-->

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗುರುಗಳಿಗೆ ನಮನ , ಶ್ರೀ ಮುತ್ತು ಯ.ವಡ್ಡರ

 

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗುರುಗಳಿಗೆ ನಮನ , ಶ್ರೀ ಮುತ್ತು ಯ.ವಡ್ಡರ

ಬಿಜ್ಜರಗಿಯ ನಕ್ಷತ್ರ ನೀವು ರೈತ ಕುಟುಂಬದ ಕುಡಿ ನೀವು
1941 ಅಕ್ಟೋಬರ್ 24ರಂದು ಜನಿಸಿದ ನೀವು ಬಾಲಕನಿದ್ದಾಗ ಸಿದ್ಧಗೊಂಡಪ್ಪ ಹೆಸರಿನವರು ನೀವು

ಅನ್ನದ ಆಶ್ರಯ ನೀಡಿದವರು ನೀವು
ಅಕ್ಷರದ ಆಶ್ರಯ ನೀಡಿದವರು ನೀವು
ಬಸವಣ್ಣನವರಂತೆ ಬದುಕಿ ಬಾಳಿದವರು ನೀವು
ಕಾಯಕವೇ ಕೈಲಾಸ ಸಾರಿದವರು ನೀವು

 ನಡೆದ ದಾರಿಯನ್ನೇ ಕೈಲಾಸವನ್ನಾಗಿಸಿ
ಭೂಲೋಕದಲ್ಲಿ ಸ್ವರ್ಗವನ್ನು ಕಲ್ಪಿಸಿ
ಹಸಿದ ಬಡವರ ಪಾಲಿಗೆ ದೇವರೆನಿಸಿ
ಅನಾಥ ಮಕ್ಕಳ ಪಾಲಿಗೆ ಪೋಷಕರೆನಿಸಿ

ಮಠಗಳಲ್ಲಿಯೇ ಶ್ರೇಷ್ಠ ಮಠ  ಪುಣ್ಯ ಯೋಗಾಶ್ರಮ ಮಠ
ನಿತ್ಯ ದಾಸೋಹದ ಕೂಟ
ಕನ್ನಡ ಆಂಗ್ಲ ಸಂಸ್ಕೃತ ಪಾಠ

ಸಾವಿರಾರು ಭಕ್ತರಿಗೆ ಆಶ್ರಯ ತಾಣ
ಪ್ರತಿನಿತ್ಯ ಲಕ್ಷಾಂತರ ಜನಕ್ಕೆ ಇದು ಪ್ರಸಾದ ತಾಣ
ಪ್ರತಿಹೊತ್ತಿಗೆ ತಪ್ಪದ ಮಂತ್ರಪಠಣ
ವಿದ್ಯಾರ್ಥಿಗಳಿಗೆ ದೊರೆವ ಜ್ಞಾನ

ಈ ಕಲಿಯುಗ ಕಂಡ ನಡೆದಾಡುವ ದೇವರು
ಭೂಮಿಯ ಮೇಲೆ ಇವರೇ ಕಣ್ಣಿಗೆ ಕಾಣುವ ದೇವರು
ಕಂಡಿಲ್ಲ ನಾವು ಎಂದು ಗುಡಿಯಲ್ಲಿ ದೇವರು
ಒಮ್ಮೆ ಭೇಟಿ ನೀಡಿ ವಿಜಯಪುರದಲ್ಲಿ ನೆಲೆಸಿರುವರು ದೇವರು

ಹೆಸರಿಗಾಗಿ ಮಾಡಲಿಲ್ಲ ನೀವು ಸೇವೆಯನ್ನು
ಬಂದ ಪ್ರಶಸ್ತಿಗಳೆಲ್ಲವನ್ನು ತ್ಯಜಿಸಿ ಉಳಿಸಿಕೊಂಡಿರಿ ವ್ಯಕ್ತಿತ್ವವನ್ನು
ಬದುಕಿ ಬಾಳಿ ಬದಲಾಯಿಸಿ ಇನ್ನೂ ಸಮಾಜವನ್ನು
ನಿಮ್ಮಂತ ಜ್ಞಾನ ಯೋಗಿಯನ್ನು ಎಲ್ಲಿ ಹುಡುಕಲಿ ಭೂಮಿಯ ಮೇಲೆ ನಾನಿನ್ನು

ಜೇಬು ಇಲ್ಲದ ಅಂಗಿಯ ತೊಟ್ಟು
ಸ್ವಾರ್ಥ, ಮೋಸದ ವಂಚನೆಯ ಬಿಟ್ಟು
ಇರುವುದೆಲ್ಲವ ಬಡವರಿಗೆ ಕೊಟ್ಟು
ನಾಡಿನ ಜನರ ಹೃದಯದಲ್ಲಿ ದೇವರ ಸ್ಥಾನವ ಇಟ್ಟು
ಅನಾರೋಗ್ಯಕ್ಕೆ ಒಳಗಾಗಿ ಭಕ್ತರನ್ನು ಮೌನವಾಗಿಟ್ಟು
ಪ್ರಾರ್ಥಿಸಿ, ಪೂಜಿಸಿ, ಉಳಿಸುವೆವು ನಿಮ್ಮನ್ನು ಉಸಿರಿಗೆ ಉಸಿರು ಕೊಟ್ಟು

ಧರೆಗೆ ಬಂದ ಜ್ಞಾನಭಂಡಾರದ ಜ್ಞಾನಯೋಗಿ
ಅಕ್ಷರ ಮೂಲದ ಹೆಸರಾದ ಅಕ್ಷರಯೋಗಿ
ಸದಾ ಹಗಲಿರುಳು ಸೇವೆಗೈದ ಕಾಯಕಯೋಗಿ
ಮಾತಿನಿಂದ ಮನಸು ಗೆದ್ದ ಮೌನಯೋಗಿ

ದೇವರಾಗಲು ಬಂದಿರಿ ನೀವು ಧರೆಗೆ
ಭೂಲೋಕವೆ ನಮಿಸಿತು ನಿಮ್ಮ ಅಡಿಗೆ
ಯಾರಿಗೂ ಹೇಳದೆ ಹೋದಿರಿ ಯಾವ ಊರಿಗೆ
ಸರಿಸಮಾನರಿಲ್ಲ ಪರಮಗುರುವೆ ನಿಮ್ಮ ಕೀರ್ತಿಗೆ

ಸರಳ ಸಜ್ಜನಿಕೆಯ ಸಂತ ದಿವ್ಯಚೇತನ
ಬಿಜ್ಜರಿಗೆಯ ಕಂದ ನೀವೇ ಮಹಾಚೇತನ
ಶಿವನಿಗೂ ಪ್ರಿಯವಾದ ಭಕ್ತಿಚೇತನ
ವಿವೇಕಾನಂದರಂತೆ ಬದುಕಿದ ವಿಶ್ವಚೇತನ

ಜ್ಞಾನಯೋಗಾಶ್ರಮದ ಸಂತನಾ ಮೂರುತಿ
ಪ್ರಶಸ್ತಿ ತ್ಯಜಿಸಿದಾಗ ಉಳಿಯಿತು ಕೀರುತಿ
ನಿತ್ಯ ಬೆಳಗುವೆವು ನಿಮಗೆ ಕರ್ಪೂರದ ಆರತಿ
ಕವನದ ಮೂಲಕ ನಿಮಗಿದೋ ಶರಣಾಗತಿ

ಬಡ ರೈತಕುಟುಂಬದಿ ಜನಿಸಿದ ಮಾಣಿಕ್ಯ
ನಡೆದಾಡುವ ದೇವರಾದ ನೀವೇ ಚಾಲುಕ್ಯ
ಯಾರು ಸರಿಸಮಾನರು ಮಾತಿನಲಿ ಚಾಣಕ್ಯ
ಕಂಡು ಕಾಣರಿಯದ ಸರಳತೆಯ ಐಕ್ಯ.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

Terms | Privacy | 2024 🇮🇳
–>