದು ನಸುಕಿನಲ್ಲಿ ಆರತಿ ಮಾಡಿಸಿಕೊಂಡು ಸಮೀಪದ ದೇವರ ದರ್ಶನ ಮಾಡಿಕೊಂಡು ಬರಬೇಕು. ಎಲ್ಲರಿಗೂ ಅಭ್ಯಂಗ ಸ್ನಾನ ಇರುತ್ತದೆ. ಪೌರಾಣಿಕವಾಗಿ ನೋಡಿದಾಗ ಕೃಷ್ಣನು ನರಕಾಸುರನನ್ನು ಸಂಹಾರ ಮಾಡಿದ ದಿನ. ಲೌಕಿಕವಾಗಿ ನರಕ ಎಂದರೆ ಹೊಲಸು, ಪಾಪ, ಎಂದೂ ಅರ್ಥ. ಕಾರಣ ಅಂದು ನಾವು ನಮ್ಮ ಮನಸ್ಸಿನಲ್ಲಿಯ ಕೆಟ್ಟ ವಿಚಾರ, ದ್ವೇಷ ಅಸೂಯೆ ಕೋಪ ಗಳನ್ನು ತ್ಯಜಿಸುವದೇ ನಮ್ಮಲ್ಲಿಯ ನರಕಾಸುರನನ್ನು ವಧೆ ಮಾಡಿದಂತೆ ಎಂಬ ಅನುಸಂಧಾನ ಮಾಡಿಕೊಳ್ಳಬೇಕು.

ಮರುದಿನ ಅಮಾವಾಸ್ಯೆಯ ದಿನ ಸಾಯಂಕಾಲ ಮನೆಯಲ್ಲಿ ಪೂರ್ಣ ಕುಂಭ ಇಟ್ಟು ಲಕ್ಷ್ಮೀ. ಪೂಜೆ ಮಾಡಬೇಕು. ಪ್ರತಿಫದೆ ದಿನ ಹೊಸ ಅಂಗಡಿ ಅಥವಾ ಇರುವ ಅಂಗಡಿ, ವ್ಯವಹಾರದ ಕೇಂದ್ರಗಳಲ್ಲಿ ಲಕ್ಷ್ಮಿಪೂಜೆ ಮಾಡುವ ಪದ್ಧತಿ ಇದೆ.

ಇಷ್ಟಕ್ಕೆ ದೀಪಾವಳಿ ಹಬ್ಬ ಮುಗಿಯ ಲಿಲ್ಲ. ಈ ಹಬ್ಬ ಸಾಮಾಜಿಕವಾಗಿ, ಕೌಟುಂಬಿಕವಾಗಿ, ಬಂಧು ಮಿತ್ರರು ಒಂದೆಡೆಗೆ ಸೇರಿ ಸಂಭ್ರಮದಿಂದ ಇರುವದೇ ದೀಪಾವಳಿಯ ಒಂದು ವೈಶಿಷ್ಟ್ಯ ಆಗಿದೆ. ಬೀದಿಗೆಯ ದಿನ ಭಾವ ಬಿದಿಗೆ ಎಂದೂ ಕರೆಯುವರು. ಹೆಣ್ಣುಮಕ್ಕಳು ತಮ್ಮ ಅಣ್ಣ ತಮ್ಮಂದಿರನ್ನು ತಮ್ಮ ಮನೆಗೆ ಕರೆದು ಎಲ್ಲರೂ ಕೂಡಿಕೊಂಡು ಊಟ ಮಾಡುತ್ತಿದ್ದರು. ಹಿಂದಿನ ಕಾಲದಲ್ಲಿ ಎಲ್ಲರ ಮನೆ ಒಂದೇ ಊರಲ್ಲಿ ಅಥವಾ ಪಕ್ಕದ ಊರಲ್ಲಿ ಇತುತ್ತಿದ್ದವು. ಹೀಗಾಗಿ ಎಲ್ಲ ಬಂಧುಗಳು ಒಂದೇಡೆಗೆ ಕೂಡುತ್ತಿದ್ದರು.

ದೀಪಾವಳಿ ಹಬ್ಬದ ವಿಶಿಷ್ಟತೆ ,  Characteristics of Depawali festival


ಮೂರನೇ ದಿನ ಅಕ್ಕನ ತದಿಗೆ, ಅಣ್ಣ ತಮ್ಮಂದಿರು ತಮ್ಮ್ ಅಕ್ಕಾ ತಂಗಿಯರನ್ನು ಕರೆದು ಅವರಿಗೆ ಸತ್ಕಾರ ಮಾಡಿ, ಎಲ್ಲರೂ ಸಂಭ್ರಮದಿಂದ ಇರುತ್ತಿದ್ದರು. ನಂತರ ನಾಲ್ಕನೇ ದಿನ ಅಮ್ಮನ ಚವತಿ. ಈ ದಿನ ಎಲ್ಲ ಮಕ್ಕಳು ಅಮ್ಮನಿಗೆ ಸತ್ಕರಿಸಿ ಸಂತೋಷದಿಂದ ಇರುತ್ತಾರೆ.
ಹೀಗೆ ದಕ್ಷಿಣ ಭಾರತ, ಉತ್ತರಭಾರತದಲ್ಲಿ ದೀಪಾವಳಿ ಆಚರಿಸುತ್ತಾರೆ. ಬಂಧು ಮಿತ್ರರು ಯಾವದೇ ದ್ವೇಷ ಭಾವನೆ ಇಲ್ಲದೇ ಒಂದೆಡೆ ಕೂಡಿ ಪಗಡೆ, ಚದುರಂಗ ಆಡುವರು. ಹಿಂದ ದ್ವಾಪರದಲ್ಲಿ  ಪಾಂಡವ ಕೌರವರು ಪಗಡೆ ಆಡಿ ಪಾಂಡವರು ಸೋತು ಅರಣ್ಯಕ್ಕೆ ಹೋಗಿದ್ದೆ ದೀಪಾವಳಿ ದಿನ.

ಹೀಗೆ ದೀಪಾವಳಿಯ ಸಾಂಸ್ಕೃತಿಕ, ಸಾಮಾಜಿಕ ಆಚರಣೆ ಆಧುನಿಕ ಯುಗದಲ್ಲಿ. ಮರೆತು ಹೋಗುತ್ತಿದೆ.ನಾವು ನಮ್ಮ ಹಿಂದಿನ ಪೀಳಿಗೆಯಲ್ಲಿ ನೋಡಿದ ಆಚರಣೆಯನ್ನು ಮುಂದಿನ ಪೀಳಿಗೆಯವರಿಗೆ ಹೇಳಿ ನಮ್ಮ ಸಂಸ್ಕೃತಿಯನ್ನು ಬೆಳೆಸೋಣ ಎಂದೂ ಸಕಲರಿಗೂ ದೀಪಾವಳಿಯ ಶುಭ ಹಾರೈಕೆ ಯೊಂದಿಗೆ ಗೆ ನಾಲ್ಕು  ಶಬ್ದ ಬರೆದ ನಿಮ್ಮವನೆ ಆದ 

- ಮಧುಸೂದನ ಕಲಿಭಟ್ , ಧಾರವಾಡ

Terms | Privacy | 2024 🇮🇳
–>