👉ನಮ್ಮೊಳಗಿನ “ನಾನು” ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ದೇಹ, ವಿದ್ಯೆ, ಉದ್ಯೋಗ, ಇನ್ನಾವುದೋ ವಿಶೇಷತೆಗಳಿಂದ ಗುರುತಿಸಿಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದಾಚೆಗೆ ನಾನು ಎಂದರೆ ಯಾರು? ಏನು? ಎಂಬುದು ಉತ್ತರವಿಲ್ಲದ ಪ್ರಶ್ನೆ.
👉ದೇಹಮಾತ್ರವೇ ನಮಗೆ ನಾನು ಎಂಬುದರ ರೂಪವಾಗಿ ಹೊರಗಣ್ಣಿಗೆ ಕಾಣುತ್ತಿರುತ್ತದೆ. ಆದರೆ ನಮ್ಮ ಆತ್ಮವು ಏನು? ಎಲ್ಲಿಂದ ಬಂದುದು? ಎಂಬುದಕ್ಕೆ ಕಾರಣವಾಗಿ ನಾವು ಕಂಡುಕೊಂಡಿದ್ದು ದೇವರು. ಎಲ್ಲವನ್ನೂ ನಿಯಂತ್ರಿಸುವ ಶಕ್ತಿಯಾದ ಈ ನಿರಾಕಾರ, ನಿರ್ಮಲವಾದ ಪರಮಾತ್ಮ ಎಲ್ಲಿ ನೆಲೆಸುತ್ತಾನೆ? ಎಂಬ ಪ್ರಶ್ನೆಗೆ ಶ್ವೇತಾಶ್ವತರ ಉಪನಿಷತ್ತಿನಲ್ಲಿದೆ.
🔸ನವದ್ವಾರೇ ಪುರೇ ದೇಹೀ ಹಂಸೋ ಲೇಲಾಯತೇ ಬಹಿಃ
ವಶೀ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ || (೩. ೧೮)
👉ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವತ್ತೊಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ ಎಂಬುದು ಶ್ವೇತಾಶ್ವತರೋಪನಿಷತ್ತಿನಲ್ಲಿದೆ.
👉ಈ ದೇವನು ಕೈಕಾಲುಗಳಿಲ್ಲದವನು ಆದರೆ ವೇಗವಾಗಿ ಚಲಿಸುವವನೂ ಕೈಗಳಿಲ್ಲದಿದ್ದರೂ ಎಲ್ಲವನ್ನೂ ಪಡೆಯುವವನೂ ಕಣ್ಣುಗಳಿಲ್ಲದೆಯೂ ನೋಡಬಲ್ಲವನೂ ಕಿವಿಗಳಿಲ್ಲದೆಯೂ ಕೇಳಬಲ್ಲವನೂ ಮನಸ್ಸಿಲ್ಲದೆಯೂ ಎಲ್ಲವನ್ನೂ ಅರಿಯಬಲ್ಲವನೂ ಆಗಿದ್ದಾನೆಂದು ಮುಂದಿನ ಶ್ಲೋಕದಲ್ಲಿ ಈ ಉಪನಿಷತ್ತಿನಲ್ಲಿ ವಿವರಿಸಲಾಗಿದೆ.
👉ಇಂತವನನ್ನು ಅರಿಯಬಲ್ಲವರು ಯಾರೂ ಇಲ್ಲ. ಹಾಗಾಗಿ ದೇವನು ಸರ್ವಕಾರಣನಾದ ಪರಿಪೂರ್ಣ ಸ್ವರೂಪನು ಮಹಾಂತನು ಎಂದು ಋಷಿಗಳು ಹೇಳುತ್ತಾರೆ.
👉ಭಗವದ್ಗೀತೆಯ ಐದನೆಯ ಅಧ್ಯಾಯದಲ್ಲಿ ಇಂತಹ ದೇವನು ನೆಲೆಯಿರುವ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರಬೇಕು ಎಂದು ಹೇಳಲಾಗಿದೆ. ಕರ್ಮಫಲಗಳಿಗೆ ಮಾರುಹೋಗುವವನು ತೊಡಕಿನಲ್ಲಿ ಸಿಲುಕಿಕೊಳ್ಳುತ್ತಾನೆ. ಕರ್ಮಫಲಗಳನ್ನು ಯೋಚಿಸದೆ ಒಂದೇ ರೀತಿಯಾದ ನಿಷ್ಠೆಯಿಂದಿರುವವನ ಆತ್ಮ ಪರಿಶುದ್ಧವಾದ ಶಾಂತಿಯನ್ನು ಹೊಂದಲು ಸಾಧ್ಯ.
🔸ಸರ್ವಕರ್ಮಾಣಿ ಮನಸಾ ಸನ್ನ್ಯಸ್ಯಾಸ್ತೇ ಸುಖಂ ವಶೀ
ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್ ||೧೩||ಅಧ್ಯಾಯ ೫||
👉ದೇಹಸ್ಥ ಜೀವಿಯು ತನ್ನ ಸ್ವಭಾವಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಅವನು ನವದ್ವಾರಗಳ ನಗರದಲ್ಲಿ ಸುಖವಾಗಿ ವಾಸಿಸುತ್ತಾನೆ. ಅವನು ಕಾರ್ಯಗಳನ್ನು ಮಾಡಿಸುವುದೂ ಇಲ್ಲ, ಮಾಡುವುದೂ ಇಲ್ಲ ಎಂದು ಗೀತೆ ಹೇಳುತ್ತದೆ.
👉ನವದ್ವಾರಗಳಿಂದಲೇ ನಮ್ಮ ದೇಹ ನಿರ್ಮಿತವಾಗಿದೆ. ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಗುದದ್ವಾರ ಮತ್ತು ಜನನೇಂದ್ರಿಯ ಇವೇ ದೇಹದ ನವರಂಧ್ರಗಳು. ಇವುಗಳನ್ನೇ ಪುರವನ್ನಾಗಿಸಿಕೊಂಡು ದೇವರು ವಾಸಿಸುತ್ತಾನೆ.
👉ಇವೆಲ್ಲವುಗಳ ನಿಯಂತ್ರಣವೇ ಉತ್ತಮ ಸ್ವಭಾವಕ್ಕೆ ಕಾರಣವಾಗುತ್ತದೆ. ಮನುಷ್ಯನು ಈ ನವರಂಧ್ರಗಳಿರವುದರಿಂದಲೇ ಬದುಕುತ್ತಿದ್ದಾನೆ. ಈ ನವದ್ವಾರಗಳನ್ನು ಮೊದಲು ಪರಿಶುದ್ಧವಾಗಿಡಬೇಕೆಂಬುದು ಇದರ ಮತಿತಾರ್ಥ.
👉ನವದ್ವಾರಗಳೂ ದೇವರ ವಾಸಸ್ಥಾನವಾದ್ದರಿಂದ ನಾವು ನೋಡುವ, ಕೇಳುವ ಸಂಗತಿಗಳು ಉತ್ತಮವಾದುದೇ ಆಗಿರಬೇಕು. ಸೇವಿಸುವ ಆಹಾರಗಳು ದೇಹವನ್ನು ಸಮಸ್ಥಿತಿಯಲ್ಲಿ ಇಡುವಂತಿರಬೇಕು. ಮೂಗು ಹುಡುಕಿದ ಪರಿಮಳವನ್ನು ಅರಸಿಕೊಂಡು ಕಣ್ಣು ಹೋಗುತ್ತದೆ. ಅದು ಒಳ್ಳೆಯದೇ ಆಗಿದ್ದರೆ ಒಳಿಯಾಗುತ್ತದೆ. ಇಲ್ಲವೆಂದಾದಲ್ಲಿ ಕೆಟ್ಟದಾಗುತ್ತದೆ.
👉ಹಾಗಾಗಿ ಪರಿಮಳವನ್ನೂ ಪರಂಬರಿಸುವ ಯುಕ್ತಿ ನಮ್ಮಲ್ಲಿರಬೇಕು. ದೇಹದ ಪರಿಶುದ್ಧತೆಯಿಂದ ಆತ್ಮವೂ ಶುದ್ಧವಾಗಿ ಶಾಂತಿಯನ್ನು ಹೊಂದುತ್ತದೆ. ದೇವರು ವಾಸಿಸುವ ದೇಹ ದೇವರ ಗುಡಿ. ಈ ಗುಡಿಯನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮೊಳಗಿನ ದೇವರನ್ನು ನಾವು ಕಂಡುಕೊಂಡಾಗ ಸಿಗುವ ಆನಂದವೇ ದೈವತ್ವ.
Subscribe , Follow on
Facebook Instagram YouTube Twitter WhatsApp