-->

ಸಮಯ , ಬೆಲೆ ಬಾಳುವ ಸಂಪತ್ತು , ಶ್ರೀ ಮುತ್ತು ಯ.ವಡ್ಡರ

ಸಮಯ , ಬೆಲೆ ಬಾಳುವ ಸಂಪತ್ತು , ಶ್ರೀ ಮುತ್ತು ಯ.ವಡ್ಡರ

 

ಈ ಭೂಮಿಯ ಮೇಲೆ ಅತಿ ಹೆಚ್ಚು ಬೆಲೆ ಬಾಳುವ ಸಂಪತ್ತು ಯಾವುದಾದರೂ ಇದ್ದರೆ ಅದು ಸಮಯ. ಕೆಲವರು ಹೇಳುವ ಹಾಗೆ ಸಮಯದಲ್ಲಿ ಕೆಟ್ಟ ಸಮಯ ಮತ್ತು ಒಳ್ಳೆಯ ಸಮಯ ಎಂಬ ಭಿನ್ನವಿಲ್ಲ. ನಾವು ಸಮಯವನ್ನು ಆ ರೀತಿ ತಿಳಿದುಕೊಂಡಿದ್ದೇವೆ ಅಷ್ಟೇ. ಸಮಯವು ಯಾರ ಮನೆಯ ಸ್ವತ್ತಲ್ಲ, ಅದು ಯಾರಿಗಾಗಿಯೂ ಕಾಯುವುದಿಲ್ಲ. ಸಮಯವು ಸಾಧಕನ ಸ್ವತ್ತು ವಿನಹ ಸೋಮಾರಿಯ ಸ್ವತ್ತಲ್ಲ. ಸಮಯವನ್ನು ಯಾರು ಪ್ರಾಮಾಣಿಕವಾಗಿ ಗೌರವಿಸುತ್ತಾರೋ ಅವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಕೆಲವೊಮ್ಮೆ ಒಂದೊಂದು ದಿನ ನಮಗೆ ಸಮಯ ಹೆಚ್ಚು ಇರುತ್ತದೆ ಇನ್ನೂ ಕೆಲವೊಮ್ಮೆ ಸಮಯವೇ ಇರುವುದಿಲ್ಲ. ಸಮಯದ ಅಭಾವ ಆ ಕ್ಷಣಕ್ಕೆ ಬಹಳ ಕಾಡುತ್ತದೆ. ಸಮಯ ಎಂಬುದು ಬಿಟ್ಟ ಬಾಣ ಅದು ಎಂದಿಗೂ ಮರಳಿಬಾರದು. ನಮಗಾಗಿ ಇರುವ ಸಮಯದಲ್ಲಿಯೇ ನಾವು ನಮ್ಮ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡು ನಮ್ಮ ಗುರಿ ತಲುಪಬೇಕು. ಸಮಯಕ್ಕೆ ಬೆಲೆ ಕೊಡದ ವ್ಯಕ್ತಿಗೆ ಬದುಕಿನಲ್ಲಿ ಬೆಲೆ ಕೂಡ ಕಡಿಮೆ ಆಗುವುದು. ಸಮಯದ ಮಹತ್ವವನ್ನು ತಿಳಿದುಕೊಂಡು ನಡೆದಾಗ ಮಾತ್ರ ಅದು ಬದುಕಿನ ಪಾಠವನ್ನು ನಮಗೆ ತಿಳಿಸುವುದು.
        ಈ ಭೂಮಿಯ ಮೇಲೆ ಯಾರು ಎಷ್ಟೇ ಶ್ರೀಮಂತರಿದ್ದರು ಕಳೆದುಹೋದ ಸಮಯವನ್ನು ಮರಳಿ ಪಡೆಯುವಷ್ಟು ಶ್ರೀಮಂತರು ಈ ಭೂಮಿಯ ಮೇಲೆ ಯಾರು ಇಲ್ಲ. ಹಾಗಾಗಿ ಅತ್ಯಂತ ಶ್ರೀಮಂತಿಕೆಯಿಂದ ತುಂಬಿದ ಸಮಯವನ್ನ ನಾವೆಲ್ಲರೂ ಪ್ರೀತಿಸೋಣ. ಬದುಕಿನ ಪಯಣದಲ್ಲಿ ಸಮಯ ಸಾಧಕರನ್ನು ನಂಬದೆ, ಸರಿಯಾದ ಸಮಯಕ್ಕೆ ಸಹಾಯ ಮಾಡುವ ಆತ್ಮೀಯರನ್ನು ನಂಬಿ ಬದುಕು ಸಾಗಿಸಬೇಕಾಗಿದೆ.ನಿನ್ನೆಯ ಸಮಯ ಮುಗಿದುಹೋಗಿದೆ, ನಾಳೆಯ ಸಮಯ ನಮ್ಮದಲ್ಲ, ಇವತ್ತಿನ ಸಮಯ ಮಾತ್ರ ನಮ್ಮದು ಅದರಲ್ಲಿಯೇ ಇವತ್ತಿನ ದಿನದ ಈ ಕ್ಷಣ ಮಾತ್ರ ನಮ್ಮದು. ಹಾಗಾಗಿ ಸಮಯ ಬಹಳ ಅತ್ಯಮೂಲ್ಯವಾದುದು. ಮಿಂಚಿ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ ನಮಗಿರುವ ಈ ದಿನದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು.
      ಸಮಯ ಮೀರಿದ ಮೇಲೆ ಅದರ ಬಗ್ಗೆ ಚಿಂತಿಸಿದರೆ ಅದು ನಮ್ಮ ಮೂರ್ಖತನ. ಒಂದು ವರ್ಷದ ದೀರ್ಘ ಸಮಯಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಅದೇ ರೀತಿ ಒಂದು ಸೆಕೆಂಡಿನ ಲಘು ಸಮಯಕ್ಕೂ ಕೂಡ ತನ್ನದೇ ಆದ ಮಹತ್ವವಿದೆ. ಸಮಯವನ್ನ ಆರಾಧಿಸೋಣ ಸಮಯವನ್ನ ಗೌರವಿಸೋಣ. ಭಗವಂತ ನಮಗಾಗಿ ನೀಡಿದ ಅಮೂಲ್ಯವಾದ ಸಂಪತ್ತಿನಲ್ಲಿ ಸಮಯ ಕೂಡ ಒಂದಾಗಿದೆ. ಸಮಯವನ್ನು ಅನಾವಶ್ಯಕ ಹಾಳು ಮಾಡದೆ ಸರಿಯಾಗಿ ಬಳಸಿಕೊಂಡು ಸಾಧಕರಾಗಿ ಉತ್ತಮ ಸಮಾಜದಲ್ಲಿ ಅತ್ಯುತ್ತಮ ನಾಗರಿಕರಾಗಿ ಬದುಕುವ ಒಂದು ಪ್ರಯತ್ನ ಮಾಡೋಣ. ಸಮಯದ ಬಗ್ಗೆ ಅರಿವು ಇಟ್ಟುಕೊಂಡು ಸಮಯ ಪಾಲಕರಾಗಿ ಬದುಕೋಣ.

ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484      

 

Terms | Privacy | 2024 🇮🇳
–>