ತಮಗಿದ್ದ ಒಬ್ಬನೇ ಮುದ್ದಿನ ಮಗನಿಗೆ ಒಳ್ಳೆಯ ಮನೆತನದ ಹುಡುಗಿಯೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆ ತಂದರು ಒಬ್ಬ ತಂದೆ ತಾಯಿಗಳು. ಮದುವೆಯಾಗಿ ಸ್ವಲ್ಪ ದಿನಗಳ ವರೆಗೂ ಅತ್ತೆ ಸೊಸೆ ,ಚೆನ್ನಾಗಿ ಹೊಂದಿಕೊಂಡಿದ್ದರು.ನಂತರ ಸಣ್ಣ ಪುಟ್ಟ ಜಗಳದಿಂದ ,ದೊಡ್ಡ ದಾಗುತ್ತಾ ಹೋಯಿತು. ಕೂತರೆ ನಿಂತರೆ ಜಗಳವಾಡತೊಡಗಿದರು. ಮನೆಯಲ್ಲಿರುವವರಿಗೆಲ್ಲಾ ದೊಡ್ಡ ರಗಳೆ ಎನಿಸತೊಡಗಿತು.ಮಗನಿಗಂತೂ ಹುಚ್ಚು ಹಿಡಿಯುವಷ್ಟು ಕಿರಿ ಕಿರಿಯಾಗುತ್ತಿತ್ತು.ಆತ ಪಾಪ ,ಹೆಂಡತಿಗೆ ಬುದ್ಧಿ ಹೇಳಲಾರ,ಇತ್ತ ತಾಯಿಯನ್ನೂ ಸಮಾಧಾನ ಪಡಿಸಲಾರದೆ,ಒದ್ದಾಡುತ್ತಿದ್ದ.ಇದೇ ಚಿಂತೆಯಲ್ಲಿ ಮಾನಸಿಕವಾಗಿ,
ಸೊರಗತೊಡಗಿದ.
ಒಮ್ಮೆ ತನ್ನ ಸ್ನೇಹಿತನಲ್ಲಿ ತನ್ನ ದುಃಖವನ್ನು ಹೇಳಿಕೊಂಡ.ಸ್ನೇಹಿತನ ಸಮಸ್ಯೆ ಯನ್ನು ಕೇಳಿಸಿಕೊಂಡ ಗೆಳಯ ಅವನಿಗೊಂದು ಸಲಹೆ ನೀಡಿದ,ಪಕ್ಕದ ಊರಿನಲ್ಲಿ ,ಒಳ್ಳೆಯ ಸಾಧನೆ ಮಾಡಿದ ಒಬ್ಬರು ಯೋಗಿಗಳಿದ್ದಾರೆ,ಅವರು ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತಾರೆ ಎಂದು. ಇದೊಂದು ಪ್ರಯೋಗ ಮಾಡಿಯೆ ಬಿಡೋಣವೆಂದು ,ತನ್ನ ಹೆಂಡತಿಯನ್ನು ಹೇಗೊ ಒಪ್ಪಿಸಿ ಆ ಯೋಗಿಗಳ ಬಳಿಗೆ ಕರೆದೊಯ್ದ. ಅವರು ಮೊದಲು ಗಂಡನಿಂದ ಎಲ್ಲಾ ವಿಷಯಗಳನ್ನೂ ಕೇಳಿ ತಿಳಿದುಕೊಂಡರು.ನಂತರ ಅವನನ್ನು ಹೊರಗೆ ಕಳಿಸಿ ,ಅವನ ಹೆಂಡತಿಯನ್ನು ಒಳಗೆ ಕರೆದರು. ಆಕೆಯೊಡನೆ ,ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ,ಹೀಗೆ ಹಿರಿಯರೊಡನೆ ಜಗಳ ಮಾಡುವುದು ಸರಿಯಲ್ಲ,ಅವರಿಗೆ ತೊಂದರೆ ಕೊಟ್ಟರೆ, ನಮಗೆ ಒಳ್ಳೆಯ ದಾಗುವುದಿಲ್ಲ ವೆಂದು ಹೇಳಿದರು. ಇದನ್ನು ಕೇಳಿದ ಆಕೆ ಕೋಪದಿಂದ ಈ ರೀತಿಯ ಬೋಧನೆ ಮಾಡಲು ನನ್ನನ್ನು ಕರೆಸಿದ್ದೀರಾ?ನನಗೆ ಗೊತ್ತು ನೀವೆಲ್ಲಾ ಸೇರಿ ನನ್ನ ಮೇಲೆ ಸಂಚು ನೆಡೆಸುತ್ತಿದ್ದೀರ.ನನಗೆ ನಿಮ್ಮಗಳ ಬೋಧನೆಯ ಅವಶ್ಯಕತೆ ಇಲ್ಲಾ,ಎಂದು ಅಲ್ಲಿಂದ ಹೊರಡ ತೊಡಗಿದಳು. ಆಗ ಯೋಗಿಗಳು ಅಮ್ಮಾ ಸ್ವಲ್ಪ ಕುಳಿತುಕೊ,ನಿನಗೆ ನನ್ನದೊಂದು ಸಲಹೆ ಇದೆ.ಬೇಕಾದರೆ ಒಪ್ಪಿಕೊ,ಇಲ್ಲದಿದ್ದರೆ, ಖಂಡಿತವಾಗಿಯೂ ಇಲ್ಲಿಂದ ಹೊರಡಬಹುದು,ಎಂದರು.
ಆಕೆ ಏನದು ಎನ್ನುತ್ತ ಅಲ್ಲೇ ಕುಳಿತಳು.ನೋಡಮ್ಮಾ,ನಿನಗೆ ನಿನ್ನ ಅತ್ತೆಯೇ ತೊಂದರೆ ತಾನೇ? ಆಕೆಯನ್ನೇ ಇಲ್ಲದ ಹಾಗೆ ಮಾಡಬಹುದು, ಆಮೇಲೆ ನಿನಗೆ ಯಾವ ಚಿಂತೆಯೂ ಇರುವುದಿಲ್ಲ, ಎಂದು ಅವಳ ಕಿವಿಯಲ್ಲಿ ಗುಟ್ಟು ಹೇಳುವಂತೆ ಹೇಳಿದರು.ಅದು ಸರಿ,ಆದರೆ ಅವಳು ಇನ್ನೂ ಗಟ್ಟಿಯಾಗೇ ಇದ್ದಾಳಲ್ಲ? ಹೇಗೆ ಅವಳನ್ನು ಇಲ್ಲವಾಗಿಸುವುದು,ಎಂದಳು ಸೊಸೆ.
ನೋಡು ನನ್ನ ಹತ್ತಿರ ಒಂದು ವಿಷ ಇದೆ,ಅದನ್ನು ಪ್ರತಿದಿನ ಬೆಳಿಗ್ಗೆ, ಅರ್ಧ ಚಮಚ ಹಾಲಿನಲ್ಲಿ ಬೆರಸಿ ಅವಳಿಗೆ ಕೊಡು,ಅದೊಂದು ವಿಶೇಷ ರೀತಿಯ ವಿಷ.ಆಕೆ ತಕ್ಷಣ ಸತ್ತರೆ, ನಿನ್ನ ಮೇಲೇ ಅಪವಾದ ಬರುತ್ತದೆ,ಅದಕ್ಕೆ ನಿಧಾನವಾಗಿ ಸ್ವಲ್ಪ ಸ್ವಲ್ಪವೇ,ವಿಷ ಬೆರೆತು ಒಂದು ವರ್ಷದ ಒಳಗಾಗಿ ಅವಳು ಸಾಯುತ್ತಾಳೆ.ಅದೂ ಅಲ್ಲದೇ, ಯಾವ ವೈದ್ಯರಿಗೂ ಈ ವಿಷವನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ಆಗ ನಿನ್ನ ಮೇಲೆ ಯಾರಿಗೂ ಸಂಶಯವೂ ಬರುವುದಿಲ್ಲ ಎಂದರು. ಸೊಸೆಗೆ ತಡೆಯಲಾರದಷ್ಟು ಸಂತೋಷವಾಯಿತು. ಹಾಗಾದರೆ ಆ ಪುಡಿಯನ್ನು ಈಗಲೇ ಕೊಡಿ ನಾಳೆಯಿಂದಲೇ,ಅದರ ಪ್ರಯೋಗ ಮಾಡುತ್ತೇನೆ, ಎಂದಳು.ಆಗ ಯೋಗಿಗಳು ,ಇನ್ನೊಂದು ವಿಷಯ,ಈ ವಿಷದ ಪುಡಿ ಮುಗಿಯುವವರೆಗೂ ನೀನು ನಿನ್ನ ಅತ್ತೆ ಯೊಂದಿಗೆ ಜಗಳವಾಡಬಾರದು,ಹಾಗೆಯೇ ಅವಳಿಗೆ ಯಾವುದು ಇಷ್ಟವೋ ಅದನ್ನೇ ಮಾಡಬೇಕು, ಪಾಪ ,ಇನ್ನೆಷ್ಟು ದಿನ ಬದುಕಿದ್ದಾಳು, ಎಂದರು.
ಮನೆಗೆ ಬಂದು ಯೋಗಿಗಳು ಹೇಳಿದ ಹಾಗೆ, ಅತ್ತೆಯ ಮೇಲೆ ಹುಸಿ ಪ್ರೀತಿಯನ್ನು ತೋರಿಸುತ್ತಾ,ಅತ್ತೆ ಹೇಳಿದಂತೆ ,ಅವಳಿಗಿಷ್ಟವಾದಂಥ ಕೆಲಸ ಮಾಡ ತೊಡಗಿದಳು, ಬೆಳಗಿನ ಸಮಯದಲ್ಲಿ ,ಯೋಗಿಗಳು ಕೊಟ್ಟ ಪುಡಿಯನ್ನು ಹಾಲಿಗೆ ಹಾಕಿ ಕೊಡುತ್ತಿದ್ದಳು. ಅತ್ತೆಗೆ ಇವಳ ಬದಲಾವಣೆ ಕಂಡು ಆಶ್ಚರ್ಯವಾದರೂ ಒಳಗೊಳಗೇ, ಖುಷಿಯಿಂದ ಇರುತ್ತಿದ್ದಳು .ಕ್ರಮೇಣ ಅವಳಿಗೂ ಇವಳ ಮೇಲೆ ಪ್ರೀತಿ ಬರತೊಡಗಿತು.ಎಲ್ಲೊ ತಾನೇ ಸರಿ ಇರಲ್ಲಿಲ್ಲ, ಇವಳೊಂದಿಗೆ ಎಷ್ಟು ಒರಟಾಗಿ ನೆಡೆದುಕೊಂಡೆ ಎಂದು ಕೊಂಡು,ಅವಳನ್ನು ತುಂಬಾ ಪ್ರೀತಿಸತೊಡಗಿದಳು.
ಆರು ತಿಂಗಳು ಕಳೆಯುವುದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಹತ್ತಿರವಾದರು.ಒಬ್ಬರಬಗ್ಗೆ ಒಬ್ಬ ರಿಗೆ,ಗೌರವ ,ಆದರ ಉಂಟಾಯಿತು.
ಒಂದು ದಿನ ಸೊಸೆ ಯೋಗಿಗಳಿದ್ದಲ್ಲಿ ಹೋಗಿ, ಅವರ ಕಾಲಿಗೆ ಬಿದ್ದು, ಸ್ವಾಮಿ, ನನ್ನ ಅತ್ತೆ ನಿಜವಾಗಿಯೂ ದೇವರಂತವರು,ಅವರಿಗೆ ನಾನು ಇಷ್ಟು ದಿನ ವಿಷ ಹಾಕಿದ್ದೇನೆ,ಅವರು ಬಹುಕಾಲ ಬದುಕಬೇಕು, ಅವರು ಸಾಯಬಾರದು,ದಯವಿಟ್ಟು ಅವರು ಬದುಕುವಂತೆ,ಏನಾದರೂ ಔಷಧಿ ನೀಡಿ,ಎಂದು ಅತ್ತಳು.
ಯೋಗಿಗಳು ನಗುತ್ತಾ ಹೇಳಿದರು ಚಿಂತಿಸಬೇಡಾ, ನಾನು ಕೊಟ್ಟಿದ್ದು ಸಕ್ಕರೆ ಪುಡಿಯಷ್ಟೆ,ಅದು ವಿಷವಲ್ಲ.ನಿನ್ನ ಹೃದಯದಲ್ಲಿದ್ದ ವಿಷವನ್ನು ತೆಗೆದ ಔಷಧಿ ಅದು ,ಎಂದರು. ಸೊಸೆ ತನ್ನನ್ನು ಕ್ಷಮಿಸಿ ಎಂದು ಯೋಗಿಗಳ ಪಾದಕ್ಕೆರಗಿ ಮನೆಗೆ ಹೊರಟಳು.
ಅಂದಿನಿಂದ ಅವರಿಬ್ಬರೂ ತಾಯಿ ಮಗಳಂತೆ ಬದುಕಿದರು.
ಬೇರೆಯವರ ತಪ್ಪುಗಳನ್ನೇ ಎಣಿಸುತ್ತಾ ಹೋದರೆ, ನಮ್ಮ ಮನಸ್ಸು ಇನ್ನಷ್ಟು ಕೆಡುತ್ತದೆ, ಬದಲಾಗಿ, ಅವರ ಒಳ್ಳೆಯ ಗುಣಗಳನ್ನು ನೋಡಿದರೆ,ಬದುಕು ಸುಂದರವಾಗುವುದರಲ್ಲಿ ,ಸಂದೇಹವಿಲ್ಲ
Subscribe , Follow on
Facebook Instagram YouTube Twitter WhatsApp