ಯುಧಿಷ್ಠಿರನಲ್ಲಿ ದೇವರ ಬಗ್ಗೆ ಸಂಶಯ ವ್ಯಕ್ತವಾಯಿತು. ಆಗ ತಕ್ಷಣ ನಾರದರು ಅಲ್ಲಿಗೆ ಆಗಮಿಸಿದ್ದಾರೆ. ರಾಜಸೂಯ ಯಾಗದಲ್ಲಿ ಕೃಷ್ಣನಿಗೆ ಅಗ್ರಪೂಜೆ ಎಂದು ಭೀಷ್ಮಾಚಾರ್ಯರು ನಿರ್ಣಯಿಸಿದ್ದರು. ಶ್ರೀ ಕೃಷ್ಣನಿಗೆ ಅಗ್ರಪೂಜೆ ನಡೆಯುತ್ತಿತ್ತು. ಶಿಶುಪಾಲ ಕೃಷ್ಣನನ್ನು ನಿಂದಿಸಹತ್ತಿದ. ನೂರು ಬೈಗುಳವರೆಗೂ ಸಹಿಸಿಕೊಳ್ಳುವೆ ಎಂದು ಕೃಷ್ಣ ಶಿಶುಪಾಲನ ತಾಯಿಗೆ ವಚನ ಕೊಟ್ಟಿದ್ದ. ನೂರು ಬೈಗುಳ ಮುಗಿದವು. ತಕ್ಷಣ ಸುದರ್ಶನ ಚಕ್ರದಿಂದ ಶಿಶುಪಾಲನನ್ನು ಕೃಷ್ಣ ಸಂಹರಿಸಿದ. ಆಗ ಶಿಶುಪಾಲನ ಹೃದಯದಿಂದ ದೀಪವು ಕೃಷ್ಣನಲ್ಲಿ ಲೀನ ವಾಯಿತು.ಅಷ್ಟು ಕೆಟ್ಟದಾಗಿ ನಿಂದಿಸಿದರೂ ಶಿಶುಪಾಲನಿಗೆ ಕೃಷ್ಣ ಸದ್ಗತಿ ಯಾಕೆ ನೀಡಿದ ಎಂಬ ಸಂಶಯವನ್ನು ಧರ್ಮರಾಜ ನಾರದರಲ್ಲಿ ಕೇಳುತ್ತಾರೆ.
ಆಗ ನಾರದರು ಉತ್ತರಿಸುವರು, ನೀನು ಶಿಶುಪಾಲನ ಕೇವಲ ನಿಂದನೆ ಮಾತ್ರ ಕೇಳಿರುವಿ. ಅನಾದಿಕಾಲದಿಂದಲೂ ಭಗವಂತನ ಸೇವೆ ಮಾಡಿದ್ದಾನೆ. ನಾರಾಯಣನ ದ್ವಾರಪಾಲಕನಾಗಿದ್ದ ಜಯ ಬ್ರಹ್ಮದೇವರ ಮಾನಸ ಪುತ್ರರಾದ ಸನಕಾದಿಗಳನ್ನು ಒಳಗಡೆ ಬಿಡದಕ್ಕೆ ಶಾಪಕ್ಕೆ ಗುರಿಯಾಗಿ ಅಸುರನಾಗಿ ಜನಿಸಿದ್ದಾನೆ. ತಪ್ಪು ಮಾಡಿದ್ದಕ್ಕಿಂತ ಭಗವಂತನ ಸೇವೆ ಹೆಚ್ಚು ಮಾಡಿದ್ದಾನೆ. ಭಗವಂತ ತಾರತಮ್ಯ ಮಾಡುವುದಿಲ್ಲ. ಎಲ್ಲವನ್ನೂ ತುಲನೆ ಮಾಡಿಯೇ ಶಿಶುಪಾಲನಿಗೆ ಸದ್ಗತಿ ನೀಡಿದ್ದಾನೆ. ಶಿಶುಪಾಲನಲ್ಲಿನ ದೈತ್ಯನಿಗೆ ದುರ್ಗತಿಯೇ ನೀಡಿದ್ದಾನೆ ಎಂದು ನಾರದರು ಯುಧಿಷ್ಠಿರನಲ್ಲಿದ್ದ ಸಂಶಯಕ್ಕೆ ಪರಿಹಾರ ನೀಡಿದರು.
ಧಾರ್ಮಿಕವಾಗಿರುವುದು ಬೇರೆ, ಧರ್ಮದ ಮೇಲಿನ ವಿಶ್ವಾಸ ಬೇರೆ. ನಮ್ಮ ಪೂರ್ವಜರು ಧರ್ಮ ಆಚರಿಸುತ್ತಿದ್ದಾರೆ ಎಂದು ಆಚರಿಸುವುದು ಬೇರೆ. ಧರ್ಮದ ಮರ್ಮವ ತಿಳಿದು ಆಚರಿಸುವುದು ಬೇರೆ. ಕೇವಲ ಧಾರ್ಮಿಕನಾಗಿದ್ದರೆ ಸಾಲದು. ಧರ್ಮದ ಬಗ್ಗೆ ಚನ್ನಾಗಿ ತಿಳಿದು ಆಚರಿಸಿದಾಗ ಫಲ ಸಿಗುತ್ತದೆ. ಅಭಿಷೇಕ ಮಾಡುವುದೇ ಪೂಜೆಯಲ್ಲ. ಭಗವಂತನ ಅಸ್ತಿತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡುವದೇ ನಿಜವಾದ ಪೂಜೆ.
ಭಗವಂತನ ಆಜ್ಞೆ ಪರಿಪಾಲಿಸುವದೇ ಧರ್ಮ. ಧರ್ಮ ಆಚರಿಸಿದ ವ್ಯಕ್ತಿ ಜೀವನದಲ್ಲಿ ದುಃಖ ಪಡುತ್ತಾರೆ, ಧರ್ಮವೇ ತಿಳಿಯದವರು ಸುಖವಾಗಿದ್ದಾರೆ ಎಂದು ಭಾವಿಸಬಾರದು. ಪೂರ್ವಜನ್ಮದಜಲ್ಲಿ ಸಂಪಾದಿಸಿದ ಪುಣ್ಯದ ಪ್ರತಿಫಲವಾಗಿ. ಈ ಜನ್ಮದಲ್ಲಿ ಅಧರ್ಮಿಯಾಗಿದ್ದರೂ ಸುಖ ಪಡುವರು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಧಾರ್ಮಿಕನಾಗಿದ್ದರೂ ಕಷ್ಟ ಅನುಭವಿಸುವರು. ಅದನ್ನು ಅರಿತು ಈ ಜನ್ಮದಲ್ಲಾದರೂ ನಾವು ಪುಣ್ಯ ಸಂಪಾದಿಸಿಕೊಳ್ಳಬೇಕು. ಸಂಸಾರದಲ್ಲಿ ತಪ್ತರಾದ ನಾವು ಭಗವಂತನ ಸ್ಮರಣೆ ಮಾಡದೆ ದುಃಖದಲ್ಲಿ ಮುಳಗುತ್ತಿದ್ದೇವೆ. ಎಲ್ಲರೂ ಸನ್ಯಾಸಿಗಳಾಗಿಯೇ ಸಾಧನೆ ಮಾಡಬೇಕೆಂದೆನಿಲ್ಲ. ಸಂಸಾರದ ಜತೆಯಲ್ಲೆ ಸಾಧನೆ ಮಾಡುವ ಮೂಲಕ ಮೋಕ್ಷದ ಮಾರ್ಗ ಕಂಡುಕೊಳ್ಳಬೇಕು.
ಮೊದಲು ನಾವು ಜ್ಞಾನ ಪಡೆಯಬೇಕು. ಪಡೆದ ಜ್ಞಾನ ನಾಲ್ಕು ಜನರಲ್ಲಿ ಹಂಚಿಕೊಳ್ಳಬೇಕು. ಲೌಖಿಕ ಸಂಪತ್ತು ಬಳಸಿದಷ್ಟು ಖರ್ಚಾಗುತ್ತದೆ. ಆದರೆ ಜ್ಞಾನ ಸಂಪತ್ತು ಖರ್ಚು ಮಾಡಿದಷ್ಟು ವೃದ್ಧಿಸುತ್ತದೆ. ಗಳಿಸಿದ ಜ್ಞಾನ ವಿನಿಮಯ ಮಾಡಿಕೊಳ್ಳುವ ಮೂಲಕ ವೃದ್ಧಿಸಿಕೊಳ್ಳಬೇಕು.
ಎಂದು ನಾರದರು ಧರ್ಮ ರಾಜನಿಗೆ ಧರ್ಮೋಪದೇಶ ನೀಡಿದರು
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter WhatsApp