ಮಠದೊಳಗೆ ಐಷಾರಾಮಿ ಜೀವನ ನಡೆಸುತ್ತಾ, ಹೊರಗೆ ನೂರಾರು ಸೇವಕರ ಜೊತೆ ಸಮಾಜದಲ್ಲಿ ತಮ್ಮನ್ನೇ ತಾವು ಶ್ರೇಷ್ಠ ಎಂದು ಬಿಂಬಿಸಿಕೊಳ್ಳುತ್ತ, ತಮ್ಮ ಪಾದಗಳನ್ನ ಮುಟ್ಟಿ ಮೋಕ್ಷ ಪಡೆಯಿರಿ ಎಂದು ಜನರನ್ನ ಮರಳು ಮಾಡುತ್ತ, ಹರೆಯದ ಮುಗ್ಧ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದಾಳಿ ಮಾಡಿ ಜನರು ಇಟ್ಟ ನಂಬಿಕೆಗೆ ಕೊಳ್ಳಿ ಇಡುವ, ಖಾವಿಯನ್ನ ಧರಿಸಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡಿ ಜನರು ಧರ್ಮವನ್ನೇ ಅನುಮಾನಿಸಿ ನೋಡುವಂತೆ ಬದುಕಿದ ಕೆಟ್ಟ ಸ್ವಾಮೀಜಿಗಳ ನಡುವೆ ಬದುಕನ್ನ ಸಮಾಜದ ಒಳಿತಿಗೆ ಮೀಸಲಿಟ್ಟು ಬದುಕಿದ ಕೆಲವೇ ಕೆಲವು ಸರ್ವ ಶ್ರೇಷ್ಠರಲ್ಲಿ ಸಿದ್ದೇಶ್ವರರು ಕೂಡ ಒಬ್ಬರು...
ಅವರೇನು ಸಕಲ ಸೌಲಭ್ಯಗಳುಳ್ಳ ಮಠದಲ್ಲಿ ಇರ್ಲಿಲ್ಲ,
ಐಷಾರಾಮಿ ಕಾರುಗಳು ಇರಲಿಲ್ಲ,
ತಮಗೆ ಅಂತ ಅಡ್ಡಪಲ್ಲಕ್ಕಿ ಉತ್ಸವ ಮಾಡಿಕೊಳ್ಳಲಿಲ್ಲ,
ಜನರ ಮುಗ್ಧತೆಯನ್ನ ದುರುಪಯೋಗ ಪಡಿಸಿಕೊಂಡು ಸರ್ಕಾರದ ವಿರುದ್ಧ ಎತ್ತಿಕಟ್ಟಿ ವೈಯಕ್ತಿಕ ಲಾಭ ಪಡೆದುಕೊಳ್ಳಲಿಲ್ಲ,
ಜ್ಞಾನ ಹಂಚಿಕೆಯ ನೆಪದಲ್ಲಿ ಹಣ ಸಂಪಾದಿಸಲಿಲ್ಲ,
ಪಾದಪೂಜೆ ಮಾಡಿಸಿಕೊಂಡು ಆ ನೀರನ್ನ ಶ್ರೇಷ್ಠ ಎಂದು ಜನರು ತಲೆಗೆ ಹಾಕಿಕೊಳ್ಳುವಂತೆ ಮಾಡಲಿಲ್ಲ, ಹಾಗ್ ನೋಡಿದ್ರೆ ಭಕ್ತರಿಗೆ ತಮ್ಮ ಪಾದವನ್ನ ಸ್ಪರ್ಶಿಸೋಕೆ ಅವಕಾಶವನ್ನೇ ಕೊಡ್ತಿರ್ಲಿಲ್ಲ...
ಮೊದಲ ಪುಸ್ತಕ ಬರೆದಾಗ ವಯಸ್ಸು ಕೇವಲ ಹತ್ತೊಂಬತ್ತು...
ಬದುಕಿನುದ್ದಕ್ಕೂ ಮಾಡಿದ್ದು ಜ್ಞಾನ ಪಡೆಯುವುದು, ಜ್ಞಾನ ಹಂಚುವುದು...
ಜಾತಿ ಹೆಸರಿನಲ್ಲಿ ಜನರನ್ನ ವಿಂಗಡಿಸಲಿಲ್ಲ, ಸಾಮಾಜಿಕ ನ್ಯಾಯದ ಪರ ನಿಂತು ಸಮಾಜದ ಕಟ್ಟ ಕಡೆಯ ಮನುಷ್ಯನನ್ನ ಗೌರವಿಸಿದ ಸರಳತೆಯ ಸಾಕಾರ ಮೂರ್ತಿ...
ಯಾವತ್ತೂ ಜಾತಿಯಿಂದ ಗುರುತಿಸಿಕೊಂಡು ತಮ್ಮ ಜಾತಿಗೆ ಮೀಸಲಾತಿ ಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಲಿಲ್ಲ, ಬಹಿರಂಗ ಸಭೆಗಳಲ್ಲಿ ಜಾತಿ ಪರ ಹೇಳಿಕೆಗಳನ್ನ ಕೊಡಲಿಲ್ಲ, ಬಸವಣ್ಣನವರ ವಿಶ್ವಮಾನವ ಸಂದೇಶವನ್ನ ತುಂಬಾ ಸ್ಪಷ್ಟವಾಗಿ ಜನರಿಗೆ ತಲುಪಿಸಿದ ಶ್ರೇಷ್ಠ ವ್ಯಕ್ತಿ...
ಪುಕ್ಕಟೆ ಸೈಟ್ ಬರುತ್ತೆ ಅನ್ನೊ ಕಾರಣಕ್ಕೆ ಪ್ರಶಸ್ತಿ ಕೊಡಿ ಎಂದು ಸರ್ಕಾರಕ್ಕೆ ಲಾಭಿ ಮಾಡುವವರ ನಡುವೆ, ಕೇಂದ್ರ ಸರ್ಕಾರ ಗುರುತಿಸಿ ಭಾರತದ ಅತ್ಯುನ್ನತ ಪ್ರಶಸ್ತಿ ನೀಡಲು ಮುಂದಾದಾಗ ತಮ್ಮ ಬದುಕು ಈ ರೀತಿ ಇದೆ, ಇಂತಹ ಬದುಕಿಗೆ ಪ್ರಶಸ್ತಿ ಬಿರುದು ಸನ್ಮಾನಗಳ ಅವಶ್ಯಕತೆ ಇಲ್ಲ, ಆ ಪ್ರಶಸ್ತಿಯ ಮೇಲೆ ಗೌರವವಿದೆ ಎಂದು ನಯವಾಗಿ ತಿರಸ್ಕರಿಸಿ ತಮ್ಮದು ಎಂತಹ ಮೇರು ವ್ಯಕ್ತಿತ್ವ ಅನ್ನೊದನ್ನ ತೋರಿಸಿಕೊಟ್ಟವರು ಸಿದ್ದೇಶ್ವರ ಶ್ರೀಗಳು...
ತಮ್ಮನ್ನು ದೈವಾಂಶ ಸಂಬೂತರು ಅಂತ ಬಿಂಬಿಸಿಕೊಂಡು ತಮ್ಮನ್ನೇ ಹೊಗಳಿಕೊಳ್ಳುತ್ತ ಪ್ರವಚನ ಕೊಡುವವರ ನಡುವೆ ಜನರಿಗೆ ಬದುಕು ಅಂದರೆ ಏನು ಅದನ್ನ ಹೇಗೆ ಅನುಭವಿಸಬೇಕು, ಬದುಕಿಗೆ ಹಣದ ಅವಶ್ಯಕತೆ ಎಷ್ಟಿದೆ, ಬದುಕಿನಲ್ಲಿ ಯಾವುದು ಮುಖ್ಯ ಅನ್ನೊದರ ಬಗ್ಗೆ ಲಕ್ಷಾಂತರ ಜನರಿಗೆ ಪ್ರವಚನ ನೀಡಿದ ಸಿದ್ದೇಶ್ವರರು ಈ ಶತಮಾನ ಕಂಡ ಕೆಲವೇ ಕೆಲವು ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು...
ಪ್ರಕೃತಿಯೇ ಬದುಕಿನ ಅವಶ್ಯಕತೆಗಳನ್ನ ನೀಗಿಸುತ್ತಿರುವಾಗ ಹಣದ ಅವಶ್ಯಕತೆ ಎಲ್ಲಿದೆ ಎಂದು ಜೇಬುಗಳೇ ಇಲ್ಲದ ಬಟ್ಟೆ ಧರಿಸಿ ಜನರಿಗೆ ತಮ್ಮ ನಡೆ ನುಡಿಗಳಲ್ಲೇ ಸುಂದರ ಬದುಕನ್ನ ತೋರಿಸಿದ ಸರಳತೆಯ ಶ್ರೇಷ್ಠ ಸಂತ ಸಿದ್ದೇಶ್ವರರು...
ಬದುಕಿನ ಬಹುತೇಕ ಸಮಯಯನ್ನ ಜನರಿಗೆ ಜ್ಞಾನ ಹಂಚುವುದಕ್ಕಾಗಿಯೇ ಮೀಸಲಿರಿಸಿ ನಿಸ್ವಾರ್ಥದ ಜೀವನವನ್ನ ನಡೆಸಿ ಉಳಿದವರಿಗೆ ಮಾದರಿಯಾಗಿ ನಿಂತರು, ಜನರು ದೇವರ ಸ್ಥಾನದಲ್ಲಿ ಇಟ್ಟಿರಬಹುದು ಆದರೆ ತಾನು ಕೂಡ ಸಾಮಾನ್ಯ ಮನುಷ್ಯ ತನಗೂ ಒಂದು ದಿನ ಸಾವು ಬಂದೇ ಬರುತ್ತೆ ಅವತ್ತು ಆಗಬೇಕಾದ ಕೆಲಸಗಳ ಬಗ್ಗೆ ಸುಮಾರು ವರ್ಷಗಳ ಹಿಂದೆಯೇ ಒಂದು ಪತ್ರದಲ್ಲಿ ಉಲ್ಲೇಖ ಮಾಡಿ, ಸತ್ತ ನಂತರ ಯಾವ್ಯಾವ ಕಾರ್ಯಗಳು ಎಷ್ಟು ಸರಳವಾಗಿ ನಡೆಯಬೇಕು ಎಂಬುದನ್ನ ಸ್ಪಷ್ಟವಾಗಿ ವ್ಯಕ್ತಪಡಿಸಿ ಮರಣದ ನಂತರ ಕೂಡ ಸರಳವಾಗೇ ಹೊರಟುಬಿಡಬೇಕು ಎಂಬ ಸಂದೇಶವನ್ನ ಸಮಾಜಕ್ಕೆ ಕೊಟ್ಟು ಮೌನವಾಗಿ ಹೊರಟುಬಿಟ್ಟರು...
ಜನರು ಇನ್ನೂ ಮೌಡ್ಯ ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸದ ಗೊಂದಲದಲ್ಲಿ ಬದುಕುತ್ತಿರುವಾಗಲೇ ಇಂತವರು ಮನುಷ್ಯರಾಗಿ ಜನಿಸಿ ದೇವರಂತೆ ಬದುಕಿ ದೇವರೆಂದರೆ ಯಾರು ಅನ್ನೊ ಪ್ರಶ್ನೆಗೆ ತಮ್ಮ ಬದುಕಿನ ಮುಖಾಂತರ ಉತ್ತರ ತಿಳಿಸಿ ಜನರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯುತ್ತಾರೆ...
ಸಿದ್ದೇಶ್ವರ ಸ್ವಾಮೀಜಿಗಳು ಭೌತಿಕವಾಗಿ ಇಲ್ಲದ್ದಿದ್ದರೂ ಕೋಟ್ಯಂತರ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ, ಹೋಗಿ ಬನ್ನಿ ಅಂತಾನೂ ಹೇಳ್ಬಾರ್ದು, ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಇರುವವರಿಗೆ ಆ ಮಾತು ಸೂಕ್ತ ಅನಿಸೋದಿಲ್ಲ...
ಹೆಮ್ಮೆಯಂತೂ ಇದೆ ಇಂತಹ ಸಂತರು ನಡೆದಾಡಿದ ಮಣ್ಣಿನಲ್ಲಿ ನಾವಿದ್ದೇವೆ ಅನ್ನೊ ಕಾರಣಕ್ಕೆ....
Subscribe , Follow on
Facebook Instagram YouTube Twitter WhatsApp