-->

ಸತ್ಯ ನಿಷ್ಠೆಯೇ ಶ್ರೇಷ್ಠ ಧರ್ಮ , ಮಹಾಭಾರತ ಸಾರ

ಶೂರರಲ್ಲಿನ‌ ಹಲವಾರು ವಿಧಗಳ ಬಗ್ಗೆ  ಭೀಷ್ಮರು ಉಪದೇಶ ಮುಂದುವರೆಸಿದ್ದಾರೆ. ಕೆಲವರು ಸರಳತೆ ಹಾಗೂ ನೇರ ನಡತೆಯಲ್ಲಿ ಶೂರರೆನಿಸಿರುತ್ತಾರೆ. ಕೆಲವರು ಮನೋನಿಗ್ರಹದಲ್ಲಿ ಶೂರರೆನಿಸಿಕೊಂಡಿರುತ್ತಾರೆ. ವೇದ ಅಧ್ಯಯನದಲ್ಲಿ ನಿಷ್ಣಾತರಾದವರು  ಅಧ್ಯಯನ ಶೂರರೆನಿಸಿಕೊಳ್ಳುತ್ತಾರೆ. ಇನ್ನು ಕೆಲವರು ವೇದಾಧ್ಯನ ಮಾಡಿಸುವುದರಲ್ಲಿ ಶೂರರಾಗಿರುತ್ತಾರೆ. ಗುರು ಶುಶ್ರುಷೆಯಲ್ಲಿ ಶೂರರಾಗಿರುತ್ತಾರೆ. ಮಾತಾ ಪಿತೃಗಳ ಸೇವೆಯೇ ಪರಮ ಧ್ಯೇಯವೆಂದು ಅರಿತು ನಿರಂತರ ತಂದೆ ತಾಯಿ ಸೇವೆ ಮಾಡುವವರು ಮಾತಾ ಪಿತೃ ಶುಶ್ರೂಷಾ ಶೂರರಾಗಿರುತ್ತಾರೆ.


ಭಿಕ್ಷಾಟನೆಯಿಂದಲೇ ಜೀವನ ನಡೆಸಲು ನಿಶ್ಚಯಿಸಿ ಜೀವನ ಪರ್ಯಂತರವಾಗಿ ಭಿಕ್ಷಾಟನೆ ಮಾಡುವರು ಭೈಕ್ಷಶೂರರೆನಿಸಿಕೊಳ್ಳುತ್ತಾರೆ. ಹೀಗೆ ಆಯಾ ನಿಯಮಗಳನ್ನು ಪರಮ ಲಕ್ಷ್ಯವನ್ನಾಗಿಟ್ಟುಕೊಂಡು ಸದಾ ಆಚರಿಸುವ ಶೂರರು ಅನೇಕರಿದ್ದಾರೆ ಎಂದು ಭೀಷ್ಮರು ಹೇಳಿದರು.


ಸಾವಿರ ಅಶ್ವಮೇಧಗಳನ್ನು ಮಾಡಿದ ಪುಣ್ಯ ವನ್ನು ಮತ್ತು ಸತ್ಯನಿಷ್ಠೆಯಿಂದ ಪ್ರಾಪ್ತವಾಗುವ ಪುಣ್ಯಯನ್ನು ತಕ್ಕಡಿಯಲ್ಲಿಟ್ಟು ತೋಗಿದರೆ ಸತ್ಯ ನಿಷ್ಠೆಯಿಂದ ಪ್ರಾಪ್ತವಾಗುವ ಪುಣ್ಯವೇ  ಹೆಚ್ಚಾಗುತ್ತದೆ. ಸತ್ಯ ನಿಷ್ಠೆಯಿಂದ ಬಾಳುವ ಮೂಲಕ ಸಾವಿರ ಅಶ್ವಮೇಧ ಯಾಗ ಮಾಡಿದ ಪುಣ್ಯವನ್ನು ಪಡೆದುಕೊಳ್ಳಬೇಕು.

ಸತ್ಯ ನಿಷ್ಠೆಯೇ ಶ್ರೇಷ್ಠ ಧರ್ಮ  , ಮಹಾಭಾರತ ಸಾರ
ಸತ್ಯದ ಪ್ರಭಾವದಿಂದಲೇ ಸೂರ್ಯನು ಶಾಖವನ್ನುಂಟುಮಾಡುವನು.ಸತ್ಯ ನಿಷ್ಟೆಯಿಂದಲೇ ಅಗ್ನಿಯು ಪ್ರಜ್ವಲಿಸುವನು, ವಾಯುವು ಗಾಳಿಯನ್ನು ಬೀಸುವನು ಎಲ್ಲ ಶಕ್ತಿಯೂ ಸತ್ಯದಲ್ಲಿಯೇ ಪ್ರತಿಷ್ಠಾಪಿತವಾಗಿದೆ.


ಸತ್ಯನಿಷ್ಠೆಯಿಂದಲೇ ದೇವ, ಪಿತೃ, ಬ್ರಾಹ್ಮಣರು ಪ್ರಸನ್ನರಾಗುತ್ತಾರೆ.
ಸತ್ಯನಿಷ್ಠೆ ಶ್ರೇಷ್ಠವಾದ ಧರ್ಮ. ಯಾರೂ ಸತ್ಯವನ್ನು ಉಲ್ಲಂಘಿಸಬಾರದು ಎಂದು ಮಹಾಭಾರತ ನಿರೂಪಿಸಿದೆ‌. ಅಂಥ ಸತ್ಯದಿಂದ ಲಭಿಸುವ ಪ್ರಾಪ್ತಿಗೆ ದಮವೇ ಮೂಲ ಕಾರಣವಾಗಿದೆ ಎಂದು ಭೀಷ್ಮರು ಉಪದೇಶ ನೀಡಿದರು. ಬ್ರಹ್ಮಚರ್ಯದ ಬಗ್ಗೆ‌ ತಿಳಿದುಕೊಳ್ಖುವ ಬಯಕೆಯಾಗಿದೆ ಎಂದು ಧರ್ಮರಾಜನು ಕೇಳುತ್ತಾನೆ. ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮಾಚಾರ್ಯರು ಕೊಟ್ಟ ಉತ್ತರವನ್ನು ನಾಳೆ ತಿಳಿಯೋಣ.


- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

–>