'ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು' ಎಲ್ಲರೂ ಸುಖವಾಗಿರಬೇಕೆಂಬ ಆಶಯ ಈ ಶಾಂತಿಮಂತ್ರದ್ದು. ಇಂತಹ ಉದಾತ್ತತೆಯನ್ನು ಒಳಗೊಂಡಿದೆ ನಮ್ಮ ಭಾರತೀಯ ಸಂಸ್ಕೃತಿ. ಇಂತಹ ಆಶಯ ಸಾಧ್ಯವೇ! ಎಂಬ ಸಂಶಯ ಬೇಡ. ಏಕೆಂದರೆ ನಮ್ಮದು ಸುಸಂಸ್ಕೃತ ರಾಷ್ಟ್ರ. ಇಲ್ಲಿನ ಪ್ರಜೆಗಳು ಧಾರ್ಮಿಕ ಕ್ರಿಯೆಗಳಲ್ಲಿ ಬಲು ಆಸಕ್ತರು, ಸತ್ಸಂಪ್ರದಾಯ, ಸನಾತನ ಧರ್ಮ, ಆಚಾರ-ವಿಚಾರಗಳಲ್ಲಿ ಶ್ರದ್ಧೆಯುಳ್ಳವರು. ನಾಗರೀಕರು, ಮಾನವೀಯತೆಗೆ ಹೆಸರಾದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾನವೀಯತೆ, ಮನುಷ್ಯತ್ವಕ್ಕೆ ಬರ ಬಂದಿರುವುದು ದೊಡ್ಡ ದುರಂತವಾಗಿದೆ.
ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಎಂದು ಹೊರಟ ಆತ. ದಾರಿಯಲ್ಲಿ ಕಾಣಿಸಿದ ಹೂವು ಮಾರುವವಳ ಬಳಿ ನಾಲ್ಕು ಮೊಳ ಹೂ ಕೊಂಡು ಹಣ ಕೊಟ್ಟಾಗ, ಆಕೆ ನೋಟನ್ನು ಮೊದಲು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ನಂತರ ಅದನ್ನು ಭೂಮಿಗೆ, ತನ್ನ ಹೂವಿನ ಬುಟ್ಟಿಗೆ, ನಂತರ ಮಾಂಗಲ್ಯ, ಹೊಟ್ಟೆಯ ಕಡೆಗೆ, ಆಮೇಲೆ ತನ್ನ ಶಿರದ ಹಿಂಭಾಗದತ್ತ ತೋರಿಸಿ, ನೋಟನ್ನು ತನ್ನ ಪರ್ಸಿನಲ್ಲಿ ಇಟ್ಟುಕೊಂಡಳು. ಆಕೆಯ ಈ ವಿಚಿತ್ರ ವರ್ತನೆ ಆತನಿಗೆ ಒಮ್ಮೆಗೆ ನಗೆ, ಆಶ್ಚರ್ಯಗಳನ್ನು ಮೂಡಿಸಿದವು. ಕುತೂಹಲ ತಣಿಸಲು, "ಯಾಕಮ್ಮಾ ಹಾಗೆ ಮಾಡಿದೆ?" ಎಂದು ಆಕೆಯನ್ನು ಪ್ರಶ್ನಿಸಿದಾಗ, "ಇದು ನನ್ನ ಪೂಜೆ ಸ್ವಾಮಿ. ಇಂದು ನನ್ನ ಹೂವಿಗೆ ನೀವೇ ಮೊದಲ ಗಿರಾಕಿಯಾದ ಕಾರಣ, ನಿಮ್ಮ ಕೈ ಬೋಣಿ ಚೆನ್ನಾಗಿರ್ಲಿ. ಇಂದು ನನ್ನ ವ್ಯಾಪಾರ ಹೆಚ್ಚಾಗಲಿ ಎಂದು ನೀವಿತ್ತ ಹಣಕ್ಕೆ ಮೊದಲ ನಮಸ್ಕಾರ. ಎರಡು, ಮೂರನೆಯ ನಮಸ್ಕಾರ ಈ ಹೂವು ಬೆಳೆಸಿದ ಭೂತಾಯಿಗೆ ಮತ್ತು ರೈತನಿಗೆ, ನಾಲ್ಕನೆಯ ನಮಸ್ಕಾರ ನನ್ನ ಕೈಹಿಡಿದು ರಕ್ಷಿಸುತ್ತಿರುವ ಪತಿ, ಮಕ್ಕಳು ಚೆನ್ನಾಗಿರಲಿ ಎಂದು. ಲೋಕದಲ್ಲಿ ಎಲ್ಲರೂ ಚೆನ್ನಾಗಿರಲಿ ಎಂದು ನನ್ನ ಐದನೆಯ ನಮಸ್ಕಾರ" ಎಂದ ಆಕೆ, "ಎಲ್ಲರೂ ಚೆನ್ನಾಗಿದ್ದರಲ್ವಾ ಸ್ವಾಮಿ ನಾ ಚೆನ್ನಾಗಿರುವುದು" ಎಂದುತ್ತರಿಸಿದಳು.
'ಆಹಾ! ಅವಿದ್ಯಾವಂತಳಾದರೂ ಎಂತಹ ಸದಾಶಯ ಈಕೆಯದು, ಮೆಚ್ಚಬೇಕಾದ್ದೇ ಈಕೆಯ ಸದ್ಭಾವನೆಯನ್ನು, ಆ ದೇವನ ಈ ಸೃಷ್ಟಿಯನ್ನು' ಎಂದು ತಲೆದೂಗಿ ಆಲಯದಲ್ಲಿ ಪೂಜೆ ಮುಗಿಸಿ ಆತ ಮನೆ ಸೇರಿದ. ಶರೀರ ಮನೆಯಲ್ಲಿದ್ದರೂ ಆತನ ಮನ ಮಾತ್ರ ಆಕೆಯಾಡಿದ ಮಾತುಗಳನ್ನು ಮೆಲುಕು ಹಾಕುತ್ತಿತ್ತು.
'ವಿದ್ಯಾವಂತರಾದ ನಾವು ಬಹುತೇಕ ದೇವರ ಮುಂದೆ ನಿಂತು, ಸ್ವಾಮಿ ನನಗೆ ನನ್ನ ಕುಟುಂಬದವರಿಗೆ ಇದು, ಅದು ಎಲ್ಲವನ್ನೂ ಕೊಡು. ನಮ್ಮನ್ನೆಲ್ಲಾ ಚೆನ್ನಾಗಿಟ್ಟಿರು. ನನ್ನ ಮಕ್ಕಳಿಗೆ ಹೆಚ್ಚಿನ ವಿದ್ಯೆ, ಒಳ್ಳೆಯ ಬುದ್ಧಿ, ಐಶ್ವರ್ಯ ಕೊಡು' ಎಂದು ದೀನರಾಗಿ ಬೇಡುತ್ತೇವೆಯೇ ಹೊರತು, ನಮ್ಮಂತೆಯೇ ಬೇರೆಯವರೂ ಚೆನ್ನಾಗಿರಲಿ ಎಂದು ಹಾರೈಸುತ್ತೇವೆಯೇ? 'ಊರು ಕಾದು ದೊಡ್ಡ ಬೋರೇಗೌಡ ಎನಿಸಿಕೊಂಡ' ಎಂಬ ಗಾದೆಯಂತೆ ಪರರ ಚಿಂತೆ ನಮಗೇಕೆ? ನಮ್ಮದು ನಾವು ನೋಡಿಕೊಳ್ಳೋಣ ಎನ್ನುವವರು ಬಹಳಷ್ಟು ಮಂದಿ.
ಹೂ ಮಾರುವಾಕೆ ಶಾಲೆಗೆ ಹೋಗಿ ಕಲಿತವಳಲ್ಲ, ಸಾಧುಸಂತರ ಪ್ರವಚನ ಕೇಳಿದವಳಲ್ಲ, ಆದರೂ ಆಕೆ ಗಳಿಸಿಕೊಂಡ ಜೀವನಾನುಭವ, ತಿಳಿದ ಸತ್ಯವನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸಿದಳು.
ಅತಿ ವಿದ್ಯಾವಂತ ನಾಗರೀಕರು ಎಂದು ಬೀಗುವ ನಾವು 'ಸರ್ವೇ ಜನಾಃ ಸುಖೀನೋ ಭವಂತು' ಎಂಬ ತತ್ವವನ್ನು ನಮ್ಮ ನಡೆನುಡಿಯಲ್ಲಿ ಅಳವಡಿಸಿಕೊಂಡು ದುರ್ಲಭವಾದ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿ ಕೊಳ್ಳಬೇಕಲ್ಲವೇ? ಇದನ್ನು ಅರಿತು ಪಾಲಿಸಲು ಹೆಚ್ಚಿನ ವಿದ್ಯೆಯ ಅಗತ್ಯವಿಲ್ಲ, ಯಾವ ಶಾಲಾ-ಕಾಲೇಜು-ವಿಶ್ವವಿದ್ಯಾಲಯದ ಪದವಿ ಪ್ರಮಾಣ ಪತ್ರ ಬೇಕಿಲ್ಲ. ಬದಲಿಗೆ ಸಾಮಾನ್ಯ ಜ್ಞಾನ ಸಾಕು. ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕು. ಈ ಸದ್ವಿಚಾರದ ಬಗ್ಗೆ ಚಿಂತಿಸಲು ಇದುವೇ ಸಕಾಲ.
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್ ||
ಎಲ್ಲರೂ ಸುಖವಾಗಿರಲಿ, ಎಲ್ಲರೂ ನಿರಾತಂಕವಾಗಿರಲಿ, ಶುಭವಾದುದನ್ನೇ ಕಾಣಲಿ, ಯಾರೂ ದುಃಖಿಗಳಾಗದಿರಲಿ.
- ಆಧ್ಯಾತ್ಮಿಕ ವಿಚಾರ ಬಳಗ (+919945295560)
Subscribe , Follow on
Facebook Instagram YouTube Twitter X WhatsApp