-->

ನಮ್ಮೂರಿನ ಹೆಮ್ಮರ , ಶ್ರೀ ಮುತ್ತು ಯ.ವಡ್ಡರ

ಎಲ್ಲವೂ ಇದೆ ಊರಿನಾಚೆ ಇರುವ ಹೆಮ್ಮರದಡಿ
ಕೇಳುತಿವೆ ಅಲ್ಲಿ ಹಿರಿಯರ ಅಮೃತದ ನಾಣ್ಣುಡಿ
ಬಿಡುವಿದ್ದಾಗ ಒಮ್ಮೆ ನೀವೂ ಹೋಗಿ ನೋಡಿ
ಅದು ದೈವದ ಮರ ನಿಮ್ಮ ಹರಕೆ ಹಾರೈಕೆಗಳನ್ನು ಬೇಡಿ

ಉಳಿಸಿ ಬೆಳೆಸುವ ಪ್ರಕೃತಿಯ ಸೊಬಗನು
ಪೂಜಿಸಿ ಪ್ರೀತಿಸಿ ಪ್ರತಿ ಮರ-ಗಿಡಗಳನು
ಪ್ರತಿ ಹೆಮ್ಮರದ ಜೊತೆಗೆ ನೆನಪಿಸೋಣ ಹಿರಿಯರನು
ಸಸಿಯಿಂದ ಮರವಾದಾಗ ಪಡೆಯಿರಿ ನೆರಳನು

ಒಂದೊಂದು ಮರಕ್ಕೂ ತನ್ನದೇ ಆದ ಕಥೆ ಇದೆ
ಪ್ರತಿ ಮರದ ಹಿಂದೆ ಹಲವು ಜನರ ಶ್ರಮವಿದೆ
ಹೂ ಹಣ್ಣು ಕಾಯಿ ಆಮ್ಲಜನಕ ಸರ್ವಸ್ವವೂ ಇದೆ
ಮನುಜನ ಸ್ವಾರ್ಥಕ್ಕಾಗಿ ಮರವು ತನ್ನನ್ನೇ ತಾನು ಬಲಿ ಕೊಟ್ಟಿದೆ

ಕಂಡೆವು ಅಲ್ಲೊಂದು ನಿಸ್ವಾರ್ಥದ ಮರವನ್ನು
ತನಗಾಗಿ ಅಲ್ಲದೆ ಮತ್ತೊಬ್ಬರಿಗಾಗಿ ಬದುಕಿರುವುದನ್ನು
ಬೆಳೆಸಬೇಕಾಗಿದೆ ಒಬ್ಬೊಬ್ಬರು ಒಂದು ಸಸಿಯನ್ನು
ಗಿಡ ಮರಗಳಿಲ್ಲದೇ ಜೀವಿಗಳು ತಿನ್ನುವುದೇನನ್ನು ?
 

ನಮ್ಮೂರಿನ ಹೆಮ್ಮರ , ಶ್ರೀ ಮುತ್ತು ಯ.ವಡ್ಡರ

ಮನೆಗೊಂದು ಮರ ಊರಿಗೊಂದು ವನ
ಮರಗಳಿರಲು ಅದುವೇ ಸಮೃದ್ಧ ಜೀವನ
ನೆನಪಿರಲಿ ಹಸಿರಿದ್ದರೆ ಬದುಕು ಪಾವನ
ಹಸಿರಿನಲ್ಲಿ ಕಾಣಿರಿ ರೈತನ ನಗುಮುಖವನ

ನೆರಳಿಗೂ ಮರ ಹಣ್ಣಿಗೂ ಮರ
ಉಸಿರಿಗೂ ಮರ ಹಸಿರಿಗೂ ಮರ
ಬದುಕಿದ್ದಾಗ ನಮಗೆ ಆಸರೆ ಮರ
ಸತ್ತಾಗ ಸುಡಲಿಕ್ಕೂ ಬೇಕು ಮರ

ಅರಿವಿಲ್ಲದೇ ಕಡಿದರೆ ಕಾಡು
ನಾಡಾಗುವುದು ಸಂಪೂರ್ಣ  ಬೆಂಗಾಡು
ಹಸಿರಿಲ್ಲದ ಬದುಕು ಬವಣೆ ನೋಡು
ಹೆಸರಿಗಾದರೂ ಒಂದು ಗಿಡ ನೆಡು

 

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

Terms | Privacy | 2024 🇮🇳
–>