-->

ದೀಪಾವಳಿ ಅಂದು, ಮತ್ತು ಇಂದು - ಒಂದು ಚಿಂತನೆ

ಈಗಿನ ಸಂವತ್ಸರದ ದೀಪಾವಳಿ ಹಬ್ಬದ ಆರಂಭದ ದಿನ* ಎಲ್ಲರಿಗೂ ಜಗತ್ತಿಗೂ‌‌‌ ಶುಭವನ್ನು‌ ಹಾರೈಸುತ್ತಾ....


 ಇಂದು ನೀರು ತುಂಬುವ ಹಬ್ಬ ಹೌದೇ??  ಹೌದು.
ಆದರೆ ನೀರು ತುಂಬಲು
ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ
ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ.
ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ ಇಲ್ಲ.

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ.
ಸೆಗಣಿ ಕದಡಿದ ನೀರು ಹಾಕಿ ಅಂಗಳ‌ ಸಾರಿಸಿ  ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ.
ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ‌ ತಿರುವಿ,  ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ ..  ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ...
ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ

ದೀಪಾವಳಿ ಅಂದು, ಮತ್ತು ಇಂದು - ಒಂದು  ಚಿಂತನೆ


ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ  ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ  ಸಾಲಾಗಿ  ಕೂರಿಸಿ, ಹಣೆಗೆ ಕುಂಕುಮವಿಟ್ಟು, ಬೆಳ್ಳಿಯ ಬಟ್ಟಲಲ್ಲಿ ಎಣ್ಣೆ ತಂದು‌, ಹೂವಿನಿಂದ ನೆತ್ತಿಗೆ ಮೂರುಬಾರಿ ಎಣ್ಣೆ ಇಟ್ಟು, ನಂತರ ತಲೆಗೆಲ್ಲಾ ಎಣ್ಣೆ ಹಚ್ಚಿ ಟಪ ಟಪ  ಬಡಿದು, ಕೈ ಕಾಲ್ಗಳಿಗೂ ಹಚ್ಚಿ   ಎರಡೂ ಕೆನ್ನೆ, ಕೈ ಕಾಲ್ಗಳಿಗೂ ಎಣ್ಣೆಯ ಬೊಟ್ಟಿಟ್ಟು ಆರತಿ ಮಾಡುತ್ತಿದ್ದ... ಹಬ್ಬದ ನೀರು ಇಬ್ಬರಿಗೆ ಒಂದು ಚೊಂಬು  ಎಂಬ ಗಾದೆಯಂತೆ  ಶೇಖರಿಸಿಡಲು ಸಾಧ್ಯವಾಗುತ್ತಿದ್ದ ಮಿತ ಪ್ರಮಾಣದ ನೀರಿನಲ್ಲೇ ಎಲ್ಲರಿಗೂ ಸ್ವತಃ ಕೈಯಾರೆ, ಸೌದೆ ಉರಿಯಿಂದ ಕಾಯುತ್ತಿದ್ದ ಹಂಡೆಯಿಂದ ಬೋಸಿಯಲ್ಲಿ ತುಂಬಿಕೊಂಡು ‌ನೀರು ಹಾಕುತ್ತಾ, ಒಳ್ಳೆಯ ವಿದ್ಯಾಭ್ಯಾಸ ಪಡ್ದು, ಆಯಸ್ಸು ಆರೋಗ್ಯ, ಐಶ್ವರ್ಯ ಸುಖ ಶಾಂತಿಯಿಂದ ನೂರ್ಕಾಲ ಬಾಳು ಮಗು  ಎಂದು ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಿದ್ದ ಅಮ್ಮ...., *ಪೈಪೋಟಿಯ ಮೇಲೆ  *ನನಗೆ‌ ಮೊದಲು ನೀರು, ನನಗೆ ಮೊದಲು ನೀರು ಎಂದು ಜಗಳ ಕಾಯುತ್ತಿದ್ದ ನಾವು ಒಡಹುಟ್ಟಿದವರು.....

ಈಗಿನಂತೆ ೩೬೫ ದಿನವೂ ಯಾವ ಹೊತ್ತಿನಲ್ಲಿ ಬೇಕಾದರೂ ತಂದು ತಿನ್ನ ಬಹುದಾದ, ಒಬ್ಬಟ್ಟು  ಆಂಬೊಡೆ ಕರಿಗಡುಬು ಚಕ್ಕುಲಿ,ಮುಚ್ಚೊರೆ ಕೋಡುಬಳೆ, ಅತ್ರಾಸ, ಎರೆಯಪ್ಪ ಇತ್ಯಾದಿ ಇತ್ಯಾದಿ ಇತ್ಯಾದಿ ...ಊಹೂಂ ....ಅಂದು ಹಬ್ಬದ ದಿನಗಳಲ್ಲಿ ಮಾತ್ರ ಮಾಡುತ್ತಿದ್ದುದರಿಂದ ಹಬ್ಬದ ಪ್ರಮುಖ  ಆಕರ್ಷಣೆಗಳಲ್ಲೊಂದು ವಿಶೇಷ ಭಕ್ಷ್ಯಗಳೂ ಆಗಿದ್ದವಲ್ಲವೇ??,


ಧೀಮಂತ ವ್ಯಕ್ತಿತ್ವದ ಆಜಾನುಬಾಹು ಅಪ್ಪ ತಮ್ಮ ಕಂಚಿನ ಕಂಠದಿಂದ ಮಂತ್ರಗಳನ್ನು ಹೇಳುತ್ತಿದ್ದರೆ ಒಂದು ಅಲೌಕಿಕ ವಾತಾವರಣ ಸೃಷ್ಟಿಯಾಗುತ್ತಿತ್ತು
.
ನಾವು ಮಕ್ಕಳು ಚಿನುಕುರುಳಿ ಚಟಚಟ ಗುಟ್ಟಿಸುತ್ತಾ ಮತಾಪು ಹಚ್ಚಿ  ಹಿಗ್ಗುತ್ತಿದ್ದೆವು.
ಸಾಂಗವಾಗಿ, ಸಾವಕಾಶವಾಗಿ ಅಭಿಷೇಕ ಪೂಜೆ ನಡೆದು, ಮಾಡಿದ ಎಲ್ಲಾ ಅಡುಗೆಯ ಸ್ವಲ್ಪ ಭಾಗವನ್ನು ಅಮ್ಮ, ಕುಡಿ ಬಾಳೆ ಎಲೆಯಲ್ಲಿ  ಪಾಂಗಿತವಾಗಿ ಬಡಿಸಿಟ್ಟು ತಂದರೆ, ಅಪ್ಪ ಮಂಡಲ
ಮಾಡಿ ಎಲ್ಲವನ್ನೂ ಹಣ್ಣು ಕಾಯಿ ತಾಂಬೂಲದ ಜೊತೆ ನೈವೇದ್ಯ ಮಾಡಿ....

ಚಟಪಟ ಪಟಾಕಿಯ ಆಟದಲ್ಲಿ ಮಗ್ನರಾಗಿದ್ದರೂ‌ ಅಡುಗೆ ಮನೆಯಿಂದ ಹೊಮ್ಮುತ್ತಿದ್ದ ತರೆಹಾವರಿ ಭಕ್ಷ್ಯ ಭೋಜ್ಯಗಳ ಸುವಾಸನೆ ಮೂಗೊಡೆಯುತ್ತಿತ್ತು.....

ಮಂಗಳಾರತಿಗೆ ಬನ್ನಿ ಎಂಬ ಕರೆಗೇ ಕಾಯುತ್ತಿದ್ದ‌ ನಾವೆಲ್ಲ ಒಳಗೆ ದುಡದುಡನೆ ಧಾವಿಸಿ ಬಂದು ..... ಅಪ್ಪನ ಉಚ್ಚ ಕಂಠದಿಂದ ಹೊಮ್ಮುತ್ತಿದ್ದ ಮಂತ್ರದೊಂದಿಗೆ ಮಂಗಳಾರತಿ ಮುಗಿದು.... ನಾವೆಲ್ಲ ಮಂಗಳಾರತಿ ತೆಗೆದುಕೊಂಡು.... ಅಪ್ಪ ದೀರ್ಘದಂಡ ನಮಸ್ಕರಿಸಿದ ಮೇಲೆ.... ನಾವು  ಅಕ್ಕತಂಗಿಯರು, ಅಮ್ಮ,  ತಮ್ಮನೂ ದನಿಗೂಡಿಸಿ ಒಂದಿಷ್ಟು ದೇವರ ನಾಮವನ್ನು ಹಾಡಿ....  ಅಕ್ಷತೆ ಹೂವು ಹಾಕಿ ನಮಸ್ಕರಿಸಿಯಾದ ಮೇಲೆ... ಅಪ್ಪ ಪ್ರಸಾದದ ಹೂ ಕೊಟ್ಟು ಆಶೀರ್ವದಿಸಿ.. ತೀರ್ಥ ಕೊಡುತ್ತಿದ್ದರು.,   ನಾವು ಕಣ್ಣಿಗೊತ್ತಿಕೊಂಡು ತೀರ್ಥ ಸೇವಿಸಿದ ತಕ್ಷಣ,  ಅಮ್ಮ ಮಾಡಿಟ್ಟಿದ್ದ ಆಂಬೊಡೆಯನ್ನೊ ಬೋಂಡವನ್ನೊ  ಒಂದೆರಡನ್ನು ಲಪಟಾಯಿಸಿ ಗಬಕ್ಕೆಂದು ಬಾಯಿಗೆ ಹಾಕಿಕೊಂಡರೆ..... ಆಹಾ!!!! ಆಹಾ!!!!...

 ಕೋಸಂಬರಿ ಪ್ರಿಯರಾದ ನಾನು ಮತ್ತು ನನ್ನ ಅಕ್ಕ ಯಥಾಶಕ್ತಿ ಕೋಸಂಬರಿ ಸೇವೆಯನ್ನೂ ಮಾಡಿಕೊಳ್ಳುತ್ತಿದ್ದೆವು....

ಸಾಲಾಗಿ ಕುಡಿ ಬಾಳೆ ಎಲೆ ಹಾಕಿ,  ಊಟದ ಚಾಪೆ ಹಾಕಿ ... ಅಭಿಗ್ಯಾರ ಮಾಡಿ... ಶಾತ್ರೊಕ್ತವಾಗಿ ಒಂದೊಂದೇ ವ್ಯಂಜನಗಳನ್ನು ಎಲೆಯ ಮೇಲೆ ಅವುಗಳ ನಿಯತ ಜಾಗದಲ್ಲೆ ಬಡಿಸಿ ಕಡೆಯಲ್ಲಿ ತೊವ್ವೆ ತುಪ್ಪ ಹಾಕಿ..... ಅಪ್ಪ  ಪರಿಶಂಚನೆ ಮಾಡಿ, ಅನ್ನ ಬ್ರಹ್ಮನಿಗೆ‌ ನಮಸ್ಕರಿಸಿ ಊಟ ಆರಂಭಿಸಿದ ನಂತರವೇ ನಮ್ಮ ಉದರಾಗ್ನಿ‌ ಶಾಂತಿಯ, ರುಚಿ ರುಚಿ‌ ಪಾಕದ ಸಂತೃಪ್ತ ಭೋಜನದ ರಸಮಯ ಆರಂಭ....

ಸಂಜೆ  ದೀಪ ಬೆಳಗಿಸುವ ಸಂಭ್ರಮ.

ಬಲಿಪಾಡ್ಯಮಿಯ ದಿನ  ಮರದ ಮಣೆಯ ಮೇಲೆ, ಸಗಣಿಯಲ್ಲಿ ಬಲೀಂದ್ರನ ಕೋಟೆಯ ವಿನ್ಯಾಸ ರಚಿಸಿ, ಚೆಂಡು ಹೂವು ಸೆಕ್ಕಿಸಿ, ಕೆರಕನನ್ನೂ ಸುತ್ತ ಯಥೇಚ್ಛವಾಗಿ ದೀಪಗಳನ್ನೂ ಇಟ್ಟು, ಬಲೀಂದ್ರನನ್ನು ಆವಾಹಿಸಿ, ಪೂಜಿಸಿ ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ ಬಲಿಚಕ್ರವರ್ತಿಯ ರಾಜ್ಯ ಮೂರು ಲೋಕದಲ್ಲೂ ಹರಡಲಿ ಎಂದು ಹೇಳಿ‌ ನಮಸ್ಕರಿಸಿ ನಂತರ, ಬಲೀಂದ್ರನ ಎದುರಿಗೇ ಸುರುಸುರು ಬತ್ತಿ ಹಚ್ಚಿದ ನಂತರವೇ ಬೇರೆ ಢಮ್ ಢಮ್ ಢಮಾರ್ ಆಟಂ ಬಾಂಬ್, ಲಕ್ಷ್ಮೀ ಬಾಂಬ್, ಇತ್ಯಾದಿ ಪಟಾಕಿಗಳ, ಹೂವಿನ ಕುಂಡ, ಭೂಚಕ್ರ, ವಿಷ್ಣುಚಕ್ರಗಳ‌ನ್ನು ಹಚ್ಚಿ ಕುಣಿಯುವ ಸಂಭ್ರಮ

ಮನೆಯ ಒಂಭತ್ತು ಜನಕ್ಕೆ ಹೊಸ ಬಟ್ಟೆ ತರಲು ಸಾಧ್ಯವಾಗದಿದ್ದರೂ ಅದೊಂದು ಕೊರತೆ ಎಂದು‌ ಯಾರಿಗೂ ಯಾವತ್ತೂ‌ ಅನಿಸುತ್ತಿರಲಿಲ್ಲ.

🌟 ಹಬ್ಬ 🌟  ಎಂಬ ಪದದಲ್ಲೇ ಸಂಭ್ರಮ ಸಡಗರ ಸಂತೋಷ ತುಂಬಿ ತುಂಬಿ ತುಳುಕುತ್ತಿತ್ತಾಗಿ ಆಗೆಲ್ಲ ನಮಗೆ ಕೊರತೆಗಳ ನಡುವೆಯೂ ಹಬ್ಬ ಹಬ್ಬವೇ ಆಗಿ ಸಂತೋಷ,  ಸಡಗರ ಸಂಭ್ರಮಗಳನ್ನೇ ಉಡುತ್ತಿದ್ದೆವು.ತೊಡುತ್ತಿದ್ದೆವು*.

ಒಳಗೂ ಹೊರಗೂ ಹಬ್ಬವನ್ನೇ ತುಂಬಿಕೊಂಡು ನಲಿಯುತ್ತಿದ್ದೆವು....

ಇಂದು......???  ಕಾಲಾಯ ತಸ್ಮೈ ನಮಃ... ಅಷ್ಟೇ

Terms | Privacy | 2024 🇮🇳
–>