ಸಹಸ್ರಾರು ದೇವಾಲಯಗಳಿರುವ ಬೆಂಗಳೂರು ಮಹಾನಗರದಲ್ಲಿನ ಪುರಾತನ ದೇವಾಲಯಗಳಲ್ಲಿ ಒಂದು ಗಾಳಿ ಆಂಜನೇಯ ಸ್ವಾಮಿ ದೇವಾಲಯವೂ ಒಂದು. ಬೆಂಗಳೂರು ನಗರ ನಿರ್ಮಾಣಕ್ಕೂ ಮುನ್ನ ಇಲ್ಲಿ ದೇವಾಲಯವಿತ್ತು ಎಂಬುದನ್ನು ಈ ದೇವಾಲಯದ ಗರ್ಭಗೃಹದ ರಚನೆಯೇ ಸಾರುತ್ತದೆ ಎನ್ನುತ್ತಾರೆ ಇತಿಹಾಸ ತಜ್ಞರು.
ಆ ಬಳಿಕ ಈ ದೇವಾಲಯವನ್ನು ಚನ್ನಪಟ್ಟಣದ ಶ್ರೀ ವ್ಯಾಸರಾಯ ಎಂಬುವವರು 1425ರಲ್ಲಿ ಜೀರ್ಣೋದ್ಧಾರ ಮಾಡಿದರು ಎಂದು ಹೇಳಲಾಗುತ್ತಿದೆ.
ಬೆಂಗಳೂರು - ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಎದುರು ಬ್ಯಾಟರಾಯನಪುರದಲ್ಲಿರುವ ಈ ದೇವಾಲಯ ವಿಜಯನಗರ ವಾಸ್ತುಶೈಲಿಯ ಭವ್ಯ ರಾಜಗೋಪರ ಹಾಗೂ ವಿಶಾಲ ಪ್ರಾಕಾರದ ಸುಂದರ ದೇವಾಲಯವಾಗಿದೆ. ರಾಜಗೋಪುರದಲ್ಲಿ ಹಲವು ಸುಂದರ ಉಬ್ಬು ಶಿಲ್ಪಗಳಿವೆ.
ಈ ಪ್ರದೇಶಕ್ಕೆ ಬೇಟೆರಾಯನಪುರ ಎಂದು ಹೆಸರು ಬರಲು ಇಲ್ಲಿರುವ ರುಕ್ಮಿಣಿ, ಸತ್ಯಭಾಮಾ ಸಮೇತನಾದ ವೇಣುಗೋಪಾಲಸ್ವಾಮಿ ಕಾರಣ ಎನ್ನುತ್ತಾರೆ ದೇವಾಲಯದ ಅರ್ಚಕರು. ಗೋಪಾಲಕರನ್ನು ಕಾಪಾಡಲು ಕೃಷ್ಣ ಬೇಟೆಗೆ ಹೋಗುವ ಮೂಲಕ ಬೇಟೆರಾಯನಾದ ಆತನ ದೇವಾಲಯವಿರುವ ಈ ತಾಣಕ್ಕೆ ಬೇಟೆರಾಯನಪುರ ಎಂದು ಹೆಸರು ಬಂದಿದೆ ಎನ್ನುತ್ತಾರವರು.
ಬಹಳ ವರ್ಷಗಳ ಹಿಂದೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಾಲಯದ ಎದುರಿನ ದಕ್ಷಿಣಮುಖ ನಂದಿ ಕ್ಷೇತ್ರದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ವೃಷಭಾವತಿ ಇಲ್ಲಿ ನದಿಯಾಗಿ ಮೈತುಂಬಿ ಹರಿಯುತ್ತಿದ್ದಳು. ಕೇವಲ 50-60 ವರ್ಷಗಳ ಹಿಂದೆ ದೇವರ ದರ್ಶನಕ್ಕೆ ಬರುತ್ತಿದ್ದ ಭಕ್ತರು, ಈ ಹೊಳೆಯಲ್ಲಿ ಸ್ನಾನ ಮಾಡಿ ದೇವಸ್ಥಾನ ಪ್ರವೇಶಿಸುತ್ತಿದ್ದರು ಎನ್ನುತ್ತಾರೆ ಈ ಪ್ರದೇಶದ ಹಿರಿಯರು. ಆದರೆ ಇಂದು ಈ ನದಿಯ ಹರಿವು ನಗರದ ತ್ಯಾಜ್ಯ ನೀರು ಹರಿಯುವ ದೊಡ್ಡ ಮೋರಿಯಾಗಿ ಹೋಗಿದೆ. ಮಳೆಗಾಲದಲ್ಲಿ ಕೆಲವು ಬಾರಿ ಈ ಮೋರಿ ತುಂಬಿ ನೀರು ದೇವಾಲಯಕ್ಕೂ ನುಗ್ಗಿದ ಉದಾಹರಣೆ ಇದೆ.
ಈಗ ಈ ತ್ಯಾಜ್ಯ ಹರಿವ ದೊಡ್ಡ ಚರಂಡಿಯ ಇಕ್ಕೆಲದಲ್ಲೂ ಎತ್ತರವಾದ ಸಿಮೆಂಟ್ ಗೋಡೆ ನಿರ್ಮಿಸಿ ಮೇಲೆ ಕಾಂಕ್ರೀಟ್ ಹಾಕಿ ರಸ್ತೆ ಮಾಡಿ, ತ್ಯಾಜ್ಯ ನೀರು ದೇವಾಲಯ ಪ್ರವೇಶಿಸದಂತೆ ಮಾಡಲಾಗಿದೆ. ಜೊತೆಗೆ ದೇವಾಲಯಕ್ಕೆ ಈಗ ವಿಶಾಲವಾದ ಪ್ರಾಕಾರ ನಿರ್ಮಿಸಲಾಗಿದೆ.
ಈ ಪುರಾತನ ದೇವಾಲಯದ ಗರ್ಭಗೃಹದಲ್ಲಿ ಒಂದು ಕರವನ್ನು ಮೇಲೆತ್ತಿ ಅಭಯ ನೀಡುತ್ತಿರುವ ಮತ್ತು ಮತ್ತೊಂದು ಕರದಲ್ಲಿ ಗದೆ ಹಿಡಿದ ಎದುರು ಮುಖದ ಆಂಜನೇಯನ ಸುಂದರ ಮೂರ್ತಿಯಿದೆ. ವಜ್ರ ಕವಚ ಅಲಂಕಾರದಲ್ಲಂತೂ ಸ್ವಾಮಿಯ ಸೊಬಗು ನೂರ್ಮಡಿಗೊಳ್ಳುತ್ತದೆ.
ಈ ದೇಗುಲದ ಪ್ರಾಕಾರದಲ್ಲಿ ನವಗ್ರಹ, ಸತ್ಯನಾರಾಯಣ ಹಾಗೂ ಸೀತಾ ಲಕ್ಷ್ಮಣ ಸಹಿತನಾದ ಕಲ್ಯಾಣ ರಾಮನನ್ನು ಪ್ರತಿಷ್ಠಾಪಿಸಲಾಗಿದೆ. ವರ್ಷದಲ್ಲಿ ಎರಡು ಬಾರಿ ಇಲ್ಲಿ ಸ್ವಾಮಿಗೆ ಬ್ರಹ್ಮೋತ್ಸವ ಜರುಗುತ್ತದೆ. ದೇವಾಲಯದ ಸುತ್ತಮುತ್ತ ಇರುವ ಹಳೆಯ ಗ್ರಾಮಗಳಾದ ಆವಲಹಳ್ಳಿ, ಬ್ಯಾಟರಾಯನಪುರ ಹಾಗೂ ದೀವಟಿಕೆ ರಾಮನಹಳ್ಳಿಯ ಗ್ರಾಮಸ್ಥರನ್ನೊಳಗೊಂಡ ಆಡಳಿತ ಮಂಡಳಿ ದೇವಾಲಯದ ನಿರ್ವಹಣೆಯ ಹೊಣೆ ಹೊತ್ತಿದೆ.
ರಾಮನವಮಿಯ ವೇಳೆ ಇಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಗುತ್ತದೆ. ರಾಮದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ಅಮಾವಾಸ್ಯೆಯ ದಿನ ಇಲ್ಲಿಗೆ ಭಕ್ತ ಸಾಗರವೇ ಬರುತ್ತದೆ. ಇಲ್ಲಿ ಪೂಜೆ ಮಾಡಿಸಿ ಯಂತ್ರ ಕಟ್ಟಿಕೊಂಡರೆ ಮಕ್ಕಳು, ಬೆದರುವುದು, ಬೆಚ್ಚುವುದು ನಿಲ್ಲುತ್ತದೆ. ದುಷ್ಟಶಕ್ತಿಯ ಕಾಟ ಇರುವುದಿಲ್ಲ ಎಂಬುದು ನಂಬಿಕೆ.
ಈ ದೇವಾಲಯದಲ್ಲಿ ನೀಡುವ ಚಂದ್ರವನ್ನು ಹಚ್ಚಿಕೊಂಡರೆ ಯಾರೂ ವಶೀಕರಣ, ಹಿಪ್ನಟೈಸ್ ಮಾಡಲು ಸಾಧ್ಯವಿಲ್ಲ ಎಂದು ಹಿರಿಯರು ಹೇಳುತ್ತಾರೆ.
Subscribe , Follow on
Facebook Instagram YouTube Twitter X WhatsApp