आयुर्वित्तं गृहच्छिद्रं मन्त्रमैथुन भेषजं |
दानापमानं साहसं च नव गॊप्यानि कारयॆत् ||
ಆಯುರ್ವಿತ್ತಂ ಗೃಹಚ್ಛಿದ್ರಂ ಮಂತ್ರಮೈಥುನ ಭೇಷಜಂ |
ದಾನಾಪಮಾನಂ ಸಾಹಸಂ ಚ ನವ ಗೋಪ್ಯಾನಿ ಕಾರಯೇತ್ ||
ಆಯುಸ್ಸು , ಹಣ , ಮನೆಯ ಒಳಜಗಳ , ಮಂತ್ರ , ಮೈಥುನ , ಔಷಧ , ದಾನ , ಅವಮಾನ , ದುಡುಕಿನಿಂದಾದ ಕಾರ್ಯ ಈ ಒಂಭತ್ತನ್ನು ರಹಸ್ಯವಾಗಿ ಇಟ್ಟಿರಬೇಕು.
1) ಆಯುಸ್ಸು - ತನ್ನ ಆಯುಸ್ಸು ಎಷ್ಟೆಂದು ಗೊತ್ತಿದ್ದರೆ ಅದನ್ನು ಇನ್ನೊಬ್ಬರಿಗೆ ಹೇಳಬಾರದು. ಹಾಗೆಯೇ ಜ್ಯೋತಿಷ್ಯವನ್ನು ಬಲ್ಲವರು ಇನ್ನೊಬ್ಬರ ಆಯುಸ್ಸನ್ನು ಹೇಳಬಾರದು. ಏಕೆಂದರೆ ಅದು ಅಪ್ರಿಯವಾದ ಸತ್ಯ. ಕೇಳಿಸಿಕೊಂಡವರ ಮೇಲೆ ಅದು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
2) ವಿತ್ತಂ - ತನ್ನಲ್ಲಿರುವ ಹಣವನ್ನಾಗಲೀ ತನ್ನ ಆದಾಯವನ್ನಾಗಲೀ ಇನ್ನೊಬ್ಬರಿಗೆ ಹೇಳಬಾರದು. ಅದೇ ರೀತಿ ಇನ್ನೊಬ್ಬರ ಸಂಬಳ ಎಷ್ಟು ಎಂದು ಕೇಳಬಾರದು. ಏಕೆಂದರೆ ಅದು ಶಿಷ್ಟಾಚಾರ ಅಲ್ಲ.
3) ಗೃಚ್ಚಿದ್ರಂ - ಸಂಸಾರದಲ್ಲಿನ ಬಿರುಕನ್ನು ಇತರರಿಗೆ ತಿಳಿಸಬಾರದು. ಎಲ್ಲರ ಮನೆಯ ದೋಸೆಯೂ ತೂತೇ ಆಗಿರುತ್ತದೆ. ಗಂಡ ಹೆಂಡತಿಯ ನಡುವೆ ಆಗಲಿ , ತಂದೆ ಮಕ್ಕಳ ನಡುವೆ ಆಗಲಿ , ಅಣ್ಣ ತಮ್ಮಂದಿರ ನಡುವೆ ಆಗಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಅದನ್ನು ತಮ್ಮೊಳಗೇ ಪರಿಹರಿಸಿಕೊಳ್ಳಬೇಕು , ಬಹಿರಂಗಪಡಿಸಬಾರದು. ಹೊರಗಿನವರಿಗೆ ತಿಳಿದರೆ ಸಣ್ಣ ನ್ಯೂನತೆಯನ್ನೇ ದೊಡ್ಡದು ಮಾಡಿ ಆಡಿಕೊಳ್ಳುತ್ತಾರೆ , ಶತ್ರುಗಳಾದರೆ ಅದರ ದುರ್ಲಾಭವನ್ನೂ ಪಡೆಯುತ್ತಾರೆ.
4) ಮಂತ್ರಂ - ಮಂತ್ರ ಎಂದರೆ ಇಬ್ಬರು ಸೇರಿ ಮಾಡಿಕೊಂಡ ಕಾರ್ಯ ತಂತ್ರ. ರಾಜಕೀಯದಲ್ಲಿ ಇಂತಹ ಮಂತ್ರಾಲೋಚನೆಗಳು ಹಲವು ಇರುತ್ತವೆ. ಅವೆಲ್ಲವೂ ರಹಸ್ಯವಾದವುಗಳು.
5) ಮೈಥುನ – ಹೆಂಡತಿಯೊಡನೆ ನಡೆಸುವ ರತಿಕ್ರಿಡೆಯ ಸಂದರ್ಭದ ವಿಷಯಗಳನ್ನು ಎಷ್ಟೇ ಆಪ್ತನಾದ ಮಿತ್ರನೇ ಆಗಿರಲಿ ಆತನೊಡನೆ ಹೇಳಬಾರದು.
6) ಭೇಷಜಂ – ಭೇಷಜಂ ಅಂದರೆ ಔಷಧ. ವೈದ್ಯನು ತಾನು ಕೊಡುವ ಔಷಧ ಯಾವುದೆಂದು ರೋಗಿಗೆ ತಿಳಿಸಬಾರದು. ತನ್ನ ವ್ಯಾಧಿಯು ಪ್ರಬಲವಾದದ್ದೆಂದೂ ಅದಕ್ಕೆ ಬಹಳ ಬೆಲೆ ಬಾಳುವ ಔಷಧವೇ ಬೇಕಾಗುತ್ತದೆ ಎಂದೂ ಆತ ತಿಳಿದಿರುತ್ತಾನೆ. ವೈದ್ಯನು ಬಹಳ ಚಿಕ್ಕ ಔಷಧದಿಂದಲೇ ಅದನ್ನು ಗುಣಪಡಿಸಿದರೆ ಆಗ ಆತನಿಗೆ ನಂಬಿಕೆ ಬರುವುದಿಲ್ಲ. ರೋಗ ಗುಣವಾಗಬೇಕಾದರೆ ನಂಬಿಕೆಯೇ ಮುಖ್ಯ.
7) ದಾನಂ - ತಾನು ಮಾಡಿದ ದಾನ ಧರ್ಮ ಪುಣ್ಯ ಕಾರ್ಯಗಳ ಬಗ್ಗೆ ಇತರರೊಡನೆ ಹೇಳಿಕೊಳ್ಳಬಾರದು. ಹಾಗೆ ಹೇಳಿಕೊಂಡರೆ ಅದರಿಂದ ಸಂಚಯವಾದ ಪುಣ್ಯವು ಕ್ಷೀಣಿಸುತ್ತದೆ ಎಂದು ಧರ್ಮಶಾಸ್ತ್ರ ಹೇಳುತ್ತದೆ. ನಹುಷ ರಾಜನು ಪುಣ್ಯಕಾರ್ಯಗಳನ್ನು ಮಾಡಿ ಸ್ವರ್ಗಕ್ಕೆ ಹೋಗಿ ಅಲ್ಲಿ ದೇವೇಂದ್ರನಂತೆ ಮೆರೆಯುತ್ತಿದ್ದ. ದೇವೇಂದ್ರನು ಆತ ಮಾಡಿದ ಪುಣ್ಯಕಾರ್ಯಗಳು ಏನೆಂದು ಕೇಳಿದಾಗ ನಹುಷನು ತನ್ನ ಕಾರ್ಯಗಳನ್ನೆಲ್ಲ ಕೊಚ್ಚಿಕೊಂಡನಂತೆ. ಆಗ ಅವನ ಪುಣ್ಯವು ಕ್ಷೀಣಿಸಿತು. ಸಮಯ ಸಾಧಿಸುತ್ತಿದ್ದ ದೇವೇಂದ್ರನು ಒಡನೆಯೇ ಅವನನ್ನು ಸ್ವರ್ಗದಿಂದ ಕೆಳಗೆ ತಳ್ಳಿದನಂತೆ. ಆದ್ದರಿಂದ ನಾವು ಮಾಡಿದ ದಾನಧರ್ಮಗಳ ಬಗ್ಗೆ ಇತರರಲ್ಲಿ ಕೊಚ್ಚಿಕೊಳ್ಳಬಾರದು. ಸಣ್ಣ ವಸ್ತುವನ್ನು ದಾನ ಮಾಡಿ ಅದರ ಮೇಲೆ ದೊಡ್ಡದಾಗಿ ಇದು ‘ಇಂಥವರ ಸೇವೆ’ ಎಂದು ಬರೆಸಿಡುವುದು ಸರಿಯಲ್ಲ.
8) ಅಪಮಾನಂ – ಎಲ್ಲಿಯೇ ಆಗಲಿ ಯಾರಿಂದಲೇ ಆಗಲಿ ತನಗೆ ಉಂಟಾದ ಅಪಮಾನದ ಕುರಿತಾಗಿ ಇನ್ನೊಬ್ಬರಲ್ಲಿ ಹೇಳಿಕೊಳ್ಳಬಾರದು.
9) ಸಾಹಸಂ – ಇಲ್ಲಿ ಸಾಹಸ ಎಂದರೆ ವಿವೇಚನೆಯಿಲ್ಲದೇ ದುಡುಕಿನಿಂದ ಮಾಡಿದ ಎಡವಟ್ಟು ಕೆಲಸ ಎಂದರ್ಥ. ಎಂತಹ ವಿವೇಕಿಯೇ ಆಗಿದ್ದರೂ ಜೀವನದಲ್ಲಿ ಒಮ್ಮೆಯಾದರೂ ಎಡವುತ್ತಾನೆ. ಕಾಮ ಕ್ರೋಧಗಳಿಗೆ ವಶನಾಗಿ ಅಕಸ್ಮಾತ್ ಒಂದು ತಪ್ಪು ಕೆಲಸವನ್ನು ಮಾಡುತ್ತಾನೆ. ಹಾಗೆ ತಪ್ಪು ಮಾಡುವುದು ಅವನ ಸ್ವಭಾವವೇನಲ್ಲ. ತಾನು ಮಾಡಿದ ತಪ್ಪಿಗೆ ನಂತರ ಅವನಿಗೆ ಪಶ್ಚಾತ್ತಾಪವೂ ಆಗಿರುತ್ತದೆ. ಅದನ್ನು ಇನ್ನೊಬ್ಬರಿಗೆ ತಿಳಿಸಿದರೆ ಅದು ಹತ್ತಾರು ಜನರ ಕಿವಿಗೆ ಬಿದ್ದು ಈತನ ವಿಷಯದಲ್ಲಿ ಜನರಿಗೆ ತಪ್ಪು ಅಭಿಪ್ರಾಯವೇ ಮೂಡಿಬಿಡುತ್ತದೆ.
Subscribe , Follow on
Facebook Instagram YouTube Twitter X WhatsApp