-->

ಅಕ್ಷರ ಕಲಿಸಿದ ಗುರುವಿಗೆ ಗೌರವವಿರಲಿ , ಶ್ರೀ ಮುತ್ತು ಯ.ವಡ್ಡರ

ಅಕ್ಷರ ಕಲಿಸಿದ ಗುರುವಿಗೆ ಗೌರವವಿರಲಿ , ಶ್ರೀ ಮುತ್ತು ಯ.ವಡ್ಡರ

 

ಯಾವುದೋ ಊರಿನಿಂದ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು, ಶಾಲೆಯ ಪ್ರತಿ ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳೆಂದು ಭಾವಿಸಿ ಅವರ ಬದುಕಿನ ಬುತ್ತಿಗೆ ನಿತ್ಯ ಜ್ಞಾನದ ಸಿಹಿ ತುತ್ತು ನೀಡಿ  ಅವರ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುವರು. ಗುರು ಎಂದರೆ ಅದು ಕೇವಲ ಪದವಲ್ಲ ಹಲವಾರು ಜನ ಸಾಧಕರನ್ನು ಸೃಷ್ಟಿಸುವ ಒಂದು ಅದ್ಭುತವಾದ ಸಂಪತ್ತು ಭರಿತ ಜ್ಞಾನ ಭಂಡಾರದ ಗಣಿ. ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಇವತ್ತು ಅವರ ಕಾಲ ಮೇಲೆ ಅವರು ನಿಂತು ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದರೆ ಅದಕ್ಕೆ ಜ್ಞಾನ ನೀಡಿದ ಗುರುಗಳೇ ಕಾರಣ. ಜನ್ಮ ನೀಡಿದ ಹೆತ್ತವರು ಒಂದು ಕಣ್ಣು ಆದರೆ ಅಕ್ಷರ ಕಲಿಸಿದ ಗುರುಗಳು ಎರಡನೇ ಕಣ್ಣು. ಇಡೀ ಜನ್ಮ ಪೂರ್ತಿ ಇವರಿಬ್ಬರನ್ನು ಮರೆಯದೆ ಬದುಕು ಸಾಗಿಸುವ ಕೆಲಸ ನಮ್ಮದಾಗಬೇಕು. ತಾಯಿ ತನಗೆ ಏನು ಕಾಣುತ್ತದೆಯೋ ಅದನ್ನು ಮಕ್ಕಳಿಗೆ ಪರಿಚಯಿಸುವಳು. ತಂದೆ ತನಗೆ ಏನು ಕಾಣುವುದಿಲ್ಲವೋ ಅದನ್ನು ಮಕ್ಕಳಿಗೆ ಪರಿಚಯಿಸುವನು. ಆದರೆ ಗುರುವು ಒಂದು ಹೆಜ್ಜೆ ಮುಂದೆ ಹೋಗಿ ತನಗೆ ಕಾಣುವುದನ್ನು ಮತ್ತು ತನಗೆ ಕಾಣದೆ ಇರುವುದನ್ನು ಹಾಗೂ ಕಾಣಬಹುದಾಗಿರುವುದನ್ನು ಕೂಡ ಪರಿಚಯಿಸುವ ವ್ಯಕ್ತಿ ಭೂಮಿಯ ಮೇಲೆ ಯಾರಾದರೂ ಇದ್ದರೆ ಅದು ಗುರು ಮಾತ್ರ.
     ನಮಗೆ ಯಾವ ವಿಷಯ ಅರ್ಥವಾಗುವುದಿಲ್ಲವೋ ಆ ವಿಷಯ ಬೋಧಿಸುವ  ಗುರುಗಳನ್ನು ಆತ್ಮೀಯತೆಯಿಂದ ಕಂಡು ಗೌರವಿಸಿ, ಅವರಲ್ಲಿ ಮಾತೃ ವಾತ್ಸಲ್ಯವನ್ನು ಕಂಡಾಗ ಮಾತ್ರ ಆ ವಿಷಯ ನಮಗೆ ಅರ್ಥವಾಗುತ್ತದೆ. ಆ ಕಲಿಕೆಯು ಕೂಡ ಶಾಶ್ವತವಾಗಿ ನಮ್ಮ ಮೆದುಳಲ್ಲಿ ಇರುತ್ತದೆ. ಒಮ್ಮೊಮ್ಮೆ ಜೀವ ನೀಡಿದ ಭಗವಂತ ಕೂಡ ನಮ್ಮ ಕೈ ಬಿಡಬಹುದು ಆದರೆ ಜೀವನಕ್ಕೆ ಅರ್ಥ ಕಲ್ಪಿಸಿದ ಗುರು ಯಾವತ್ತೂ ಕೈ ಬಿಡಲಾರನು. ಒಬ್ಬ ವ್ಯಕ್ತಿ ಯಾವುದೇ ಉನ್ನತ ಪದವಿಗೆ ಹೋಗಿದ್ದಾನೆಂದರೆ  ಅದರ ಹಿಂದೆ ಹಲವಾರು ಜನ ಗುರುಗಳ ಶ್ರಮವಿರುತ್ತೆ ಮತ್ತು ಮಾರ್ಗದರ್ಶನವಿರುತ್ತದೆ. ಗುರುಕುಲ ಪದ್ದತಿಯಲ್ಲಿ ಶಿಷ್ಯರು  ಗುರುಗಳನ್ನು ಹುಡುಕಿಕೊಂಡು ಹೋಗಿ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಆ ರೀತಿ ಇಲ್ಲ. ಪ್ರತಿ ವಿದ್ಯಾರ್ಥಿಗಳ ಜೀವನ ಸುಗಮವಾಗಿ ಸಾಗಲು ಹೆತ್ತವರಂತೆ ಶಿಕ್ಷಕರು ಕೂಡ ಶ್ರಮ ವಹಿಸುವವರು. ಅಂತಹ ನಿಸ್ವಾರ್ಥ ಮನೋಭಾವನೆಯ ಎಲ್ಲ ಗುರುಬಳಗಕ್ಕೆ ಪ್ರತಿಯೊಬ್ಬರೂ ಕೂಡ ಗೌರವ ನೀಡಬೇಕು. ಉಸಿರು ಇರೋವರೆಗೂ ವಿದ್ಯಾದಾನ  ಮಾಡಿದ ಗುರುಗಳಿಗೆ ವಿಧೇಯಕರಾಗಿರಬೇಕು. ಶಿಕ್ಷಕರು ಎಲ್ಲಿಯೇ ಭೇಟಿಯಾಗಲಿ ಅವರಿಗೆ ನಯ ವಿನಯದಿಂದ ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿ, ಚೆನ್ನಾಗಿದ್ದೀರಾ ಸರ್ ಎಂದರೆ ಅವರಿಗೆ ಒಂದು ದೊಡ್ಡ ಪ್ರಶಸ್ತಿ ಸಿಕ್ಕಷ್ಟೇ ಸಂತೋಷವಾಗುವುದು. ಗುರುಗಳ ಸಂತೋಷಕ್ಕೆ ನಾವೆಲ್ಲರೂ ಕಾರಣೀಭೂತರಾಗೋಣ

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

Terms | Privacy | 2024 🇮🇳
–>