ಒಬ್ಬ ವ್ಯಕ್ತಿಗೆ ಚಿಟ್ಟೆಯ ಮೊಟ್ಟೆ ಕಾಣಿಸಿತು. ಒಂದು ದಿನ ಅದರಲ್ಲಿ ಸಣ್ಣ ರಂಧ್ರ ಕಾಣಿಸಿತು. ಆ ರಂಧ್ರದ ಮೂಲಕ ಹೊರಬರಲು ಚಿಟ್ಟೆ ಮರಿ ಪ್ರಯತ್ನಿಸುತ್ತಿತ್ತು. ಆ ವ್ಯಕ್ತಿ ಚಿಟ್ಟೆಯ ಕಾರ್ಯವನ್ನೇ ನೋಡುತ್ತಾ ಕುಳಿತ. ಹಲವು ಗಂಟೆಗಳ ಕಾಲ ಒದ್ದಾಡಿದರೂ ಚಿಟ್ಟೆಗೆ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಸುಸ್ತಾಗಿ ಅದು ಸುಮ್ಮನಾಯಿತು. ಚಿಟ್ಟೆ ಹೊರಬರಲು ಕಷ್ಟಪಡುತ್ತಿದೆ. ಅದಕ್ಕೆ ತಾನು ಸಹಾಯ ಮಾಡಬೇಕು ಎಂದು ಭಾವಿಸಿದ ವ್ಯಕ್ತಿ ಕತ್ತರಿ ತೆಗೆದುಕೊಂಡು ಮೊಟ್ಟೆಯ ರಂಧ್ರವನ್ನು ಸ್ವಲ್ಪ ದೊಡ್ಡದು ಮಾಡಿದ. ಚಿಟ್ಟೆ ಸುಲಭವಾಗಿ ಹೊರಬಂತು.
ಆದರೆ ಚಿಟ್ಟೆಯ ದೇಹ ಊದಿಕೊಂಡಿತ್ತು. ರೆಕ್ಕೆಗಳು ಬಲಿತಿರಲಿಲ್ಲ. ಆ ವ್ಯಕ್ತಿ ಮತ್ತೆ ಚಿಟ್ಟೆಯನ್ನೇ ನೋಡುತ್ತಾ ಕುಳಿತ. ಚಿಟ್ಟೆ ಹಾರುವುದಕ್ಕೆ ಪ್ರಯತ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ದೇಹವನ್ನು ಎಳೆದುಕೊಂಡು ಅತ್ತಿಂದಿತ್ತ ಓಡಾಡುತ್ತಿತ್ತು. ಚಿಟ್ಟೆ ಈಗ ರೆಕ್ಕೆ ಬಿಚ್ಚಿ ಹಾರಬಹುದು ಎಂದು ವ್ಯಕ್ತಿ ಕಾದ. ಎಷ್ಟು ಸಮಯವಾದರೂ ಚಿಟ್ಟೆಗೆ ಹಾರುವುದಕ್ಕಾಗಲಿಲ್ಲ. ಆ ಚಿಟ್ಟೆ ತನ್ನ ಜೀವನವೆಲ್ಲ ಹೀಗೆ ತೆವಳುತ್ತಲೇ ಕಳೆಯಬೇಕಾಯಿತು.
ತಾನು ಚಿಟ್ಟೆಗೆ ನೆರವಾಗಬೇಕು ಎಂದ ತುಡಿತದಲ್ಲಿ ಆ ವ್ಯಕ್ತಿ ಚಿಟ್ಟೆಯ ಸೃಷ್ಟಿಯ ಹಿಂದಿರುವ ವಿಚಾರವನ್ನು ಮರೆತಿದ್ದ ಮೊಟ್ಟೆಯಿಂದ ಹೊರಬರಲು ಚಿಟ್ಟೆ ಒದ್ದಾಡುವಾಗ ಅದರ ದೇಹದಿಂದ ಒಂದು ದ್ರವ ಸ್ರವಿಸುತ್ತದೆ. ಇದು ರೆಕ್ಕೆಗಳನ್ನು ಬಲಪಡಿಸುತ್ತದೆ. ಮುಂದೆ ಹಾರುವುದಕ್ಕೆ ರೆಕ್ಕೆಗಳು ಅನುಕೂಲವಾಗಬೇಕು ಎಂದಾದರೆ ಚಿಟ್ಟೆ ಕಷ್ಟ ಪಡಲೇಬೇಕು. ಹೀಗೆ ಕಷ್ಟಪಟ್ಟು ಹೊರಬಂದ ಚಿಟ್ಟೆ ಹಾರುವುದಕ್ಕೆ ಸಿದ್ಧವಾಗಿರುತ್ತದೆ.
ನೀತಿ :-- ಜೀವನದಲ್ಲಿ ಕಷ್ಟಗಳು ಬರಲೇಬೇಕು. ಆಗ ಮಾತ್ರ ನಾವು ಬಲಿಷ್ಠಗೊಳ್ಳುವುದಕ್ಕೆ, ಸಮರ್ಥವಾಗಿ ಜೀವನವನ್ನು ಎದುರಿಸುವುದಕ್ಕೆ ಸಾಧ್ಯ.
- ಡಾ.ಈಶ್ವರಾನಂದ ಸ್ವಾಮೀಜಿ ( 9341137882 )
Subscribe , Follow on
Facebook Instagram YouTube Twitter X WhatsApp