ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ.
ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು. ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು.
ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ.
ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ.
ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ.
ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು.
ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು.
ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ.
ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ.
Subscribe , Follow on
Facebook Instagram YouTube Twitter X WhatsApp