ಕರುಳಕುಡಿ ಒಡಮೂಡಿದ್ದನ್ನು ವೈದ್ಯರಿಂದ ಕೇಳಿ ಖುಷಿಯಾದಳು ಮೊದಲ ತಿಂಗಳಲ್ಲಿ ನನ್ನವ್ವ
ಗಂಡನ ಪ್ರೀತಿ ವಾತ್ಸಲ್ಯದ ಮಾತು
ಕೇಳಿ ಖುಷಿಯಾದಳು ಎರಡನೇ ತಿಂಗಳಲ್ಲಿ
ತವರು ಮನೆಯ ಬರುವಿಕೆಯ ಸುದ್ದಿ ತಿಳಿದು
ಖುಷಿಯಾದಳು ಮೂರನೇ ತಿಂಗಳಲ್ಲಿ
ಅತ್ತೆ ಮಾವರ ಆರೈಕೆಗೆ ಮನಸೋತು
ಖುಷಿಯಾದಳು ನಾಲ್ಕನೇ ತಿಂಗಳಲ್ಲಿ
ತವರು ಮನೆಯ ಸೀಮಂತದಲ್ಲಿ ಹಸಿರು ಬಳೆ ಹಸಿರು
ಸೀರೆಯ ಉಟ್ಟು ಖುಷಿಯಾದಳು ಐದನೇ ತಿಂಗಳಲ್ಲಿ
ಅಕ್ಕ ತಂಗಿಯರ ಕಚಗುಳಿಯ ಮಾತುಗಳಿಂದ
ಖುಷಿಯಾದಳು ಆರನೇ ತಿಂಗಳಲ್ಲಿ
ಮೈದುನ ನಾದಿನಿಯರು ನೀಡಿದ
ಹುಳಿ ಹಣ್ಣುಗಳನ್ನು
ಮನಸಾರೆ ಸವಿದು ಖುಷಿಯಾದಳು ಏಳನೇ ತಿಂಗಳಲ್ಲಿ
ಗರ್ಭದಲ್ಲಿರುವ ತನ್ನ ಕಂದನ ಮೆದುಗಾಲು ಒದೆವಾಗ
ಖುಷಿಯಾದಳು ಎಂಟನೇ ತಿಂಗಳಲ್ಲಿ
ಅಳುತ್ತಾ ಭೂಮಿಗೆ ಬಂದ ಕಂದನ ಮೊಗವ ನೋಡಿ
ಖುಷಿಯಾದಳು ಒಂಭತ್ತನೇ ತಿಂಗಳಲ್ಲಿ
ಭಾರವೆನ್ನದೇ ನವಮಾಸ ಹೊತ್ತು ಕನಸು ಕಟ್ಟಿದಳು ನನ್ನವ್ವ
ಬಸುರಿಯ ಬಯಕೆ ತೀರಿಸಿ ಕಸುವಾಗಿ ಬೆಳೆಸಿ ಖುಷಿಗೆ ಕಾದಳು ನನ್ನವ್ವ
ದಿನ ತುಂಬಿರಲು ಕಂದನ ಆಗಮನಕೆ ಕ್ಷಣವೆಣಿಸಿದಳು ನನ್ನವ್ವ
ಬೇನೆಯ ಬವಣೆಯಲಿ ಬೆಂದು ನೋವಲಿ ಮಿಂದೆದ್ದು ಜನ್ಮನೀಡಿದಳು ನನ್ನವ್ವ
ಮಗುವಿನ ಮೊಗ ಕಂಡು ನೋವನ್ನೇ ಮರೆತಳು ನನ್ನವ್ವ
ಹೆತ್ತಾಗ ಮಗು ಅತ್ತಿದ್ದು ಕೇಳಿ ಸಂತಸ ಪಟ್ಟ ನನ್ನವ್ವ
ಮುಂದೆಂದೂ ಕಂದ ಅಳದಂತೆ ಆಸರೆಯಾದಳು ನನ್ನವ್ವ
ಲೇಖಕರು - ಶ್ರೀ ಮುತ್ತು ಯ.ವಡ್ಡರ , ಶಿಕ್ಷಕರು , ಬಾಗಲಕೋಟ , 9845568484
Subscribe , Follow on
Facebook Instagram YouTube Twitter X WhatsApp