ಏಕಾದಶಿ ಏನು ? ಏಕೆ ? ಹೇಗೆ ? ಎಂದು ತಿಳುಕೊಳ್ಳುವ ಮೊದಲು ಹುಣ್ಣಿಮೆ, ಅಮಾವಾಸ್ಯೆ ಮತ್ತು ಪಕ್ಷದ ಬಗ್ಗೆ ಮಾಹಿತಿ ಪಡೆಯೋಣ.
ಚಂದ್ರನ ಪರಿಭ್ರಮಣೆಯ (ಚಂದ್ರ ಭೂಮಿಯು ಸುತ್ತ ಸುತ್ತುವುದು) ಕಾರಣದಿಂದ ಚಂದ್ರನು ಭೂಮಿಯ ವಿವಿಧ ಸ್ಥಾನಗಳಲ್ಲಿ ಇರುತ್ತಾನೆ. ಆದ್ದರಿಂದ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಭಾಗದ ಗೋಚರಿಕೆಯ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಚಂದ್ರನು ವಿವಿಧ ಆಕಾರದಲ್ಲಿ ಕಾಣಿಸುತ್ತಾನೆ. ಇದನ್ನೇ ಚಂದ್ರಬಿಂಬ ಎನ್ನುವರು.
ಚಂದ್ರ ಭೂಮಿಯ ಸುತ್ತ ಸುತ್ತುವಾಗ ಸೂರ್ಯನಿಗೆ ಕೆಲವೊಮ್ಮೆ ಹತ್ತಿರವಾಗಿ ಕೆಲವೊಮ್ಮೆ ದೂರವಾಗಿ ಇರುತ್ತಾನೆ.
ಚಂದ್ರ ಸೂರ್ಯನ ಹತ್ತಿರವಾದಾಗ ಚಂದ್ರನ ಬದಿ ಭೂಮಿಗೆ ಕಾಣುವದಿಲ್ಲ. ಸೂರ್ಯನೊಂದಿಗೆ ಚಂದ್ರನ ಸಂಯೋಗಕ್ಕೆ ಅಮಾವಾಸ್ಯೆ ಎನ್ನುವದು.
ದಿನ ಕಳೆದಂತೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಭಾಗದ ಗೋಚರಿಕೆ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಾ ಹೋಗುತ್ತದೆ. ಒಂದು ದಿನ ಚಂದ್ರ ಪೂರ್ಣವಾಗಿ ಗೋಚರವಾಗುತ್ತಾನೆ. ಆ ದಿನ ಚಂದ್ರನು ಸೂರ್ಯನಿಂದ 180 ಡಿಗ್ರಿ ದೂರದಲ್ಲಿರುತ್ತಾನೆ. ಅದನ್ನೇ ಹುಣ್ಣಿಮೆ ಎನ್ನುವುದು.
ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ಚಂದ್ರನು ಹೆಚ್ಚು ಪ್ರಕಾಶಮಾನವಾಗುತ್ತಾ ಹೋಗುತ್ತಾನೆ. ಹಾಗಾಗಿ ಆ ಅವಧಿಯನ್ನು ಶುಕ್ಲ ಪಕ್ಷ ಎಂದು ಕರೆಯುವರು. ಸಂಸ್ಕೃತದಲ್ಲಿ ಶುಕ್ಲ ಎಂದರೆ "ಬಿಳಿ" ಅಥವಾ "ಪ್ರಕಾಶಮಾನ"
ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಚಂದ್ರನು ಮಂದವಾಗುತ್ತಾ ಅಥವಾ ಪ್ರಕಾಶ ಕಡಿಮೆ ಆಗುತ್ತಾ ಹೋಗುತ್ತದೆ. ಹಾಗಾಗಿ ಆ ಅವಧಿಯನ್ನು ಕೃಷ್ಣ ಪಕ್ಷ ಎಂದು ಕರೆಯುವರು. ಸಂಸ್ಕೃತದಲ್ಲಿ ಕೃಷ್ಣ ಎಂದರೆ "ಕಪ್ಪು".
ಹಿಂದೂ ಪಂಚಾಂಗದಲ್ಲಿ ಪ್ರತಿಯೊಂದು ಮಾಸವನ್ನು (ತಿಂಗಳು) ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎಂದು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಅಮಾವಾಸ್ಯೆಯ ಮರುದಿನದಿಂದ ಹುಣ್ಣಿಮೆಯವರೆಗಿನ ಅವಧಿಯು ಶುಕ್ಲ ಪಕ್ಷ ಮತ್ತು ಹುಣ್ಣಿಮೆಯ ಮರುದಿನದಿಂದ ಅಮಾವಾಸ್ಯೆಯವರೆಗಿನ ಅವಧಿಯು ಕೃಷ್ಣ ಪಕ್ಷ.
ಸಂಸ್ಕೃತದಲ್ಲಿ ಪಕ್ಷಃ ಎಂದರೆ ಪಕ್ಕ ಅಥವಾ ಬದಿ. ಪಕ್ಷವು ಹುಣ್ಣಿಮೆ ದಿನದ ಎರಡೂ ಪಕ್ಕದಲ್ಲಿನ ಅವಧಿ. ಈ ಅವಧಿ ೧೫ ದಿನಗಳನ್ನು ಒಳಗೊಂಡಿರುತ್ತದೆ.
ಹುಣ್ಣಿಮೆಯ ಎರಡೂ ಪಕ್ಷದ ಅವಧಿ ಚಂದ್ರನ ಚಲನೆಯ ಹಂತವನ್ನು ಸೂಚಿಸುತ್ತವೆ
ಹಿಂದೂ ಪಂಚಾಂಗದಲ್ಲಿ ದಿನಗಳನ್ನು ತಿಥಿಗಳೆಂದು ಕರೆಯುತ್ತಾರೆ. ತಿಥಿ ಎಂದರೆ ಚಂದ್ರನು ಭೂಮಿಯನ್ನು ಸುತ್ತಲು ಒಂದು ದಿನದಲ್ಲಿ ತೆಗೆದುಕೊಳ್ಳುವ ಅವಧಿ.
ಚಂದ್ರನು ನಿತ್ಯ ಸುಮಾರು ೧೨ ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಒಂದು ತಿಥಿಯ ಅವಧಿ ೨೦-೨೭ ಗಂಟೆಗಳ ನಡುವೆ ಬದಲಾಗಬಹುದು.
ಈ ಪ್ರಕಾರವಾಗಿ ತಿಂಗಳಲ್ಲಿ ೩೦ ತಿಥಿಗಳು. ಶುಕ್ಲ ಪಕ್ಷದಲ್ಲಿ ೧೫ ತಿಥಿಗಳು ಹಾಗೂ ಕೃಷ್ಣ ಪಕ್ಷದಲ್ಲಿ ೧೫ ತಿಥಿಗಳು ಬರುತ್ತವೆ. ಎರಡೂ ಪಕ್ಷದ ಹದಿನೈದು ತಿಥಿಗಳನ್ನು ಈ ರೀತಿ ಗುರುತಿಸಲಾಗುತ್ತದೆ.
ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ ಅಥವಾ ಅಮವಾಸ್ಯೆ.
ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ತಿಥಿಯನ್ನು ಅಥವಾ ದಿನವನ್ನು ಏಕಾದಶಿ ಎಂದು ಕರೆಯುವರು. ಸಂಸ್ಕೃತದಲ್ಲಿ ಏಕಾದಶ ಎಂದರೆ ಹನ್ನೊಂದು. ಹನ್ನೊಂದನೆಯ ತಿಥಿಯಂದು ಚಂದ್ರನ ವೃದ್ಧಿಸುವಿಕೆ ಅಥವಾ ಕ್ಷೀಣಿಸುವಿಕೆ ನಿಖರವಾಗಿರುತ್ತದೆ.
ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ಚಂದ್ರನ ಮೂರು ನಾಲ್ಕಾಂಶ ಭಾಗ ಕಾಣಿಸುತ್ತದೆ. ಅಂದರೆ ಇದು ಚಂದ್ರನ ವೃದ್ಧಿಸುವಿಕೆಯ ಹಂತ.ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಚಂದ್ರನ ಮೂರು ನಾಲ್ಕಾಂಶ ಭಾಗ ಕಾಣಿಸುವುದಿಲ್ಲ. ಅಂದರೆ ಇದು ಚಂದ್ರನ ಕ್ಷೀಣಿಸುವಿಕೆಯ ಹಂತ.
ಒಂದು ಮಾಸದಲ್ಲಿ ಎರಡು ಏಕಾದಶಿಗಳು ಬರುತ್ತವೆ. ಒಂದು ಶುಕ್ಲ ಪಕ್ಷದಲ್ಲಿ, ಇನೊಂದು ಕೃಷ್ಣ ಪಕ್ಷದಲ್ಲಿ. ಒಂದು ವರ್ಷಕ್ಕೆ ಒಟ್ಟು ೨೪ ಏಕಾದಶಿಗಳು.
ಏಕಾದಶಿ ಒಂದು ವ್ರತ. ಈ ವ್ರತವನ್ನು ಭಗವಾನ್ ವಿಷ್ಣುವಿಗೆ ಅರ್ಪಿಸಲಾಗಿದೆ.
*ಏಕಾದಶಿ ವ್ರತದ ಪೌರಾಣಿಕ ಹಿನ್ನಲೆ* :
ಹಿಂದೂ ಪುರಾಣಗಳಲ್ಲಿ ಹೇಗೆ ಎಲ್ಲಾ ಆಚರಣೆಗಳ ಮಹತ್ವ ಸಾರಲು ಒಂದೊಂದು ಕಥೆಯಿದೆಯೋ ಹಾಗೆಯೇ ಏಕಾದಶಿಗೂ ಒಂದು ಪೌರಾಣಿಕ ಕಥೆಯಿದೆ.
ಮುರ ಎಂಬ ಹೆಸರಿನ ಒಬ್ಬ ಶೂರ ಅಸುರನಿದ್ದನು. ಅವನು ಎಲ್ಲಾ ದೇವತೆಗಳ ಮೇಲೆ ಯುದ್ದ ಸಾರುತ್ತಿದ್ದನು. ಒಂದು ದಿನ ಅವನು ಎಲ್ಲಾ ದೇವತೆಗಳ ಮೇಲೆ ಯುದ್ಧ ಸಾರಿ ತನ್ನ ಅಗಾಧವಾದ ಶಕ್ತಿಯಿಂದ ಅವರನ್ನು ಸೋಲಿಸಿದನು. ದಿಕ್ಕು ತೋಚದೇ ದೇವತೆಗಳೆಲ್ಲ ಭಗವಾನ್ ವಿಷ್ಣುವಿನ ಮೊರೆ ಹೊಕ್ಕರು. ಆಗ ಭಗವಾನ್ ವಿಷ್ಣು ಈ ಅಸುರನ ವಧೆ ಮಾಡುವುದಾಗಿ ದೇವತೆಗಳಿಗೆ ಆಶ್ವಾಸನೆ ಕೊಟ್ಟನು. ಅದರಂತೆಯೇ ಭಗವಾನ್ ವಿಷ್ಣು ಮುರ ಅಸುರನ ಮೇಲೆ ಯುದ್ಧಕ್ಕೆ ಬಂದನು. ಇಬ್ಬರೂ ತಮ್ಮ ಬಲ ಪ್ರಯೋಗದಿಂದ ಕಾದಾಡಲು ಶುರು ಮಾಡಿದರು. ಭಗವಾನ್ ವಿಷ್ಣು ತನ್ನ ಮೇಲೆ ಹೆಚ್ಚು ಪ್ರಾಬಲ್ಯ ಸಾಧಿಸುತ್ತಿದ್ದಾನೆಂದು ಅರಿತಾಗ ಆ ಅಸುರನು ತನ್ನ ಜೀವ ಉಳಿಸಿಕೊಳ್ಳಲು ಯುದ್ಧಭೂಮಿಯಿಂದ ಓಡಿದನು. ಭಗವಾನ್ ವಿಷ್ಣು ಅವನ ಬೆನ್ನಟ್ಟಿದನು. ಆದರೆ ಆ ಅಸುರ ಕಣ್ತಪ್ಪಿಸಿ ಬಚ್ಚಿಟ್ಟುಕೊಂಡನು. ಆಗ ಭಗವಾನ್ ವಿಷ್ಣು ಬದರಿ ಆಶ್ರಮಕ್ಕೆ ಹೋಗಿ ವಿಶ್ರಮಿಸಿದನು. ವಿಷ್ಣುವಿನ ಪ್ರತಿ ದ್ವೇಷ, ಕೋಪವನ್ನು ಹೊಂದಿದ ಅಸುರ ಇದೇ ಸಮಯವನ್ನು ಉಪಯೋಗಿಸಿಕೊಂಡು ಭಗವಾನ್ ವಿಷ್ಣುವಿನ ಮೇಲೆ ದಾಳಿ ಮಾಡಿದನು. ಇನ್ನೇನು ತನ್ನ ಶಸ್ತ್ರಗಳನ್ನು ವಿಷ್ಣುವಿನ ಮೇಲೆ ಉಪಯೋಗಿಸುವಷ್ಟರಲ್ಲಿಯೇ ಭಗವಾನ್ ವಿಷ್ಣುವಿನ ಶರೀರದಿಂದ ಶಸ್ತ್ರಧಾರಿಯಾದ ಹೆಣ್ಣಿನ ವೇಷದಲ್ಲಿ ಒಂದು ಶಕ್ತಿ ಹೊರಬಂದಳು. ಅವಳ ಹೆಸರು ಏಕಾದಶಿ. ಏಕಾದಶಿ ಆ ಅಸುರನಿಗೆ ತನ್ನ ಜೊತೆಗೆ ಯುದ್ಧ ಮಾಡಲು ಸವಾಲೆಸಗಿದಳು. ಅವಳ ಭಯಂಕರವಾದ ಗುಡುಗಿನಂತಹ ಆರ್ಭಟವನ್ನು ಕೇಳಿಯೇ ಆ ಅಸುರನು
ಅಸು ನೀಗಿದನು. ಆಗ ಎಚ್ಚೆತ್ತುಕೊಂಡ ಭಗವಾನ್ ವಿಷ್ಣು ಆ ದೇವಿಯನ್ನು ನೋಡಿದನು. ಆಗ ಆ ದೇವಿಯು ತಾನು ವಿಷ್ಣುವಿನ ಶರೀರದ ದಿವ್ಯ ಶಕ್ತಿಯಿಂದಲೇ ಪ್ರಕಟವಾಗಿದ್ದು ಮತ್ತು ಮುರ ಅಸುರನನ್ನು ತಾನು ಸಂಹಾರ ಮಾಡಿದ್ದಾಗಿ ತಿಳಿಸಿದಳು. ಇದರಿಂದ ಸಂಪ್ರೀತನಾದ ಭಗವಾನ್ ವಿಷ್ಣು ಆ ದೇವಿಯನ್ನು ಕುರಿತು ನಿನಗೆ ಏನು ವರ ಬೇಕು ಕೇಳು ಎಂದಾಗ ಅವಳು, ನಾನು ಎಲ್ಲಾ ತೀರ್ಥಗಳಲ್ಲಿ ವಾಸ ಮಾಡುವ ಹಾಗೆ ಕರುಣಿಸು ಮತ್ತು ಯಾವ ಭಕ್ತರು ಅಲ್ಲಿ ಬರುವರೋ ಅವರ ಭಕ್ತಿಯನ್ನು ವರ್ಧನೆ ಮಾಡುವ ಮತ್ತು ಅವರ ಪಾಪಗಳನ್ನು ಪರಿಹರಿಸಲು ಶಕ್ತಿಯನ್ನು ಕೊಡು ಮತ್ತು ಯಾರು ಇವತ್ತಿನ ದಿನ ಉಪವಾಸವನ್ನು ಮಾಡಿ ವಿಷ್ಣುವಿನ ನಾಮಸ್ಮರಣೆ ಮಾಡುವರೋ ಅವರ ಪಾಪಗಳನ್ನು ಕೂಡ ಪರಿಹರಿಸಲು ಮತ್ತು ಅವರಿಗೆ ಮೋಕ್ಷವನ್ನು ದಯಪಾಲಿಸಲು ತನಗೆ ಶಕ್ತಿಯನ್ನು ಕೂಡಲು ಕೇಳಿಕೊಂಡಳು.
ಅವತ್ತು ಮಾಸದ ಹನ್ನೊಂದನೆಯ (ಏಕಾದಶ) ದಿನವಿದ್ದಿದ್ದರಿಂದ ಅವತ್ತಿನ ದಿನದಂದು ಏಕಾದಶಿ ಹೆಸರಿನಲ್ಲಿ ಯಾರು ಉಪವಾಸ ವ್ರತವನ್ನು ಆಚರಿಸತ್ತಾರೋ ಅವರ ಪಾಪಗಳೆಲ್ಲವೂ ವಿಮೋಚನೆಯಾಗಲಿ ಎಂದು ಭಗವಾನ್ ವಿಷ್ಣು ವರವಿತ್ತನು.
ಹೀಗೆ ಏಕಾದಶಿ ವ್ರತ ಆರಂಭವಾಯಿತು.
ದೇವರು ವಿಶ್ರಮಿಸುತ್ತಿದ್ದಾಗ ಪ್ರಾಪಂಚಿಕ ಜೀವನ ನಿಂತು ಬಿಡುವುದಿಲ್ಲ ಮತ್ತು ದೇವರು ನಿಷ್ಕ್ರಿಯವಾಗಿ ಬಿಡುವುದಿಲ್ಲ. ಆಗ ದೇವರ ಶಕ್ತಿಗಳು ದೇವರ ಕೆಲಸವನ್ನು ನಿರ್ವಹಿಸುತ್ತವೆ ಎನ್ನುವದು ಈ ಕಥೆಯಿಂದ ತಿಳಿಯಬಹುದು.
ಏಕಾದಶಿ ವ್ರತವನ್ನು ಆಚರಿಸುವುದು ಉಪವಾಸವನ್ನು ಕೈಗೊಳ್ಳುವ ಮೂಲಕ. ಈ ನಿಯಮವು ಉಪವಾಸ, ಉಪವಸನಂ, ಉಪವಸ್ತಾ, ಉಪೋಷಿತಂ, ಉಪೋಷಣಮ್ ಎಂಬ ಶಬ್ದಗಳಿಂದಲೂ ಕರೆಯಲ್ಪಡುತ್ತದೆ.
*ಉಪವಾಸದ ಮೀಮಾಂಸೆ:*
ಸಾಮಾನ್ಯವಾಗಿ ಉಪವಾಸ ಎಂದರೆ ಆಹಾರವನ್ನು ಸೇವಿಸದೇ ಇರುವುದು. ರೂಢಿಯಲ್ಲಿ ಇಷ್ಟು ಮಾತ್ರ ಅರ್ಥವಿದ್ದರೂ ಅವುಗಳ ಬೇರೆ ಅರ್ಥಗಳನ್ನು ಪರಿಶೀಲಿಸಿದಾಗ ವಿಶೇಷ ಅಂಶಗಳು ಬೆಳಕಿಗೆ ಬರುತ್ತವೆ.
ಉಪವಾಸ, ಉಪವಸನ ಎಂಬ ಪದಗಳಿಗೆ ಸಮೀಪದಲ್ಲಿ ವಾಸಮಾಡುವುದು ಎಂದು ಅರ್ಥ.
ಉಪವಸ್ತಾ ಎಂದರೆ ಸಮೀಪದಲ್ಲಿದ್ದು ಸ್ತಂಭನ ಮಾಡುವದು ಎಂದು ಅರ್ಥವಾಗುತ್ತದೆ.
ಉಪೋಷಿತಂ, ಉಪೋಷಣಮ್ ಎಂಬ ಶಬ್ದಗಳಿಗೆ ಹತ್ತಿರದಲ್ಲಿದ್ದು ದಹಿಸುವ ಕರ್ಮ ಎಂದು ಅರ್ಥವಾಗುತ್ತದೆ.
ಈ ಅರ್ಥಗಳನ್ನು ವ್ರತ ನಿಯಮಕ್ಕೆ ಅನ್ವಯವಾಗುವಂತೆ ತೆಗೆದುಕೊಂಡಾಗ ಯಾರ ಸಮೀಪದಲ್ಲಿ ವಾಸ ಮಾಡಬೇಕು? ಯಾರ ಸಹವಾಸದಲ್ಲಿರಬೇಕು? ಯಾವುದನ್ನು ಸ್ತಂಭನ ಮಾಡಬೇಕು? ಯಾವುದು ದಹನ ಮಾಡಬೇಕು? ಎಂಬ ಪ್ರಶ್ನೆ ಏಳುತ್ತದೆ.
ಇದಕ್ಕೆ ಉತ್ತರ ಪರಮಾತ್ಮನ ಸಮೀಪದಲ್ಲಿರಬೇಕು, ಆತ್ಮ ಗುಣಗಳೊಡನೆ ಕೂಡಿರಬೇಕು. ಇಂದ್ರಿಯಗಳನ್ನು ಸ್ತಂಭನ ಮಾಡಬೇಕು. ದುಷ್ಟ ಕಾರ್ಯಗಳನ್ನು ದುಷ್ಟ ಸಂಸ್ಕಾರಗಳನ್ನು ದಹನ ಮಾಡಬೇಕು.
ಉಪಾವೃತ್ತಸ್ಯ ಪಾಪೆಭ್ಯೋ ಯಸ್ತು ವಾಸ ಗುಣೈಸ್ಸಹ ಉಪವಾಸಸ್ಸ ವಿಜ್ಞೇಯೋ ನ ಶರೀರಸ್ಯ ಶೋಷಣಂ
ಅಂದರೆ, ಪಾಪಗಳಿಂದ ನಿವೃತ್ತಿ ಹೊಂದಿ ಆತ್ಮ ಗುಣಗಳೊಡನೆ ಕೂಡಿರುವುದೇ ಉಪವಾಸ. ಉಪವಾಸ ವೆಂದರೆ ಕೇವಲ ಶರೀರ ಶೋಷಣೆಯಲ್ಲ.
ಹಾಗಾದರೆ ಉಪವಾಸ ಶಬ್ದಕ್ಕೆ ಆಹಾರ ವರ್ಜನೆ ಎಂಬ ಅರ್ಥವು ಏತಕ್ಕೆ ಬಂದಿತು? ಎಕೆಂದರೆ ಪರಮಾತ್ಮನ ಸಮೀಪದಲ್ಲಿರುವಾಗ ಪಾಪಗಳನ್ನು ಸುಟ್ಟುಕೊಂಡು ಪರಮಾತ್ಮಸಮಾಧಿಯಲ್ಲಿರುವಾಗ ಎಲ್ಲಾ ಇಂದ್ರಿಯಗಳ ಸ್ತಂಭನ ಆಗಿರುವಾಗ ಹೊರಗಿನ ಆಹಾರ ಬೇಕಾಗುವುದಿಲ್ಲ. ಅನ್ನ ಪಾನೀಯಗಳನ್ನು ಸೇವಿಸುವ ರಸನೇಂದ್ರಿಯವೇ ಆಗ ನಿಶ್ಚೇಷ್ಟವಾಗಿರುತ್ತದೆ. ಶಬ್ದ, ಸ್ಪರ್ಶ, ರೂಪ ರಸ ಗಂಧಗಳನ್ನು ಗ್ರಹಿಸುವ ಜ್ಞಾನೇಂದ್ರಿಯಗಳೂ ಸ್ತಬ್ಧವಾಗರುತ್ತವೆ. ಹೀಗೆ ಹೊರಗಿನ ಆಹಾರ ವರ್ಜನೆಯು ಒಳಗಿನ ಉಪವಾಸದ ಹೊರ ಚ್ಚಿಹ್ನೆಯಾದ್ದರಿಂದ ಆ ಹೊರಗುರುತಿಗೂ ಉಪವಾಸವೆಂಬ ಹೆಸರು ಬಂದಿತು. ಇದಲ್ಲದೆ ದೇಹದಲ್ಲಿ ಆಹಾರಸೇವನೆ, ಆಹಾರ ಜೀರ್ಣವಾಗುವಿಕೆ ಇತ್ಯಾದಿ ವ್ಯಾಪಾರಗಳಿಲ್ಲದಿದ್ದರೆ ದೇವರ ಧ್ಯಾನಕ್ಕೆ ದೇವರ ಸಹವಾಸಕ್ಕೆ ಸಹಾಯವೂ ಆಗುತ್ತದೆ. ಆದ್ದರಿಂದಲೂ ಹೊರಗಿನ ಆಹಾರ ವರ್ಜನೆಗೆ 'ಉಪವಾಸ ' ಎಂಬ ಅನ್ವರ್ಥವಾದ ಹೆಸರು ಬಂದಿದೆ.
ಉಪವಾಸವನ್ನು ಏಕೆ ಮಾಡಬೇಕು?
ಆಗಾಗ್ಗೆ ಲಂಘನವನ್ನು (ಉಪವಾಸವನ್ನು) ಮಾಡುತ್ತಿದ್ದರೆ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.
'ಲಂಘನಂ ಪರಮೌಷಧಂ' ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಇದು ಅನುಭವಸಿದ್ಧವಾದ ವಿಷಯ.
ಮಹಾಕವಿ ಕಾಳಿದಾಸ ಹೇಳುವಂತೆ
"ಶರೀರಮಾಧ್ಯಂ ಖಲು ಧರ್ಮಸಾಧನಂ" ಅಂದರೆ ಧರ್ಮ ಸಾಧನೆಗೆ ಸ್ವಾಸ್ಥ್ಯ ಶರೀರ ಅತ್ಯಗತ್ಯ.
ದೇಹಕ್ಕೆ ಆಹಾರ ಪಾನೀಯಗಳನ್ನು ಕೊಟ್ಟಾಗ ಇಂದ್ರಿಯಗಳು ಮತ್ತು ಮನಸ್ಸು ಅವುಗಳನ್ನು ಜೀರ್ಣ ಮಾಡಿ ದೇಹವನ್ನು ಸವೆಯದಂತೆ ಹಸನು ಮಾಡುವ ಕೆಲಸದಲ್ಲಿ ತೊಡಗುತ್ತವೆ. ಆ ಕೆಲಸದಲ್ಲಿ ತೊಡಗಿರುವ ಇಂದ್ರಿಯ ಮನಸ್ಸುಗಳನ್ನು "ನಿಮ್ಮ ಕೆಲಸವನ್ನು ನಿಲ್ಲಿಸಿ ಭಗವಂತನ ಧ್ಯಾನದಲ್ಲಿ ಏಕಮುಖವಾಗಲು ಬನ್ನಿರಿ ' ಎಂದು ಆಜ್ಞಾಪಿಸಿದರೆ ಅವು ಕೇಳುತ್ತವೆಯೆ? ಬಲವಂತವಾಗಿ ಕೆಲಸ ಮಾಡಿಸಿದರೆ ಪ್ರವೃತ್ತಿ, ನಿವೃತ್ತಿ ಎರಡಕ್ಕೂ ತೊಂದರೆಯಾಗುತ್ತದೆ. ಆದರಿಂದ ನಿಯತ ಕಾಲದವರೆಗೆ ಇಂದ್ರಿಯ ಮನಸ್ಸುಗಳಿಗೆ ಆಹಾರ ಪಾಚನ ಕೆಲಸಗಳಿಂದ ಬಿಡುವು ದೊರೆಯುವಂತೆ ಮಾಡಬೇಕು. ಆಗ ಅವು ಏಕಮುಖವಾಗಿ ದೇವರ ಧ್ಯಾನ ಮಾಡಲು ಸಮರ್ಥವಾಗುತ್ತವೆ.
ಏಕಾದಶಿ ಉಪವಾಸವು ಒಂದು ಮಾನಸಿಕ ಶಿಸ್ತು. ಮನಃಪೂರ್ವಕವಾಗಿ ಉತ್ಸಾಹ ಸಂತೋಷಗಳಿಂದ ಮಾಡುವ ಉಪವಾಸವು ಮನುಷ್ಯನ ಮನಸ್ಸಿನಿಂದ ಪಾಶವಿಕ ಭಾವನೆಗಳನ್ನು ತೊಲಗಿಸಿ ಭಗವಂತನ ಅನುಗ್ರಹವನ್ನು ಸ್ವೀಕರಿಸಲು ಸಮರ್ಥವಾಗುವವಂತೆ ಮಾಡುತ್ತದೆ.
"ಉಪವಾಸಕ್ಕೆ ದಾಸನಾಗಬೇಡ. ಅದನ್ನು ನಿನ್ನ ದಾಸನನ್ನಾಗಿ ಸ್ವೀಕರಿಸಿ ಪರಮಾತ್ಮಭಾವಕ್ಕೆ ಏರುವ ಏಣಿಯನ್ನಾಗಿ ಮಾಡಿಕೋ" ಎಂದು ಮಹಾತ್ಮರು ಉಪದೇಶ ಮಾಡಿದ್ದಾರೆ.
ಭಗವಂತನ ಕಥಾಶ್ರವಣಕ್ಕೆ ವಿಘ್ನವಾಗುವ ಪಕ್ಷದಲ್ಲಿ ಅಂತಹ ಉಪವಾಸವು ಶ್ರೇಷ್ಠವಲ್ಲ. ಅದಕ್ಕಿಂತಲೂ ಭಗವಂತನ ಕಥಾಶ್ರವಣಕ್ಕೆ ಸಹಾಯ ಮಾಡುವ ರೀತಿಯಲ್ಲಿರುವ ಭೋಜನವೇ ಶ್ರೇಷ್ಠ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ.
*ಏಕಾದಶಿ ಉಪವಾಸದ ಪೌರಾಣಿಕ ಮಹತ್ವ* :
ಪದ್ಮಪುರಾಣದ ಪ್ರಕಾರ ಏಕಾದಶಿ ಉಪವಾಸ ಆಚರಣೆಯಿಂದ ನೂರಾರು ಜನ್ಮಾಂತರಗಳ ಪಾಪವೆಂಬ ಕಟ್ಟಿಗೆಯು ಭಸ್ಮವಾಗಿ ಬಿಡುತ್ತದೆ. ಮಹಾಯಜ್ಞಗಳ ಫಲವೂ ಕೂಡ ಇದರ ಹದಿನಾರನೆಯ ಒಂದು ಭಾಗಕ್ಕೂ ಸಮವಾಗುವದಿಲ್ಲ. ಇದು ಸ್ವರ್ಗ, ಮೋಕ್ಷ, ರಾಜ್ಯ, ಸಂತಾನ, ದೇಹಾರೋಗ್ಯ ಮುಂತಾದ ಐಹಿಕ ಫಲಗಳನ್ನು ಕೊಡುತ್ತದೆ.
ಒಂದು ತಟ್ಟೆಯಲ್ಲಿ ಇಡೀ ಪೃಥ್ವಿ ದಾನದ ಫಲವನ್ನಿಟ್ಟು ಮತ್ತೊಂದರಲ್ಲಿ ಏಕಾದಶಿಯ ಫಲವನ್ನಿಟ್ಟರೆ ಎರಡನೇಯದು ಹೆಚ್ಚು ಪುಣ್ಯಕರ ಎಂದು ಗರುಡ ಪುರಾಣ ಹೇಳುತ್ತದೆ.
ಕೃಷ್ಣಾಮೃತಮಹಾರ್ಣವದ ಪ್ರಕಾರ ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿ ವ್ರತಕ್ಕೆ ಸಮನಾಗಲಾರದು.
ವಸಿಷ್ಠ ಮಹರ್ಷಿಗಳ ಪ್ರಕಾರ ಹನ್ನೊಂದು ಇಂದ್ರಿಯಗಳಿಂದ ( ೫ ಜ್ಞಾನೇಂದ್ರಿಯಗಳು, ೫ ಕರ್ಮೇಂದ್ರಿಯಗಳು ಮತ್ತು ೧ ಉಭಯೇಂದ್ರಿಯ ) ಸಂಪಾದಿಸಿದ ಸಕಲ ಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿ ಪರಿಹರಿಸುತ್ತದೆ. ಆದ್ದರಿಂದ ಏಕಾದಶಿ ವ್ರತದಷ್ಟು ಪಾವನವಾದದ್ದು ಮತ್ತು ಸಮಾನವಾದದ್ದು ಯಾವುದೂ ಇಲ್ಲ.
ನಿಜವಾದ ನಿಷ್ಠಾವಂತರು ಆತ್ಮವನ್ನು ಶುದ್ಧೀಕರಿಸಲು ಮತ್ತು ಮೋಕ್ಷವನ್ನು ಸಾಧಿಸಲು ಈ ದಿನವನ್ನು ಆಚರಿಸಬೇಕು ಎಂದು ಭಗವಾನ್ ವಿಷ್ಣು ಯುಧಿಷ್ಠಿರನಿಗೆ ಏಕಾದಶಿ ಉಪವಾಸದ ಮಹತ್ವವನ್ನು ನಿರೂಪಿಸಿದರು.
ಮಾನವ ಜೀವನದ ಮುಖ್ಯ ಉದ್ದೇಶ ಮೋಕ್ಷವನ್ನು ಪಡೆಯುವುದಾದ್ದರಿಂದ ಈ ಉಪವಾಸವು ಎಲ್ಲರಿಗೂ ವಿಶೇಷವಾಗಿ ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ.
*ಏಕಾದಶಿ ವ್ರತವನ್ನು ಆಚರಿಸುವ ಕ್ರಮ* :
ಏಕಾದಶಿ ವ್ರತ ಅತ್ಯಂತ ಪವಿತ್ರ, ಶ್ರೇಷ್ಠವಾದ ಮತ್ತು ಶ್ರೇಯಸ್ಕರವಾದ ವ್ರತ. ಇದನ್ನು ಸಕಲರೂ ಸುಲಭವಾಗಿ ಆಚರಿಸಬಹುದು.
ಏಕಾದಶಿ ವ್ರತವನ್ನು ಆಚರಿಸುವವರು, ಸಾಧ್ಯವಾದರೆ ದಶಮಿ ತಿಥಿಯಂದು ಒಂದು ಹೊತ್ತು ಆಹಾರ ಸೇವಿಸಿ (ಮಧ್ಯಾಹ್ನ ಮಾತ್ರ) ಮರುದಿನ ಏಕಾದಶಿ ವ್ರತವನ್ನು ಮಾಡಿ ಮರುದಿನ ದ್ವಾದಶಿ ತಿಥಿಯಂದು ಪ್ರಾತಃಕಾಲ ವ್ರತದ ಉದ್ಯಾಪನೆಯನ್ನು ಮಾಡಬೇಕು. ಉದ್ಯಾಪನೆಯನ್ನು ಪಾರಣೆ ಎಂದು ಕರೆಯುತ್ತಾರೆ.
ಏಕೆಂದರೆ ಅದರಿಂದಲೇ ವ್ರತವು ಪಾರ (ತೀರ) ವನ್ನು ಕಾಣುವುದು.
ಏಕಾದಶಿಯಂದು ಪ್ರಾತಃಕಾಲ ಸ್ನಾನ ಕರ್ಮಾದಿಗಳನ್ನು ಮುಗಿಸಿ ಧರ್ಬೆಯನ್ನು ಧರಿಸಿ ಉತ್ತರಾಭಿಮುಖವಾಗಿ ಜಲದ ತಾಮ್ರ ಕಲಶವನ್ನು ಹಿಡಿದುಕೊಂಡು "ಇಂದು ಉಪವಾಸ ಮಾಡುವೆನು. ನಾಳೆಯ ದಿನ ಪಾರಣೆ ಮಾಡುವೆನು. ಇದಕ್ಕೆ ಅನುಗ್ರಹ ಮಾಡು" ಎಂದು ಸಂಕಲ್ಪ ಮಾಡಿ "ಓಂ ನಮೋ ಭಾಗವತೇ ವಾಸುದೇವಾಯ" ಎಂಬ ಮಂತ್ರವನ್ನು ಜಪಿಸಿ ಶ್ರೀಹರಿಗೆ ಪುಷ್ಪವನ್ನು ಸಮರ್ಪಿಸಬೇಕು.
ಇಡೀ ದಿನ ಭಗವಂತನ ಸ್ತುತಿ, ಕೀರ್ತನೆಗಳಲ್ಲಿ ಕಾಲವನ್ನು ವಿನಿಯೋಗಿಸಬೇಕು.
ಸಂಕಲ್ಪವಿಲ್ಲದೆಯೂ ಉಳಿದ ನಿಯಮಗಳನ್ನು ಪಾಲಿಸಿ ಏಕಾದಶಿಯನ್ನು ಆಚರಿಸಬಹುದು.
ಈ ವ್ರತದಲ್ಲಿ ನಿರಾಹಾರ, ಜಲಾಹಾರ, ಲಘು ಆಹಾರ ಉಪವಾಸ ಪದ್ಧತಿಯನ್ನು ಅನುಸರಿಸುತ್ತಾರೆ.
ನಿರಾಹಾರ (ನಿರ್ಜಲ) ಉಪವಾಸ ಮಾಡುವವರು ಒಂದು ಹನಿ ನೀರು ಕೂಡ ಸೇವಿಸಬಾರದು.
ಜಲಾಹಾರ ಉಪವಾಸ ಮಾಡುವವರು ನೀರು ಮಾತ್ರ ಸೇವಿಸಬೇಕು.
ಲಘು ಆಹಾರ ಸೇವಿಸಿ ಉಪವಾಸ ಮಾಡುವವರು ಅಲ್ಪ ಪ್ರಮಾಣದಲ್ಲಿ ಸಾತ್ವಿಕವಾದ ಮತ್ತು ಹೊಟ್ಟೆಗೆ ಭಾರವಾಗದ ಆಹಾರವನ್ನು ಸೇವಿಸಬೇಕು. ಅಂತಹ ಆಹಾರಗಳು ನೀರು, ಹಣ್ಣು, ಹಾಲು, ಗೆಡ್ಡೆ, ಗೆಣಸು ಸೇವಿಸಬಹುದು.
ಲಘು ಆಹಾರದ ಹೆಸರಿನಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಧಾರಾಳವಾಗಿ ಸೇವಿಸಿ ಉಪವಾಸ ಎಂದು ಹೇಳಿಕೊಳ್ಳುವುದು ಆಡಂಬರದ ಉಪವಾಸ ಆಗುತ್ತದೆ.
ಆಚೆ ಮನೆ ಸುಬ್ಬಮ್ಮಂದು ಏಕಾದಶಿ ಉಪವಾಸ ಎಲ್ಲೋ ಸ್ವಲ್ಪ ತಿಂತಾರಷ್ಟೇ ಉಪ್ಪಿಟ್ಟು ಅವಲಕ್ಕಿ ಪಾಯಸ (ಇದು ಸುಬ್ಬಮ್ಮಂದು ಪ್ರಾತಃಕಾಲದ ಫಲಾಹಾರದ ವೈಭವ ಮಾತ್ರ. ಮಧ್ಯಾಹ್ನ ಮತ್ತು ರಾತ್ರಿ ಬೇರೆ)
ಇಂತಹ ವಿಡಂಬನೆಯ ಗೀತೆಗಳು ಹುಟ್ಟಿಕೊಂಡಿದ್ದು ಉಪವಾಸದ ನೆಪದಲ್ಲಿ ಧಾರಾಳವಾಗಿ ಸೇವಿಸುವವರಿಗಾಗಿ. ಇಂತಹ ಆಡಂಬರ ಅಶಾಸ್ತ್ರೀಯ.
ಮಾರನೆಯ ದಿನ ಪ್ರಾತಃಕಾಲದಲ್ಲಿ ದೇವರ ಪೂಜೆ, ಬ್ರಾಹ್ಮಣ ಭೋಜನ ಮಾಡಿಸಿ ವ್ರತದ ಉದ್ಯಾಪನೆಯನ್ನು ಮಾಡಬೇಕು. ದ್ವಾದಶಿಯ ದಿವಸ ಪ್ರಾತಃಕಾಲದಲ್ಲಿಯೇ ಪಾರಣೆ ಭೋಜನ ಮಾಡಬೇಕು. ಸಕಾಲದಲ್ಲಿ ಭೋಜನ ಪಾರಣೆಯನ್ನು ಮಾಡಲಾಗದಿದ್ದರೆ ಜಲ ಪಾರಣೆಯನ್ನಾದರೂ ಮಾಡಬೇಕು. ದಶಮಿ- ಏಕಾದಶಿ - ದ್ವಾದಶಿ ಮೂರು ದಿನಗಳನ್ನು ಹರಿದಿನ ಎನ್ನುತ್ತಾರೆ.
*ಏಕಾದಶಿಯ ದಿನದಂದು ಅನ್ನವನ್ನು ಏಕೆ ಸ್ವೀಕರಿಸಬಾರದು? ಇದರ ಪೌರಾಣಿಕ ಕಾರಣ* :
ಪದ್ಮ ಪುರಾಣದ ಪ್ರಕಾರ ಭಗವಂತನು ಪ್ರಪಂಚದ ಸೃಷ್ಟಿ ಮಾಡಿದಾಗ ಪಾಪ ಪುರುಷನನ್ನು ಸೃಷ್ಟಿ ಮಾಡಿದನಂತೆ.
ಪಾಪ ಪುರುಷನ ಪ್ರಭಾವದಿಂದ ತುಂಬಾ ಜೀವಾತ್ಮಗಳು ಪಾಪ ಮಾಡಿ ನರಕಕ್ಕೆ ಹೋಗುತ್ತಿದ್ದರಂತೆ.
ಆದರೆ ಯಾರ ಏಕಾದಶಿ ವ್ರತವನ್ನು ಮಾಡುತ್ತಾರೋ ಅವರ ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂದು ವರವನ್ನಿತ್ತಿದ್ದರಿಂದ ಎಲ್ಲಾ ಪಾಪಿಷ್ಟರು ವ್ರತವನ್ನು ಆಚರಿಸಿ ಪಾಪದಿಂದ ಮುಕ್ತಿ ಪಡೆದರಂತೆ.
ಆಗ ಪಾಪಿಷ್ಟರೂ ಕೂಡ ನರಕಕ್ಕೆ ಹೋಗುವುದನ್ನು ತಪ್ಪಿಸಿಕೊಂಡರು.
ಆಗ ಪಾಪ ಪುರುಷನು ಭಗವಂತನನ್ನು ಕೇಳಿದನಂತೆ ನೀವೇ ನನ್ನನ್ನು ಸೃಷ್ಟಿಸಿದ್ದು ಹಾಗಾಗಿ ಈ ಸೃಷ್ಟಿಯಲ್ಲಿ ನನ್ನ ಕೊಡುಗೆಯೂ ಮಹತ್ವದ್ದು.
ಎಲ್ಲಿ ಪುಣ್ಯವಿದೆಯೂ ಅಲ್ಲಿ ಪಾಪವೂ ಇರಲೇಬೇಕು. ಆದರೆ ಈಗ ಏಕಾದಶಿ ಪ್ರಭಾವದಿಂದ ಯಾವ ಜೀವಾತ್ಮವೂ ನನ್ನ ಪ್ರಭಾವಕ್ಕೆ ಒಳಗಾಗುತ್ತಿಲ್ಲ. ಹಾಗಾಗಿ ನನ್ನ ಅಸ್ತಿತ್ವವೇ ಇಲ್ಲ ಎಂದಾಗ ಭಗವಂತನು ಅವನ ಮೇಲೆ ಕರುಣೆ ತೋರಿ ಏಕಾದಶಿ ದಿನದಂದು ನೀನು ಅನ್ನದಲ್ಲಿ ವಾಸ ಮಾಡು.
ಯಾರು ಏಕಾದಶಿಯಂದು ಅನ್ನವನ್ನು ಸ್ವೀಕರಿಸುತ್ತಾರೆ ಅವರು ಪಾಪ ಪುರುಷನ ಪ್ರಭಾವಕ್ಕೆ ಒಳಗಾಗುತ್ತಾರೆ ಎಂದು ಹೇಳಿ ಪಾಪ ಪುರುಷನನ್ನು ಸಂತುಷ್ಟ ಪಡಿಸಿದನಂತೆ.
ಹಾಗಾಗಿ ಏಕಾದಶಿಯಂದು ಎಲ್ಲಾ ತರಹದ ಪಾಪಗಳು ಅನ್ನವನ್ನು ಆಶ್ರಯಿಸಿರುತ್ತವೆ. ಆದ್ದರಿಂದ ಅನ್ನವನ್ನು ಊಟ ಮಾಡುವುದರಿಂದ ಆ ಪಾಪಗಳಿಗೆ ಭಾಗಿಯ
ಾಗುತ್ತಾರೆ ಎಂದು ನಮ್ಮ ಪುರಾಣಗಳು ಹೇಳುತ್ತವೆ.
*ಏಕಾದಶಿ ವ್ರತವನ್ನು ಆಚರಿಸಲು ಯಾರಿಗೆ ಅಧಿಕಾರವಿದೆ ?*
ಏಕಾದಶಿಯು ವಿಷ್ಣು ಪರವಾದ ವ್ರತವಾದ್ದರಿಂದ ಇದನ್ನು ವೈಷ್ಣವರು ಮಾತ್ರ ಆಚರಿಸಬೇಕು ಎಂದು ಹೇಳುವುದು ಸರಿಯಲ್ಲ. ಇದು ವಿಷ್ಣು ದೇವತಾ ಪ್ರಧಾನವಾದ ವ್ರತವಾಗಿ "ಹರಿದಿನ" ಎಂದು ಕರೆಯಲ್ಪಟ್ಟಿದ್ದರೂ ಪರಂಜ್ಯೋತಿಯ ಧ್ಯಾನಕ್ಕೆ ಅನುಗುಣವಾದ ಕಾಲಧರ್ಮವನ್ನು ಹೊಂದಿರುವುದರಿಂದ ಎಲ್ಲಾ ಮತ ಪಂಥದವರೂ ಈ ವ್ರತಾಚರಣೆಯನ್ನು ಮಾಡಬಹುದು.
*ಏಕಾದಶಿ ಉಪವಾಸವನ್ನು ಯಾರು ಮಾಡಬಾರದು ?*
ಎಂಟು ವರ್ಷದ ಕೆಳಗಿನ ಮಕ್ಕಳು, ಎಂಬತ್ತು ವರ್ಷ ಮೀರಿದ ವೃದ್ಧರು, ಗರ್ಭಿಣಿ ಸ್ತ್ರೀಯರು, ರೋಗಿಗಳು, ಅಶಕ್ತರು ಉಪವಾಸ ಮಾಡಬೇಕಾಗಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ.
ಆರೋಗ್ಯವಂತ ಎಂಬತ್ತು ವರ್ಷ ಮೇಲ್ಪಟ್ಟವರು ಉಪವಾಸ ಮಾಡುವುದಾದರೂ ಒಂದು ಹೊತ್ತು ಮಾತ್ರ ಭೋಜನ ಮಾಡಬಹುದು (ಏಕಭುಕ್ತ) ಎಂದು ಮತ್ಸ್ಯ ಪುರಾಣದಲ್ಲಿ ಹೇಳಲಾಗಿದೆ.
ಈ ಮೇಲೆ ತಿಳಿಸಿದ ಏಕಾದಶಿ ವ್ರತದ ಆಚರಣೆಯು ನಮ್ಮ ಪುರಾಣಗಳು, ಉಪನಿಷತ್ ಗಳು, ಮೀಮಾಂಸಗ್ರಂಥಗಳು ಹೇಳಿರುವಂತಹದು.
ಆದರೆ ೨೧ ನೇ ಶತಮಾನದಲ್ಲಿ ಧರ್ಮಶಾಸ್ತ್ರವನ್ನು ನಂಬದವರು ಉಪವಾಸ ಮಾಡುವುದು ಎಷ್ಟು ಪ್ರಸ್ತುತ ? ಏನು ಲಾಭಗಳು? ಎಂದು ತಿಳಿಯಲು ಏಕಾದಶಿ ಉಪವಾಸದ ವೈಜ್ಞಾನಿಕ ಮಹತ್ವವನ್ನು ತಿಳಿಯುವದು ಕೂಡ ಅಷ್ಟೇ ಮಹತ್ವವಾಗಿದೆ.
*ಏಕಾದಶಿ ಉಪವಾಸದ ವೈಜ್ಞಾನಿಕ ಮಹತ್ವ* :
ಸಂಶೋಧನೆಯ ಪ್ರಕಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಭೂಮಿಯ ವಾತಾವರಣದಲ್ಲಿನ ವಾಯು ಒತ್ತಡವು ವೇಗವಾಗಿ ಬದಲಾಗುತ್ತದೆ. ಸೂರ್ಯ, ಚಂದ್ರ ಮತ್ತು ಭೂಮಿಯ ಸಂಯೋಜನೆ ಮತ್ತು ನಿರ್ದಿಷ್ಟ ಸಮಯದಲ್ಲಿ ಅವುಗಳ ವಿಭಿನ್ನ ಅಂತರಗಳಿಂದ ಹೀಗೆ ಆಗುತ್ತದೆ.
ವಾತಾವರಣದಲ್ಲಿನ ಒತ್ತಡವು ತೀವ್ರವಾಗಿ ಬದಲಾಗುವಿಕೆಯನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಸಾಗರದ ಉಬ್ಬರವಿಳಿತದ ಅಲೆಗಳ ಸ್ವರೂಪದಲ್ಲಿನ ಬದಲಾವಣೆಯಿಂದ ಇದನ್ನು ಗಮನಿಸಬಹುದು.
ಸಾಗರಗಳಲ್ಲಿ ವಾತಾವರಣದ ಒತ್ತಡ ಹೆಚ್ಚಳದಿಂದ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನ ಅಲೆಗಳು ತುಂಬಾ ಹೆಚ್ಚು ಮತ್ತು ಒರಟಾಗಿರುತ್ತವೆ.
ಆದರೆ ಮರುದಿನದಿಂದ, ಅಲೆಗಳು ಶಾಂತವಾಗುತ್ತವೆ. ಇದು ಒತ್ತಡವೂ ಕಡಿಮೆಯಾಗಿದೆ ಎಂಬ ಸೂಚನೆಯಾಗಿದೆ. ವಿಶೇಷವಾಗಿ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನಗಳಿಂದ ೧೧ ನೇ ದಿನದಂದು, ಒತ್ತಡವು ತುಂಬಾ ಹಗುರವಾಗಿರುತ್ತದೆ. ಈ ಸತ್ಯದ ಆಧಾರದ ಮೇಲೆ, ಏಕಾದಶಿ ಉಪವಾಸದ ಮಹತ್ವವನ್ನು ಈ ರೀತಿ ವಿವರಿಸಬಹುದು
ಚಂದ್ರನ ಚಲನೆಯ ಚಕ್ರದ ಯಾವುದೇ ದಿನಕ್ಕೆ ಹೋಲಿಸಿದರೆ, ಏಕಾದಶಿ ದಿನಗಳಲ್ಲಿ ವಾತಾವರಣದ ಒತ್ತಡ ಕಡಿಮೆ ಇರುತ್ತದೆ. ಹೀಗಾಗಿ ಅಂದು ನಾವು ಉಪವಾಸ ಮಾಡುವದರಿಂದ ದೇಹವನ್ನು ಶುದ್ಧೀಕರಿಸಲು ಅತ್ಯುತ್ತಮ ಸಮಯ.
ಉಪವಾಸ ಮಾಡುವುದರಿಂದ ಇಡೀ ದೇಹದ ಕಾರ್ಯವಿಧಾನವನ್ನು-ವಿಶೇಷವಾಗಿ ಯಕೃತ್ತು / ಹೊಟ್ಟೆ / ಕರುಳನ್ನು ಉಲ್ಲಾಸಗೊಳಿಸುತ್ತದೆ.
ನಾವು ಬೇರೆ ಯಾವುದೇ ದಿನ ಉಪವಾಸ ಮಾಡಿದರೆ, ವಾತಾವರಣದ ಅಧಿಕ ಒತ್ತಡವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸಬಹುದು.
ಏಕಾದಶಿ ಮತ್ತು ಚಂದ್ರನ ಚಲನೆಯು ಮಾನವನ ಮನಸ್ಸಿನೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಏಕಾದಶಿ ಸಮಯದಲ್ಲಿ ಚಂದ್ರನ ನಿಖರವಾದ ವೃದ್ಧಿಸುವಿಕೆ ಅಥವಾ ಕ್ಷೀಣಿಸುವುಕೆಯ ಹಂತದಿಂದ ನಮ್ಮ ಮನಸ್ಸು ಗರಿಷ್ಠ ದಕ್ಷತೆಯನ್ನು ಪಡೆಯುತ್ತದೆ. ಇದು ಮೆದುಳಿಗೆ ಕೇಂದ್ರೀಕರಿಸಲು ಉತ್ತಮ ಸಾಮರ್ಥ್ಯವನ್ನು ನೀಡುತ್ತದೆ.
ಇದಲ್ಲದೆಯೇ ಉಪವಾಸವು ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ. ಆಹಾರವನ್ನು ಅತಿಯಾಗಿ ತಿನ್ನುವುದು ಅಥವಾ ವಿವೇಚನೆಯಿಲ್ಲದೆ ತಿನ್ನುವ ಕಾರಣ ಜೀರ್ಣಾಂಗ ವ್ಯವಸ್ಥೆಗೆ ಅತಿಯಾದ ಕೆಲಸವಾಗಬಹುದು. ಹೀಗೆ ಹದಿನೈದು ದಿನಗಳ ಏಕಾದಶಿ ಉಪವಾಸವು ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಕೆಲಸ ನಿರ್ವಹಿಸಲು ಅವಕಾಶವನ್ನು ನೀಡುತ್ತದೆ.
ಜೀರ್ಣಾಂಗ ವ್ಯವಸ್ಥೆಯು ಜೀರ್ಣಕಾರಿ ಅಂಗಗಳ ಕಡೆಗೆ ರಕ್ತ ಪರಿಚಲನೆಯನ್ನು ಸೆಳೆಯುತ್ತದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಆಹಾರವನ್ನು ತೆಗೆದುಕೊಂಡ ನಂತರ ತಲೆಗೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಆದ್ದರಿಂದ ನಮಗೆ ನಿದ್ರೆ ಬರುತ್ತದೆ. ಹೀಗೆ ಏಕಾದಶಿಯ ಉಪವಾಸ ಮಾಡುವುದರಿಂದ ರಕ್ತ ಪರಿಚಲನೆಯು ಜೀರ್ಣಕಾರಿ ಅಂಗಗಳ ಬದಲು ಮೆದುಳಿಗೆ ಜಾಸ್ತಿ ಆಗುತ್ತದೆ. ಅದು ನಮ್ಮ ಮೆದುಳು ಮತ್ತು ಮನಸ್ಸನ್ನು ಉದ್ದೀಪನ ಮಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮನ್ನು ಹೆಚ್ಚು ಜಾಗರೂಕರಾಗಿ, ತೀಕ್ಷ್ಣವಾಗಿ, ಕೇಂದ್ರೀಕೃತವಾಗಿ ಮತ್ತು ಹೆಚ್ಚು ಜಾಗೃತರಾಗಿರಿಸುತ್ತದೆ.
ನಿಯಮಿತ ಉಪವಾಸವು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ "ಕೆಟ್ಟ," ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ದೇಹವು ಸಕ್ಕರೆಯನ್ನು ಚಯಾಪಚಯಗೊಳಿಸುವ ವಿಧಾನವನ್ನು ಸುಧಾರಿಸುತ್ತದೆ . ಇದರಿಂದ ತೂಕವನ್ನು ಹೆಚ್ಚಿಸುವ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ರಕ್ತವನ್ನು ಶುದ್ಧಗೊಳಿಸುತ್ತದೆ
ಆಹಾರ ತಜ್ಞೆ ಡಾ. ಎಚ್.ಎಸ್. ಪ್ರೇಮಾ ಅವರ ಹೇಳುವಂತೆ ಉಪವಾಸ ಮಾಡಿದಾಗ ದೇಹದಲ್ಲಿರುವ ಅನುಪಯುಕ್ತವಾದಂತಹ ಪ್ರೊಟೀನ್ ಗಳು, ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಗಳನ್ನು ನಮ್ಮ ಮೆದುಳು ಮರುಬಳಿಕೆ ಮಾಡಿ ಹೊಸ ಜೀವಕೋಶಗಳನ್ನು ಸೃಷ್ಟಿ ಮಾಡುತ್ತದೆ .
ಹಾಗಾದರೆ ಉಪವಾಸ ಮಾಡಿದಾಗ ನಮ್ಮ ದೇಹದಲ್ಲಿ ಯಾವ ಕಾರ್ಯ ವಿಧಾನಗಳು ನಡೆಯುತ್ತವೆ ನೋಡೋಣ.
ನಾವು ಉಪವಾಸದ ಹಿಂದಿನ ದಿನ ತಿಂದ ಆಹಾರ ಜೀರ್ಣವಾಗಿ ದೇಹಕ್ಕೆ ಬೇಕಾದ ಶಕ್ತಿಯನ್ನು ೧೨ ಗಂಟೆಗಳ ಕಾಲ ಒದಗಿಸುತ್ತಿರುತ್ತದೆ. ೧೨ ಗಂಟೆಗಳು ಆದ ಮೇಲೆ ದೇಹದಲ್ಲಿರುವ ಆಹಾರ ಅಂಶಗಳು ಖಾಲಿಯಾಗುತ್ತದೆ. ಆಗ ಮೆದುಳು ನಮ್ಮ ದೇಹಕ್ಕೆ ಒಂದು ಸಂದೇಶವನ್ನು ಕಳಿಸುತ್ತದೆ. ಆ ಸಂದೇಶ "ಹಸಿವಾಗ್ತಾ ಇದೆ ಏನಾದರೂ ತಿನ್ನು" ಎಂದು.
ಆದರೆ ಉಪವಾಸ ಮಾಡಬೇಕು ಎಂದು ಮನಸ್ಸು ನಿರ್ಧರಿಸಿರುತ್ತದೆ. ಹಾಗಾಗಿ ಹಸಿವಿನ ಸಂದೇಶವನ್ನು ಮನಸ್ಸು ಪರಿಗಣಿಸದೇ ಉಪವಾಸವನ್ನು ಮುಂದುವರೆಸುತ್ತದೆ. ನಮ್ಮ ದೇಹದ ಯಾವುದೇ ಅಂಗ ಹಸಿವನ್ನು ತಡೆಯಬಲ್ಲದು. ಆದರೆ ನಮ್ಮ ಮೆದುಳು ಮಾತ್ರ ಹಸಿವನ್ನು ತಡೆಯಲು ಸಾಧ್ಯವೇ ಇಲ್ಲ. ಮೆದುಳಿಗೆ ನಿರಂತರ ಗ್ಲೂಕೋಸ್ ಸರಬರಾಜು ಆಗ್ತಾ ಇರಬೇಕು.
೧೨ ಗಂಟೆಗಳಾದ ಮೇಲೆ ಮೆದುಳು ಸಂದೇಶ ಕಳಿಸಿದ ಮೇಲೂ ಯಾವಾಗ ಹೊಟ್ಟೆಗೆ ಆಹಾರ ಸಿಗುವದಿಲ್ಲವೋ ಆಗ ಮೆದುಳು ಮತ್ತು ಮನಸ್ಸಿನ ನಡುವೆ ಈ ರೀತಿ ಅದ್ಭುತ ಸಂಭಾಷಣೆ ನಡೆಯುತ್ತದೆ.
*ಮನಸ್ಸು* : ನಾನು ಉಪವಾಸ ಮಾಡಲು ನಿರ್ಧರಿಸಿ ಬಿಟ್ಟಿದ್ದೇನೆ ಹಾಗಾಗಿ ನೀನು ಎಷ್ಟೇ ಸಂದೇಶ ಕಳಿಸಿದರೂ ನಾನು ಏನನ್ನೂ ತಿನ್ನುವುದಿಲ್ಲ.
*ಕೋಪಗೊಂಡ ಮೆದುಳು*: ಅದು ಹೇಗೆ ನೀನು ಏನನ್ನೂ ತಿನ್ನುವುದಿಲ್ಲ? ಮಾಡ್ತೀನಿ ಇರು.
ಆಗ ನಮಗೆ ಸಿಟ್ಟು, ಗಲಿಬಿಲಿ, ಕಸಿವಿಸಿ ಆಗುವ ಹಾಗೆ ಮಾಡಿ ದೇಹದಲ್ಲಿ ಹಸಿವಿನ ತೀವ್ರತೆಯನ್ನು ಮೆದುಳು ಉಂಟು ಮಾಡುತ್ತದೆ.
*ಮನಸ್ಸು* : ನೀನು ಏನಾದರೂ ಮಾಡಿಕೋ, ನನ್ನ ನಿರ್ಧಾರ ಬದಲಾಗುವುದಿಲ್ಲ. ನನಗೆ ಹಸಿವೆಯನ್ನು ತಡೆದುಕೊಳ್ಳುವ ಶಕ್ತಿ ಇದೆ.
ಹೇಗೆ ನಾವು ತುಂಬಾ ಹಸಿವಾದಾಗ ಅಡುಗೆ ಮನೆಯಲ್ಲಿ ಎಲ್ಲ ಡಬ್ಬಗಳನ್ನು ಹುಡುಕಿ ಏನೂ ಸಿಗದಿದ್ದಾಗ ಕೊನೆಗೆ ಒಂದು ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಳ್ತೀವೆಯೋ ಅದೇ ರೀತಿ ಮೆದುಳು ಕೂಡ ಮಾಡುತ್ತೆ.
*ಮೆದುಳು* : ಸಾರಿ ಹಾಗಾದರೆ ನಾನು ನನ್ನ ಕಣ್ಣಿಗೆ (ಮೆದುಳಿನ ಕಣ್ಣು) ದುರ್ಬೀನು ಹಾಕಿಕೊಂಡು ದೇಹದ ಒಳಗೆಲ್ಲ ಆಹಾರ ಕಣಗಳನ್ನು ಹುಡುಕುತ್ತೇನೆ.
ಆಗ ಮಿದುಳಿನ ದುರ್ಬೀನು ಕಣ್ಣಿಗೆ ಅಲ್ಲಲ್ಲಿ ಅನುಪಯುಕ್ತವಾದಂತಹ ಪ್ರೊಟೀನ್ ಗಳು, ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಗಳು, ಫ್ರೀ ರಾಡಿಕಲ್ಸ್ ಗಳು ಸಿಗುತ್ತವೆ. ಇವು ಛಿದ್ರಛಿದ್ರವಾಗಿರುತ್ತವೆ, ರೂಪಾಂತರಗೊಂಡಿರುತ್ತವೆ (ಮ್ಯುಟೇಟ್), ತಿರುಚಿಗೊಂಡಿರುತ್ತವೆ, ಕೊಳೆತಿರುತ್ತವೆ.
*ಮೆದುಳು*: ನೀನು ನನಗೆ ಆಹಾರ ಕೊಡದಿದ್ದರೂ ಪರವಾಗಿಲ್ಲ.
ನಾನು ಈ ಅನುಪಯುಕ್ತವಾದದನ್ನು ತಿಂದು ನನ್ನ ಹಸಿವನ್ನು ನೀಗಿಸಿಕೊಳ್ಳಬಹುದು.
ಅನುಪಯುಕ್ತವಾದಂತಹ ಪ್ರೊಟೀನ್ ಗಳು, ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಗಳು ಹಾಗೂ ಫ್ರೀ ರಾಡಿಕಲ್ಸ್ ಗಳು ನಮ್ಮ ದೇಹದಲ್ಲಿ ಹೇಗೆ ಬಂದವು ಅಂತೀರಾ?
ಎಷ್ಟೋ ಸರಿ ನಾವು ತಿನ್ನುವ ಆಹಾರಗಳಲ್ಲಿ ಆಹಾರವಲ್ಲದನ್ನೂ ತಿಂದಿರುತ್ತೇವೆ, ತಿಂದಿರುವ ಆಹಾರ ಕೆಲವೊಮ್ಮೆ ಸರಿಯಾಗಿ ಉಪಯೋಗವಾಗಿರುವದಿಲ್ಲ ಮತ್ತು ವ್ಯಾಯಾಮ ಮಾಡದೇ ಇರುವದರಿಂದ ಈ ಅನುಪಯುಕ್ತವಾದ ಆಹಾರ ಕಣಗಳು ದೇಹದಲ್ಲಿ ಶೇಖರವಾಗಿರುತ್ತವೆ.
ಇಂತಹ ಅನುಪಯುಕ್ತವಾದ ಆಹಾರ ಕಣಗಳನ್ನು ಮೆದುಳು ಮತ್ತೆ ಮರುಬಳಿಕೆ ಮಾಡಲು ಶುರು ಮಾಡುತ್ತದೆ.
ಅನುಪಯುಕ್ತವಾದ ಆಹಾರದ ಮರುಬಳಕೆ ಹೇಗೆ?
ಮೆದುಳು ಅನುಪಯುಕ್ತವಾದ ಆಹಾರವನ್ನು ಮುರಿದು ಮುರಿದು ಅದರ ಮೂಲಭೂತ ರೂಪಕ್ಕೆ ತರುತ್ತದೆ.
ಅಂದರೆ ಪ್ರೊಟೀನ್ ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಗಳ ಮೂಲಭೂತ ಅಂಶಗಳಾದ ಆಮ್ಲಜನಕ, ಜಲಜನಕ, ಸಾರಜನಕ, ಇಂಗಾಲದ ರೂಪಕ್ಕೆ ತೆಗೆದುಕೊಂಡು ಬಂದು
ಅದರ ಮೂಲಕ ಇನ್ನೊಂದು ಹೊಸ ಜೀವಕೋಶಗಳನ್ನು ಸೃಷ್ಟಿ ಮಾಡಿ ನಮಗೆ ಯೌವನವನ್ನು ಮರಕಳಿಸುವ ಕ್ರಿಯೆಯನ್ನು ಮಾಡುತ್ತದೆ.
ಈ ರೂಪಾಂತರಗೊಂಡಿರುವ ಜೀವಕೋಶಗಳಿಂದ ನಮಗೆ ಡಯಾಬಿಟಿಸ್, ಕ್ಯಾನ್ಸರ್ ,
ಸ್ಥೂಲಕಾಯತೆಗಳಂತಹ ರೋಗಗಳು ಬರುತ್ತವೆ.
ರೂಪಾಂತರಗೊಂಡಿರುವ ಜೀವಕೋಶಗಳನ್ನು ಮೆದುಳು ಹೇಗೆ ನಾಶ ಮಾಡುತ್ತೆ?
ಮೆದುಳು ಜೀವಕೋಶಕ್ಕೆ "ಲೈಸೋಸೊಮ್" ಎಂಬ ಚೀಲವನ್ನು ಸೃಷ್ಟಿ ಮಾಡಲು ಹೇಳುತ್ತದೆ. ಈ ಎಲ್ಲಾ ಕೊಳೆತಂತಹ ಅನುಪಯುಕ್ತವಾದ ಆಹಾರವನ್ನು ಈ ಚೀಲದಲ್ಲಿ ಹಾಕಿ ಅವುಗಳನ್ನು ಮೂಲಭೂತ ರೂಪಕ್ಕೆ ತರಲು ನಿರ್ದಿಷ್ಟವಾದ ಕಿಣ್ವಗಳನ್ನು (ಎಂಜೈಮ್ಸ್) ಬಿಡುಗಡೆ ಮಾಡಿ ಹೊಸ ಜೀವಕೋಶಗಳನ್ನು ಸೃಷ್ಟಿ ಮಾಡುತ್ತದೆ.
ಉಪವಾಸ ಈ ರೀತಿ ನಮಗೆ ಆರೋಗ್ಯವನ್ನು ಕೊಡುತ್ತದೆ.
ನಮ್ಮ ಶಾಸ್ತ್ರಗಳು, ಉಪನಿಷತ್ ಗಳು ಹೇಳಿದ್ದನ್ನೇ ವೈಜ್ಞಾನಿಕ ಸಂಶೋಧನೆ ಮಾಡಿ ೨೦೧೬ ರಲ್ಲಿ ಜಪಾನಿನ ಜೀವಶಾಸ್ತ್ರಜ್ಞ "ಯೋಶಿನೋರಿ ಓಹ್ಸುಮಿ" ಎಂಬವರು "ಮೆಕ್ಯಾನಿಸ್ಮ್ ಅಂಡರ್ ಲಾಯಿಂಗ್ ಆಟೋಫೆಜ್ "
(ಉಪವಾಸಕ್ಕೆ ವಿಜ್ಞಾನದ ಪರಿಭಾಷೆಯಲ್ಲಿ ಆಟೋಫೆಜ್ ಎನ್ನುತ್ತಾರೆ)
ಎಂಬ ಸಂಶೋಧನೆ ಮಾಡಿ, ಪ್ರತೀ ೧೫ ದಿನಕ್ಕೊಮ್ಮೆ ಉಪವಾಸ ಮಾಡುವುದರಿಂದ ನಮ್ಮ ದೇಹದಲ್ಲಿರುವ ರೂಪಾಂತರಗೊಂಡಿರುವ ಜೀವಕೋಶಗಳನ್ನು ನಾಶ ಪಡಿಸಿ ರೋಗಗಳನ್ನು ತಪ್ಪಿಸಬಹುದು ಎಂದು ಸಾಬೀತು ಪಡಿಸಿದ್ದಾರೆ.
ಈ ಸಂಶೋಧನೆಗೆ ಅವರಿಗೆ ನೊಬೆಲ್ ಪಾರಿತೋಷ ಕೂಡ ಬಂದಿದೆ.
ನಿಯಮಿತವಾದ ಉಪವಾಸದಿಂದ ಕ್ಯಾನ್ಸರ್ ಸೆಲ್ಸ್ ಗಳನ್ನೂ ನಾಶ ಪಡಿಸಬಹುದೇ ಎಂದು ಸಂಶೋಧನೆ ನಡೆಯುತ್ತಿದೆ.
ಏಕಾದಶಿಯ ದಿನದಂದು ಅನ್ನವನ್ನು ಏಕೆ ಸ್ವೀಕರಿಸಬಾರದು? ಇದರ ವೈಜ್ಞಾನಿಕ ಕಾರಣ :
ಅಮಾವಾಸ್ಯೆಯಿಂದ ಏಕಾದಶಿವರೆಗೆ ಮತ್ತು ಹುಣ್ಣಿಮೆಯಿಂದ ಏಕಾದಶಿ ವರೆಗೆ ಸಾಗರಗಳಲ್ಲಿ ಹೆಚ್ಚಿನ ಉಬ್ಬರವಿಳಿತವಿರುತ್ತದೆ, ಮತ್ತು ಅಲೆಗಳು ತುಂಬಾ ಎತ್ತರಕ್ಕೆ ಏರುತ್ತವೆ. ಏಕೆಂದರೆ ಚಂದ್ರ ಗುರುತ್ವಾಕರ್ಷಣೆಯ ಬಲದಿಂದ ಭೂಮಿಯ ಮೇಲಿನ ನೀರನ್ನು ತನ್ನೆಡೆಗೆ ಎಳೆಯುತ್ತಾನೆ.
ಮಾನವ ದೇಹದ ಎಪ್ಪತ್ತು ಪ್ರತಿಶತವು ನೀರಿನಿಂದ ಕೂಡಿದೆ. ಮೇಲೆ ತಿಳಿಸಿದ ದಿನಗಳಲ್ಲಿ ಚಂದ್ರನು ನೀರಿನ ಮೇಲೆ ಬಲವಾದ ಪ್ರಭಾವ ಬೀರುತ್ತಾನೆ. ಏಕಾದಶಿ ದಿನ ಅಕ್ಕಿಯನ್ನು ಅಥವಾ ಯಾವುದೇ ಧಾನ್ಯವನ್ನು ಸೇವಿಸಿದರೆ, ಅವು ನೀರನ್ನು ಹೀರಿಕೊಳ್ಳುತ್ತವೆ ಮತ್ತು ಚಂದ್ರನ ಗುರುತ್ವಾಕರ್ಷಣೆಯು ನೀರನ್ನು ಆಕರ್ಷಿಸುವುದರಿಂದ ನಮ್ಮ ದೇಹದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ.
ಹಾಗಾಗಿ ಏಕಾದಶಿ ದಿನ ಅನ್ನವನ್ನು ತಿನ್ನಬಾರದು ಎಂದು ಹೇಳುತ್ತಾರೆ.
ಶಾಸ್ತ್ರಗಳ ಪ್ರಕಾರ ಪರಮಾನಂದ ಸ್ವರೂಪಿಯಾದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವುದಕ್ಕಾಗಿಯೋ ಅಥವಾ ನಮ್ಮ ವಿಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ರೂಪಾಂತರಗೊಂಡಿರುವ ಜೀವಕೋಶಗಳಿಂದ ಮುಕ್ತಿ ಹೊಂದಿ ಒಳ್ಳೆಯ ಆರೋಗ್ಯ ಪಡೆಯುವ ನಿಟ್ಟಿನಲ್ಲೋ ಒಟ್ಟಾರೆ ಏಕಾದಶಿ ಉಪವಾಸ ನಮ್ಮ ಆತ್ಮಕ್ಕೆ ಮತ್ತು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವುದಂತೂ ನಿಜ.
ನಾನೇ ಆತ್ಮ, ಆತ್ಮವೇ ನಾನು ಎಂದ ಮೇಲೆ ಏಕಾದಶಿ ಉಪವಾಸ ಮಾಡುವದು ಯಾವುದೇ ಪ್ರಕಾರದಿಂದಲೂ ಸೂಕ್ತ ಅಂತ ನನ್ನ ಅನಿಸಿಕೆ.
ಇದು ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟದ್ದು.
Subscribe , Follow on
Facebook Instagram YouTube Twitter X WhatsApp