-->

Cow and Tiger , a short story on belief

ಒಮ್ಮೆ, ಮೇಯಲು ಹೋಗಿದ್ದ ಹಸುವೊಂದು, ಹಸಿದ ಹುಲಿಯ ಕಣ್ಣಿಗೆ ಬಿತ್ತು.‌

ಹುಲಿ ಹಸುವನ್ನು ಕೊಂದು ತಿನ್ನಲೆಂದು ಮುಂದಡಿ ಇಟ್ಟಾಗ, ತನ್ನ‌ ಪ್ರಾಣ ರಕ್ಷಣೆಗಾಗಿ ಹಸು ಓಡ ತೊಡಗಿತು. ಹುಲಿ ಅದರ ಬೆನ್ನಟ್ಟಿತು.

ಹಸು ಓಡುತ್ತಾ ಓಡುತ್ತಾ ಒಂದು ಖಾಲಿಯಾದ ಕೆರೆಯ ಬಳಿಗೆ ಬಂದಿತು. ಬೇರೆ ದಾರಿ ಕಾಣದೇ ಆ ಕೆರೆಗೆ ಧುಮುಕಿತು. ಅದರ ಹಿಂದೆ ಬಂದಿದ್ದ ಹುಲಿಯೂ ಆ ಕೆರೆಗೆ ಧುಮುಕಿತು.

ನೀರಿಲ್ಲದ ಆ ಕೆರೆ ಖಾಲಿಯಾಗಿದ್ದಿದ್ದರೂ, ದಪ್ಪವಾದ ಕೆಸರು ಮಣ್ಣಿನಿಂದ ತುಂಬಿತ್ತು.

ಹಸು ಮತ್ತು ಹುಲಿ ಎರಡೂ ಅಲುಗಾಡಲಾಗದ ರೀತಿ ಆ ಕೆಸರಿನಲ್ಲಿ‌ ಅಲ್ಲಲ್ಲೇ ಸಿಲುಕಿಕೊಂಡವು. ಎಷ್ಟು ‌ಒದ್ದಾಡಿ ಯತ್ನಿಸಿದರೂ ಕೊಂಚವೂ ಮುಂದೆ ಸರಿಯಲು ಸಾಧ್ಯವಾಗುತ್ತಿರಲಿಲ್ಲ.

ಎರಡೂ ಪ್ರಾಣಿಗಳು, ತಮ್ಮ ತಲೆಗಳಷ್ಟೇ ಹೊರಗೆ ಕಾಣಿಸುವಷ್ಟು ಆ ಕೆಸರಿನಲ್ಲಿ ಹೂತುಹೋಗಿದ್ದವು.‌

ಹುಲಿ‌ ಹಸುವಿನತ್ತ ಕ್ರೂರ ದೃಷ್ಟಿ ಬೀರುತ್ತಾ, "ನಿನ್ನನ್ನು ತಿಂದು‌ ಮುಗಿಸುವೆ ನಾನು, ಇನ್ನು ಹೇಗೆ ಬಚಾವಾಗುವೆ?"  ಎಂದು‌ ಸವಾಲೊಡ್ಡಿತು.

ಹಸು ಹುಲಿಯತ್ತ ನೋಡಿ ನಗುತ್ತಾ  "ನಿನಗೆ‌ ಯಜಮಾನ ಇದ್ದಾನಾ?"  ಎಂದು‌ ಕೇಳಿತು.

"ನಾನೇ ಈ ಕಾಡಿನ ರಾಜ.‌ ನನಗೆ ಬೇರೆ ಯಜಮಾನ ಯಾರು?"

"ನೀನು ಕಾಡಿನ ರಾಜನೇ ಆದರೂ, ನಿನ್ನನ್ನು ಇನ್ನು ಯಾರೂ ಬದುಕುಳಿಸಲು ಸಾಧ್ಯವಿಲ್ಲ. ನಿನ್ನ ಕತೆ ಮುಗಿಯಿತು" ಎಂದು ಹಸು ತಮಾಷೆ ಮಾಡಿತು.

"ಅರೆ, ನಿನ್ನ‌ ಕತೆಯೂ ಅಷ್ಟೇ. ನಿನ್ನನ್ನು ಯಾರು ಬದುಕಿಸುತ್ತಾರೆ ಇನ್ನು? ಸಾಮಾನ್ಯ ಪಶು ನೀನು"  ಎಂದು ಹುಲಿ ವ್ಯಂಗ್ಯದಿಂದ ಕೇಳಿತು.

"ನಾನು ಬದುಕುಳಿಯುತ್ತೇನೆ.‌ ನೋಡ್ತಾ ಇರು.‌ ನನಗೆ ಯಜಮಾನ ಇದ್ದಾನೆ. ಸೂರ್ಯಾಸ್ತಮಾನದ ನಂತರ ನಾನು ಹಟ್ಟಿಗೆ ಹಿಂದಿರುಗದೇ ಇರುವುದನ್ನು ಕಂಡು, ಆತ ನನಗಾಗಿ ಹುಡುಕಾಡಿಕೊಂಡು ಇಲ್ಲಿಗೆ ಬಂದೇ ಬರುತ್ತಾನೆ." ಎಂದಿತು ಹಸು.

ಕತ್ತಲಾದಾಗ ಹಸು ನುಡಿದಂತೆಯೇ ಆಯ್ತು.

Cow and Tiger , a short story on belief


ಹಟ್ಟಿಗೆ ಹಿಂದಿರುಗದ ಹಸುವಿಗಾಗಿ, ಅದರ ಯಜಮಾನ ಊರಿನ ಜನರನ್ನೆಲ್ಲಾ ಒಟ್ಟುಗೂಡಿಸಿಕೊಂಡು, ಕೊಳ್ಳಿಗಳನ್ನು ಹಿಡಿದುಕೊಂಡು, ಹಸುವಿಗಾಗಿ ಹುಡುಕಾಡುತ್ತಾ, ಅದೇ ಕೆರೆಯ ಬಳಿಗೆ ಬಂದನು.

ಎಲ್ಲರೂ ಸೇರಿ ಹಸುವನ್ನು ಬಚಾವು ಮಾಡಿ ಊರಿನತ್ತ ಸಾಗಿದರು.

"ನಾನೇ ಈ ‌ಕಾಡಿನ ರಾಜ, ನನಗ್ಯಾರೂ ಯಜಮಾನರೇ ಇಲ್ಲ" ಅನ್ನುವ ಅಹಂಕಾರದಿಂದ ಮೆರೆದ ಆ ಹುಲಿ‌ ಮಾತ್ರ, ಕೆಸರಿನಲ್ಲಿಯೇ ಪ್ರಾಣ ಬಿಡಬೇಕಾಯ್ತು.

"ನನ್ನ ಯಜಮಾನ ಇದ್ದಾನೆ, ಆತ ನನ್ನನ್ನು ಹೇಗಾದರೂ ರಕ್ಷಿಸುತ್ತಾನೆ" ಅನ್ನುವ ಸಂಪೂರ್ಣ ನಂಬಿಕೆಯಲ್ಲಿ‌ ಇದ್ದ ಹಸು ಬಚಾವಾಯಿತು.

 ಹೀಗೆಯೇ, ನಾವು ಕೂಡ, ಪರಮಾತ್ಮನೆಂಬ ನಮ್ಮೆಲ್ಲರ ಯಜಮಾನನ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿರಬೇಕು.

 ನಮ್ಮ ಬಾಳಿನ ಒಳಿತು ಕೆಡುಕುಗಳ ಜವಾಬ್ದಾರಿಗಳನ್ನೆಲ್ಲ ಆತನಿಗೆ ಬಿಟ್ಟುಬಿಡಬೇಕು

Terms | Privacy | 2024 🇮🇳
–>