ಮಹಾಕವಿ ಕಾಳಿದಾಸನಿಗೆ ತಾನು ಮಹಾಜ್ಞಾನಿಯೆಂಬ ಗರ್ವ ಸ್ವಲ್ಪ ಹೆಚ್ಚೇ ಇತ್ತು.
ಒಂದು ಬಾರಿ ಪರ್ಯಟನೆ ಮಾಡುತ್ತ ಕಾಳಿದಾಸನು ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದನು. ದಾರಿ ಸುದೀರ್ಘವಾದ ಕಾರಣ ಆತನ ಪಯಣ ದಿನವಿಡೀ ಹಿಡಿಯಿತು. ಸೂರ್ಯನು ಅತ್ಯಂತ ಪ್ರಜ್ವಲಿತನಾಗಿ ತನ್ನ ಶಕ್ತಿಯ ಕಿರಣಗಳನ್ನು ಬೀರುತ್ತಿದ್ದನು. ಬಿಸಿಲಿನ ಪಯಣದಿಂದ ನೀರಿನ ಕೊರತೆ ಕಾಳಿದಾಸನನ್ನು ಕಾಡತೊಡಗಿತು. ಅವನಿಗೆ ಬಾಯಾರಿಕೆಯಾಗ ತೊಡಗಿತು. ಅದೇ ಸಮಯಕ್ಕೆ ಒಬ್ಬ ವೃದ್ಧ ಸ್ತ್ರೀ ನೀರಿನ ಪಾತ್ರೆಯೊಂದಿಗೆ ಹಾದು ಹೋಗುವುದನ್ನು ಕಂಡನು. ಆತ ಆನಂದದಿಂದ, ಆತುರದಿಂದ ಅವಳ ಬಳಿಗೆ ಹೋಗಿ ಕರೆದನು:
ಕಾಳಿದಾಸ - "ಓ ತಾಯಿ! ಸೂರ್ಯನು ನನ್ನ ಮೇಲೆ ವಿಶೇಷವಾಗಿ ಕಠೋರವಾಗಿದ್ದಾನೆ. ಈ ಅಸಹನೀಯ ಬಾಯಾರಿಕೆಯು ನನ್ನ ಗಂಟಲನ್ನು ಮುಳ್ಳಿನಂತೆ ಚುಚ್ಚುತ್ತಿದೆ. ದಯವಿಟ್ಟು ನನಗೆ ಕುಡಿಯಲು ನೀರುಕೊಡುವ ದಯೆ ತೋರಿ" ಎಂದು ವಿನಂತಿಸಿದನು.
ಸ್ತ್ರೀ - "ಮಗೂ, ನಿನ್ನ ಬಾಯಾರಿಕೆಯನ್ನು ನಿವಾರಿಸುವೆ. ಆದರೆ ನನಗೆ ನಿನ್ನ ಪರಿಚಯವಿಲ್ಲವಲ್ಲಾ. ಮೊದಲು ನೀನು ನಿನ್ನ ಪರಿಚಯ ಹೇಳು, ನಾನು ನೀರನ್ನು ನೀಡುವೆ"
ಕಾಳಿದಾಸ ಮಾತುಕತೆಯಲ್ಲಿ ಒಂದು ನಿಮಿಷ ವ್ಯರ್ಥ ಮಾಡಲು ಬಯಸಲಿಲ್ಲ. ಅವನ ಬಾಯಿಂದ ಹೊರಡುವ ಪ್ರತಿಯೊಂದು ಪದವೂ ಅವನ ಒಣಗಿದ ಗಂಟಲನ್ನು ಹಿಂಸಿಸುವಂತೆ ತೋರುತ್ತಿತ್ತು. ವೃದ್ಧ ಮಹಿಳೆಗೆ ಬೇಗನೆ ಉತ್ತರಿಸಿದನು: "ನಾನೊಬ್ಬ ಪ್ರವಾಸಿ"
ಸ್ತ್ರೀ - "ಲೋಕದಲ್ಲಿ ಪ್ರವಾಸಿಗರು ಇಬ್ಬರೇ. ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ"
ವೃದ್ಧನಾರಿಯ ಮಾತುಗಳಿಗೆ ತಬ್ಬಾಬ್ಬಾದ ಕಾಳಿದಾಸನು - "ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ?" ಎಂದು ಕೇಳಿದನು.
ಆಗ ಆ ಸ್ತ್ರೀಯು - "ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ. ನಿಜ ಹೇಳು, ನೀನು ಯಾರು?"
ವೃದ್ಧನಾರಿಯ ಪ್ರಬುದ್ಧ ಮಾತುಗಳಿಗೆ ಉತ್ತರಿಸಲು ಕಾಳಿದಾಸನಿಗೆ ಪದಗಳಿಗೆ ತಡಕಾಡುವಂತಾದರೂ ಆತ ಹೇಳಿದ, "ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ?"
ಸ್ತ್ರೀ - "ಲೋಕದಲ್ಲಿ ಸಹನಶೀಲರೂ ಇಬ್ಬರೇ!! ಒಂದು ಭೂಮಿ, ಮತ್ತೊಂದು ವೃಕ್ಷ. ಭೂಮಿ ಪುಣ್ಯವಂತರೊಡನೆ ಪಾಪಿಷ್ಠರನ್ನೂ ಸಹಿಸುತ್ತಾಳೆ. ಹಾಗೆಯೇ ಮರವು ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ"
ಈಗ ಕಾಳಿದಾಸ ಹತಾಶನಾಗತೊಡಗಿದ. ಅಸಹನೀಯ ಬಾಯಾರಿಕೆಯು ಆತನನ್ನು ವಿಚಲಿತಗೊಳಿಸಿತು. ಆದರೂ ಪಟ್ಟು ಬಿಡದಂತೆ ನುಡಿದ, "ನಾನೊಬ್ಬ ಹಠಮಾರಿ"
ಸ್ತ್ರೀ - "ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾಧ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ...ಒಂದು ಉಗುರು, ಇನ್ನೊಂದು ಕೂದಲು. ಎಷ್ಟು ಬಾರಿ, ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ"
ಕಾಳಿದಾಸನಿಗೀಗ ಬೇಸರವಾಗತೊಡಗಿತು. ಆತ ತಾಳ್ಮೆ ಕಳೆದುಕೊಂಡ. ಕೆಲವು ಗುಟುಕು ನೀರಿಗಾಗಿ ಇಷ್ಟೊಂದು ಪ್ರಹಸನವೇ ಎಂದುಕೊಳ್ಳುತ್ತಾ, "ನಾನೊಬ್ಬ ಮೂರ್ಖ!!" ಎಂದನು.
ಸ್ತ್ರೀ - "ಅದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ!!
ಒಬ್ಬ ರಾಜ- ಯೋಗ್ಯತೆ ಇಲ್ಲದಿದ್ದರೂ ಎಲ್ಲರ ಮೇಲೂ ಆಳ್ವಿಕೆ ಮಾಡುತ್ತ ದರ್ಬಾರು ಮಾಡುತ್ತಾನೆ. ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ. ರಾಜನನ್ನು ಓಲೈಸುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ..!"
ಈಗ ಕಾಳಿದಾಸ ಏನೂ ಹೇಳುವ ಮನಸ್ಥಿತಿಯಲ್ಲಿ ಉಳಿದಿರಲಿಲ್ಲ. ಆ ವೃದ್ಧ ನಾರಿಯ ಬುದ್ಧಿಶಕ್ತಿಗೆ ಆತ ಬೆರಗಾದ. ಜಗತ್ತು ಕಂಡ ಶ್ರೇಷ್ಠ ಸಂಸ್ಕೃತ ಕವಿ ಎಂದು ಪರಿಗಣಿಸಲ್ಪಟ್ಟ ಆತನಿಗೆ, ಪ್ರಾಯಶಃ ಓದಲು ಸಹ ತಿಳಿದಿಲ್ಲದ ವಯಸ್ಸಾದ ಅನಕ್ಷರಸ್ಥ ಮಹಿಳೆಯ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಅವನು ತನ್ನ ಸೋಲನ್ನು ಒಪ್ಪಿಕೊಂಡನು ಮತ್ತು ಮಹಿಳೆಯ ಕಾಲಿಗೆ ಬಿದ್ದನು.
"ಓ ತಾಯಿ! ನಾನು ಮಹಾಜ್ಞಾನಿ ಎಂಬ ಗರ್ವದಿಂದ ಮೂರ್ಖನಾಗಿದ್ದೆ. ನೀವು ನನ್ನ ಕಣ್ಣು ತೆರೆಸಿದಿರಿ. ನನ್ನ ಅಜ್ಞಾನವನ್ನು ಕ್ಷಮಿಸಿ ಮತ್ತು ಕರುಣೆಯನ್ನು ತೋರಿಸಿ. ನನಗೆ ಸ್ವಲ್ಪ ನೀರು ಕೊಡಿ, ನಾನು ಬೇಡಿಕೊಳ್ಳುತ್ತೇನೆ" ಎಂದು ನುಡಿದನು.
ಆಗ "ಏಳು ಮಗೂ" ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿದನು. ಅಲ್ಲಿ ವೃದ್ಧಸ್ತ್ರೀಯ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ದೇವಿ ನಿಂತಿದ್ದಳು. ಆಕೆಗೆ ಕೈಮುಗಿದಾಗ ಸರಸ್ವತಿ ದೇವಿ ಹೇಳಿದಳು.
"ಯಾವುದೇ ಜ್ಞಾನಿಯಲ್ಲಿ ಉಂಟಾಗುವ ಅಹಂಕಾರವು ಆತನ ಸಾಧನೆಗಳನ್ನು ಕಡಿಮೆಯಾಗಿಸುತ್ತವೆ. ನೀನು ಖಂಡಿತವಾಗಿಯೂ ವಿದ್ಯಾವಂತ. ಆದರೆ ನಿನ್ನ ಶಿಕ್ಷಣದೊಂದಿಗೆ, ನಿನ್ನ ಹೃದಯವನ್ನು ತುಂಬಲು ದುರಹಂಕಾರಕ್ಕೂ ನೀನು ಜಾಗವನ್ನು ನೀಡಿದೆ. ಆದ್ದರಿಂದ, ನಿನಗೆ ಮಾರ್ಗದರ್ಶನ ನೀಡಲು ನಾನೇ ಬರಬೇಕಾಯಿತು. ನಿಜವಾದ ವಿದ್ವಾಂಸರ ಗುರುತು ಅವರ ಜ್ಞಾನವಲ್ಲ, ಅವರ ನಮ್ರತೆ!. ವಿದ್ಯೆಯಿಂದ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು, ಗರ್ವ ಅಹಂಕಾರವಲ್ಲ..! ನಿನ್ನ ವಿದ್ಯೆಗೆ ದೊರೆತ ಮಾನ ಸನ್ಮಾನಗಳನ್ನೇ ನೀನು ಸರ್ವಸ್ವವೆಂದು ಭಾವಿಸಿದೆ. ನಿನ್ನ ಕಣ್ಣು ತೆರೆಸುವುದು ಅವಶ್ಯಕವಾಗಿತ್ತು"
ಕಾಳಿದಾಸನಿಗೆ ತನ್ನ ತಪ್ಪಿನ ಅರಿವಾಯಿತು. ಕೈಮುಗಿದು ಕ್ಷಮೆಯಾಚಿಸಿದನು.
ತಾಯಿ ಸರಸ್ವತಿ, ಮುಗುಳ್ನಕ್ಕು ಕೊನೆಗೆ ಬಾಯಾರಿಕೆಯಿಂದ ತಣಿದಿದ್ದ ಕಾಳಿದಾಸನಿಗೆ ನೀರಿನ ಮಡಕೆಯನ್ನು ಅರ್ಪಿಸಿದಳು. ಅವನು ಕೃತಜ್ಞತೆಯಿಂದ ಹೊಳೆಯುವ ಕಣ್ಣುಗಳಿಂದ ಮಡಕೆಯನ್ನು ಸ್ವೀಕರಿಸಿದನು ಮತ್ತು ಅಮೃತಕ್ಕಿಂತ ಸಿಹಿಯಾದ ನೀರನ್ನು ಕುಡಿದನು!
ಅದು ಅವನ ನೀರಿನ ಬಾಯಾರಿಕೆ ಮಾತ್ರವಲ್ಲ, ಜ್ಞಾನದ ದಾಹವನ್ನೂ ತಣಿಸಿತು.
ನೀತಿ: ವಿದ್ಯಾ ದಧಾತಿ ವಿನಯಂ , ವಿದ್ಯೆಗೆ ವಿನಯವೇ ಭೂಷಣ
Subscribe , Follow on
Facebook Instagram YouTube Twitter X WhatsApp